news18-kannada Updated:April 6, 2021, 2:47 PM IST
ಗೋಲ್ಡ್ ಪಾನ್
ಸ್ವೀಟ್ ಬೀಡಾ, ಖಾರ ಬೀಡಾ, ಫೈರ್ ಬೀಡಾ ಹೀಗೆ ಹತ್ತು ಹಲವು ಬೀಡಾಗಳ ಬಗ್ಗೆ ಕೇಳಿರುತ್ತೀರಾ. ಆದರೆ ದೆಹಲಿಯಲ್ಲಿ ಬಂಗಾರದ ಬೀಡಾ ಮಾರ್ತಾರೆ. ಬಂಗಾರದ ಬೀಡಾ (ಗೋಲ್ಡ್ ಪಾನ್) ಬೇರೆ ಇದ್ಯಾ ಎಂದು ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ಹೌದು ದೆಹಲಿಯಲ್ಲಿ ಯಮು ಪಂಚಾಯತ್ ಎಂಬುವರ ಅಂಗಡಿಯಲ್ಲಿ ಬಂಗಾರದ ಬೀಡಾ ಸಿಗುತ್ತದೆ. ಇದಕ್ಕೆ ರಫೆಲೊ ಗೋಲ್ಡ್ ಪಾನ್ ಎಂದು ಕರೆಯಲಾಗುತ್ತದೆ. ಇದರ ಬೆಲೆ ಮಾತ್ರ ನೀವು ತಿಳಿದುಕೊಂಡಷ್ಟು ಕಡಿಮೆಯಲ್ಲ. ಸ್ವಲ್ಪ ದುಬಾರಿ.
ಈ ಒಂದು ಬೀಡಾದ ಬೆಲೆ ಬರೋಬ್ಬರಿ 600 ರೂ. ಇನ್ನು, ಈ ಚಿನ್ನದ ಬೀಡಾ ಮಾಡುವ ವಿಡಿಯೋ ಯಮು ಪಂಚಾಯತ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಆಗಿದ್ದು, ಯಾವ ರೀತಿಯಲ್ಲಿ ಮಾಡಲಾಗುತ್ತದೆ, ಯಾವ ಯಾವ ವಸ್ತುಗಳನ್ನು ಬಳಸಲಾಗುತ್ತದೆ ಎಂದು ಮಹಿಳೆಯೊಬ್ಬರು ವಿವರಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು 8 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಪಾನ್ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಬೀಡಾದ ಬೆಲೆ ಜಾಸ್ತಿ ಆಯಿತು ಎಂದು ಹೇಳಿದರೆ, ಈ ಬೀಡಾಗೆ ಇನ್ನು ಮುಖ್ಯವಾದ ಪದಾರ್ಥಗಳನ್ನು ಸೇರಿಸಬೇಕು ಎಂದು ಹಲವರು ಹೇಳಿದ್ದಾರೆ. ಈ ಪಾನ್ ಬೆಲೆ 600 ರೂ. ಸಿಕ್ಕಾಪಟ್ಟೆ ಹೆಚ್ಚು ಹೇಳುತ್ತಿದ್ದೀರಾ. ಇದೇ ರೀತಿಯ ಪಾನ್ ಕೇವಲ 100 ರಿಂದ 150 ರೂ. ಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ಬಂಗಾರದ ಬೀಡಾ ಮಾಡುವುದು ಹೇಗೆ?
ಮೊದಲು ಬೀಡಾ ಮಾಡಲು ಬಳಸುವ ವೀಳ್ಯದೆಲೆಯನ್ನು ವಿ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು. ನಂತರ ಅದಕ್ಕೆ ಕ್ಯಾಲ್ಸಿಯಂ ನೀಡುವ ಸುಣ್ಣ, ಒಂದು ಬಗೆಯ ಚಟ್ನಿ, ಅರೋಮಗಳನ್ನು ಸ್ವಲ್ಪ ಸ್ವಲ್ಪ ಹಾಕಿ ಎಲೆಯ ತುಂಬಾ ಹರಡಲಾಗುತ್ತದೆ. ಈ ಎಲ್ಲಾ ಪದಾರ್ಥಗಳು ಕೇವಲ ರುಚಿಗಲ್ಲ. ಇದು ಗಂಟಲನ್ನು ಸಹ ಹಿತಗೊಳಿಸುತ್ತದೆ ಎನ್ನುತ್ತಾರೆ. ಬಳಿಕ ಎಲ್ಲಾ ತರಹದ ಡ್ರೈಫ್ರೂಟ್ಸ್, ತುರಿದ ತೆಂಗಿನಕಾಯಿ, ಸೋಂಪು, ಗುಲ್ಕನ್ ಈ ಎಲ್ಲಾ ವಸ್ತುಗಳನ್ನು ಒಂದಾದ ಮೇಲೆ ಹಾಕಿದ ಬಳಿಕ ಚಾಕಲೇಟ್ ಅನ್ನು ಸೇರಿಸಲಾಗುತ್ತದೆ. ಇದೆಲ್ಲಾ ಮುಗಿದ ಮೇಲೆ ಎಲೆಯನ್ನು ನಿಧಾನವಾಗಿ ಮಡಚಿ ತೆಳುವಾದ ಬಂಗಾರದ ಲೇಪನವನ್ನು ಎಲೆಯ ಸುತ್ತ ಹಾಕಲಾಗುತ್ತದೆ. ಕೊನೆಯಲ್ಲಿ ಚೆರ್ರಿ ಹಾಗೂ ಚಾಕೊಲೇಟ್ನಲ್ಲಿ ರೋಲ್ ಮಾಡಲಾಗುತ್ತದೆ. ಇಷ್ಟೆಲ್ಲಾ ಹಂತಗಳ ಮೂಲಕ 600 ರೂ. ಬೆಲೆಬಾಳುವ ರಫೆಲೋ ಗೋಲ್ಡ್ ಪಾನ್ ತಯಾರಾಗುತ್ತದೆ.
ಲಾಭಗಳು
ಶುಭಕಾರ್ಯಗಳಿಂದ ಹಿಡಿದು ತಿನ್ನುವವರೆಗೂ ಬಳಸುವ ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಕಫ, ಕೆಮ್ಮು, ಗಂಟಲು ನೋವು ಹೀಗೆ ಹಲವು ತೊಂದರೆಗಳಿಗೆ ವೀಳ್ಯದೆಲೆ ಮದ್ದು. ಇದರಿಂದ ಗಂಟಲು, ನಾಲಿಗೆ ಉಲ್ಲಾಸಿತವಾಗುತ್ತದೆ. ಕ್ಯಾಲ್ಸಿಯಂ ಇರುವುದರಿಂದ ದೇಹಕ್ಕೆ ಸ್ವಲ್ಪಮಟ್ಟಿಗೆ ಶಕ್ತಿ ನೀಡುತ್ತದೆ. ಇನ್ನು ಸುಣ್ಣದಲ್ಲೂ ಕೂಡ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಡ್ರೈಫ್ರೂಟ್ಸ್ ದೇಹದಲ್ಲಿನ ನಿಶಕ್ತಿಯನ್ನು ಕಡಿಮೆಗೊಳಿಸಿ ಬಲವರ್ಧನೆ ನೀಡುತ್ತದೆ.
Published by:
Harshith AS
First published:
April 6, 2021, 2:47 PM IST