ಮುಂಬೈ ಸಮುದ್ರ ತೀರದಲ್ಲಿ ಕೊಚ್ಚಿಕೊಂಡು ಬಂದ ಡಾಲ್ಫಿನ್‌ಗಳ ಮೃತದೇಹ: ಈ ಸಾವಿಗೆ ಕಾರಣವೇನು ಗೊತ್ತಾ?

ಈ ವರ್ಷದಲ್ಲೇ ಕನಿಷ್ಠ ನಾಲ್ಕು ಸಾಗರ ಹಂಪ್‌ಬ್ಯಾಕ್ ಡಾಲ್ಫಿನ್‌ಗಳ ಮೃತದೇಹ ಮುಂಬಯಿ ತೀರದಲ್ಲಿ ಕಂಡುಬಂದಿದೆ. ಈ ಪೈಕಿ ಬಾಂದ್ರಾ ಗರಿಷ್ಠ ಸಂಖ್ಯೆಯ ಮೃತದೇಹಗಳಿಗೆ ಸಾಕ್ಷಿಯಾಗಿದೆ.

ಡಾಲ್ಫಿನ್

ಡಾಲ್ಫಿನ್

 • Share this:
  ಗುರುವಾರ ಹಿಂದೂ ಮಹಾಸಾಗರದ ಎರಡು ಹಂಪ್‌ಬ್ಯಾಕ್ ಡಾಲ್ಫಿನ್‌ಗಳ ಮೃತದೇಹ ಮುಂಬೈನಲ್ಲಿ ಪತ್ತೆಯಾಗಿದೆ. ಕ್ರಮವಾಗಿ 4 ಅಡಿ ಮತ್ತು 5 ಅಡಿ ಉದ್ದದ ಎರಡು ಡಾಲ್ಫಿನ್‌ಗಳು, ಮಹೀಮ್ ಮತ್ತು ಹಾಜಿ ಅಲಿ ಎಂಬ ಎರಡು ಪ್ರತ್ಯೇಕ ತಾಣಗಳಲ್ಲಿ ಕಂಡುಬಂದಿವೆ. ದಕ್ಷಿಣ ಬಾಂಬೆಯ ಬಾಂದ್ರಾ ಪ್ರದೇಶದ ತೀರದಲ್ಲಿ ಡಾಲ್ಫಿನ್ ಮೃತದೇಹ ಪತ್ತೆಯಾದ ಮರುದಿನವೇ ಈ ಘಟನೆ ಸಂಭವಿಸಿದೆ. ಹಿಂದೂ ಮಹಾಸಾಗರದ ಹಂಪ್‌ಬ್ಯಾಕ್ ಡಾಲ್ಫಿನ್ ಅಂತಾರಾಷ್ಟ್ರೀಯ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವುದರೊಂದಿಗೆ, ಹೆಚ್ಚುತ್ತಿರುವ ಡಾಲ್ಫಿನ್ ಮೃತದೇಹಗಳು ಪರಿಸರವಾದಿಗಳು ಮತ್ತು ವನ್ಯಜೀವಿ ತಜ್ಞರ ಆತಂಕಕ್ಕೆ ಕಾರಣವಾಗಿದೆ.

  ಸಾಯುತ್ತಲೇ ಇವೆ ಡಾಲ್ಫಿನ್‌ಗಳು..!

  ಈ ವರ್ಷದಲ್ಲೇ ಕನಿಷ್ಠ ನಾಲ್ಕು ಸಾಗರ ಹಂಪ್‌ಬ್ಯಾಕ್ ಡಾಲ್ಫಿನ್‌ಗಳ ಮೃತದೇಹ ಮುಂಬಯಿ ತೀರದಲ್ಲಿ ಕಂಡುಬಂದಿದೆ. ಈ ಪೈಕಿ ಬಾಂದ್ರಾ ಗರಿಷ್ಠ ಸಂಖ್ಯೆಯ ಮೃತದೇಹಗಳಿಗೆ ಸಾಕ್ಷಿಯಾಗಿದೆ. ಸೋಮವಾರ ಬಾಂದ್ರಾದ ಕಫೆ ಪೆರೇಡ್ ಬಳಿಯಲ್ಲಿ ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ವಿಭಾಗ ಸತ್ತ ಹಂಪ್‌ಬ್ಯಾಕ್ ಡಾಲ್ಫಿನ್‌ಗಳ ಬಗ್ಗೆ ಅರಣ್ಯ ಇಲಾಖೆಗೆ ವರದಿ ಮಾಡಲಾಗಿದೆ. ನಂತರ ಡಾಲ್ಫಿನ್ ಅನ್ನು ತೆಗೆದು ಕಾರ್ಟರ್ ರಸ್ತೆಯ ಅಜ್ಞಾತ ಸ್ಥಳದಲ್ಲಿ ಹೂಳಲಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

  ಈ ವರ್ಷದ ಜನವರಿಯಲ್ಲಿ, ಸ್ಥಳೀಯ ನಾಗರಿಕರು ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದ ಬಳಿ ಕಂಡುಬಂದ ಡಾಲ್ಫಿನ್‌ ಮೃತದೇಹವನ್ನು ಬಿಎಂಸಿ ಅಧಿಕಾರಿಗಳಿಗೆ ವರದಿ ಮಾಡಿದ್ದರು. ಕಳೆದ ವರ್ಷ ಸಹ ಇಂತಹ ಅನೇಕ ಘಟನೆಗಳು ಸಂಭವಿಸಿವೆ ಮತ್ತು ಲಾಕ್‌ಡೌನ್‌ನಿಂದಾಗಿ ಮಾನವ ಚಟುವಟಿಕೆಯಲ್ಲಿನ ಕಡಿತದಿಂದಾಗಿ ಇದು ಸಂಭವಿಸಿದೆ ಎಂದು ಹಲವರು ಹೇಳಿದ್ದಾರೆ. 2020 ರಲ್ಲಿ ಮಹಾರಾಷ್ಟ್ರದ ಕರಾವಳಿಯುದ್ದಕ್ಕೂ ಸಾಗರ ಡಾಲ್ಫಿನ್‌ಗಳನ್ನು ಸಂರಕ್ಷಿಸುವ ಯೋಜನೆಯನ್ನು ಮಹಾರಾಷ್ಟ್ರವು ರೂಪಿಸಿತು. ಮಹಾರಾಷ್ಟ್ರ ಸರ್ಕಾರದ “ಮ್ಯಾಂಗ್ರೋವ್ ಸೆಲ್” ಮಹಾರಾಷ್ಟ್ರದ 700 ಕಿ.ಮೀ. ನಷ್ಟಿರುವ ಕರಾವಳಿ ಪ್ರದೇಶವನ್ನು ಸಂರಕ್ಷಿಸಲು
  ಕಾರ್ಯತಂತ್ರವನ್ನು ಸಲ್ಲಿಸಿತ್ತು.

  ಹೊಸ ವಿದ್ಯಮಾನವಲ್ಲ

  2019 ರಲ್ಲಿ, ಭಾರತೀಯ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು ಬಾಂದ್ರಾ-ವರ್ಲಿ ಸಮುದ್ರ-ಸಂಪರ್ಕ ಪ್ರದೇಶದಲ್ಲಿ ಈಜುತ್ತಿರುವುದು ಸ್ಥಳೀಯರಿಗೆ ಮತ್ತು ಸಂರಕ್ಷಣಾವಾದಿಗಳಿಗೆ ಸಂತೋಷವನ್ನು ಉಂಟುಮಾಡಿತ್ತು. ಆದರೆ ಸತ್ತ ಡಾಲ್ಫಿನ್‌ಗಳಿಗಿಂತ ಬದುಕಿರುವ ಡಾಲ್ಫಿನ್‌ಗಳನ್ನು ನೋಡುವುದೇ ಅಪರೂಪವಾಗಿದೆ. ಸಾವುಗಳು ಕಳವಳವನ್ನು ಉಂಟುಮಾಡಿದರೂ, ಅವು ಖಂಡಿತವಾಗಿಯೂ ಹೊಸ ವಿದ್ಯಮಾನವಲ್ಲ. ಫಸ್ಟ್‌ಪೋಸ್ಟ್‌ನ 2016 ರ ವರದಿಯ ಪ್ರಕಾರ, 2015 ರಿಂದ ಇಂತಹ 100 ಕ್ಕೂ ಹೆಚ್ಚು ಘಟನೆಗಳು ದಾಖಲಾಗಿವೆ. ಕಳೆದ ವರ್ಷ ಜುಲೈನಲ್ಲಿ ಸಹ ಭಾಯಂದರ್ ಬಳಿ 8 ಅಡಿ ಹಂಪ್‌ಬ್ಯಾಕ್ ಡಾಲ್ಫಿನ್‌ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು.

  ಆದರೆ ಸಾವಿಗೆ ಕಾರಣವೇನು..?

  ಹಿಂದೂಸ್ತಾನ್ ಟೈಮ್ಸ್‌ನ ಜುಲೈ 2018ರ ವರದಿಯ ಪ್ರಕಾರ, ಡಾಲ್ಫಿನ್ ಮೃತದೇಹಗಳ ಶವಪರೀಕ್ಷೆ ಯಲ್ಲಿ ಮೂರು ಡಾಲ್ಫಿನ್‌ಗಳಿಗೆ ಉಸಿರಾಟದ ಕಾಯಿಲೆಗಳು ಸಾವಿಗೆ ಕಾರಣವೆಂದು ತಿಳಿದುಬಂದಿದೆ. ಮಾಲಿನ್ಯದ ಮಟ್ಟ ಹೆಚ್ಚಾಗುವುದರಿಂದ ಜಲ ಸಸ್ತನಿಗಳಲ್ಲಿ ಉಸಿರಾಟದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಡಲ ತಳಿಗಳ ನೈಸರ್ಗಿಕ ಆವಾಸಸ್ಥಾನಗಳ ನಾಶಕ್ಕೆ ಕರಾವಳಿ ಪ್ರದೇಶದ ಮಾಲಿನ್ಯವು ಒಂದು ಪ್ರಮುಖ ಕಾರಣವಾಗಿದೆ ಎಂದು ಮ್ಯಾಂಗ್ರೋವ್ ಸೆಲ್‌ನ ಅರಣ್ಯದ ಸಹಾಯಕ ಸಂರಕ್ಷಣಾಧಿಕಾರಿ ಮಕರಂದ ಘೋಡ್ಕೆ 2018 ರಲ್ಲಿ ಹೇಳಿದ್ದರು.

  ಈ ವಾರ ಮೃತಪಟ್ಟ ಡಾಲ್ಫಿನ್‌ಗಳ ಸಾವಿಗೆ ಮಾಲಿನ್ಯ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸೋಮವಾರ ಕಫೆ ಪೆರೇಡ್‌ನಲ್ಲಿ ಪತ್ತೆಯಾದ ರಕ್ತಸಿಕ್ತ ಡಾಲ್ಫಿನ್‌ನ ಮೃತದೇಹವು ಸಸ್ತನಿ ಮೀನುಗಾರಿಕಾ ದೋಣಿಗೆ ಡಿಕ್ಕಿ ಹೊಡೆದಿದೆ ಎಂದು ತಜ್ಞರು ನಂಬಲು ಕಾರಣವಾಯಿತು.

  ಆದರೂ, ಕೊಳೆತ ಸ್ಥಿತಿಯಲ್ಲಿ ಡಾಲ್ಫಿನ್‌ಗಳ ಮೃತದೇಹ ಪತ್ತೆಯಾಗುವುದರಿಂದ ಶವಪರೀಕ್ಷೆ ನಡೆಸಲು ಅಸಾಧ್ಯವಾಗಿಸುತ್ತದೆ. ಈ ಹಿನ್ನೆಲೆ ಅನೇಕ ಡಾಲ್ಫಿನ್‌ಗಳ ಸಾವಿಗೆ ನಿಖರವಾದ ಕಾರಣವನ್ನು ಕಂಡುಕೊಳ್ಳಲು ಆಗುವುದಿಲ್ಲ.

  ಡಾಲ್ಫಿನ್‌ಗಳ ಸಂರಕ್ಷಣಾ ಕ್ರಮಗಳು ದುರ್ಬಲವಾಗಿದ್ದು, ಇದೂ ಸಹ ಸಾವಿಗೆ ಒಂದು ಕಾರಣ ಎಂದು ಪರಿಸರವಾದಿ ಮತ್ತು ರೆಸ್ಕಿಂಕ್ ಅಸೋಸಿಯೇಷನ್ ​​ಫಾರ್ ವೈಲ್ಡ್‌ಲೈಫ್‌ ಅಂಡ್ ವೆಲ್ಫೇರ್ (RAWW) ಅಧ್ಯಕ್ಷರು ಹೇಳಿದ್ದಾರೆ. “ಈ ರಿತಿ ಕೊಚ್ಚಿಕೊಂಡು ಬರುವ ಸಸ್ತನಿಗಳ ರಕ್ಷಣೆ ಅಥವಾ ಪ್ರತಿಕ್ರಿಯೆಗಾಗಿ ನಮ್ಮಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನವಿಲ್ಲ. ಈ ಸಮುದ್ರ ಸಸ್ತನಿಗಳ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತಕ್ಷಣ ಶವಪರೀಕ್ಷೆ ಮಾಡುವುದು ಬಹಳ ಮುಖ್ಯ. ಇಲ್ಲದಿದ್ದರೆ, ದೇಹಗಳು ಕೊಳೆಯಲು ಪ್ರಾರಂಭಿಸುತ್ತವೆ" ಎಂದು ಪವನ್ ಶರ್ಮಾ ಹೇಳಿದ್ದು, ಈ ಬಗ್ಗೆ ಫಸ್ಟ್‌ಪೋಸ್ಟ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

  ಫೀಲ್ಡ್‌ ಆಟೋಪ್ಸಿ ತಂಡಗಳು ಹಾಗೂ ಪಶುವೈದ್ಯಕೀಯ ತಜ್ಞರ ವಿಳಂಬ ಮತ್ತು ಕೊರತೆ ಸಾಮಾನ್ಯವಾಗಿ ಜಲಚರ ಪ್ರಾಣಿಗಳ ಸಾವಿಗೆ ಕನಿಷ್ಠ ತನಿಖೆ ಎಂದರ್ಥ ಎಂದೂ ಪವನ್ ಶರ್ಮಾ ತಿಳಿಸಿದ್ದಾರೆ.
  First published: