Venice: ಪರಂಪರೆ ರಕ್ಷಣೆಗೆ ಶತಪ್ರಯತ್ನ ನಡೆಸುತ್ತಿದೆ ತೇಲುವ ನಗರ ವೆನಿಸ್! ಏಕೆ ಏನಾಯ್ತು?

ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ವೆನಿಸ್ ಪಟ್ಟಣವು ಸಂಕಷ್ಟಕ್ಕೆ ಸಿಲುಕದಂತೆ ನಗರ ಪ್ರಾಧಿಕಾರವು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಬಗ್ಗೆ ತಿಳಿಯಿರಿ.

ವೆನಿಸ್ ನಗರ (ಪ್ರಾತಿನಿಧಿಕ ಚಿತ್ರ)

ವೆನಿಸ್ ನಗರ (ಪ್ರಾತಿನಿಧಿಕ ಚಿತ್ರ)

  • Share this:
ವಿಶ್ವಾದ್ಯಂತ ಸಾವಿರಾರು ಗಮ್ಯವಾದ ಪ್ರವಾಸಿ ಸ್ಥಳಗಳಿವೆ. ಆದರೂ ಕೆಲವೇ ಕೆಲವು ಸ್ಥಳಗಳು ಜಗತ್ತಿನಲ್ಲೇ ಅತಿ ವಿಶಿಷ್ಟ ಎನ್ನಬಹುದಾದ ಪ್ರವಾಸಿ ಆಕರ್ಷಣೆ ಹೊಂದಿದ್ದು ಪ್ರಪಂಚದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಅಂತಹ ಒಂದು ಸ್ಥಳವಾಗಿದೆ ಇಟಲಿಯ ಸುಪ್ರಸಿದ್ಧ ವೆನಿಸ್ ನಗರ. ಇದನ್ನು "ಜಗತ್ತಿನ ತೇಲುವ ನಗರ" ಎಂದೇ ಬಣ್ಣಿಸಲಾಗುತ್ತದೆ. ವೆನಿಸ್ (Venice) ತನ್ನ ಐತಿಹಾಸಿಕ ಶ್ರೀಮಂತಿಕೆ ಹಾಗೂ ಪಾರಂಪರಿಕ ವಿನ್ಯಾಸ ಮತ್ತು ಸೇತುವೆಗಳಿಗಾಗಿ ಹೆಸರುವಾಸಿ. ಭಾರತದ ಬಾಲಿವುಡ್ ಚಿತ್ರಗಳಲ್ಲಿ (Bollywood Films) ಹಲವು ಬಾರಿ ವೆನಿಸ್ ಪಟ್ಟಣದ ಸೌಂದರ್ಯವನ್ನು ಚಿತ್ರೀಕರಿಸಲಾಗಿರುವುದನ್ನು ಗಮನಿಸಬಹುದು. ಆದರೆ ಹೆಚ್ಚುತ್ತಿರುವ ಪರ್ಯಟನೆ ಹಾಗೂ ಅಪಾರ ಸಂಖ್ಯೆಯಲ್ಲಿ (Tourists) ಪ್ರವಾಸಿಗರ ಆಗಮನ ಪ್ರದೇಶದ ಭವ್ಯ ಪರಂಪರೆಗೆ ಅಪಾಯ ಒಡ್ಡಬಹುದಾದ ಸಾಧ್ಯತೆ ಇಲ್ಲಿನ ಆಡಳಿತಕ್ಕೆ ಚಿಂತೆ ಮೂಡಿದೆ.

ತಮ್ಮ ಐತಿಹಾಸಿಕ ಸಿರಿವಂತಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಕಳೆದ 3 ದಶಕಗಳಿಂದಲೂ ಸಾಕಷ್ಟು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಯತ್ನಿಸುತ್ತಲೇ ಇದ್ದಾರೆ.

ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ?
ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ವೆನಿಸ್ ಪಟ್ಟಣವು ಸಂಕಷ್ಟಕ್ಕೆ ಸಿಲುಕದಂತೆ ನಗರ ಪ್ರಾಧಿಕಾರವು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಬಗ್ಗೆ ತಿಳಿಯಿರಿ.

ಪಿಯಾಜಾ ಸಾನ್ ಮಾರ್ಕೋದಲ್ಲಿ ಕುಡಿಯುವುದು/ತಿನ್ನುವುದು ನಿಷಿದ್ಧ
ಹೌದು ಪಿಯಾಜಾ ಸಾನ್ ಮಾರ್ಕೋ ಎಂಬುದು ವೆನಿಸ್ ನಗರದ ಅತಿ ಪ್ರಮುಖ ಪ್ರವಾಸಿ ಆಕರ್ಷಣೆ. ವೆನಿಸ್ ನಗರಕ್ಕೆ ಬರುವ ಪ್ರತಿ ಪ್ರವಾಸಿಗ ಈ ಸ್ಥಳವನ್ನು ಖಂಡಿತ ಮಿಸ್ ಮಾಡಲಾರ. ಆದರೆ, ಈ ಪ್ರದೇಶ ಕಲುಶಿತಗೊಳ್ಳದಂತೆ ಇಲ್ಲಿನ ಪ್ರಾಧಿಕಾರ 1987 ರಿಂದಲೇ ಈ ಪ್ರದೇಶದಲ್ಲಿ ಕುಡಿಯುವುದಾಗಲಿ, ತಿನ್ನುವುದಾಗಲಿ ಕ್ರಿಯೆಗಳ ಮೇಲೆ ನಿಷೇಧ ಹೇರಿದೆ.

ಹಾಗಂತ ಎಲ್ಲಿಯಾದರೂ ಬಚ್ಚಿಕೊಂಡು ತಿನ್ನುವ ಪ್ರಯತ್ನ ಬೇಡ. ಏಕೆಂದರೆ ಪಾಲಿಕೆಯ ಪೊಲೀಸ್ ಅಧಿಕಾರಿಗಳು ತಮ್ಮ ಹದ್ದಿನ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಿರುತ್ತಾರೆ. 2019 ರಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ರಿಯಾಲ್ಟೋ ಸೇತುವೆಯ ಮೆಟ್ಟಿಲುಗಳ ಮೇಲೆ ನಿಂತು ಆಹಾರ ಸೇವಿಸುವಾಗ ಸಿಕ್ಕಿ ಬಿದ್ದಿದ್ದರು. ಅವರಿಗೆ 900 ಯುರೋ ದಂಡ ವಿಧಿಸಲಾಯಿತಲ್ಲದೆ ವೆನಿಸ್ ತೊರೆಯಲು ಹೇಳಲಾಯಿತು.

ಪಕ್ಷಿ ಚದುರಿಸಲು ವಾಟರ್ ಗನ್ ಬಳಕೆ
ಸೀಗಲ್ ಎಂಬುದು ಸಾಮಾನ್ಯವಾಗಿ ಸಮುದ್ರ ಅಥವಾ ನೀರು ಇರುವ ಸ್ಥಳಗಳಲ್ಲಿ ಕಂಡುಬರುವ ಹಕ್ಕಿಗಳು. ಸಾನ್ ಮಾರ್ಕೋದಲ್ಲೂ ಸಹ ಈ ಹಕ್ಕಿಗಳು ವಿಪರೀತ ಕಾಟ ಕೊಡುತ್ತವೆ. ಅದರಲ್ಲೂ ವಿಶೇಷವಾಗಿ ಈ ಪ್ರದೇಶದಲ್ಲಿ ಮುಂಚೆಯಿಂದಲೂ ನೆಲೆಯೂರಿರುವ ಕೆಲ ಪ್ರಸಿದ್ಧ ಹೋಟೆಲ್‌ಗಳಿದ್ದು ಅವು ತಮ್ಮ ಗ್ರಾಹಕರು ಊಟಕ್ಕೆಂದು ಕುಳಿತಾಗ ಸೀಗಲ್ ಹಕ್ಕಿಗಳ ಉಪದ್ರವ ತಡೆಯಲು ಹಾಗೂ ಅವುಗಳನ್ನು ತಮ್ಮ ಟೇಬಲ್‌ಗಳಿಂದ ಚದುರಿಸಲು ವಾಟರ್ ಗನ್ ಬಳಸಲು ವ್ಯವಸ್ಥೆ ಮಾಡಿವೆ.

ಇದು ಆರೆಂಜ್ ಬಣ್ಣದಲ್ಲಿದ್ದು ಈ ಬಣ್ಣ ಈ ಹಕ್ಕಿಗಳಿಗೆ ಆಗಿ ಬರುವುದಿಲ್ಲ ಎನ್ನಲಾಗಿದೆ. ಈ ಪ್ರದೇಶದ ಪ್ರಸಿದ್ಧ ಹೋಟೆಲ್‌ಗಳಾದ ಗ್ರಿಟ್ಟಿ ಪ್ಯಾಲೇಶ್ ಮತ್ತು ಮೊನಾಕೊ ಹಾಗೂ ಗಾರ್ಲಾಂಡ್ ಹೋಟೆಲ್‌ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾರಿವಾಳಗಳಿಗೆ ಆಹಾರ ತಿನ್ನಿಸುವಂತಿಲ್ಲ
ವೆನಿಸ್ ಪಟ್ಟಣದಲ್ಲಿ ಭವ್ಯ ಕಟ್ಟಡಗಳು ಹಾಗೂ ಗೋಡೆಗಳು ಇರುವುದನ್ನು ಕಾಣಬಹುದಾಗಿದ್ದು ಇವು ಐತಿಹಾಸಿಕ ಮಹತ್ವ ಹೊಂದಿವೆ. ಆದರೆ, ಇಲ್ಲಿರುವ ಪಾರಿವಾಳಗಳು ಆ ಕಟ್ಟಡಗಳಿಗೆ ಹಾನಿ ಮಾಡುತ್ತಿರುವುದನ್ನು ಗಮನಿಸಲಾಯಿತು.

ಇದಕ್ಕೆ ಮುಖ್ಯ ಕಾರಣ ಜನರು ಇಲ್ಲಿ ಗುಂಪು ಗುಂಪಾಗಿ ಹಾರಾಡುವ ಪಾರಿವಾಳಗಳಿಗೆ ದವಸ ಧಾನ್ಯ ಹಾಕಿ ತಿನಿಸುತ್ತಿದ್ದರು. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡ ಇಲ್ಲಿನ ಪಾಲಿಕೆಯು ಪಾರಿವಾಳಗಳಿಗೆ ತಿನ್ನಿಸುವುದನ್ನು ನಿಷೇಧಿಸಿದೆ. ಈ ನಿಯಮ ಉಲ್ಲಂಘನೆ ಮಾಡುವವರಿಗೆ ಐದು ನೂರು ಯುರೋಗಳ ದಂಡ ವಿಧಿಸಲಾಗುತ್ತದೆ.

ವೆನಿಸ್ ಅನ್ನು ಗೌರವಿಸಿ
ಮೇಲೆ ತಿಳಿಸಿದ ಎಲ್ಲ ಕ್ರಮಗಳ ಬಗ್ಗೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅರಿವಾಗಲಿ ಹಾಗೂ ನಗರದ ನೈರ್ಮಲ್ಯತೆ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸುವಲ್ಲಿ ಅವರ ಪಾತ್ರವೂ ಇರಲಿ ಎಂಬ ಉದ್ದೇಶದಿಂದ 2017 ರಲ್ಲಿ ವೆನಿಸ್ ಪಟ್ಟಣದಾದ್ಯಂತ "ವೆನಿಸ್ ಅನ್ನು ಗೌರವಿಸಿ" ಎಂಬ ಅಭಿಯಾನವನ್ನು ನಡೆಸಲಾಯಿತು. ಈ ಅಭಿಯಾನದ ಭಾಗವಾಗಿ ಇಲ್ಲಿನ ಸುಪ್ರಸಿದ್ಧ ಸೇತುವೆಗಳಿಗೆ ಭೇಟಿ ನೀಡುವ ಪ್ರವಾಸಿಗರು ಅದರ ಚಿತ್ರಗಳನ್ನು ಸೆರೆಹಿಡಿಯುತ್ತ ಅಲ್ಲಿಯೇ ಅಧಿಕ ಸಮಯದವರೆಗೆ ನಿಂತು ಟ್ರಾಫಿಕ್ ಜಾಮ್ ಉಂಟಾಗದಂತೆ ಹಲವು ಸೂಕ್ಷ್ಮ ವಿಚಾರಗಳನ್ನು ಪ್ರವಾಸಿಗರಿಗೆ ಸಾರಲಾಯಿತು.

ವರ್ಚುವಲ್ ಪ್ರವಾಸ
ಆದರೂ ವೆನಿಸ್ ನಗರಕ್ಕೆ ಜನಸಾಗರ ಹರಿದು ಬರುತ್ತಿರುವುದನ್ನು ಗಮನಿಸಿದ್ದ ವೆನಿಸ್ ನಗರ ಪಾಲಿಕೆಯು ಈ ಹಿಂದೆ ಅಂದರೆ 2011 ರಿಂದಲೇ ವೆನಿಸ್ ನಗರದ ವರ್ಚುವಲ್ ಪ್ರವಾಸ ಆರಂಭಿಸಿದೆ. ಪ್ರವಾಸಿಗರು ಈ ಮೂಲಕ ವೆನಿಸ್ ಪಟ್ಟಣದ ವಿವಿಧ ಭಾಗಗಳು, ಕ್ಯಾನಲ್‌ಗಳು, ಸೇತುವೆಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ 360 ಡಿಗ್ರಿವರೆಗೂ ವೃತ್ತಾಕಾರದಲ್ಲಿ ಸೆರೆಹಿಡಿಯಲಾದ ಚಿತ್ರಗಳನ್ನು ಆಸ್ವಾದಿಸುತ್ತ ತಾವೇ ಸ್ವತಃ ಆ ಸ್ಥಳದಲ್ಲಿ ಇರುವಂತಹ ಅನುಭವ ಮೂಡಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಬಹುದೆಂದು ಇಲ್ಲಿನ ಪ್ರಾಧಿಕಾರ ನಂಬಿದೆ.

ಫಾಸ್ಟ್ ಫುಡ್ ಖಂಡಿತ ಇಲ್ಲ
ಸಾಮಾನ್ಯವಾಗಿ ಯಾವುದಾದರೂ ಪ್ರವಾಸಿ ಸ್ಥಳಗಳಲ್ಲಿ ಈಟರಿ ಔಟ್ಲೆಟ್‌ಗಳು ಇದ್ದು ಜನರು ತಮಗೆ ಬೇಕಾದ ಫಾಸ್ಟ್ ಫುಡ್ ಅಥವಾ ಕರಿದ ತಿಂಡಿ ಕೊಂಡು ರಸ್ತೆಯ ಮೇಲೆಯೇ ತಿನ್ನುತ್ತ ಸಾಗುವ ದೃಶ್ಯ ಸಾಮಾನ್ಯ.

ಇದನ್ನೂ ಓದಿ: Woman Married Pet Cat: 5 ವರ್ಷದ ಲವ್, ಸಾಕು ಬೆಕ್ಕನ್ನು ಮದುವೆಯಾದ ಮಹಿಳೆ!

ಇದರಿಂದ ತಮ್ಮ ಪ್ರದೇಶದ ಮೌಲ್ಯಕ್ಕೆ ಹಾನಿಯಾಗಬಹುದೆಂದು ಮನಗಂಡ ವೆನಿಸ್ ಪ್ರಶಾಸನವು 2017 ರಿಂದಲೇ ಫಾಸ್ಟ್ ಫುಡ್ ತೆರೆಯಲು ಅನುಮತಿ ನೀಡುವುದನ್ನು ನಿಲ್ಲಿಸಿದೆ. ಹಾಗಾಗಿ ಇಲ್ಲಿ ಫಾಸ್ಟ್ ಫುಡ್ ಸಿಗುವುದು ಬಲು ಕಷ್ಟ ಹಾಗೂ ಬೇರೆಡೆಯಿಂದ ತಂದಿದ್ದರೂ ತಿನ್ನುವುದು ಅಸಾಧ್ಯ.

ಕ್ರೂಸ್ ಹಡಗಿಗೆ ಅನುಮತಿ ಇಲ್ಲ
ವೆನಿಸ್ ಲಗೂನ್ ಅಂದರೆ ಜೌಗು ಪ್ರದೇಶದಲ್ಲಿ ಸಾಮಾನ್ಯವಾಗಿ ಸಣ್ಣ ಪುಟ್ಟ ಹಡುಗುಗಳನ್ನು ನೋಡಬಹುದು. ಆದರೆ ಇಲ್ಲಿನ ಪ್ರದೇಶಕ್ಕೆ ಮುಂದೆ ಯಾವುದೇ ಹಾನಿಯಾಗದಂತೆ ವೆನಿಸ್ ಪ್ರಶಾಸನವು ವೆನಿಸ್ ಲಗೂನ್ ನೀರು ಪ್ರದೇಶದಲ್ಲಿ 180 ಮೀ ಉದ್ದದ ಹಾಗೂ ಕನಿಷ್ಟ 25,000 ಟನ್‌ಗಳಷ್ಟು ಭಾರ ಇರುವ ಕ್ರೂಸ್ ಹಡುಗಗಳು ಪ್ರವೇಶಿಸದಂತೆ ಬ್ಯಾನ್ ಮಾಡಿದೆ.

ಇದನ್ನೂ ಓದಿ: Samosa in Toilet: 30 ವರ್ಷದಿಂದ ಟಾಯ್ಲೆಟ್​​ನಲ್ಲಿ ಸಮೋಸ ಮಾಡಿದ ರೆಸ್ಟೋರೆಂಟ್

ಪ್ರವೇಶ ಶುಲ್ಕ
ಈಗ ಮುಂಬರುವ ಬೇಸಿಗೆಯಿಂದ ಪ್ರವಾಸಿಗರು ಮುಂಚಿತವಾಗಿಯೇ ಬುಕ್ ಮಾಡದೆ ವೆನಿಸ್ ಪಟ್ಟಣಕ್ಕೆ ಬಂದರೆ ಪ್ರವೇಶ ಶುಲ್ಕ ಭರಿಸಬೇಕಾಗುತ್ತದೆ. ಋತುಮಾನದ ಆಧಾರದ ಮೇಲೆ ಪ್ರವೇಶ ಶುಲ್ಕ ಭಿನ್ನವಾಗಿರಲಿದ್ದು ಮೂರರಿಂದ ಹತ್ತು ಯುರೋ ಮಧ್ಯದಲ್ಲಿರಬಹುದು ಎಂದು ಹೇಳಲಾಗಿದೆ.
Published by:guruganesh bhat
First published: