ಸಾಮಾನ್ಯವಾಗಿ ಕೆಲವರು ಈ ರೈಲುಗಳಲ್ಲಿ (Train) ಕೂತು ಪ್ರಯಾಣಿಸುವಾಗ ಮತ್ತು ಬಸ್ ಗಳಲ್ಲಿ ಕೂತು ಪ್ರಯಾಣಿಸುವಾಗ ಬೋರ್ ಆಗುತ್ತೆ ಅಂತ ಅವರಿಗೆ ಇಷ್ಟವಾದ ಹಾಡುಗಳನ್ನು ಹಾಡಿ ಸಹ ಪ್ರಯಾಣಿಕರನ್ನು ಸಹ ಮನರಂಜಿಸುವುದನ್ನು ನಾವು ಆಗಾಗ್ಗೆ ನೋಡಿರುತ್ತೇವೆ. ಕೆಲವೊಮ್ಮೆ ಅಂತೂ ಈ ಕಾಲೇಜು ವಿದ್ಯಾರ್ಥಿಗಳು ರೈಲಿನಲ್ಲಿ ಪ್ರಯಾಣಿಸುವಾಗ ಮನರಂಜನೆಗೆ ಅಂತ ಗಿಟಾರ್ (Guitar), ವಾಯಲಿನ್, ಕೊಳಲು ಮತ್ತು ಇತರೆ ಸಂಗೀತ (Music) ವಾದ್ಯಗಳನ್ನು ಜೊತೆಗೆ ತೆಗೆದುಕೊಂಡು ಬರುವುದನ್ನು ನೋಡಿರುತ್ತೇವೆ. ಎಷ್ಟೋ ಬಾರಿ ಹೀಗೆ ಹಾಡು ಹೇಳುತ್ತಾ ಕೆಲವರು ಎಂಜಾಯ್ ಮಾಡುತ್ತಿದ್ದರೆ, ಇನ್ನೂ ಕೆಲವರಿಗೆ ಅದು ಒಂದು ರೀತಿಯ ಅನಾನುಕೂಲತೆಯನ್ನು ಉಂಟು ಮಾಡುತ್ತದೆ ಅಂತ ಹೇಳಬಹುದು.
ಇತ್ತೀಚೆಗೆ ಜನರು ಈ ರೀತಿಯ ಹಾಡುಗಳನ್ನು ರೈಲಿನಲ್ಲಿ, ಬಸ್ ನಲ್ಲಿ ಹಾಡಿ ಅದನ್ನು ರೆಕಾರ್ಡ್ ಮಾಡಿ ರೀಲ್ ಗಳನ್ನು ಮಾಡುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.
ಆದ್ದರಿಂದಲೇ ಈಗ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ತನ್ನ ಮೆಟ್ರೋ ಕೋಚ್ ಗಳಲ್ಲಿ ಡ್ಯಾನ್ಸ್ ಮಾಡುವುದು ಮತ್ತು ಇನ್‌ಸ್ಟಾಗ್ರಾಮ್ ರೀಲ್ ಗಳನ್ನು ಚಿತ್ರೀಕರಿಸದಂತೆ ಪ್ರಯಾಣಿಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ ಅಂತ ಹೇಳಬಹುದು.
ಇಷ್ಟೆಲ್ಲಾ ಹೇಳಿದರೂ ಸಹ ಅನೇಕರು ಇನ್ನೂ ರೈಲುಗಳಲ್ಲಿ ಈ ರೀತಿಯ ವೀಡಿಯೋಗಳನ್ನು ಮಾಡುವುದನ್ನು ನಿಲ್ಲಿಸುತ್ತಿಲ್ಲ ನೋಡಿ.
ದೆಹಲಿ ಮೆಟ್ರೋದಲ್ಲಿ ಆತಿಫ್ ಅಸ್ಲಾಮ್ ಹಾಡನ್ನು ಹಾಡಿದ ವ್ಯಕ್ತಿ
ಇನ್‌ಸ್ಟಾಗ್ರಾಮ್ ನಲ್ಲಿ ಈಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಗಾಯಕ ಆತಿಫ್ ಅಸ್ಲಾಮ್ ಅವರ 'ಬಖುದಾ ತುಮ್ಹಿ ಹೋ' ಹಾಡನ್ನು ಹಾಡುತ್ತಿರುವುದನ್ನು ನಾವು ನೋಡಬಹುದು.
ಇದನ್ನೂ ಓದಿ: 8 ಸಾವಿರ ಇದ್ರೆ ಸಾಕು, ಇಷ್ಟೆಲ್ಲಾ ಸ್ಥಳಗಳಿಗೆ ಫ್ಯಾಮಿಲಿ ಜೊತೆ ಟ್ರಿಪ್ ಹೋಗ್ಬೋದು!
ಈ ವರ್ಷದ ಜನವರಿಯಲ್ಲಿ ಸಂಗೀತಗಾರ ಮತ್ತು ಬ್ಯಾಂಡ್ ಗೆ ಸೇರಿದ ಇನ್‌ಸ್ಟಾಗ್ರಾಮ್ ಪುಟ ಕಾರ್ಡಿಯಾಪ್ರಾಂಕ್ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ ಮತ್ತು ಅಂದಿನಿಂದ ಇಲ್ಲಿಯವರೆಗೆ ಈ ವೀಡಿಯೋ ಎಂಟು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಶಾಹಿದ್ ಕಪೂರ್ ಮತ್ತು ವಿದ್ಯಾ ಬಾಲನ್ ನಟಿಸಿದ 2008 ರ ಚಿತ್ರ 'ಕಿಸ್ಮತ್ ಕನೆಕ್ಷನ್' ನ ಹಾಡನ್ನು ವ್ಯಕ್ತಿಯೊಬ್ಬ ಆತಿಫ್ ಸ್ಟೈಲ್ ನಲ್ಲಿ ಹಾಡುತ್ತಿರುವುದನ್ನು ಇಲ್ಲಿ ನಾವು ನೋಡಬಹುದು.
View this post on Instagram
ಅಲ್ಲಿಯೇ ಕುಳಿತಿರುವ ವ್ಯಕ್ತಿಯೊಬ್ಬರು ಈ ಹಾಡಿಗೆ ಗಿಟಾರ್ ನುಡಿಸುತ್ತಿದ್ದರೆ, ವ್ಯಕ್ತಿ ಮೆಟ್ರೋ ಕೋಚ್ ನ ಮಧ್ಯ ಭಾಗದಲ್ಲಿ ನಿಂತು ಭಾವಪೂರ್ಣವಾಗಿ ಹಾಡನ್ನು ಹಾಡಿದರು.
ಅನೇಕ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಈ ಕ್ಷಣವನ್ನು ರೆಕಾರ್ಡ್ ಮಾಡುವುದನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದಾಗಿದೆ.
ಈ ವೀಡಿಯೋಗೆ ನೆಟ್ಟಿಗರು ನೀಡಿದ ಕಾಮೆಂಟ್ ಗಳು ನೋಡಿ ಹೇಗಿವೆ ಅಂತ..
"ಗಿಟಾರ್ ವಾದಕನಿಗೆ ನಮ್ಮ ಕಡೆಯಿಂದ ಗೌರವವಿರಲಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈಗ ಮೆಟ್ರೋದಲ್ಲಿ ಹೀಗೆ ಹಾಡು ಹೇಳುವುದು ಕಾನೂನುಬಾಹಿರ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.
"ಈ ಹುಡುಗರು ದೊಡ್ಡ ವೇದಿಕೆಗೆ ಅರ್ಹರು" ಎಂದು ಮೂರನೆಯವರು ಪೋಸ್ಟ್ ಮಾಡಿದ್ದಾರೆ. "ಇವರು ನುಡಿಸಿದ್ದು ಮತ್ತು ಹಾಡಿದ್ದು ಸಂಪೂರ್ಣವಾಗಿ ಸಕಾರಾತ್ಮಕ ಕಂಪನಗಳನ್ನು ಹುಟ್ಟುಹಾಕಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡುವ ರೀಲ್ ಗಳು ಮತ್ತು ಡ್ಯಾನ್ಸ್ ವೀಡಿಯೋಗಳ ಚಿತ್ರೀಕರಣ ಅಥವಾ ಇತರ ಯಾವುದೇ ಚಟುವಟಿಕೆಗಳನ್ನು ದೆಹಲಿ ಮೆಟ್ರೋದೊಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ" ಎಂದು ಡಿಎಂಆರ್‌ಸಿ ಇತ್ತೀಚೆಗೆ ಟ್ವೀಟ್ ನಲ್ಲಿ ತಿಳಿಸಿದೆ. "ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ಇತರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು" ಎಂದು ಅದು ಹೇಳಿದೆ.
ಮೆಟ್ರೋ ಬೋಗಿಗಳ ಒಳಗೆ ಡ್ಯಾನ್ಸ್ ಮಾಡದಂತೆ ಡಿಎಂಆರ್‌ಸಿ ಪ್ರಯಾಣಿಕರಿಗೆ ಸೂಚಿಸಿರುವುದು ಇದೇನು ಮೊದಲನೇ ಬಾರಿ ಅಲ್ಲ ಬಿಡಿ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಟ್ವಿಟರ್ ನಲ್ಲಿ ಇದೇ ರೀತಿಯ ಮನವಿಯನ್ನು ಮಾಡಿದ್ದು, ಪ್ರಯಾಣಿಕರಿಗೆ ಡ್ಯಾನ್ಸ್ ಮಾಡಲು ವೇದಿಕೆ ಸರಿಯಾದ ಸ್ಥಳವಾಗಿದೆ, ಮೆಟ್ರೋ ರೈಲು ಅಲ್ಲ ಎಂದು ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ