ಆನ್‌ಲೈನ್‌ ಕ್ಲಾಸ್ ತಪ್ಪಿಸಿಕೊಳ್ಳಲು 8 ವರ್ಷದ ಬಾಲಕಿ ಮಾಡಿದ ಉಪಾಯವೇನು ಗೊತ್ತಾ?

ಕೇವಲ 8 ವರ್ಷದ ಪುಟ್ಟ ಬಾಲಕಿಯೊಬ್ಬಳು ಆನ್‌ಲೈನ್‌ ತರಗತಿಗಳಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರವೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನಿಮ್ಮ ಹಿಂದಿನ ಶಾಲಾ ದಿನಗಳನ್ನು ಒಂದು ಬಾರಿ ನೆನಪಿಸಿಕೊಳ್ಳಿ. ನೀವು ಕ್ಲಾಸ್ ಬಂಕ್ ಮಾಡಲು ಅಥವಾ ಶಾಲೆಗೆ ಹೋಗುವುದನ್ನು ತಪ್ಪಿಸಲು ಏನೇಲ್ಲಾ ಹರಸಾಹಸ ಮಾಡುತ್ತಿದ್ದೀರಿ. ಶಾಲೆಗೆ ಹೋಗುವುದನ್ನು ತಪ್ಪಿಸುವುದು ನಿಮಗೆ ಒಂದು ರೀತಿ ಜೈಲಿನಿಂದ ಎಸ್ಕೇಪ್ ಆಗುವಂತಹ ಅನುಭವ ನೀಡುತ್ತಿತ್ತು ಅಲ್ಲವೇ? ನೀವು ಶಾಲೆಯ ಸಮವಸ್ತ್ರ ಧರಿಸಿ, ಬಸ್‌ನಲ್ಲಿ ಹೋಗಿ ನಂತರ ಕಣ್ಮರೆಯಾಗುತ್ತಿದ್ರಿ. ಆದ್ರೆ ನೀವು ಮನೆಯೊಳಗಿದ್ದಾಗ ಹೀಗೆ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಎಲ್ಲರ ಕಣ್ತಪ್ಪಿಸಿ ಎಸ್ಕೇಪ್ ಆಗುವುದು ಸಾಧ್ಯವಾಗದ ಮಾತು. ಕೊರೊನಾ ಸಾಂಕ್ರಾಮಿಕದ ಪರಿಣಾಮ ಇಂದು ಎಲ್ಲವೂ ಆನ್‌ಲೈನ್‌ನಲ್ಲಿಯೇ ನಡೆಯುತ್ತಿವೆ. ವಿದ್ಯಾರ್ಥಿಗಳಿಗೂ ಈಗ ಆನ್‌ಲೈನ್‌ನಲ್ಲಿಯೇ ಪಾಠ ಹೇಳಿಕೊಡಲಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ತರಗತಿಗಳಿಂದ ತಪ್ಪಿಕೊಳ್ಳಲು ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

  ತಂತ್ರಜ್ಞಾನವು ಎಲ್ಲ ಸಮಯದಲ್ಲೂ ಕೆಲಸ ಮಾಡುವುದಿಲ್ಲ. ಒಂದೊಂದು ಬಾರಿ ಅದು ನಿಮಗೆ ಕೈಕೊಡಬಹುದು, ವಿದ್ಯುತ್ ಹೋಗಬಹುದು ಅಥವಾ ವೈಫೈ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಇಷ್ಟೆಲ್ಲ ಏಕೆ ಹೇಳುತ್ತಿದ್ದೇವೆ ಎಂದರೆ, ಇತ್ತೀಚಿನ ಘಟನೆಯೊಂದರಲ್ಲಿ 8 ವರ್ಷದ ಬಾಲಕಿಯೊಬ್ಬಳು ಕ್ಲಾಸ್ ತಪ್ಪಿಸಿಕೊಳ್ಳಲು ಮಾಡಿದ ತಂತ್ರದ ಬಗ್ಗೆ ತಿಳಿಸಲು. ಹೌದು, ಕೇವಲ 8 ವರ್ಷದ ಪುಟ್ಟ ಬಾಲಕಿಯೊಬ್ಬಳು ಆನ್‌ಲೈನ್‌ ತರಗತಿಗಳಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರವೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಮೈಕ್ ಪಿಕ್ಕೊಲೊ ಎಂಬುವರು, ತಮ್ಮ ಸೋದರ ಸೊಸೆ ಆನ್‌ಲೈನ್ ತರಗತಿಗಳಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರದ ಬಗ್ಗೆ ತಿಳಿಸಿದ್ದಾರೆ. ಜೂಮ್‌ನಲ್ಲಿ ಕ್ಲಾಸ್ ನಡೆಯುತ್ತಿರುವಾಗ ಆಕೆ ತನ್ನ ಪೋಷಕರು, ಶಾಲೆ ಮತ್ತು ಜೂಮ್ ಕಂಪನಿಯನ್ನು ಮೋಸಗೊಳಿಸಲು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಳು. ಆಕೆ ಮಾಡಿದ ಈ ತಂತ್ರವು ತುಂಬಾ ಅದ್ಭುತವಾಗಿತ್ತು ಮತ್ತು ವಾರಗಳವರೆಗೆ ಏನು ಸಮಸ್ಯೆಯಾಗಿದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

  ಅಷ್ಟಕ್ಕೂ ಆಕೆ ಮಾಡಿದ ತಂತ್ರವೇನು ಅಂತೀರಾ..? ಇದು ಒಂದು ಸರಳ ದೋಷದಿಂದ ಪ್ರಾರಂಭವಾಯಿತು. ಆಕೆ ತುಂಬಾ ಮುಗ್ಧವಾಗಿ ತಾಯಿಯ ಬಳಿಗೆ ಹೋಗುತ್ತಾಳೆ, ಬಳಿಕ ಜೂಮ್ ಕ್ಲಾಸ್ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಾಳೆ. ಇದು ಆ್ಯಪ್ ಗ್ಲಿಚ್ ಇರಬೇಕೆಂದು ಅವರ ತಾಯಿ ನಂಬುತ್ತಾಳೆ ಮತ್ತು ಈ ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ಪುಟ್ಟ ಬಾಲಕಿ ತರಗತಿಯನ್ನು ತಪ್ಪಿಸಿಕೊಳ್ಳುತ್ತಾಳೆಂದು ಶಿಕ್ಷಕರಿಗೆ ಅವರು ಮಾಹಿತಿ ನೀಡುತ್ತಾರೆ.
  ಮರುದಿನ ಮತ್ತದೇ ತೊಂದರೆ ಬಗ್ಗೆ ಪುಟ್ಟ ಹುಡುಗಿ ತಾಯಿಯ ಬಳಿ ಹೇಳುತ್ತಾಳೆ. ಮತ್ತೆ ಅವರು ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಬಾಲಕಿ ತನ್ನ ತರಗತಿಗೆ ಸೇರಲು ಪ್ರಯತ್ನಿಸಿದಾಗಲೆಲ್ಲಾ ಜೂಮ್ ‘ತಪ್ಪಾದ ಪಾಸ್‌ವರ್ಡ್’ ಎಂದು ತೋರಿಸುತ್ತಿತ್ತು. ಆದ್ದರಿಂದ ಶಿಕ್ಷಕರು ಸಂಪೂರ್ಣ ಹೊಸ ತರಗತಿಯನ್ನು ರೂಪಿಸಿದ್ದರು. ಪ್ರತಿ ವಿದ್ಯಾರ್ಥಿಯು ಹೊಸ ಕ್ಯಾಲೆಂಡರ್‌ಗಳು ಮತ್ತು ಲಾಗಿನ್‌ಗಳನ್ನು ರಚಿಸಬೇಕಾಗಿತ್ತು. ಆದರೆ ಇನ್ನೂ ಕೂಡ ಸಮಸ್ಯೆ ಮುಂದುವರೆಯಿತು.



  ಇದರಿಂದ ಸುಸ್ತಾದ ತಾಯಿ ತಮ್ಮ ಮನೆಗೆ ಬಂದು ಶಾಲೆಯ ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿದರು. ಆದರೆ ಅದನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಜೂಮ್ ಗ್ರಾಹಕ ಸೇವಾ ಸಿಬ್ಬಂದಿ ಕೂಡ ಅವರ ಯಾವುದೇ ಪ್ರಯತ್ನಕ್ಕೆ ಸಹಾಯ ಮಾಡದ ಕಾರಣ ಸಮಸ್ಯೆ ಬಗೆಹರಿಸಲಾಗಲಿಲ್ಲ. ಇದರಿಂದ ತಮ್ಮ ಪುತ್ರಿ ಶಾಲೆಯನ್ನು ಬಿಟ್ಟುಬಿಡಬೇಕು ಮತ್ತು ಮನೆಯಲ್ಲೇ ಆಕೆಗೆ ಶಿಕ್ಷಣ ನೀಡಬೇಕೆಂದು ತಾಯಿ ಭಾವಿಸಿದ್ದರು. ಆದರೂ, ಒಂದು ದಿನ ಬಾಲಕಿ ತರಗತಿಗೆ ಹಾಜರಾಗಲು ತನ್ನ ಸ್ನೇಹಿತೆಯ ಮನೆಯಲ್ಲಿದ್ದಳು. ಸ್ನೇಹಿತೆಯ ತಾಯಿ ಅವಳು ನಿರಂತರವಾಗಿ ಲಾಗ್ ಔಟ್ ಆಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದರು.

  ಅವಾಗಲೇ ಪುಟ್ಟ ಬಾಲಕಿಯ ಮಾಸ್ಟರ್ ಪ್ಲಾನ್ ಬಯಲಾಗಿದ್ದು. ಆನ್‌ಲೈನ್‌ ಕ್ಲಾಸ್ ತಪ್ಪಿಸಿಕೊಳ್ಳಲು ಪುಟ್ಟ ಬಾಲಕಿ ಪದೇ ಪದೇ ಲಾಗ್ ಔಟ್ ಆಗುವುದು, ನಂತರ ತಪ್ಪಾದ ಪಾಸ್‌ವರ್ಡ್ಅನ್ನು 20 ಬಾರಿ ನಮೂದಿಸುವುದು ಮಾಡುತ್ತಿರುತ್ತಾಳೆ. ಹೀಗಾಗಿ ಅವಳ ಜೂಮ್ ಖಾತೆ ಲಾಕ್ ಆಗುತ್ತಿತ್ತು. ಕೊನೆಗೂ ಆಕೆಯ ತಂತ್ರ ಬಹಿರಂಗವಾಯಿತು. ತನ್ನ ತರಗತಿ ತಪ್ಪಿಸಿಕೊಳ್ಳಲು ಈ ಬಾಲಕಿ ಮಾಡಿದ ತಂತ್ರದ ಬಗ್ಗೆ ಜಿಮ್ಮಿ ಕಿಮ್ಮೆಲ್ ಶೋನಲ್ಲಿ ಕೂಡ ಪ್ರಸ್ತಾಪವಾಗಿದೆ.

  ಆನ್‌ಲೈನ್‌ ತರಗತಿಯನ್ನು ತಪ್ಪಿಸಿಕೊಳ್ಳಲು ತನ್ನ ಪೋಷಕರು, ಶಾಲೆಯ ಶಿಕ್ಷಕರು ಹಾಗೂ ಜೂಮ್ ಕಂಪನಿಗೆ ಮೋಸಗೊಳಿಸಿದ ಪುಟ್ಟ ಬಾಲಕಿಯ ಈ ಮಾಸ್ಟರ್ ಪ್ಲಾನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಆಕೆ ಉಪಯೋಗಿಸಿದ ತಂತ್ರದ ಬಗ್ಗೆ ಶ್ಲಾಘಿಸಿದ್ದಾರೆ. ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸ್ಟೋರಿಯನ್ನು ಹಂಚಿಕೊಳ್ಳುತ್ತಿದ್ದಾರೆ.
  Published by:Sushma Chakre
  First published: