ಈಗಂತೂ ವಿಮಾನದಲ್ಲಿ (Flight) ಪ್ರಯಾಣಿಸುವುದು ಒಂದು ರೀತಿಯ ಕಿರಿಕಿರಿ ಅಂತ ಕೆಲವರಿಗೆ ಅನ್ನಿಸುತ್ತಿದೆ, ಏಕೆಂದರೆ ಇತ್ತೀಚೆಗೆ ಎಂದರೆ ಕೆಲವು ತಿಂಗಳುಗಳಿಂದ ಒಂದಲ್ಲ, ಎರಡಲ್ಲ.. ಅನೇಕ ವಿಚಿತ್ರ ಘಟನೆಗಳು ವಿಮಾನಗಳಲ್ಲಿ ವರದಿಯಾಗಿವೆ. ಮೊದಲಿಗೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಹೋಗಿ ಮಹಿಳೆ (Lady) ಸೀಟ್ ಮೇಲೆ ಮೂತ್ರ ಮಾಡಿರುವ ಘಟನೆಯಾಗಿರಬಹುದು, ನಂತರ ವಿಮಾನದಲ್ಲಿ ನೀಡಿದ ಊಟದಲ್ಲಿ ಕೀಟ ಬಿದ್ದಿರುವ ಘಟನೆಯಾಗಿರಬಹುದು ಮತ್ತು ವಿಮಾನದಲ್ಲಿ ಪ್ರಯಾಣಿಕರ (Passengers) ಮತ್ತು ಗಗನಸಖಿಯರ ಮಧ್ಯೆ ನಡೆದಂತಹ ಜಗಳಗಳಿರಬಹುದು.
ಹೀಗೆ ಅಹಿತಕರವಾದ ಘಟನೆಗಳು ಒಂದರ ನಂತರ ಮತ್ತೊಂದು ವಿಮಾನದಲ್ಲಿ ನಡೆದಿದ್ದರಿಂದ, ಪ್ರಯಾಣಿಕರು ಈಗ ವಿಮಾನ ಹತ್ತುವ ಮುಂಚೆ ‘ಯಾವುದು ಅಹಿತಕರವಾದ ಘಟನೆ ನಡೆಯದಿರಲಿ, ಪ್ರಯಾಣ ಸುಖಮಯವಾಗಿರಲಿ’ ಅಂತ ದೇವರಲ್ಲಿ ಬೇಡಿಕೊಳ್ಳುವ ಹಾಗಾಗಿದೆ.
ಈಗ ಸ್ವಲ್ಪ ಮಟ್ಟಿಗೆ ಈ ಘಟನೆಗಳು ಶಾಂತವಾಗುತ್ತಿವೆ ಅನ್ನೋವಷ್ಟರಲ್ಲಿಯೇ ಮತ್ತೊಂದು ಅಹಿತಕರವಾದ ಘಟನೆಯೊಂದು ನಾಗ್ಪುರದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಆಗಿದೆ ಎನ್ನಲಾಗಿದ್ದು ಇಲ್ಲಿ ಆ ಮಹಿಳೆಗೆ ಚೇಳು ಕಚ್ಚಿದೆಯಂತೆ..!
ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಚೇಳು ಕಚ್ಚಿದೆಯಂತೆ..
ಏಪ್ರಿಲ್ 23 ರಂದು ನಡೆದ ಘಟನೆಯನ್ನು ಏರ್ ಇಂಡಿಯಾ ಈಗಾಗಲೇ ದೃಢಪಡಿಸಿದೆ ಮತ್ತು ಮಹಿಳಾ ಪ್ರಯಾಣಿಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈಗ ಅವರು ಅಪಾಯದಿಂದ ಪಾರಾಗಿದ್ದಾರೆ ಅಂತ ಹೇಳಲಾಗುತ್ತಿದೆ. ನಾಗ್ಪುರ-ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಚೇಳು ಕಚ್ಚಿದ ನಂತರ ಏರ್ ಇಂಡಿಯಾ ಶನಿವಾರ ಕ್ಷಮೆಯಾಚಿಸಿದೆ.
ವಿಮಾನದಲ್ಲಿ ಜೀವಂತ ಪಕ್ಷಿಗಳು ಮತ್ತು ಇಲಿಗಳು ಕಂಡು ಬಂದ ನಿದರ್ಶನಗಳಿವೆಯಾದರೂ, ಪ್ರಯಾಣಿಕರಿಗೆ ಈ ರೀತಿಯಾಗಿ ಚೇಳು ಕಚ್ಚಿದ ಪ್ರಕರಣವಂತೂ ತುಂಬಾನೇ ಅಪರೂಪದ ಘಟನೆಯಾಗಿದೆ.
ಇದನ್ನೂ ಓದಿ: Viral News: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್! ಆಮೇಲೇನಾಯ್ತು ನೋಡಿ
"ಏಪ್ರಿಲ್ 23, 2023 ರಂದು ನಮ್ಮ ಎಐ 630 ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಚೇಳು ಕಚ್ಚಿದ ಅಪರೂಪದ ಮತ್ತು ದುರದೃಷ್ಟಕರ ಘಟನೆ ನಡೆದಿದೆ" ಎಂದು ಸ್ವತಃ ಏರ್ ಇಂಡಿಯಾ ವಕ್ತಾರರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಚೇಳು ಕಚ್ಚಿದ ಮಹಿಳೆಗೆ ಕೂಡಲೇ ಚಿಕಿತ್ಸೆ ಕೊಡಿಸಿದ ಏರ್ ಇಂಡಿಯಾ
"ಈ ಮಹಿಳೆಗೆ ವಿಮಾನ ನಿಲ್ದಾಣದಲ್ಲಿ ಇರುವಂತಹ ವೈದ್ಯರು ಮೊದಲು ಚಿಕಿತ್ಸೆ ನೀಡಿದರು ಮತ್ತು ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಅವರನ್ನು ಅಲ್ಲಿಂದ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು. ನಮ್ಮ ಅಧಿಕಾರಿಗಳು ಪ್ರಯಾಣಿಕರನ್ನು ತಡ ಮಾಡದೆ ಆಸ್ಪತ್ರೆಗೆ ಕರೆದೊಯ್ದರು ಮತ್ತು ಅವರು ಅಲ್ಲಿಂದ ಡಿಸ್ಚಾರ್ಜ್ ಆಗುವವರೆಗೆ ಪ್ರಯಾಣಿಕರಿಗೆ ಎಲ್ಲಾ ಬೆಂಬಲವನ್ನು ನೀಡಿದರು" ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಘಟನೆಯ ನಂತರ ವಿಮಾನವನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ ಸಿಬ್ಬಂದಿ
"ನಮ್ಮ ತಂಡವು ಪ್ರೋಟೋಕಾಲ್ ಅನ್ನು ಅನುಸರಿಸಿತು ಮತ್ತು ವಿಮಾನದ ಸಂಪೂರ್ಣ ತಪಾಸಣೆ ನಡೆಸಿತು ಮತ್ತು ಆ ಚೇಳನ್ನು ಕಂಡುಕೊಂಡರು, ನಂತರ ಅಲ್ಲಿ ಬೇರೆ ಯಾವುದೇ ಕೀಟಗಳಿರಬಾರದು ಅಂತ ಫ್ಯೂಮಿಗೆಷನ್ ಎಂದರೆ ಹೊಗೆ ಹಾಕುವ ಪ್ರಕ್ರಿಯೆಯನ್ನು ನಡೆಸಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ" ಅಂತ ಏರ್ ಇಂಡಿಯಾ ಹೇಳಿದೆ.
ಇದನ್ನೂ ಓದಿ: Pre Wedding Photoshoot: ಚರಂಡಿಯಲ್ಲಿ ಕುಳಿತು ಕಿಸ್ ಕೊಡ್ತಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿದ ಜೋಡಿ
ಘಟನೆಯ ನಂತರ, ಏರ್ ಇಂಡಿಯಾವು ಡ್ರೈ ಕ್ಲೀನರ್ ಗಳಿಗೆ ಯಾವುದೇ ಬೆಡ್ ಬಗ್ಸ್ ಸೋಂಕು ಇದೆಯೇ ಎಂದು ಚೆನ್ನಾಗಿ ಪರಿಶೀಲಿಸಲು ಸಲಹೆ ನೀಡುವಂತೆ ಮತ್ತು ಅಗತ್ಯವಿದ್ದರೆ, ಸರಬರಾಜುಗಳ ಮೂಲಕ ವಿಮಾನಗಳೊಳಗೆ ದೋಷಗಳು ಕಂಡು ಬರುವ ಸಾಧ್ಯತೆ ಇರುವುದರಿಂದ ಎಲ್ಲಾ ಸಾಮಗ್ರಿಗಳನ್ನು ಇರಿಸುವ ಸ್ಥಳದಲ್ಲಿ ಹೊಗೆ ಹಾಕುವಂತೆ ಸಲಹೆ ನೀಡುವಂತೆ ಕೇಳಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಸಹ ಕ್ಯಾಲಿಕಟ್ ನಿಂದ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಕಾರ್ಗೋ ಹೋಲ್ಡ್ ನಲ್ಲಿ ಹಾವು ಪತ್ತೆಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ