Talaq: ಇನ್ಸ್ಟಾಗ್ರಾಮ್​ನಲ್ಲಿ ನಕಲಿ ಖಾತೆ ತೆರೆದಿದ್ದಕ್ಕೆ ಪತ್ನಿಗೆ Instagarmನಲ್ಲೇ ತಲಾಖ್ ಕೊಟ್ಟ ಭೂಪ

ಪತಿಯ ಚಲನವಲನದ ಮಾಹಿತಿ ಸಂಗ್ರಹಿಸಲು ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಖಾತೆ ತೆರೆದಿದ್ದಳು. ಇದನ್ನು ತಿಳಿದು ಸಾಮಾಜಿಕ ಜಾಲತಾಣದಲ್ಲೇ ತ್ರಿವಳಿ ತಲಾಖ್ ಘೋಷಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ನಿಂತ ನಿಲುವಿನಲ್ಲೇ ತಲಾಖ್ (Talaq)  ನೀಡುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇಂತಹ ತಲಾಖ್ ಪ್ರಕ್ರಿಯೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಕಾಯ್ದೆಯೊಂದನ್ನು ಜಾರಿಗೊಳಿಸಿರುವುದೂ ಆಗಿದೆ. ಹೀಗಿದ್ದೂ ಗುಜರಾತ್‍  (Gujarat) ನ ಆನಂದ್‍ ಜಿಲ್ಲೆಯ ವ್ಯಕ್ತಿಯೊಬ್ಬ ಇನ್ಸ್ಟಾಗ್ರಾಮ್‍ (Instagram) ನಲ್ಲೇ ತ್ರಿವಳಿ ತಲಾಖ್ ಘೋಷಿಸಿದ್ದಾನೆ. ಈ 28 ವರ್ಷ ವಯಸ್ಸಿನ ಭೂಪನ ವಿರುದ್ಧ ಈಗ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಉಮ್ರೇತ್ ( Umreth) ತಾಲ್ಲೂಕಿನ ಮಹಿಳೆಯೊಬ್ಬರು ಇದೇ ಬುಧವಾರದಂದು ತನ್ನ ಪೋಷಕರೊಂದಿಗೆ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ನವೆಂಬರ್ 2019ರಲ್ಲಿ ಈ ಮಹಿಳೆಯು ಮಹಿಸಾಗರ್ ಜಿಲ್ಲೆಯ ದೇಬರ್ ಗ್ರಾಮದ ನಿವಾಸಿಯಾದ ಫೈಸಲ್ ಶೇಖ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದರು.


ತಲಾಖ್​ ನೀಡಲು ಕಾರಣವೇನು?

ವಿವಾಹವಾಗಿ ಮೂರು ವರ್ಷವಾದರೂ ಮಹಿಳೆಗೆ ಇನ್ನೂ ಮಕ್ಕಳಾಗಿರಲಿಲ್ಲ. ಹೀಗಾಗಿ ಪತಿ ಫೈಸಲ್ ಶೇಖ್, ಆತನ ತಾಯಿ ಹಾಗೂ ಸಹೋದರಿ ವಿವಾಹಿತ ಮಹಿಳೆಗೆ ಕಿರುಕುಳ ನೀಡಲು ಶುರು ಮಾಡಿದರು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಆ ಮಹಿಳೆಯನ್ನು ಆಕೆಯ ಪತಿ ಮನೆಯಿಂದ ಹೊರ ಹಾಕಿದ ನಂತರ ಇಬ್ಬರೂ ಬೇರ್ಪಟ್ಟಿದ್ದರು. ನಂತರ ಆಕೆ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ.


ಇದನ್ನೂ ಓದಿ: ಮದ್ವೆಯಾದ ಒಂದೂವರೆ ತಿಂಗಳಿಗೆ Triple Talaq ನೀಡಲು ಮುಂದಾದ ಪತಿಗೆ ಥಳಿತ

ಕಳೆದ ವರ್ಷವೇ ತಲಾಖ್ ಕೊಟ್ಟಿದ್ದ

ದಂಪತಿಗಳ ನಡುವೆ ಜಗಳ ನಡೆದು, ಆರೋಪಿಯು ಕಳೆದ ವರ್ಷದ ಜುಲೈನಲ್ಲೂ ತ್ರಿವಳಿ ತಲಾಖ್ ಘೋಷಿಸಿ ಆ ಮಹಿಳೆಯನ್ನು ಮನೆಯಿಂದ ಬಲವಂತವಾಗಿ ಹೊರದಬ್ಬಿದ್ದ ಎನ್ನುತ್ತಾರೆ ಪೊಲೀಸರು. ತನಗೆ ತ್ರಿವಳಿ ತಲಾಖ್ ಕಾಯ್ದೆ ಕುರಿತು ಅರಿವಿಲ್ಲದೆ ಇದ್ದುದರಿಂದ ನಾನಾಗ ದೂರು ನೀಡಿರಲಿಲ್ಲ ಎಂದು ಆ ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾಳೆ.


ನಿಂತ ನಿಲುವಿನಲ್ಲೇ ತಲಾಖ್

“ಇತ್ತೀಚೆಗೆ ತನ್ನ ಪತಿಯ ಚಲನವಲನದ ಕುರಿತು ಮಾಹಿತಿ ಸಂಗ್ರಹಿಸಲು ಆಕೆ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಹೆಸರಿನಲ್ಲಿ ಖಾತೆಯೊಂದನ್ನು ತೆರೆದಿದ್ದಳು. ಆದರೆ, ಖಾತೆ ತನ್ನ ಪತ್ನಿಯದ್ದೇ ಎಂಬುದನ್ನು ಪತ್ತೆ ಹಚ್ಚಿದ ಆಕೆಯ ಪತಿಯು, ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ತ್ರಿವಳಿ ತಲಾಖ್ ಘೋಷಿಸಿದ್ದ. ಇದಾದ ನಂತರವಷ್ಟೇ ಆ ಕುರಿತು ತನ್ನ ಪೋಷಕರಿಗೆ ಮಾಹಿತಿ ನೀಡಿದ ಆ ಮಹಿಳೆಯು ನಂತರ ಬುಧವಾರದಂದು ಪೊಲೀಸರನ್ನು ಸಂಪರ್ಕಿಸಿದಳು” ಎಂದು ಸಬ್ ಇನ್ಸ್‌ಪೆಕ್ಟರ್ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಪೊಲೀಸ್ ಠಾಣೆ ಮೆಟ್ಟಿಲೇರಿದ ತಲಾಖ್ ಕೇಸ್​

ನಿಂತ ನಿಲುವಿನಲ್ಲೇ ತಲಾಖ್ ನೀಡಿರುವ ಭೂಪನ ವಿರುದ್ಧ ಮುಸ್ಲಿಂ ಮಹಿಳೆಯರು (ವಿವಾಹ ಸಂಬಂಧಿತ ಹಕ್ಕಿನ ರಕ್ಷಣೆ) ಕಾಯ್ದೆ, 2019ರ ಅನ್ವಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಕಾಯ್ದೆ ಅನ್ವಯ ತಕ್ಷಣ ತ್ರಿವಳಿ ತಲಾಖ್ ಘೋಷಿಸುವುದು ಅಪರಾಧವಾಗಿದೆ.


ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ ಎಫೆಕ್ಟ್: ತೆಲಂಗಾಣದಲ್ಲಿ ತಲಾಖ್‌ ಹೇಳದೇ ಪತ್ನಿಯರನ್ನು ತ್ಯಜಿಸುತ್ತಿದ್ದಾರೆ ಪುರುಷರು

ಈ ಹಿಂದೆ ಕೂಡಾ ಸಂತ್ರಸ್ತೆಯು ತನ್ನ ಪತಿಯ ವಿರುದ್ಧ ಕಿರುಕುಳದ ದೂರು ನೀಡಿದ್ದಳು. ತ್ರಿವಳಿ ತಲಾಖ್ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ತ್ರಿವಳಿ ತಲಾಖ್ ಘೋಷಿಸಿರುವ ವ್ಯಕ್ತಿಗೆ ವಿಚಾರಣೆಗೆ ಹಾಜರಾಗುವಂತೆ ಇನ್ನಷ್ಟೇ ಸಮನ್ಸ್ ಜಾರಿಗೊಳಿಸಬೇಕಿದೆ.


ಗೊಂದಲದ ತ್ರಿವಳಿ ತಲಾಖ್ 

ತ್ರಿವಳಿ ತಲಾಖ್ ಕಾನೂನುಬದ್ಧವಾಗಿದ್ದರೂ ಸಾಮಾಜಿಕ ಸಂದರ್ಭದಲ್ಲಿ ಚರ್ಚಾಸ್ಪದ ಸಂಗತಿಯಾಗಿತ್ತು. ವಿಶೇಷವಾಗಿ ಲಿಂಗ ಸಮಾನತೆಯ ವಿಚಾರದಲ್ಲಿ ತ್ರಿವಳಿ ತಲಾಖ್ ದೋಷಪೂರಿತವಾಗಿತ್ತು. ಹೀಗಾಗಿಯೇ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಈಜಿಪ್ಟ್, ಸಂಯುಕ್ತ ಅರಬ್ ಸಂಸ್ಥಾನದಂತಹ ಹಲವು ದೇಶಗಳು ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿವೆ.


ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ ಸಂಘಟನೆ ಸೇರಿದಂತೆ ಹಲವಾರು ಮಹಿಳಾ ಸಂಘಟನೆಗಳು ತ್ರಿವಳಿ ತಲಾಖ್ ರದ್ದುಗೊಳಿಸುವ ಕಾಯ್ದೆಯನ್ನು ಬೆಂಬಲಿಸಿದ್ದವು. ಆದರೆ, ತ್ರಿವಳಿ ತಲಾಖ್ ಅನ್ನು ಅಪರಾಧೀಕರಣಗೊಳಿಸುವುದನ್ನು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಟುವಾಗಿ ಟೀಕಿಸಿತ್ತು. ಈ ಮಂಡಳಿಯು ಭಾರತದಲ್ಲಿನ ಮುಸ್ಲಿಮರ ವಿವಾಹ ಸೇರಿದಂತೆ ಕೌಟುಂಬಿಕ ವ್ಯವಹಾರಗಳ ಮೇಲೆ ನಿಗಾ ವಹಿಸುತ್ತದೆ.


Published by:Pavana HS
First published: