ತಿಂಗಳ ಸಂಬಳವನ್ನು(Salary ) ಕ್ಯಾಶ್ (Cash) ಇಲ್ಲ ಚೆಕ್ ( Cheque ) ಮೂಲಕ ಪಡೆಯುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ಭೂಪ ತನ್ನ ಕಂಪನಿಯಲ್ಲಿ ಕೆಲಸ ಮಾಡುವಾತನಿಗೆ ಬರೋಬ್ಬರಿ 226 ಕಿಲೋ ತೂಕದ ನಾಣ್ಯಗಳನ್ನು ನೀಡಿದ್ದಾನೆ. ಹಾಗಾದ್ರೆ ಏನಿದು 'ಚಿಲ್ಲರೆ' ವಿಷಯ ನೋಡೋಣ ಬನ್ನಿ.ಒಂದು ಕಂಪನಿ ಅಥವಾ ಇನ್ಯಾವುದೇ ಕೆಲಸ ಮಾಡುವ ಸ್ಥಳ ಅಂದ ಮೇಲೆ ಅಲ್ಲಿ ಮೇಲಧಿಕಾರಿ ಮತ್ತು ನೌಕರರ ನಡುವೆ ಭಿನ್ನಾಭಿಪ್ರಾಯ ಇರುವುದು ಸಹಜ. ಎಲ್ಲಾ ಕಡೆ ಇದನ್ನ ನೋಡಿರುತ್ತೇವೆ. ಯುಎಸ್ನಲ್ಲಿ ಇಂಥದೊಂದು ಅಚ್ಚರಿ ಘಟನೆ ನಡೆದಿದೆ. ಮಾಲೀಕ ಮಾಡಿದ ಕೆಲಸಕ್ಕೆ ಆತನ ವಿರುದ್ಧ ದೂರು ಕೂಡ ದಾಖಲಾಗಿದೆ.
ಚಿಲ್ಲರೆ ಮಾಲೀಕ..!
ಯುನೈಟೆಡ್ ಸ್ಟೇಟ್ಸ್ನಲ್ಲಿ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಆ್ಯಂಡ್ರಿಯಾಸ್ ಫ್ಲಾಟೆನ್ ಮತ್ತು ಅವನ ಯಜಮಾನನ ನಡುವೆ ವಾಗ್ವಾದವಾಗಿದೆ. ವಾಗ್ವಾದ ಅತಿರೇಕಕ್ಕೆ ತೆರಳಿ ಆ್ಯಂಡ್ರಿಯಾಸ್ ಕೆಲಸ ಬಿಡುವ ನಿರ್ಧಾರಕ್ಕೆ ಬಂದು ತನ್ನ ಪೂರ್ತಿ ಸಂಬಳ ಕೊಡುವಂತೆ ತನ್ನ ಯಜಮಾನನಿಗೆ ತಾಕೀತು ಮಾಡಿದ್ದನು. ಇದಕ್ಕೆ ಮಾಲೀಕ ಪೂರ್ತಿ ಸಂಬಳವನ್ನು ಆ್ಯಂಡ್ರಿಯಾಸ್ಗೆ ಚಿಲ್ಲರೆ ಮೂಲಕ ನೀಡಿದ್ದಾನೆ. ಈ ಘಟನೆ ವಿರುದ್ಧ ಸದ್ಯ ನೌಕರ ಸಂಘವು ಮಾಲೀಕನ ವಿರುದ್ಧ ದೂರನ್ನು ದಾಖಲಿಸಿದೆ.
ಇದನ್ನೂ ಓದಿ: PubGಯಲ್ಲೇ ಶುರುವಾಯ್ತು ಲವ್.. ಕನ್ನಡತಿ, ಪಶ್ಚಿಮ ಬಂಗಾಳದ ಯುವಕನ Love Story ನಿಜಕ್ಕೂ ಫಿಲ್ಮಿ
ಆ್ಯಂಡ್ರಿಯಾಸ್ ಫ್ಲಾಟೆನ್ ತಾನು ಕೆಲಸ ಬಿಡುವುದಾಗಿ ಮತ್ತು ತನ್ನ ಪೂರ್ತಿ ಸಂಬಳವನ್ನು ಫುಲ್ ಸೆಟಲ್ಮೆಂಟ್ ಮಾಡ್ಬೇಕು ಎಂದಿದ್ದನು. ಅದಕ್ಕೆ ಕಾರ್ ಗ್ಯಾರೇಜ್ ಮಾಲೀಕ ಬ್ಯಾಗ್ ಪೂರ್ತಿ 226 ಕಿಲೋ ತೂಕವಿರುವ ನಾಣ್ಯಗಳನ್ನು ನೀಡಿ ಆ್ಯಂಡ್ರಿಯಾಸ್ ನನ್ನು ಪೇಚಿಗೆ ಸಿಕ್ಕಿಸುವುದರ ಜೊತೆಗೆ ತಾನು ತೊಂದರೆಗೆ ಒಳಗಾಗಿದ್ದಾನೆ. ಅಲ್ಲದೆ ಆ್ಯಂಡ್ರಿಯಾಸ್ ಪಡೆದಿರುವ ಒಂದು ಬ್ಯಾಗ್ ನಾಣ್ಯದ ಬೆಲೆ ಅವನ ಸಂಬಳಕ್ಕಿಂತ ಕಡಿಮೆಯಾಗಿದೆ.
227 ಕೆ.ಜಿ. ನಾಣ್ಯ
ಆ್ಯಂಡ್ರಿಯಾಸ್ಗೆ ಸಂಬಳವಾಗಿ ಕೆಜಿಗಟ್ಟಲೆ ನಾಣ್ಯಗಳನ್ನು ನೀಡಿರುವುದರಿಂದ ಆತನಿಗೆ ಅವುಗಳನ್ನು ಎಣಿಸಲು ಕೂಡ ಸಾಧ್ಯವಾಗಿಲ್ಲ. ಆದಾಗ್ಯೂ, ಆತನ ಪೂರ್ಣ ಮತ್ತು ಅಂತಿಮ ಸಂಬಳಕ್ಕಿಂತ ಚಿಲ್ಲರೆ ನಾಣ್ಯದ ಮೊತ್ತ ಕಡಿಮೆ ಇರುವುದು ಬೇಜಾರಿನ ಸಂಗತಿ. ಮಿರರ್ ವರದಿ ಪ್ರಕಾರ 227 ಕೆ.ಜಿ. ನಾಣ್ಯಗಳನ್ನು ಸೇರಿಸಿದಾಗ, ಒಟ್ಟು 915 ಡಾಲರ್, ಇಂಡಿಯನ್ ಹಣದಲ್ಲಿ 67 ಸಾವಿರ ಮೌಲ್ಯದ್ದಾಗಿದೆ. ಆ್ಯಂಡ್ರಿಯಾಸ್ ತಾನು ಸಂಬಳ ರೂಪದಲ್ಲಿ ಪಡೆದ ನಾಣ್ಯಗಳ ಫೋಟೋವನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಸದ್ಯ ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸುದ್ದಿಯಾಗ್ತಿದ್ದಂತೆ US ಕಾರ್ಮಿಕ ಇಲಾಖೆ ಕಾರ್ ಗ್ಯಾರೇಜ್ ಮಾಲೀಕನ ವಿರುದ್ಧ ದೂರು ಸಲ್ಲಿಸಿದೆ.
ಇದನ್ನೂ ಓದಿ: Viral Story: ಮದುವೆಯಲ್ಲಿ ಹಾಡನ್ನು ಕೇಳಿ ಥಟ್ ಅಂತ Divorce ನೀಡಿದ ವರ!
ಮಾಲೀಕನಿಗೆ ನೆಟ್ಟಿಗರ ಛೀಮಾರಿ
ಆ್ಯಂಡ್ರಿಯಾಸ್ ಸಂಬಳ ಕೇಳಿದರೆ ಮಾಲೀಕ ಆ್ಯಂಡ್ರಿಯಾಸ್ಗೆ ನಾಣ್ಯ ತುಂಬಿದ ಬ್ಯಾಗ್ ಅನ್ನು ದಾರಿಯಲ್ಲಿ ಎಸೆದಿದ್ದನು ಎಂದು ವರದಿಯಾಗಿದೆ. ಈ ಎಲ್ಲಾ ನಾಣ್ಯಗಳನ್ನು ಎತ್ತಿಕೊಳ್ಳಲು ಆ್ಯಂಡ್ರಿಯಾಸ್ ಸುಮಾರು 7 ಗಂಟೆಗಳ ಕಾಲ ದಾರಿಯಲ್ಲಿ ಕಳೆದರಂತೆ. ಕೆಜಿಗಟ್ಟಲೆ ನಾಣ್ಯಗಳನ್ನು ಆತ ಹೇಗೆ ಸ್ವೀಕರಿಸುತ್ತಾನೆ ಎಂಬುವುದರ ಬಗ್ಗೆ ಮಾಲೀಕ ಯೋಚಿಸಿಲ್ಲ, ಹೇಗೆ ಎಣಿಸುತ್ತಾನೆಂದು ಕೂಡ ಯೋಚಿಸಿಲ್ಲ. ಇದೆಲ್ಲ ಕಾರ್ ಗ್ಯಾರೇಜ್ ಮಾಲೀಕ ನೌಕರ ಆ್ಯಂಡ್ರಿಯಾಸ್ಗೆ ನೀಡಿದ ಕಿರುಕುಳವಾಗಿದೆ. ಮಾಲೀಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಒತ್ತಾಯಿಸಿದ್ದಾರೆ.
ನೌಕರನಿಗೆ ಚಿಲ್ಲರೆ ರೂಪದಲ್ಲಿ ಹಣ ನೀಡಿ ಸುದ್ದಿಯಾಗಿರುವುದು ಇದು ಮೊದಲೇನಲ್ಲ. ಸಂಭಾವನೆ, ವಿಚ್ಚೇಧನ ಬಳಿಕ ನೀಡುವ ಜೀವನಾಂಶ ಇವುಗಳನ್ನು ಕೂಡ ನಾಣ್ಯದ ಮೂಲಕ ನೀಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ನೋಡಿರುತ್ತೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ