news18-kannada Updated:April 7, 2021, 4:37 PM IST
ಯುಪಿಐ
ನೂತನ ಆರ್ಥಿಕ ವರ್ಷದ ಮೊದಲ ದಿನ ಏಪ್ರಿಲ್ 1 ರಂದು ವಾರ್ಷಿಕ ಅಕೌಂಟ್ ಕ್ಲೋಸ್ ಮಾಡಲು ಬ್ಯಾಂಕುಗಳು ಬಂದ್ ಆಗಿದ್ದವು. ಪರಿಣಾಮವಾಗಿ, ಅನೇಕ ಗ್ರಾಹಕರು NEFT, IMPS, ಮತ್ತು UPI ಮೂಲಕ ಹಣವನ್ನು ವರ್ಗಾವಣೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿರುವ ವರದಿಗಳಾಗಿವೆ. ಈ ಸಂಬಂಧ ಟ್ವೀಟ್ ಮಾಡಿದ್ದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI),''ಏಪ್ರಿಲ್ 1 ರ ಸಂಜೆಯಿಂದ ಈ ಹೆಚ್ಚಿನ ಬ್ಯಾಂಕ್ ವ್ಯವಸ್ಥೆಗಳು ಸಾಮಾನ್ಯ ಸ್ಥಿತಿಗೆ ಬಂದಿರುವುದನ್ನು ಗಮನಿಸಿದ್ದೇವೆ. ಆದರೆ ಗ್ರಾಹಕರು ನಿರಂತರವಾಗಿ ಐಎಂಪಿಎಸ್ ಮತ್ತು ಯುಪಿಐ ಸೇವೆಗಳನ್ನು ಪಡೆಯಬಹುದು'' ಎಂದು ಬರೆದುಕೊಂಡಿತ್ತು.
ಮತ್ತೊಂದೆಡೆ, ಈ ಟ್ವೀಟ್ಗೆ ಹಲವು ಬ್ಯಾಂಕ್ಗಳ ಗ್ರಾಹಕರು ಪ್ರತಿಕ್ರಿಯೆ ನೀಡಿದ್ದು, ವಿಫಲವಾದ ವಹಿವಾಟಿಗೆ ತಮ್ಮ ಹಣ ಅಕೌಂಟ್ಗೆ ಮರಳಿ ಬಂದಿಲ್ಲ ಎಂದು ಹಲವರು ಟ್ವೀಟ್ ಪೋಸ್ಟ್ ಮಾಡುತ್ತಿದ್ದರು. ವಿಫಲ ವಹಿವಾಟಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ನೀವೂ ಆಶ್ಚರ್ಯ ಪಡುತ್ತಿದ್ದರೆ, ಅಕ್ಟೋಬರ್ 2019 ರ ಆರ್ಬಿಐ ಮಾರ್ಗಸೂಚಿ ಉತ್ತಮ ಸಹಾಯ ಮಾಡುತ್ತದೆ.
ಏನ್ ಹೇಳುತ್ತೆ ಆರ್ಬಿಐ ನಿಯಮ..?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) 2019 ರ ಸೆಪ್ಟೆಂಬರ್ 19 ರ ಸುತ್ತೋಲೆಯ ಪ್ರಕಾರ, ಟರ್ನ್ ಅರೌಂಡ್ ಟೈಮ್ (ಟಿಎಟಿ) ಯ ಸಾಮರಸ್ಯ ಮತ್ತು ವಿಫಲವಾದ ವಹಿವಾಟಿನ ಸಂದರ್ಭದಲ್ಲಿ ಗ್ರಾಹಕರ ಪರಿಹಾರದ ಬಗ್ಗೆ ವಿವರಿಸಿತ್ತು. ಗ್ರಾಹಕರ ಬ್ಯಾಂಕ್ ಖಾತೆಯಿಂದ ಡೆಬಿಟ್ ಮಾಡಿದ ಹಣವನ್ನು ನಿಗದಿತ ಅವಧಿಯೊಳಗೆ ಆಯಾಯ ಬ್ಯಾಂಕ್ ಖಾತೆಗೆ ಹಿಂತಿರುಗಿಸದಿದ್ದಲ್ಲಿ ದಿನಕ್ಕೆ 100 ರೂ.ಗಳ ದಂಡವನ್ನು ಬ್ಯಾಂಕ್ ಪಾವತಿಸಬೇಕಾಗುತ್ತದೆ.
ಸುತ್ತೋಲೆಯ ಪ್ರಕಾರ, ಐಎಂಪಿಎಸ್ ವಹಿವಾಟು ವಿಫಲವಾದರೆ ಮತ್ತು ಗ್ರಾಹಕರ ಖಾತೆಯಿಂದ ಹಣ ಡೆಬಿಟ್ ಆದರೂ, ಫಲಾನುಭವಿ ಖಾತೆಗೆ ಆ ಹಣ ಹೋಗದಿದ್ದರೆ, ವಹಿವಾಟಿನ ದಿನಾಂಕದ ಟಿ +1 ದಿನಗಳಲ್ಲಿ ಡೆಬಿಟ್ ಆದ ಅಕೌಂಟ್ಗೆ ಹಣ ವಾಪಸ್ ಬರಬೇಕು. ಇದರರ್ಥ ಇಂದು ವಹಿವಾಟು ವಿಫಲವಾದರೆ, ಹಣವನ್ನು ಮುಂದಿನ ಬ್ಯಾಂಕ್ ವ್ಯವಹಾರ ದಿನದ ಅಂತ್ಯದ ವೇಳೆಗೆ ಅದನ್ನು ಪ್ರಾರಂಭಿಸಿದ ವ್ಯಕ್ತಿಗೆ ಜಮಾ ಮಾಡಬೇಕು. ಟಿ +1 ದಿನದೊಳಗೆ ಮೊತ್ತವನ್ನು ಗ್ರಾಹಕರ ಖಾತೆಗೆ ಹಿಂದಿರುಗಿಸಲು ಬ್ಯಾಂಕ್ ವಿಫಲವಾದರೆ, ಪ್ರತಿ ಬ್ಯಾಂಕ್ ಕಾರ್ಯನಿರ್ವಹಿಸುವ ದಿನಕ್ಕೂ 100 ರೂ. ದಂಡವನ್ನು ಬ್ಯಾಂಕ್ ನೀಡಬೇಕಾಗುತ್ತದೆ.
ಉದಾಹರಣೆಗೆ ಸೋಮವಾರ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆದರೆ, ಮಂಗಳವಾರದ ಅಂತ್ಯದ ವೇಳೆಗೆ ನಿಮ್ಮ ಹಣ ಫಲಾನುಭವಿ ಖಾತೆಗೆ ಹೋಗದಿದ್ದರೆ ನಿಮ್ಮ ಅಕೌಂಟ್ಗೆ ವಾಪಸ್ ಬರಬೇಕು. ಒಂದು ವೇಳೆ ಮಂಗಳವಾರ ಬ್ಯಾಂಕ್ ರಜೆ ಇದ್ದಲ್ಲಿ ಈ ನಿಯಮ ಅನ್ವಯಿಸಲ್ಲ. ಆಗ ಬುಧವಾರದ ಅಂತ್ಯದವರೆಗೆ ಸಮಯ ಇರುತ್ತದೆ. ಇನ್ನು, ಮಂಗಳವಾರ ಬ್ಯಾಂಕ್ ಇದ್ದರೂ ನಿಮ್ಮ ಅಕೌಂಟ್ಗೆ ಹಣ ಬರದಿದ್ದಲ್ಲಿ ಬುಧವಾರ ನಿಮಗೆ ನಿಮ್ಮ ಹಣದ ಜತೆಗೆ 100 ರೂ. ಎಕ್ಸ್ಟ್ರಾ ಹಣ ಬರಬೇಕು. ಗುರುವಾರ ಬಂದರೆ 200 ರೂ. ದಂಡದ ಹಣ ಈ ರೀತಿ ನಿಯಮವನ್ನು ಆರ್ಬಿಐ ಈ ಹಿಂದೆಯೇ ಸುತ್ತೋಲೆ ಹೊರಡಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ತನ್ನ ಡಿಜಿ-ಹೆಲ್ಪ್ ಸ್ಟ್ಯಾಕ್ನ ಭಾಗವಾಗಿ ಭೀಮ್ ಯುಪಿಐನಲ್ಲಿ 'ಯುಪಿಐ-ಸಹಾಯವಾಣಿ' ಅನ್ನು ಪ್ರಾರಂಭಿಸಿದೆ. ಈ ಮೂಲಕ ಭೀಮ್ ಯುಪಿಐ ಅಪ್ಲಿಕೇಶನ್ನ ಬಳಕೆದಾರರು ಪರಿಹಾರದ ಯಾಂತ್ರಿಕ ವ್ಯವಸ್ಥೆಗೆ ಉತ್ತಮವಾದ ಮತ್ತು ಜಗಳ ಮುಕ್ತ ಸಮಸ್ಯೆ ಪರಿಹಾರದ ಅನುಭವದಿಂದ ಪ್ರಯೋಜನ ಪಡೆಯುತ್ತಾರೆ.
First published:
April 7, 2021, 4:37 PM IST