ಸಾಕು ಪ್ರಾಣಿ (Pet Animal) ನಾಯಿಯ ಆಟ, ಓಟ , ಕುಚೇಷ್ಟೆ, ಅಷ್ಟಿಷ್ಟಲ್ಲ. ನಂಬಿಕೆಗೆ ನಾಯಿ ಹೆಸರುವಾಸಿಯಾಗಿದ್ದು, ಮನುಷ್ಯರ ಜೊತೆ ಬೇಗ ಹೊಂದಿಕೊಳ್ಳುವ ಪ್ರಾಣಿಯಲ್ಲಿ ನಾಯಿ (Dog) ಮೊದಲನೆಯದು. ಅದು ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತದೆ ಮತ್ತು ಹೆಚ್ಚು ಪ್ರೀತಿ ನೀಡುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಮುದ್ದಾದ ಪ್ರಾಣಿಗಳ ವಿಡಿಯೋಗಳು ಯಾವಾಗಲೂ ವೈರಲ್ (Viral) ಆಗುತ್ತಲೇ ಇರುತ್ತವೆ. ನಮ್ಮ ದಿನದ ಒತ್ತಡ (Stress) ಕಡಿಮೆ ಮಾಡಿಕೊಳ್ಳಲು ಸ್ವಲ್ಪ ಹೊತ್ತು ಅವುಗಳ ತರಲೆ, ಆಟದ ವಿಡಿಯೋ ನೋಡಿದರೆ ಸಾಕು ಒತ್ತಡ ಎಲ್ಲಾ ದೂರವಾಗಿ ಮುಖದಲ್ಲಿ ಸಣ್ಣ ನಗು ಮೂಡುತ್ತದೆ.ಇತ್ತೀಚೆಗೆ ಮುದ್ದಾದ ನಾಯಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನುಷ್ಯರಂತೆ ನಾಯಿಗಳು ಕಾಡಿನಲ್ಲಿ ಟ್ರೆಕ್ಕಿಂಗ್ ರೀತಿ ಹೋಗಿದ್ದು, ಅವುಗಳ ಆಟೋಟಕ್ಕೆ ಪಾರವಿಲ್ಲದಂತಾಗಿದೆ. ಫ್ರೆಡ್ ಶುಲ್ಟ್ಜ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ವಿಶೇಷ ಸಾಮರ್ಥ್ಯವುಳ್ಳ ನಾಯಿಗಳ ಗುಂಪು ಗಾಲಿಕುರ್ಚಿಗಳನ್ನು ಕಟ್ಟಿಕೊಂಡು ಅರಣ್ಯದಲ್ಲಿ ಓಡುವುದು, ಆಡುವುದನ್ನು ಮಾಡುತ್ತಿವೆ. ಈ ವಿಡಿಯೋವನ್ನು ಫ್ರೆಡ್ ಶುಲ್ಟ್ಜ್ ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.
ಕಾಡಿನಲ್ಲಿ ನಾಯಿಗಳ ರೌಂಡ್ಸ್
ಯುಎಸ್ನ ವರ್ಮೊಂಟ್ನಿಂದ ಟ್ರೇಸಿ ಫೌಲರ್ ಎಂಬಾಕೆ ದತ್ತು ಪಡೆದ ಹಲವಾರು ನಾಯಿಗಳನ್ನು ವಿಡಿಯೋದಲ್ಲಿ ಕಾಣಬಹುದು. ಫೌಲರ್ ಹರ್ಡ್ ಎಂದು ಕರೆಯಲ್ಪಡುವ ಟ್ರೇಸಿಯ ಫ್ಯೂರಿ ಕುಟುಂಬ ಈಗ 8 ಸದಸ್ಯರನ್ನು ಒಳಗೊಂಡಿದೆ. ತನ್ನ ಪ್ರೀತಿಯ ಸಾಕುನಾಯಿ ತೀರಿಕೊಂಡ ನಂತರ ವಿಕಲ ಚೇತನ ನಾಯಿಗಳನ್ನು ರಕ್ಷಿಸಲು ಟ್ರೇಸಿ ಫೌಲರ್ ಪ್ರಾರಂಭಿಸಿದಳು. ಅವುಗಳನ್ನು ಆರೈಕೆ ಮಾಡುವುದು, ಹೀಗೆ ಹೊರಗಡೆ ಸುತ್ತಾಡಿಸಿವುದು, ಸಾಹಸ ಕಾರ್ಯಗಳನ್ನು ಮಾಡಿಸುವ ಮೂಲಕ ನಾಯಿಗಳ ಪಾಲನೆಯನ್ನು ಅವರು ಮಾಡುತ್ತಿದ್ದಾರೆ. ಹೀಗೆ ಟ್ರೇಸಿ ಫೌಲರ್ ಹತ್ತಾರು ನಾಯಿಗಳನ್ನು ಸಂರಕ್ಷಿಸಿದ್ದು, ಅವರು ಪ್ರಸ್ತುತ ಅನೇಕ ಮುದ್ದಾದ ನಾಯಿಗಳ ಹೆಮ್ಮೆಯ ಒಡತಿಯಾಗಿದ್ದಾರೆ.
ಇದನ್ನೂ ಓದಿ: Viral News: ಕಪ್ಪು ಕುದುರೆ ಅಂತ ಲಕ್ಷ ಲಕ್ಷ ಕೊಟ್ಟು ಖರೀದಿಸಿದ್ರು, ಮನೆಗೆ ಬರೋ ಅಷ್ಟ್ರಲ್ಲಿ ಕಲರ್ ಚೇಂಜ್!
ಟ್ವಿಟರ್ನಲ್ಲಿ ಶ್ವಾನಗಳ ವಿಡಿಯೋ ಶೇರ್
ಫ್ರೆಡ್ ಶುಲ್ಟ್ಜ್ ತಮ್ಮ ಟ್ಟಿಟ್ಟರ್ ಪುಟದಲ್ಲಿ ವಿಶೇಷ ಸಾಮರ್ಥ್ಯವುಳ್ಳ ನಾಯಿಗಳು ಕಾಡಿನಲ್ಲಿ ಸುತ್ತಾಡುವುದು, ಹೊಸದನ್ನು ಅನ್ವೇಷಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ, “ಅವರು ದಾರಿಯನ್ನು ಕಂಡುಕೊಂಡಿದ್ದಾರೆ, ಇನ್ನು ಅವರನ್ನು ಯಾರಿಂದಲು ತಡೆಯಲು ಸಾಧ್ಯವಿಲ್ಲ” ಎಂಬ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ, ನಾಯಿಗಳು ತಮ್ಮ ದೇಹಕ್ಕೆ ಗಾಲಿಕುರ್ಚಿಗಳನ್ನು ಜೋಡಿಸಿಕೊಂಡು ಸಂತೋಷದಿಂದ ದಟ್ಟವಾದ ಕಾಡಿನಲ್ಲಿ ಓಡುತ್ತಿರುವುದನ್ನು ಕಾಣಬಹುದು. ಒಂದರ ಹಿಂದ ಒಂದರಂತೆ ನಾಯಿಗಳು ಓಡಿ ಬರುತ್ತಿರುವುದನ್ನು ಅಲ್ಲಿ ನೋಡಬಹುದು. ಅಲ್ಲಿರುವ ಅನೇಕ ನಾಯಿಗಳು ಪಾರ್ಶ್ವವಾಯು ಮತ್ತು ಕೈಕಾಲುಗಳನ್ನು ಕಳೆದುಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವ ನಾಯಿಗಳನ್ನು ಮಹಿಳೆ ಟ್ರೇಸಿ ಫೌಲರ್ ತಮ್ಮ ಮಕ್ಕಳಂತೆ ನೋಡಿಕೊಂಡು ಆರೈಕೆ ಮಾಡುತ್ತಿದ್ದಾರೆ.
ಇತರೆ ಪ್ರಾಣಿಗಳಂತೆ ಓಡಾಡುವ ಆಸೆ ತನ್ನ ನಾಯಿಗಳಿಗೂ ಇರಬಹುದೆಂದು ಕಲ್ಪನೆ ಮಾಡಿಕೊಂಡ ಟ್ರೇಸಿ ಫೌಲರ್ ನಾಯಿಗಳಿಗೆ ತೊಂದರೆ ಆಗದಂತೆ ಸುಲಭವಾಗಿ ಓಡಲು ಸಹಾಯವಾಗುವಂತೆ ವ್ಹೀಲ್ ಚೇರ್ ಅನ್ನು ಅವಗಳಿಗೆ ಜೋಡಿಸಿದ್ದಾರೆ. ಆ ಗಾಲಿ ಕುರ್ಚಿಗಳು ಕಾಲುಗಳನ್ನು ಕಳೆದುಕೊಂಡ, ಸ್ವಾಧೀನವಿಲ್ಲದ ನಾಯಿಗಳಿಗೆ ಓಡಲು, ನಡೆಯಲು ಸಹಾಯ ಮಾಡಿವೆ. ಆ ಮುದ್ದಾದ ನಾಯಿಗಳು ಸಹ ಗಾಲಿ ಕುರ್ಚಿಗಳಿಂದಾಗಿ ಖುಷಿ ಪಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: Workforce Stop: ಕೆಲಸ ಹುಡುಕೋದನ್ನೇ ನಿಲ್ಲಿಸ್ತಿದ್ದಾರೆ ಭಾರತೀಯರು! ಏನಪ್ಪಾ ವಿಷ್ಯ ಇದು?
ಟ್ವಿಟ್ಟರ್ನಲ್ಲಿ ಈ ವಿಡಿಯೋ 2 ಲಕ್ಷ 74 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್ಗಳನ್ನು ಗಳಿಸಿದೆ. ನಾಯಿಮರಿಗಳಿಗೆ ಉತ್ತಮ ಜೀವನವನ್ನು ನೀಡಿದ್ದಕ್ಕಾಗಿ ನೆಟ್ಟಿಗರು ಟ್ರೇಸಿ ಫೌಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಗಿ, ಹೋಗಿ ಎಂದು ನಾಯಿಗಳಿಗೆ ಪ್ರೋತ್ಸಾಹ ನೀಡುವಂತೆ ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದು ನಿಜಕ್ಕೂ ಸ್ಪೂರ್ತಿದಾಯಕವಾದ ವಿಡಿಯೋ ಎಂದು ಒಬ್ಬರು ಹೇಳಿದ್ದಾರೆ. ಮತ್ತು ಇನ್ನೂ ಕೆಲವರು ಭವಿಷ್ಯದಲ್ಲಿ ಅಂತಹ ನಾಯಿಗಳನ್ನು ರಕ್ಷಿಸಲು ಸಹಾಯ ಮಾಡಲು ಕೈ ಜೋಡಿಸುವುದಾಗಿ ಕೇಳಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ