ಮದುವೆಯ ಶಾಸ್ತ್ರಗಳು ಮುಗಿದ ನಂತರ, ಮಂಟಪದಲ್ಲಿ ಅತಿಥಿಗಳು ವಧುವರರಿಗೆ ಶುಭ ಕೋರುವುದು ಸಂಪ್ರದಾಯ. ಆದರೆ ತೂತುಕಡಿಯಲ್ಲಿ ನಡೆದ ಮದುವೆಯೊಂದರಲ್ಲಿ ಆಗಿದ್ದೇ ಬೇರೆ. ಮದುವೆ ಮುಗಿದದ್ದೇ ತಡ, ವಧು ಸೆರಗು ಸೊಂಟಕ್ಕೆ ಬಿಗಿದು, ಶಸ್ತ್ರಾಸ್ತ್ರ ಹಿಡಿದು ಮಂಟಪದಿಂದ ಕೆಳಗಿಳಿದೇ ಬಿಟ್ಟಳು! ಅಯ್ಯಯ್ಯೋ ಯಾಕೇ ಅಂತೀರಾ? ‘ಸುರಾಲು ವಾಲ್ ವೀಚು’ ಪ್ರದರ್ಶನ ನೀಡಲಿಕ್ಕೆ! ಹೌದು, ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಕೋಲೂರ್ ಹಳ್ಳಿಯಲ್ಲಿ, ಮದುವೆಯ ಸೀರೆಯಲ್ಲೇ, ಸಿಲಂಬಮ್ ಕೋಲುಗಳನ್ನು ಹಿಡಿದು ವಧು, ‘ರೆಟೈ ಕಾಂಬು’ ಪ್ರದರ್ಶನ ನೀಡಿ , ನೆರೆದವರೆಲ್ಲರ ಮನಗೆದ್ದ ಘಟನೆ ನಡೆದಿದೆ. ಆದರೆ ಈ ಪ್ರದರ್ಶನ ನೀಡುವುದರ ಮೂಲ ಉದ್ದೇಶ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಅಥವಾ ಮನರಂಜನೆ ನೀಡುವುದಾಗಿರಲಿಲ್ಲ. ಜಾಗೃತಿ ಮೂಡಿಸುವುದಾಗಿತ್ತು!
ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕಲಿಯುವ ಕುರಿತು ಜಾಗೃತಿ ಮೂಡಿಸಲು ತಾನು ಮದುವೆಯ ಸೀರೆಯಲ್ಲೇ ಕಸರತ್ತುಗಳನ್ನು ಮಾಡಿ ತೋರಿಸಿದ್ದಾಗಿ ವಧು ನಿಶಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, 22 ವರ್ಷದ ನಿಶಾ, ಇದುವರೆಗೆ ಕೇವಲ ಟ್ರ್ಯಾಕ್ ಸ್ಯೂಟ್ ಮತ್ತು ಟೀ ಶರ್ಟ್ ಹಾಕಿಕೊಂಡು ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡಿದ್ದ ತನಗೆ, ಮದುವೆಯ ಸೀರೆ ಮತ್ತು ಭಾರೀ ಮೇಕಪ್ನಲ್ಲಿ ಮಾರ್ಷಲ್ ಆರ್ಟ್ಸ್ ಪ್ರದರ್ಶನ ನೀಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಎಂದು ಹೇಳಿದರು.
Tamilnadu Bride performance Martial Arts, stuns crowd with 'Surul Vaal' (Flexible sword) and Silambam to promote traditional Martials Arts. pic.twitter.com/6VHLiQTI2d
— Pramod Madhav♠️ (@PramodMadhav6) July 1, 2021
ನಿಶಾಳ ಗೆಳತಿಯರು ಕೂಡ, ಸ್ನೇಹಿತೆಯ ಈ ಜಾಗೃತಿ ಕಾರ್ಯಕ್ಕೆ ಬೆಂಬಲ ನೀಡುವುದರಲ್ಲಿ ಹಿಂದೆ ಉಳಿಯಲಿಲ್ಲ. ಅವರೂ ಕೂಡ ಸುಮಾರು ಒಂದು ಗಂಟೆ ಮಾರ್ಷಲ್ ಆರ್ಟ್ಸ್ ಪ್ರದರ್ಶನ ನೀಡಿದರು. ಮದುವೆಗೆ ಬಂದ ಅತಿಥಿಗಳು ಮತ್ತು ನೂರಾರು ಗ್ರಾಮಸ್ಥರು ಹುಡುಗಿಯರ ಈ ಪ್ರಯತ್ನಕ್ಕೆ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು ಎಂದು ಐಎಎನ್ಎಸ್ ವರದಿ ಮಾಡಿದೆ.
ನಿಶಾ ಬಿಕಾಂ ಪದವೀಧರೆಯಾಗಿದ್ದು, ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತಿದ್ದಾರೆ. ಆಕೆ ಮೂರು ವರ್ಷದ ಹಿಂದೆ , ಅಂತಿಮ ಪದವಿ ವಿದ್ಯಾರ್ಥಿನಿಯಾಗಿದ್ದಾಗ, ‘ಸಲಿಂಬು’, ‘ಸುರಾಲು ವಾಲ್’, ‘ಆದಿಮುರೈ’, ‘ಕಲರಿಪಯಟ್ಟು’ ಮತ್ತು ‘ತೀಪಂಥಮ್’ ಮುಂತಾದ ಸಾಂಪ್ರದಾಯಿಕ ಮಾರ್ಷಲ್ ಆರ್ಟ್ಸ್ ಕಲೆಗಳನ್ನು ಕಲಿಯಲು ಆರಂಭಿಸಿದರು.
ಅವರ ತಾಯಿ ಮಣಿ ಮತ್ತು ತಂದೆ ಪೆರುಮಾಳ್, ಮಾರ್ಷಲ್ ಆರ್ಟ್ಸ್ ಕಲಿಯಲು ತಮಗೆ ಪ್ರೋತ್ಸಾಹ ನೀಡಿದರು ಎಂದು ನಿಶಾ ತಿಳಿಸಿದ್ದಾರೆ. ನಡುಕುಟುದಂಕಡು ಗ್ರಾಮದ ಮರಿಯಪ್ಪನ್ ಅವರಿಂದ , ಉಚಿತ ಮಾರ್ಷಲ್ಆರ್ಟ್ಸ್ ತರಬೇತಿ ಪಡೆದ 80 ಜನರಲ್ಲಿ ನಿಶಾ ಕೂಡ ಒಬ್ಬರು. 2020ರಲ್ಲಿ ನಡೆದ ಸಲಿಂಬಮ್ ಸ್ಪರ್ಧೆಯಲ್ಲಿ ನಿಶಾ ಪ್ರಥಮ ಬಹುಮಾನ ಪಡೆದಿದ್ದರು ಮತ್ತು ತಿರುಪ್ಪೂರ್ನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದಿದ್ದರು.
ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕಲಿಯುವ ಕುರಿತು ಜಾಗೃತಿ ಮೂಡಿಸಲು, ಮದುವೆಯ ದಿನ ನಿಶಾ ಮಾರ್ಷಲ್ ಆರ್ಟ್ಸ್ ಪ್ರದರ್ಶನ ನೀಡಬೇಕೆಂದು, ಆಕೆಯ ವರ ರಾಜ್ಕುಮಾರ್ ಮೋಸೆಸ್ ಬಯಸಿದ್ದರು. ರಾಜ್ಕುಮಾರ್ ವೃತ್ತಿಯಲ್ಲಿ ಕೃಷಿಕ.
ಬಾಲಕಿಯರು ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡಿದರೆ, ಅವರು ತೀವ್ರ ಹೆಜ್ಜೆಗಳನ್ನು ಮಾತ್ರ ಇಡುವುದಿಲ್ಲ. ಮಾರ್ಷಲ್ ಆರ್ಟ್ಸ್ ಅವರಲ್ಲಿ ಸ್ಥಿರ ಮನಸ್ಸಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ ಎಂದು ರಾಜ್ಕುಮಾರ್ ಮೋಸೆಸ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ