ತೆಂಗಿನ ಕಾಯಿಯನ್ನು (Coconut) ಸಾಮಾನ್ಯವಾಗಿ ಎಲ್ಲಾ ಭಾರತೀಯ ಅಡುಗೆಗಳಲ್ಲಿಯೂ (Cooking) ಬಳಸಿಕೊಳ್ಳಲಾಗುತ್ತೆ. ತೆಂಗಿನ ಕಾಯಿಲ್ಲದೆ ಅಡುಗೆಯೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಇದರ ಬಳಕೆ ಇದೆ. ತೆಂಗಿನಕಾಯಿ ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ (Health) ಉತ್ತಮ ಎನ್ನುವ ಕಾರಣಕ್ಕೆ ಪ್ರತಿನಿತ್ಯದ ಅಡುಗೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಆದರೆ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 24 ವರ್ಷಗಳಿಂದ ತೆಂಗಿನಕಾಯಿಯನ್ನು ಮಾತ್ರ ಸೇವಿಸುತ್ತಿದ್ದಾರಂತೆ. ಅರೇ, 24 ವರ್ಷಗಳಿಂದ ಬರೀ ತೆಂಗಿನಕಾಯಿ ಮಾತ್ರ ಸೇವಿಸುತ್ತಿದ್ದಾರಾ ಅಂತಾ ನಿಮಗೆ ಅಚ್ಚರಿಯಾಗಬಹುದು. ಆದರೆ ಈ ವ್ಯಕ್ತಿ ಈ ಆಹಾರ ಪದ್ಧತಿಯನ್ನೇ ಇನ್ನೂ ಮುಂದುವರೆಸಿಕೊಂಡು ಬಂದಿದ್ದಾರಂತೆ.
ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ನಿವಾರಣೆಗೆ ತೆಂಗಿನಕಾಯಿ ಮೊರೆ
ಬಾಲಕೃಷ್ಣನ್ ಎಂಬ ಇವರು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯನ್ನು ಗುಣಪಡಿಸಲು ಇನ್ನಿಲ್ಲದ ಚಿಕಿತ್ಸೆಗಳ ಮೊರೆ ಹೋಗಿದ್ದರೂ, ಯಾವುದೂ ಸಫಲವಾಗಿಲ್ಲ. ನಂತರ ಇವರು ಜಿಇಆರ್‌ಡಿ ಕಾಯಿಲೆ ನಿವಾರಣೆಗೆ ತೆಂಗಿನಕಾಯಿಯನ್ನು ಎರಡು ದಶಕಗಳಿಂದ ಸೇವಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಇನ್ಪ್ಯೂನ್ಸರ್ ಶೆನಾಜ್‌ಟ್ರೆಶ್ಯುರಿ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಶೆನಾಜ್ ಹಂಚಿಕೊಂಡ ವೀಡಿಯೋದಲ್ಲಿ ಬಾಲಕೃಷ್ಣನ್ ಮಾತನಾಡಿ, ತನಗೆ ಜಿಇಆರ್‌ಡಿ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ನಾನು ಈ ರೋಗದಿಂದ ಕುಗ್ಗಿ ಹೋಗಿದ್ದೆ. ನಂತರ ಚಿಕಿತ್ಸೆಯ ಭಾಗವಾಗಿ ತೆಂಗಿನಕಾಯಿಯನ್ನು ತಿನ್ನಲು ಮತ್ತು ಅದರ ನೀರನ್ನು ಸೇವಿಸಲು ಪ್ರಾರಂಭಿಸಿದೆ. ಕಳೆದ 24 ವರ್ಷಗಳಿಂದ ತೆಂಗಿನಕಾಯಿಯನ್ನು ಹೊರತುಪಡಿಸಿ ಬೇರೆ ಆಹಾರವನ್ನೇ ಸೇವಿಸಿಲ್ಲ ಎಂದಿದ್ದಾರೆ.
ತೆಂಗಿನಕಾಯಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿವೆ. ಇದು ಬಾಲಕೃಷ್ಣನ್ ಅವರಿಗೆ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡಿತು. ಬಾಲಕೃಷ್ಣನ್ ಅವರು ಈಗ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ ಎಂದು ಶೆನಾಜ್ ವೀಡಿಯೋದಲ್ಲಿ ಹೇಳಿದ್ದಾರೆ.
View this post on Instagram
ಬಾಲಕೃಷ್ಣನ್ ಅವರ ಆಹಾರ ಕ್ರಮಕ್ಕೆ ನೆಟ್ಟಿಗರಂತೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ ಎರಡು ದಶಕಗಳಿಂದ ಕೇವಲ ತೆಂಗಿನಕಾಯಿ ಸೇವನೆ ಸಾಧ್ಯನಾ ಅಂತಾ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. "ನಮ್ಮಲ್ಲಿ ಅನೇಕರು ಈಗ GERD ಅಥವಾ ಹೊಟ್ಟೆಯ ಗ್ಯಾಸ್ಟ್ರಿಕ್‌ಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಇದಕ್ಕೆ ಕೇವಲ ತೆಂಗಿನಕಾಯಿಯನ್ನು ತಿನ್ನುವುದು ಅದು ಕೂಡ ತುಂಬಾ ವರ್ಷಗಳಿಂದ. ನಂಬಲು ನಿಜಕ್ಕೂ ಅಸಾಧ್ಯವಾಗಿದೆ ಎಂದು ಓರ್ವ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಏನಿದು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್?
“GERD ಅಥವಾ ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ರೋಗವನ್ನು ಆಸಿಡ್ ರಿಫ್ಲಕ್ಸ್ ಎಂದೂ ಕರೆಯುತ್ತಾರೆ. ಇದು ಜೀರ್ಣಕಾರಿ ಕಾಯಿಲೆಯಾಗಿದ್ದು, ಹೊಟ್ಟೆಯ ಆಮ್ಲವು ಪದೇ ಪದೇ ನಿಮ್ಮ ಬಾಯಿ ಮತ್ತು ಹೊಟ್ಟೆಯನ್ನು (ಅನ್ನನಾಳ) ಸಂಪರ್ಕಿಸುವ ಟ್ಯೂಬ್‌ಗೆ ಬರುವಾಗ ಸಂಭವಿಸುತ್ತದೆ. ಈ ಕಾಯಿಲೆಯಲ್ಲಿ ಎದೆಯುರಿ, ವಾಂತಿ, ಎದೆ ನೋವು, ಹೊಟ್ಟೆಯುಬ್ಬರದಂತಹ ಲಕ್ಷಣಗಳು ತುಂಬಾ ಸಾಮಾನ್ಯವಾಗಿವೆ.
ತೆಂಗಿನಕಾಯಿ ಹೇಗೆ ಸಹಕಾರಿ?
ತೆಂಗಿನಕಾಯಿ ಪಿಹೆಚ್ ಸಮತೋಲನವನ್ನು ಉತ್ತೇಜಿಸುವ ಮತ್ತು ನಿಮ್ಮ ದೇಹಕ್ಕೆ ಉತ್ತಮವಾದ ಆಸಿಡ್ ರಿಫ್ಲಕ್ಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುವ ಸಹಾಯಕ ಎಲೆಕ್ಟ್ರೋಲೈಟ್ಗಳನ್ನು ಹೊಂದಿರುತ್ತದೆ. ತೆಂಗಿನಕಾಯಿಯ ಸೇವನೆಯ ಮತ್ತೊಂದು ಲಾಭವೆಂದರೆ ಇದು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ, ಆದ್ದರಿಂದ ಇದು ಕಾರ್ಬ್-ಭರಿತ ತಿಂಡಿಗಳಿಗೆ ಉತ್ತಮವಾದ ಬದಲಿ ಆಹಾರವಾಗಿದೆ. ಇದು ಪೊಟ್ಯಾಸಿಯಮ್, ಸೋಡಿಯಂ, ಮ್ಯಾಂಗನೀಸ್, ವಿಟಮಿನ್ ಬಿ, ತಾಮ್ರ ಮತ್ತು ಕಬ್ಬಿಣದಂತಹ ಖನಿಜಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ ಎಂದು ಗುರುಗ್ರಾಮದ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ ತುಷಾರ್ ತಯಾಲ್ ವಿವರಿಸಿದರು.
ಆದರೆ, ತೆಂಗಿನಕಾಯಿ ಮಾತ್ರವನ್ನು ಸೇವಿಸಿ ಒಂದೆರಡು ವಾರಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ಡಾ ತಯಾಲ್ ಹೇಳಿದ್ದಾರೆ. ಅಲ್ಲದೇ ತೆಂಗಿನ ಕಾಯಿ ನೀರಲ್ಲಿ ಪೊಟ್ಯಾಸಿಯಮ್ ಇರುವುದರಿಂದ, ಇದರ ಹೆಚ್ಚಿನ ಸೇವನೆ ಹೃದಯಾಘಾತವನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
GERD ಹೊಂದಿರುವವರು ಯಾವ ರೀತಿ ಆಹಾರ ಸೇವಿಸಬೇಕು?
*ಓಟ್ ಮೀಲ್, ಬ್ರೌನ್ ರೈಸ್, ಧಾನ್ಯಗಳು.
*ಸಿಹಿ ಗೆಣಸು, ಕ್ಯಾರೆಟ್ ಮತ್ತು ಬೀಟ್‌ರೂಟ್, ಬೇರು ತರಕಾರಿಗಳು.
*ಹಸಿರು ತರಕಾರಿಗಳಾದ ಶತಾವರಿ, ಕೋಸುಗಡ್ಡೆ ಮತ್ತು ಹಸಿರು ಬೀನ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ