ಪ್ರಸ್ತುತ ಜಗತ್ತಿನಲ್ಲಿ ಅನಾರೋಗ್ಯದ ಸಮಸ್ಯೆಯು (Health Problems) ಸಾಕಷ್ಟು ಪ್ರಮಾಣದ ಜನರಿಗೆ ಕಾಡುತ್ತಿದೆ. ಅದರಲ್ಲೂ ಮಾರಣಾಂತಿಕ ಎನ್ನಬಹುದಾದ ಈ ಕ್ಯಾನ್ಸರ್ ಕಾಯಿಲೆಯನ್ನು (Cancer) ಮುಂಚಿತವಾಗಿಯೇ ಕಂಡುಹಿಡಿಯುವುದು ಬಲು ಕಷ್ಟ ಹಾಗೂ ಅದಕ್ಕಾಗಿ ಆಸ್ಪತ್ರೆಗಳಿಗೆ (Hospital) ಭೇಟಿ ನೀಡಿ ಹಲವು ವಿಧಾನಗಳಿಗೆ ಒಳಪಡಲೇ ಬೇಕಾಗುತ್ತದೆ. ತದನಂತರವೇ ಕ್ಯಾನ್ಸರ್ ಬಗ್ಗೆ ಮಾಹಿತಿ ದೊರಕುತ್ತದೆ. ಪ್ರಸ್ತುತ, ಕ್ಯಾನ್ಸರ್ ಕಾಯಿಲೆ ಇದೆ ಎಂದು ದೃಢೀಕರಿಸುವ ಯಾವುದೇ ರೀತಿಯ ಮೂತ್ರ ಪರೀಕ್ಷೆ ಲಭ್ಯವಿಲ್ಲ. ಇದು ಸತ್ಯಾಂಶ. ಆದರೆ, ಅದೃಷ್ಟವಶಾತ್ ಮುಂಬರುವ ದಿನಗಳಲ್ಲಿ ಇದಕ್ಕೆ ಉತ್ತರ ದೊರೆಯಬಹುದೆಂಬ ಆಶಾಭಾವನೆ ಈಗ ಸಿಕ್ಕಂತಾಗಿದೆ.
ಏಕೆಂದರೆ, ಸ್ಕಾಟ್ಲ್ಯಾಂಡಿನ ಬೀಟ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ಸಂಶೋಧಕರು ಇಲಿಗಳಲ್ಲಿ ಹೊಸ ರೀತಿಯ ಮೆಟಾಬೊಲೈಟ್ ಉಪಸ್ಥಿತಿಯನ್ನು ಪತ್ತೆಹಚ್ಚಿದ್ದು ಇದು ಸಂಭಾವ್ಯ ಯಕೃತ್ ಕ್ಯಾನ್ಸರ್ ಇರುವಿಕೆಯನ್ನು ಮೂತ್ರ ಪರೀಕ್ಷೆಯ ಮೂಲಕ ದೃಢಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಬಿಬಿಸಿ ಮಾಧ್ಯಮ ವರದಿ ಮಾಡಿದೆ.
ಮೆಟಾಬೊಲೈಟ್ ಎಂಬುದು ಮೆಟಾಬಾಲಿಸ್ಮ್ ಕ್ರಿಯೆಯ ಒಂದು ಉತ್ಪನ್ನವಾಗಿದ್ದು ಇಲ್ಲಿಯವರೆಗೂ ಅದು ಸಸ್ತನಿಗಳಲ್ಲಿ ಇರುವಿಕೆಯನ್ನು ಹುಡುಕಿರಲಾಗಿರಲಿಲ್ಲ. ಈಗ ಸಂಶೋಧಕರ ತಂಡವು ಅದರ ಇರುವಿಕೆ ಪತ್ತೆ ಹಚ್ಚಿದ್ದು ಇದಕ್ಕನುಗುಣವಾಗಿ ಅಭಿವೃದ್ಧಿಪಡಿಸಬಹುದಾದ ಕೆಲ ಮೂತ್ರ ಪರೀಕ್ಷೆಯಿಂದ ಯಾವ ರೀತಿಯ ಯಕೃತ್ ಕ್ಯಾನ್ಸರ್ ಇರಬಹುದೆಂದು ಪತ್ತೆಹಚ್ಚಬಹುದಾಗಿದೆ ಎಂದು ಸಂಶೋಧಕರಿಂದ ತಿಳಿದುಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: Cancer Awareness: ಕ್ಯಾನ್ಸರ್ ಬರದಂತೆ ತಡೆಯಲು ಈ ಆಹಾರಗಳನ್ನು ಸೇವಿಸೋದು ಬೆಸ್ಟ್
ಸದ್ಯ ಸಂಶೋಧಕರ ತಂಡದ ನೇತೃತ್ವವಹಿಸಿರುವ ಡಾ. ಸವೆರಿಯೋ ಟಾರ್ಡಿಟೊ ಅವರು ಹೇಳುವಂತೆ, ಮುಂಬರುವ ದಿನಗಳಲ್ಲಿ ಲಿವರ್ ಕ್ಯಾನ್ಸರ್ ನಿಂದ ಬಳಲುವ ವ್ಯಕ್ತಿಗಳ ಸಂಖ್ಯೆ ಏರಿಕೆಯಾಗಲಿದ್ದು ಅದನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲ ಮಾಡಿಕೊಡುವಂತಹ ಉಪಕರಣಗಳ ಅಗತ್ಯತೆ ಇದೆ ಎಂದು ಹೇಳುತ್ತಾರೆ.
"ಈ ಮುಂಚೆ ಸಸ್ತನಿಗಳಲ್ಲಿರುವ ಆದರೆ ನಮಗೆಂದು ವಿವರಿಸಲಾಗದ ಮೆಟಾಬೊಲೈಟ್ ಉಪಸ್ಥಿತಿಯನ್ನು ನಾವು ಪತ್ತೆಹಚ್ಚಿರುವುದಕ್ಕೆ ಉತ್ಸಾಹಿತರಾಗಿದ್ದೇವೆ" ಎಂದು ಟಾರ್ಡಿಟೊ ತಮ್ಮ ಹೊಸ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿಕೊಂಡಿದ್ದಾರೆ.
"ಈ ಹೊಸ ಉತ್ಪನ್ನವು ನಿರ್ದಿಷ್ಟ ಕ್ಯಾನ್ಸರ್ ಉಪಸ್ಥಿತವಿದೆ ಎಂಬುದನ್ನು ಪತ್ತೆ ಹಚ್ಚಲು ಬಹು ಉಪಯುಕ್ತವಗಿದೆ. ಮೂತ್ರ ಪರೀಕ್ಷೆಯ ಮೂಲಕ ಇದನ್ನು ಸುಲಭವಾಗಿ ಮಾನಿಟರ್ ಮಾಡಬಹುದಾಗಿದ್ದು ಮುಂದೆ ಇದು ಕ್ಯಾನ್ಸರ್ ಅನ್ನು ಮಾನಿಟರ್ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ" ಎಂದು ಟಾರ್ಡಿಟೊ ವಿವರಿಸಿದ್ದಾರೆ.
ಲಿವರ್ ಕ್ಯಾನ್ಸರ್ ನಲ್ಲಿ ಪ್ರಭಾವಶಾಲಿ ಎನ್ನಲಾಗುವ ಗ್ಲುಟಾಮನಿ ಸಿಂಥಟೇಸ್ ಎಂಬ ಪ್ರೋಟೀನ್ ಮೇಲೆ ಸಂಶೋಧನೆ ನಡೆಸುತ್ತಿದ್ದ ತಂಡವು ಪರೀಕ್ಷೆಯ ಮಹತ್ವದ ಬಗ್ಗೆ ಪತ್ತೆ ಹಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮುಂಚೆ ಸಾಮಾನ್ಯವಾಗಿ ಅಧ್ಯಯನ ಮಾಡುವಾಗ ಎಂದಿಗೂ ಕಂಡುಹಿಡಿಯಲಾಗದ ಸಸ್ತನಿಗಳಲ್ಲಿನ ಈ ಮೆಟಾಬೊಲೈಟ್ ಇರುವಿಕೆಯನ್ನು ಇದೇ ಮೊದಲ ಬಾರಿಗೆ ಪತ್ತೆಹಚ್ಚಲಾಗಿದೆ.
ಇದನ್ನೂ ಓದಿ: Cancer And Hibiscus: ಸ್ತನ ಕ್ಯಾನ್ಸರ್ ಗುಣಪಡಿಸಲು ದಾಸವಾಳ ಹೂವು ರಾಮಬಾಣವಂತೆ
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕ್ಯಾನ್ಸರ್ ಅನ್ನು ಪ್ರಚೋದಿಸುವಂತಹ ಬೀಟಾ ಕ್ಯಾಟೆನಿನ್ ಎಂಬ ಪದಾರ್ಥವನ್ನು ಈ ಕ್ಯಾನ್ಸರ್ ಇರುವ ರೋಗಿಯ ಮೂತ್ರದಲ್ಲಿ ನೋಡಬಹುದಾಗಿದ್ದು ಹೊಸದಾಗಿ ಆವಿಷ್ಕರಿಸಲಾಗಿರುವ ಮೆಟಾಬೊಲೈಟ್, N5-ಮೆಥಿಲ್ ಗ್ಲುಟಮೈನ್ ಎಂಬುದು ಸಹ ಮೂತ್ರದಲ್ಲಿ ಉಪಸ್ಥಿತವಿರುತ್ತದೆ. ಹಾಗಾಗಿ ಮೂತ್ರ ಪರೀಕ್ಷೆ ಈ ರೀತಿಯ ಕ್ಯಾನ್ಸರ್ ಇರುವಿಕೆಯನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಟಾರ್ಡಿಟೊ ಅವರು, "ನಾವು ಈ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡಬೇಕಾಗಿದ್ದು ಲಿವರ್ ಕ್ಯಾನ್ಸರ್ ರೋಗಿಗಳಲ್ಲಿ ಯಾವ ಹಂತದಲ್ಲಿ ಈ ಮೆಟಾಬೊಲೈಟ್ ಕಾಣಲು ಪ್ರಾರಂಭಿಸುತ್ತದೆ ಎಂಬುದನ್ನು ತಿಳಿಯಬೇಕಾಗಿದೆ" ಎಂದು ತಿಳಿಸುತ್ತಾರೆ.
ಒಟ್ಟಿನಲ್ಲಿ ಲಿವರ್ ಕ್ಯಾನ್ಸರ್ ಎಂಬುದು ಸಾಕಷ್ಟು ಅಪಾಯಕಾರಿಯಾಗಿದ್ದು ಅದನ್ನು ಮುಂಚಿತವಾಗಿಯೇ ಕಂಡುಹಿಡಿದು ಅದನ್ನು ಪರಿಣಾಮಕಾರಿಯಾಗಿ ಹೊಡೆದೊಡಿಸುವ ನಿಟ್ಟಿನಲ್ಲಿ ಈ ಆವಿಷ್ಕಾರ ಪ್ರಮುಖ ಪಾತ್ರವಹಿಸಲಿ ಹಾಗೂ ಇದರ ಸಂಭಾವ್ಯ ಉಪಯೋಗ ಎಲ್ಲರಿಗೂ ದೊರೆಯುವಂತಾಗಲಿ ಎಂದಷ್ಟೇ ನಾವು ಆಶಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ