ಈಗೆಲ್ಲಾ ಈ ಪ್ರೀತಿ (Love), ಪ್ರೇಮ ಎಂಬ ಪವಿತ್ರವಾದ ಸಂಬಂಧಗಳಲ್ಲಿ ಬೆನ್ನಿಗೆ ಚೂರಿ ಹಾಕುವಂತಹ ವಂಚನೆ ಪ್ರಕರಣಗಳೇ ನಮಗೆ ಕೇಳುವುದಕ್ಕೆ ಜಾಸ್ತಿ ಸಿಗುತ್ತಿವೆ. ಆದರೆ ಅಪರೂಪಕ್ಕೆ ಎಂಬಂತೆ ಇನ್ನೂ ಈ ಪ್ರೀತಿ, ಪ್ರೇಮ ಎಂಬ ಸಂಬಂಧದ ಮೇಲೆ ಇರುವ ನಂಬಿಕೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿರುವ ಕೆಲವು ನಿಜವಾದ ಸ್ಟೋರಿಗಳು ನಮಗೆ ಆಗೊಮ್ಮೆ ಈಗೊಮ್ಮೆ ಎಂಬಂತೆ ಕೇಳಲು ಸಿಗುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ನಿಜವಾದ ಪ್ರೀತಿ, ಪ್ರೇಮದ ಒಂದು ಘಟನೆ ನಡೆದಿದೆ.
ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ನೋಡಿ..
ಷಾರ್ಲೆಟ್ ವಾನ್ ಶೆಡ್ವಿನ್ ಎಂಬಾಕೆ 1975 ರಲ್ಲಿ ದೆಹಲಿಯಲ್ಲಿ ಭಾರತೀಯ ಕಲಾವಿದರಾದ ಪಿ.ಕೆ. ಮಹಾನಂದಿಯಾ ಅವರನ್ನು ಭೇಟಿಯಾದರು. ಶೆಡ್ವಿನ್ ಅವರು ಮಹಾನಂದಿಯಾ ಅವರ ಕಲೆಯ ಬಗ್ಗೆ ಕೇಳಿದ ನಂತರ ಸ್ವೀಡನ್ ನಿಂದ ಭಾರತಕ್ಕೆ ಬಂದರು ಮತ್ತು ಅವರ ಭಾವಚಿತ್ರವನ್ನು ಅವರಿಂದ ಚಿತ್ರಿಸಿಕೊಳ್ಳಲು ನಿರ್ಧರಿಸಿದರು.
ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಆಗಷ್ಟೇ ಕಲಾವಿದರಾಗಿ ಹೆಸರು ಮಾಡಲು ಪ್ರಾರಂಭಿಸಿದ್ದರು. ಅವರು ದೆಹಲಿಯ ಕಾಲೇಜ್ ಆಫ್ ಆರ್ಟ್ ನಲ್ಲಿ ಒಬ್ಬ ಬಡ ಕಲಾ ವಿದ್ಯಾರ್ಥಿಯಾಗಿದ್ದರು. ಅದೃಷ್ಟವಶಾತ್, ಮಹಾನಂದಿಯಾ ಅವರು ಶೆಡ್ವಿನ್ ಅವರ ಭಾವಚಿತ್ರವನ್ನು ಬಿಡಿಸುವಾಗ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದರು. ಮಹಾನಂದಿಯಾ ಅವರು ಶೆಡ್ವಿನ್ ಅವರ ಸೌಂದರ್ಯವನ್ನು ತುಂಬಾನೇ ಇಷ್ಟಪಟ್ಟು ಪ್ರೀತಿಸಿದರೆ, ಶೆಡ್ವಿನ್ ಅವರು ಮಹಾನಂದಿಯಾ ಅವರ ಸರಳತೆಯನ್ನು ನೋಡಿ ಪ್ರೀತಿಸಿದರು.
ಇದನ್ನೂ ಓದಿ: ಈ ನಾಯಿಯ ವಾರ್ಷಿಕ ಆದಾಯ ಕೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರೆಂಟಿ!
ತಮ್ಮ ಮದುವೆಯ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಏನಂತ ಹೇಳಿದ್ರು ಮಹಾನಂದಿಯಾ?
ಷಾರ್ಲೆಟ್ ವಾನ್ ಶೆಡ್ವಿನ್ ಭಾರತದಿಂದ ಮತ್ತೆ ತಮ್ಮ ದೇಶಕ್ಕೆ ಹೋಗುವ ಸಮಯ ಬಂದಾಗ, ಈ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಬಿಬಿಸಿಗೆ ನೀಡಿದ ಹಳೆಯ ಸಂದರ್ಶನದಲ್ಲಿ ಮಾತನಾಡಿದ ಮಹಾನಂದಿಯಾ ಅವರು "ನನ್ನ ತಂದೆಯನ್ನು ಮೊದಲ ಬಾರಿಗೆ ಭೇಟಿಯಾದಾಗ ಆಕೆ ಸೀರೆಯನ್ನು ಧರಿಸಿದ್ದಳು.
ಅವಳು ಅದನ್ನೆಲ್ಲಾ ಹೇಗೆ ನಿರ್ವಹಿಸಿದಳು ಎಂದು ನನಗೆ ಇನ್ನೂ ತಿಳಿದಿಲ್ಲ. ನನ್ನ ತಂದೆ ಮತ್ತು ಕುಟುಂಬದ ಆಶೀರ್ವಾದದಿಂದ, ನಾವು ಬುಡಕಟ್ಟು ಸಂಪ್ರದಾಯದ ಪ್ರಕಾರ ವಿವಾಹವಾದೆವು” ಎಂದು ಹೇಳಿಕೊಂಡಿದ್ದರು.
ಶೆಡ್ವಿನ್ ಅವರು ತಮ್ಮ ದೇಶಕ್ಕೆ ಹೊರಡುವ ಸಮಯ ಬಂದಾಗ, ಅವಳು ತನ್ನ ಗಂಡನನ್ನು ಸಹ ತನ್ನೊಂದಿಗೆ ಬರುವಂತೆ ಕೇಳಿದಳು. ಆದರೆ ಮಹಾನಂದಿಯಾ ಅವರು ಮೊದಲು ತಮ್ಮ ಅಧ್ಯಯನವನ್ನು ಮುಗಿಸಬೇಕಾಗಿತ್ತು. ಸ್ವೀಡಿಷ್ ಜವಳಿ ಪಟ್ಟಣವಾದ ಬೋರಾಸ್ ನಲ್ಲಿರುವ ಆಕೆಯ ಮನೆಗೆ ಒಂದಲ್ಲ ಒಂದು ದಿನ ಬರುತ್ತೇನೆ ಅಂತ ಇವರು ತಮ್ಮ ಪತ್ನಿಗೆ ಭರವಸೆಯೊಂದನ್ನು ನೀಡಿದ್ದರಂತೆ.
ಈ ಇಬ್ಬರೂ ಇಷ್ಟು ವರ್ಷಗಳ ಕಾಲ ಪತ್ರಗಳ ಮೂಲಕ ಸಂಪರ್ಕದಲ್ಲಿದ್ದರಂತೆ..
ಒಂದು ವರ್ಷದ ನಂತರ, ಅವರು ವಾನ್ ಶೆಡ್ವಿನ್ ಅವರನ್ನು ಭೇಟಿ ಮಾಡಲು ಯೋಜಿಸಿದಾಗ, ವಿಮಾನ ಟಿಕೆಟ್ ಖರೀದಿಸಲು ಸಹ ತಮ್ಮ ಬಳಿ ಅಷ್ಟೊಂದು ಹಣವಿಲ್ಲದೆ ಇರುವುದರಿಂದ ಅವರು ತನ್ನ ಬಳಿಯಿದ್ದ ಎಲ್ಲವನ್ನೂ ಮಾರಿ ಒಂದು ಬೈಸಿಕಲ್ ಅನ್ನು ಖರೀದಿಸಿದರಂತೆ.
ಆ ಸೈಕಲ್ ಸಹಾಯದಿಂದ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಅವರು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಮತ್ತು ಟರ್ಕಿಯನ್ನು ದಾಟಿದರು. ದಾರಿಯಲ್ಲಿ ಅವರ ಸೈಕಲ್ ಅನೇಕ ಬಾರಿ ಮುರಿದು ಹೋಯಿತಂತೆ ಮತ್ತು ಅವರು ಅನೇಕ ದಿನಗಳವರೆಗೆ ಆಹಾರವಿಲ್ಲದೆ ಹೋಗಬೇಕಾಯಿತಂತೆ. ಆದರೆ ಯಾವುದೂ ಅವರು ತಮ್ಮ ಹೆಂಡತಿಯನ್ನು ಭೇಟಿ ಮಾಡಬೇಕು ಎಂಬ ಅವರ ದೃಢ ನಿಶ್ಚಯವನ್ನು ಮುರಿಯಲು ಸಾಧ್ಯವಾಗಲಿಲ್ಲವಂತೆ.
ಅವರು ಜನವರಿ 22, 1977 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಅವರು ಪ್ರತಿದಿನ ಸುಮಾರು 70 ಕಿಲೋ ಮೀಟರ್ ಸೈಕಲ್ ತುಳಿಯುತ್ತಿದ್ದರಂತೆ. "ದಾರಿಯುದ್ದಕ್ಕೂ ಕಲೆ ನನ್ನ ರಕ್ಷಣೆಗೆ ಬಂದಿತು, ನಾನು ಜನರ ಭಾವಚಿತ್ರಗಳನ್ನು ರಚಿಸಿದೆ ಮತ್ತು ಕೆಲವರು ನನಗೆ ಹಣವನ್ನು ನೀಡಿದರು, ಇತರರು ನನಗೆ ಆಹಾರ ಮತ್ತು ಆಶ್ರಯವನ್ನು ಸಹ ನೀಡಿದರು" ಎಂದು ಅವರು ಬಿಬಿಸಿಗೆ ತಿಳಿಸಿದರು.
ಈ ಜೋಡಿ ಅಧಿಕೃತವಾಗಿ ಸ್ವೀಡನ್ ನಲ್ಲಿ ಮದುವೆಯಾದ್ರಂತೆ..
ಅವರು ಮೇ 28 ರಂದು ಇಸ್ತಾಂಬುಲ್ ಮತ್ತು ವಿಯೆನ್ನಾ ಮೂಲಕ ಯುರೋಪ್ ತಲುಪಿದರು ಮತ್ತು ನಂತರ ರೈಲಿನಲ್ಲಿ ಗೋಥೆನ್‌ಬರ್ಗ್ ಗೆ ಪ್ರಯಾಣಿಸಿದರು. ಈ ಇಬ್ಬರೂ ಅಧಿಕೃತವಾಗಿ ಸ್ವೀಡನ್ ನಲ್ಲಿ ವಿವಾಹವಾದರು.
"ಯುರೋಪಿಯನ್ ಸಂಸ್ಕೃತಿಯ ಬಗ್ಗೆ ನನಗೆ ತಿಳಿದಿರಲಿಲ್ಲ, ಇದು ನನಗೆ ಹೊಸದಾಗಿತ್ತು, ಆದರೆ ಅವಳು ಪ್ರತಿ ಹಂತದಲ್ಲೂ ನನ್ನನ್ನು ಬೆಂಬಲಿಸಿದಳು. ನಾನು 1975 ರಲ್ಲಿ ಇದ್ದಂತೆಯೇ ಈಗಲೂ ಆಕೆಯ ಜೊತೆಗೆ ಪ್ರೀತಿಯಲ್ಲಿದ್ದೇನೆ" ಎಂದು ಅವರು ಬಿಬಿಸಿಗೆ ಈ ಹಿಂದೆ ತಿಳಿಸಿದ್ದರು. ಈ ದಂಪತಿಗಳು ಈಗ ತಮ್ಮ ಇಬ್ಬರು ಮಕ್ಕಳೊಂದಿಗೆ ಸ್ವೀಡನ್ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಮಹಾನಂದಿಯಾ ಅವರು ಕಲಾವಿದರಾಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ