ವ್ಯಕ್ತಿಯೊಬ್ಬರು ಜೀವಂತವಾಗಿರುವಾಗಲೇ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆಂದು ಕರೆ ಬಂದರೆ ಹೇಗಾಗಬಾರದು ಹೇಳಿ. ಈ ರೀತಿಯ ಪ್ರಮಾದ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದುಹೋಗಿದೆ. ಶಾಲಾ ಶಿಕ್ಷಕರೊಬ್ಬರು ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ತೆಗೆದುಕೊಂಡು ಹೋಗಿ ಎಂದು ಥಾಣೆಯ ಮುನಿಸಿಪಲ್ ಕಾರ್ಪೋರೇಶನ್ನಿಂದ ಕರೆ ಬಂದಿದೆ. ಕರೆ ಸ್ವೀಕರಿಸಿದ ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಕರೆ ಮಾಡಿದ ಮುನಿಸಿಪಲ್ ಸಿಬ್ಬಂದಿ ನಿಮ್ಮ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ. ಕಚೇರಿಗೆ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ.
ಥಾಣೆಯ ಮಂಪದ ನಗರದ ನಿವಾಸಿ ಚಂದ್ರಶೇಖರ್ ದೇಸಾಯಿ ಘಟ್ಕೋಪರ್ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಹಿಳೆಯೊಬ್ಬರು ಕರೆ ಮಾಡಿ ತಾನು ಥಾಣೆ ಪುರಸಭೆಯ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಚಂದ್ರಶೇಖರ್ ದೇಸಾಯಿ ಅವರ ಮರಣ ಪತ್ರ ನೀಡಲು ಕರೆ ಮಾಡಿದ್ದೇನೆ ಎಂದು ಹೇಳಿಕೊಂಡರು. ಟಿಎಂಸಿ ಡೆತ್ ಸರ್ಟಿಫಿಕೇಟ್ ನೀಡಲು ಹೇಳಿದೆ ಎಂದು ಹೇಳಿದರು. ಆಗ ನಾನೇ ಚಂದ್ರಶೇಖರ್ ಎಂದು ಪರಿಚಯಿಸಿಕೊಂಡಾಗ ಆಶ್ಚರ್ಯಪಟ್ಟರು. ನಂತರ ನಿಮ್ಮ ಕುಟುಂಬದಲ್ಲಿ ಯಾರಾದರೂ ಕೋವಿಡ್ನಿಂದ ಮೃತಪಟ್ಟಿದ್ದಾರೆಯೇ ಎಂದು ಕೇಳಿದರು ಎಂದು ಘಟನೆಯನ್ನು ವಿವರಿಸಿದರು.
ಬಳಿಕ ಟಿಎಂಸಿ ಕಚೇರಿಯ ಕೋವಿಡ್ ವಾರ್ ರೂಂಗೆ ಹೋಗಿ ಈ ಬಗ್ಗೆ ದೂರು ಸಲ್ಲಿಸಿದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಪಡೆದ ಮಾಹಿತಿಯ ಪ್ರಕಾರ, ಅವರು 2021 ರ ಏಪ್ರಿಲ್ 22 ರಂದು ‘ನಿಧನರಾದರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.
ಡೆತ್ ಸರ್ಟಿಫಿಕೇಟ್ನಲ್ಲಿ ಇವರು ಕೋವಿಡ್-19 ನಿಂದ ಬಳಲುತ್ತಿದ್ದರು. 10 ತಿಂಗಳ ಹಿಂದೆಯೇ ನಿಧನರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಗುರುವಾರ ಮಾಹಿತಿ ನೀಡಿದ ದೇಸಾಯಿ ಅವರು, ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು. ಐಸೋಲೇಶನ್ ಆಗಿ ಗುಣಮುಖರಾಗಿದ್ದರು. ಇದಾದ ನಂತರ ಟಿಎಂಸಿಯಿಂದ ಕರೆ ಬಂದಿತ್ತು ಎಂದು ಹೇಳಿದರು.
ಅಲ್ಲದೇ ನಾನು ಅವರಿಗೆ ಈ ರೀತಿ ಘಟನೆ ಸಂಭವಿಸಲು ಕಾರಣವೇನು ಎಂದು ಕೇಳಿದೆ. ಟಿಎಂಸಿ ಸಿಬ್ಬಂದಿ ತೋರಿದ ಅವಿವೇಕತನ ಹಾಗೂ ತಪ್ಪನ್ನು ಒಪ್ಪಿಕೊಳ್ಳಲು ಯಾವ ಅಧಿಕಾರಿಯೂ ತಯಾರಿಲ್ಲ. ಘಟನೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಾರ್ಪೋರೇಶನ್ ಅವರು ಕಳುಹಿಸದೆ ಐಸಿಎಂಆರ್ ಪಟ್ಟಿಯಲ್ಲಿ ನನ್ನ ಹೆಸರು ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡಿದ ನಂತರ ದೋಷವನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ನನಗೆ ಭರವಸೆ ನೀಡಿದರು ಎಂದು ತಿಳಿಸಿದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಅಧಿಕಾರಿಗಳು, ಈ ಪಟ್ಟಿಯನ್ನು ನಾವು ಪುಣೆ ಕಚೇರಿಯಿಂದ ಪಡೆದುಕೊಂಡಿದ್ದೇವೆ. ಇದನ್ನು ನಾವು ಸಿದ್ಧಪಡಿಸಿಲ್ಲ. ಸಾವಿನ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದ್ದು ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ. ಈ ಪಟ್ಟಿಯನ್ನು ಪರಿಶೀಲಿಸಲು ಈಗಾಗಲೇ ನಮ್ಮ ತಂಡಕ್ಕೆ ಸೂಚನೆ ನೀಡಿದ್ದೇವೆ. ಈ ಘಟನೆಯನ್ನು ಪರಿಶೀಲಿಸಿ ತಕ್ಷಣ ಸರಿಪಡಿಸಲಿದ್ದೇವೆ ಎಂದು ಹೇಳಿದರು.
ಇದಲ್ಲದೇ ಕೆಲವೊಮ್ಮೆ ಕೋವಿಡ್ ಪರೀಕ್ಷೆಗೆ ಕೊಟ್ಟು ಬಂದು ಆ ವ್ಯಕ್ತಿ ಪಾಸಿಟಿವ್ ಎಂದು ಗೊತ್ತಾದ ನಂತರ ಆಸ್ಪತ್ರೆಯಲ್ಲೋ, ಮನೆಯಲ್ಲೋ ಐಸೋಲೇಶನ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಸಹಾಯವಾಣಿಯವರು ಮಾಹಿತಿ ಪಡೆದ ಘಟನೆಗಳು ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ