ಸಾಮಾನ್ಯವಾಗಿ ನಮಗೆ ಹಾವು(Snake) ಅಂತ ಪದವನ್ನು ಕೇಳಿದರೆ ಸಾಕು, ಮೈಯೆಲ್ಲಾ ಬೆವರು ಬರುತ್ತದೆ. ಹೌದು.. ಹಾವನ್ನು ನೋಡಿ ಎಷ್ಟೋ ಜನರು ಮೂರ್ಛೆ ಹೋದವರು ಇದ್ದಾರೆ. ಕೆಲವು ಹಾವುಗಳು ಸ್ವಲ್ಪ ಮಟ್ಟದ ವಿಷವನ್ನು ಹೊಂದಿರುತ್ತವೆ ಮತ್ತು ಅವುಗಳು ಮನುಷ್ಯರನ್ನು ಕಚ್ಚಿದರೆ, ಬೇಗನೆ ಚಿಕಿತ್ಸೆ(Treatment)ಯನ್ನು ಪಡೆದುಕೊಂಡು ಬದುಕುಳಿಯಬಹುದು. ಆದರೆ ಇನ್ನೂ ಕೆಲವು ಹಾವುಗಳಿವೆ, ಅವುಗಳಲ್ಲಿರುವ ವಿಷ(Poison) ಜಗತ್ತಿನಲ್ಲಿಯೇ ಅತ್ಯಂತ ವಿಷಕಾರಿಯಾಗಿದೆ ಎಂದು ಹೇಳಲಾಗುತ್ತದೆ.
ಹಾವು ಎಂದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ತುಂಬಾನೇ ಉದ್ದವಾದದ್ದು, ತೆಳುವಾದ ದೇಹವನ್ನು ಹೊಂದಿದ್ದು, ಕಾಲುಗಳಿರುವುದಿಲ್ಲ, ತನ್ನ ದೇಹವನ್ನು ನೆಲದ ಮೇಲೆ ತೆವಳಿಸಿಕೊಂಡು ಸರಸರನೆ ಹೋಗುವುದು.. ಅದೆಲ್ಲಾ ನಮ್ಮ ಕಲ್ಪನೆಗೆ ಬರುತ್ತದೆ.
ಸುಮಾರು 600 ವಿಷಪೂರಿತ ಪ್ರಭೇದಗಳಲ್ಲಿ ಕೇವಲ 200 ಪ್ರಭೇದಗಳು ಮಾತ್ರ ಮನುಷ್ಯನನ್ನು ಕೊಲ್ಲಲು ಅಥವಾ ಹಾನಿಗೊಳಿಸಲು ಸಮರ್ಥವಾಗಿವೆ ಎಂದು ಹೇಳಲಾಗುತ್ತದೆ.
ಇದೆಲ್ಲವೂ ಗೊತ್ತಿದ್ದರೂ ಸಹ ಹಾವಿನ ಭಯಾನಕ ಚಲನೆಯು ಎಂಥವರಿಗಾದರೂ ಭಯ ಹುಟ್ಟಿಸುವಂತದ್ದು ಅಂತ ಹೇಳಬಹುದು. ಈಗೇಕೆ ನಾವು ಈ ಹಾವುಗಳ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಗಳು ಕಾಡಬಹುದು.
ವಿಷಯ ಏನೆಂದರೆ ಇಲ್ಲೊಂದು ಹಾವಿನ ಬಗ್ಗೆ ನಾವು ಹೇಳುತ್ತಿದ್ದು, ಆ ಹಾವಿನ ವಿಷವು ಜಗತ್ತಿನಲ್ಲಿಯೇ ಅತ್ಯಂತ ವಿಷಕಾರಿ ಎಂದು ಹೇಳಲಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತಂತೆ ಈ ಹಾವು..
ಮುಖ್ಯವಾಗಿ ಈ ಹಾವು ಆಸ್ಟ್ರೇಲಿಯಾದಲ್ಲಿ ಕಂಡು ಬರುವುದೆಂದು ಹೇಳಲಾಗುತ್ತದೆ. ಇನ್‌ಲ್ಯಾಂಡ್ ತೈಪಾನ್ ವಿಷಪೂರಿತ ಹಾವುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಅದರಿಂದ ಆದಷ್ಟು ದೂರವಿರುವುದು ಒಳ್ಳೆಯದು ಅಂತ ಹೇಳ್ತಾರೆ ವಿಷಯ ತಜ್ಞರು.
ಈ ಇನ್‌ಲ್ಯಾಂಡ್ ತೈಪಾನ್ ಅನ್ನು ಸಾಮಾನ್ಯವಾಗಿ ವೆಸ್ಟ್ರನ್ ತೈಪಾನ್ ಎಂದೂ ಸಹ ಕರೆಯುತ್ತಾರೆ. ಇದು ಅತ್ಯಂತ ವಿಷಕಾರಿ ಹಾವಿನ ಪ್ರಭೇದವಾಗಿದ್ದು, ಈ ಪ್ರಭೇದವು ಮಧ್ಯ ಪೂರ್ವ ಆಸ್ಟ್ರೇಲಿಯಾದ ಅರೆ-ಶುಷ್ಕ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: Viral Story: ಸೈಕ್ಲೋನ್ನಿಂದಾಗಿ ಕಡಲತೀರಕ್ಕೆ ತೇಲಿ ಬಂತು 80 ಅಡಿ ಉದ್ದದ ನಿಗೂಢ ವಸ್ತು!
ಆಸ್ಟ್ರೇಲಿಯಾದ ವಸ್ತು ಸಂಗ್ರಹಾಲಯದ ಪ್ರಕಾರ, ಇನ್‌ಲ್ಯಾಂಡ್ ತೈಪಾನ್ ಅನ್ನು ಉಗ್ರ ಹಾವು ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ವಿಶ್ವದ ಅತ್ಯಂತ ವಿಷಕಾರಿ ಹಾವು ಎಂದು ಸಹ ಉಲ್ಲೇಖಿಸಲಾಗುತ್ತದೆ.
ಇದು ಮಧ್ಯಮದಿಂದ ದೊಡ್ಡದಾದ ಹಾವು ಇದಾಗಿದ್ದು, ದೃಢವಾದ ರಚನೆ ಮತ್ತು ಆಯತಾಕಾರದ ತಲೆಯನ್ನು ಹೊಂದಿದೆ. ಅವು ಮುಂಜಾನೆಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ.
ಆಳವಾದ ಮಣ್ಣಿನ ಬಿರುಕುಗಳಲ್ಲಿ ಮತ್ತು ಪ್ರಾಣಿಗಳ ಬಿಲಗಳಲ್ಲಿ ಅಥವಾ ಅದರ ಬಳಿ ಆಹಾರ ಹುಡುಕುತ್ತವೆ. ಇನ್ನುಳಿದ ದಿನ, ಆ ಹಾವುಗಳು ಆಶ್ರಯ ಪಡೆಯಲು ತಮ್ಮ ಬಿಲದೊಳಗೆ ಹೋಗುತ್ತವೆ ಎಂದು ಮ್ಯೂಸಿಯಂ ನ ವೆಬ್‌ಸೈಟ್ ತಿಳಿಸಿದೆ.
ಈ ಹಾವಿನ ವಿಷವು ಮಾರಣಾಂತಿಕವಾಗಿರುತ್ತಂತೆ!
ಈ ಹಾವಿನ ವಿಷವನ್ನು ಎಲ್‌ಡಿ 50 ವಿಷದ ಮಾಪಕದಲ್ಲಿ ಅಳೆಯಲಾಗುತ್ತದೆ. ಇದು ಹಾವಿನ ವಿಷದ ಶಕ್ತಿಯನ್ನು ನಿರ್ಧರಿಸುತ್ತದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಸ್ಟ್ರಿಯ ವೆಬ್‌ಸೈಟ್ ಪ್ರಕಾರ, ಇನ್‌ಲ್ಯಾಂಡ್ ತೈಪಾನ್ ಅತ್ಯಂತ ಮಾರಣಾಂತಿಕ ಹಾವುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದು ಬೇರೆಲ್ಲಾ ಹಾವುಗಳಿಗೆ ಹೋಲಿಸಿದರೆ, ಅತ್ಯಂತ ವಿಷಕಾರಿ ವಿಷವನ್ನು ಹೊಂದಿರುತ್ತದೆ. ಸ್ಕೂಲ್ ಆಫ್ ಕೆಮಿಸ್ಟ್ರಿ ಪ್ರಕಾರ, ದಾಖಲಾದ ಗರಿಷ್ಠ ವಿಷ ಒಂದು ಕಡಿತಕ್ಕೆ 110 ಮಿಲಿ ಗ್ರಾಂ ಆಗಿದೆ. ಇದರರ್ಥ ಒಂದು ಕಚ್ಚುವಿಕೆಯು ಬಹುಶಃ 100 ಕ್ಕೂ ಹೆಚ್ಚು ಜನರನ್ನು ಅಥವಾ 2,50,000 ಇಲಿಗಳನ್ನು ಕೊಲ್ಲಲು ಸಾಕಾಗುತ್ತದೆ ಎಂದು ಹೇಳಲಾಗುತ್ತದೆ.
ಆಸ್ಟ್ರೇಲಿಯಾ ದೇಶದ ಹೊರಗೆ ಎಂದರೆ ಬೇರೆ ದೇಶಗಳಲ್ಲಿ ಈ ಅತ್ಯಂತ ವಿಷಕಾರಿ ಇನ್‌ಲ್ಯಾಂಡ್ ತೈಪಾನ್ ಅಷ್ಟಾಗಿ ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ