ಡ್ರೈವಿಂಗ್ ಲೈಸೆನ್ಸ್ ಇಲ್ಲವೇ ಚಾಲನಾ ಪರವಾನಗಿ ಪಡೆಯುವುದು ಅಷ್ಟೊಂದು ಸುಲಭವಾಗಿರುವುದಿಲ್ಲ. ನೀವು ನುರಿತ ಕಾರು ಚಾಲಕರಾಗಿದ್ದರೂ ಪರವಾನಗಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ನಿಮ್ಮ ಚಾಲನಾ ಕೌಶಲ್ಯ ಪ್ರದರ್ಶಿಸಿ ಪರವಾನಗಿ ಪಡೆಯಬೇಕಾಗಿರುತ್ತದೆ. ಎಷ್ಟೋ ಜನ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಇಲ್ಲ. ಕೆಲವರು ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಇನ್ನು ಕೆಲವರು ಹಲವಾರು ಚಾಲನಾ ಪರೀಕ್ಷೆಗಳನ್ನು ತೆಗೆದುಕೊಂಡು ನಂತರ ಪರವಾನಗಿ ಪಡೆಯುತ್ತಾರೆ. ಹೀಗೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೋದವರು ಒಂದೊಂದು ರೀತಿಯ ಕಥೆಗಳನ್ನು ಹೇಳುವುದನ್ನು ನಾವು ಕೇಳಿರುತ್ತೇವೆ. ಇದೇ ರೀತಿ ಇಂಗ್ಲೆಂಡ್ನ 47 ರ ಹರೆಯದ ಇಸಬೆಲ್ಲಾ ಸ್ಟೆಡ್ಮೆನ್ ಇದುವರೆಗೆ 1000 ಡ್ರೈವಿಂಗ್ ಪರೀಕ್ಷೆಗಳನ್ನು ತೆಗೆದುಕೊಂಡಿದ್ದು ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿಲ್ಲ. ತಮ್ಮ 17ರ ಹರೆಯದಲ್ಲೇ ಡ್ರೈವಿಂಗ್ ಕೋರ್ಸ್ ತೆಗೆದುಕೊಳ್ಳಲಾರಂಭಿಸಿದ್ದು ಇದುವರೆಗೆ ಉತ್ತೀರ್ಣರಾಗೇ ಇಲ್ಲ
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆಕೆ £10,000 (ರೂ 10,16,942.33) ಖರ್ಚು ಮಾಡಿದ್ದಾರೆಂದು ತಿಳಿಸಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಆಕೆ ಕಠಿಣ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕಾರಿನಲ್ಲಿ ವೃತ್ತಗಳಿಗೆ ಸುತ್ತುಹಾಕುವ ಸಮಯದಲ್ಲಿ ಆತಂಕಕ್ಕೆ ಒಳಗಾಗಿ ಬಿಡುತ್ತಾರೆ ಎಂದು ಇಸಬೆಲ್ಲಾ ತಿಳಿಸಿದ್ದಾರೆ. ವೃತ್ತಗಳಲ್ಲಿ ಸುತ್ತುಹೊಡೆಯುವ ಸಂದರ್ಭದಲ್ಲಿ ನನಗೆ ಏನಾಗುತ್ತದೆ ಎಂಬುದೇ ತಿಳಿಯುವುದಿಲ್ಲ. ನನ್ನ ಮೆದುಳು ಕೆಲಸ ಮಾಡುವುದಿಲ್ಲ ಹಾಗೂ ಭಯ ಆವರಿಸಿಬಿಡುತ್ತದೆ. ವೃತ್ತಗಳು ನಿಜವಾಗಿಯೂ ಅತಿ ಕೆಟ್ಟದ್ದು ಎಂಬುದು ಇಸೆಬೆಲ್ಲಾ ಅನಿಸಿಕೆಯಾಗಿದೆ.
ಭಯದಿಂದ ನಾನು ಕಣ್ಣುಮುಚ್ಚಿದಾಗ ಡ್ರೈವಿಂಗ್ ಕಲಿಸುವವರು ಸ್ಟೇರಿಂಗ್ ಚಕ್ರಗಳನ್ನು ಹಿಡಿದುಕೊಳ್ಳುತ್ತಾರೆ. ಈ ಸಮಯದಲ್ಲಿ ನನಗೆ ತುಂಬಾ ದುಃಖವಾಗುತ್ತದೆ. ನಾನು ಕಣ್ಣೀರು ಹಾಕಿಕೊಂಡೇ ಮನೆಗೆ ಹೋಗುತ್ತೇನೆ ಎಂಬುದು ಇಸಾಬೆಲ್ಲಾರ ದುಃಖದ ಮಾತಾಗಿದೆ. ತಾವು ಡ್ರೈವಿಂಗ್ ಕಲಿಯುವ ಸಮಯದಲ್ಲಿ ಅನುಭವಿಸಿದ ಕೆಲವೊಂದು ಘಟನೆಗಳನ್ನು ಇಸಾಬೆಲ್ಲಾ ಹಂಚಿಕೊಂಡಿದ್ದಾರೆ. ಕೋರ್ಸ್ನ ಮೂರನೇ ದಿನದಂದು ಆತಂಕದಿಂದಲೇ ವೃತ್ತವನ್ನು ಸಮೀಪಿಸುತ್ತಿದ್ದೆ. ಏನಾಯಿತೋ ಗೊತ್ತಿಲ್ಲ ನಾನು ಗಾಳಿಯಲ್ಲಿ ಹಾರುತ್ತಿದ್ದೇನೋ ಎಂಬಂತೆ ನನಗೆ ಭಾಸವಾಗಿತ್ತು. ಅಂದರೆ ನಾನು ಚಾಲನೆಯ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದೆ ಎಂದು ಆ ದಿನವನ್ನು ವರ್ಣಿಸುತ್ತಾರೆ ಇಸಾಬೆಲ್ಲ.
ಇಸಾಬೆಲ್ಲಾರಿಗೆ ಕಾರು ಕಲಿಯಬೇಕೆಂಬುದು ಹರೆಯದಿಂದ ಆವರಿಸಿಕೊಂಡಿದ್ದ ಬಯಕೆಯಾಗಿತ್ತು. ಮಗಳನ್ನು ಕಾಲೇಜಿಗೆ ಬಿಡುವುದು, ಕುಟುಂಬದವರನ್ನು ಭೇಟಿ ಮಾಡುವುದು ಹೀಗೆಲ್ಲಾ ಚಟುವಟಿಕೆಗಳನ್ನು ಕಾರು ಕಲಿಯುವುದರಿಂದ ಮಾಡಬಹುದು ಎಂಬುದು ಇಸಾಬೆಲ್ಲಾರ ಅಭಿಪ್ರಾಯವಾಗಿದೆ. ಆದರೆ ಚಾಲನಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಮಾತ್ರ ಕಷ್ಟದ ಮಾತಾಗಿದೆ.
ಇಸಾಬೆಲ್ಲಾರ ಮಕ್ಕಳಾದ ಡೊಮಿನಿಕ್ ಹಾಗೂ ಸ್ಟೆಲ್ಲಾ ಸುಲಭವಾಗಿ ಚಾಲನೆ ಕಲಿಯುತ್ತಿದ್ದಾರೆ. ಅದರೆ ಇಸಾಬೆಲ್ಲರಿಗೆ ಮಾತ್ರವೇ ಡ್ರೈವಿಂಗ್ ಪರೀಕ್ಷೆಯಲ್ಲಿ ಪಾಸಾಗುವುದು ಕಗ್ಗಂಟಾಗಿದೆ.
ಇಸಾಬೆಲ್ಲಾ ಮಾತ್ರವಲ್ಲದೆ ಹಲವಾರು ವ್ಯಕ್ತಿಗಳು ತಮ್ಮ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬುದು ಕೆಲವೊಂದು ವರದಿಗಳಿಂದ ತಿಳಿದು ಬಂದಿದೆ. 50 ವರ್ಷದ ಪೋಲೆಂಡ್ ವ್ಯಕ್ತಿಯೊಬ್ಬರು 192ನೇ ಬಾರಿ ಚಾಲನಾ ಪರೀಕ್ಷೆಗೆ ಹಾಜರಾಗಿದ್ದರೂ ತೇರ್ಗಡೆಯಾಗಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ