• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಗಾಲ್ಫ್ ಮೈದಾನದಲ್ಲಿ ಕರಡಿ ಮರಿಗಳ ಚಿನ್ನಾಟ: ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

ಗಾಲ್ಫ್ ಮೈದಾನದಲ್ಲಿ ಕರಡಿ ಮರಿಗಳ ಚಿನ್ನಾಟ: ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

ಕರಡಿ ಮರಿಗಳು

ಕರಡಿ ಮರಿಗಳು

ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಗಾಲ್ಫ್ ಮೈದಾನವೆಂದರೆ ಇಷ್ಟ ಎಂದೆನಿಸುವುದು ಖಂಡಿತಾ! ಅದ್ಯಾವ ಪ್ರಾಣಿಗಳಪ್ಪಾ ಅಂತೀರಾ? ಕರಡಿಗಳು!

  • Share this:

    ಗಾಲ್ಫ್ ಮೈದಾನದ ಹಸಿರು ಹುಲ್ಲಿನ ನೆಲ ಎಷ್ಟು ಸುಂದರ, ಗಾಲ್ಫ್ ಆಡಲು ಬರದಿದ್ದರೂ ಚಿಂತೆಯಿಲ್ಲ, ಅದರ ಮೈದಾನದಲ್ಲೊಮ್ಮೆ ಸುತ್ತಾಡಬೇಕು ಎಂದು ಕೆಲವರಿಗಾದರೂ ಅನಿಸಿರುತ್ತದೆ. ಇದು ಮನುಷ್ಯರ ಕತೆಯಾಯಿತು. ಆದರೆ, ಇಂಟರ್‌ನೆಟ್‍ನಲ್ಲಿ ಇತ್ತೀಚೆಗೆ ವೈರಲ್ ಆಗಿರುವ ಗಾಲ್ಫ್ ಮೈದಾನದ ವಿಡಿಯೋವೊಂದನ್ನು ನೋಡಿದರೆ, ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಗಾಲ್ಫ್ ಮೈದಾನವೆಂದರೆ ಇಷ್ಟ ಎಂದೆನಿಸುವುದು ಖಂಡಿತಾ! ಅದ್ಯಾವ ಪ್ರಾಣಿಗಳಪ್ಪಾ ಅಂತೀರಾ? ಕರಡಿಗಳು! ಹೌದು, ಮೂರು ಮುದ್ದಾದ ಕರಡಿ ಮರಿಗಳು ಯಾವುದೇ ಚಿಂತೆಯಿಲ್ಲದೆ ಹಾಯಾಗಿ ಗಾಲ್ಫ್ ಮೈದಾನದಲ್ಲಿ ಆಡುತ್ತಿರುವ ವಿಡಿಯೋವದು. 40 ಸೆಕೆಂಡ್‌ ಅವಧಿಯ ಈ ವಿಡಿಯೋ, ಟ್ವಿಟ್ಟರ್‌ನಲ್ಲಿ ಪೋಸ್ಟ್ ಆದ ಕ್ಷಣದಿಂದ ಸುಮಾರು 87 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.


    ಹೊಸ ವಿಡಿಯೋದಲ್ಲಿನ ದೃಶ್ಯ ಹೀಗಿದೆ: ವಿಶಾಲವಾದ ಗಾಲ್ಫ್ ಮೈದಾನ. ಆ ಗಾಲ್ಫ್ ಮೈದಾನದ ಹಸಿರು ಹಾಸಿನ ಮೇಲೆ ಹಾಯಾಗಿ ಮೂರು ಕರಡಿ ಮರಿಗಳು ಒಂದರ ಹಿಂದೆ ಒಂದು ಓಡಾಡಿಕೊಂಡಿವೆ. ಅದರಲ್ಲಿ ಎರಡು ಪರಸ್ಪರ ಆಟವಾಡಿಕೊಳ್ಳುತ್ತಿದ್ದರೆ, ಇನ್ನೊಂದಕ್ಕೆ ಅಲ್ಲಿ ಊರಲಾಗಿರುವ, ಚಿಹ್ನೆಗಾಗಿ ಬಳಸುವ ಬಾವುಟದ ಕೋಲಿನ ಮೇಲೆ ಆಸಕ್ತಿ. ಬಾವುಟದ ಕೋಲನ್ನು ಬಾಗಿಸಿ, ಬಿಳಿ ಬಾವುಟದ ಜೊತೆ ಚಿನ್ನಾಟವಾಡುವ ಪ್ರಯತ್ನ ಅದರದ್ದು.


    ಕೋಲನ್ನು ಬಾಗಿಸಿ ಹಿಡಿದಷ್ಟು ಅದು ಪುಟಿದು ಮತ್ತೆ ನೇರವಾಗುತ್ತದೆ, ಕರಡಿ ಮರಿ ಸುಮ್ಮನಿರುವುದಿಲ್ಲ. ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಕೋಲನ್ನು ಬಾಗಿಸಿ ಬಾವುಟ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಆ ಕರಡಿ ಮರಿ ಕೋಲಿನ ಜೊತೆ ಅಷ್ಟೆಲ್ಲಾ ಸರ್ಕಸ್ ಮಾಡುತ್ತಿದ್ದರೂ ಉಳಿದೆರಡು ಕರಡಿ ಮರಿಗಳಿಗೆ ಅದರ ಪರಿವೆಯೇ ಇಲ್ಲ. ಈ ವಿಡಿಯೋ ನೋಡಿ ಖುಷಿ ಪಡದೇ ಇರಲು ಸಾಧ್ಯವೇ ಇಲ್ಲ. ಹಾಗೆ ನೋಡಿ ಸಂತಸಪಟ್ಟು, ಇದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಡ್ಯಾನಿ ಡೆರಾನೆ, ಅದಕ್ಕೆ “ಶುಭೋದಯ, ಈ ಕರಡಿ ಮರಿಗಳು ಹಸಿರಿನ ಮೇಲೆ ಆಡುತ್ತಿವೆ ಮತ್ತು ಈ ಕರಡಿಗಳು ಮಾತ್ರ” ಎಂದು ಅಡಿಬರಹವನ್ನು ನೀಡಿದ್ದಾರೆ.


    ನೆಟ್ಟಿಗರಿಗೆ ಈ ವಿಡಿಯೋದಲ್ಲಿನ ಕರಡಿ ಮರಿಗಳ ಮೇಲಿಂದ ಕಣ್ಣು ಕೀಳಲು ಸಾಧ್ಯವಾಗುತ್ತಿಲ್ಲ, ಅಷ್ಟು ಮುದ್ದಾಗಿವೆ ಅವುಗಳ ತುಂಟಾಟ.


    “ಇದು ಗಾಲ್ಫ್‌ಗಿಂತಲೂ ಹೆಚ್ಚು ಮಜವಾಗಿದೆ ಅನಿಸುತ್ತಿದೆ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು “ತುಂಬಾ ಮುದ್ದು! ನನ್ನ ನಗುವಿಗೆ ಧನ್ಯವಾದ” ಎಂದು ಬರೆದಿದ್ದಾರೆ.





    ಮತ್ತೊಬ್ಬರು” ಹಾಗಾದರೆ, “ಅಂತು ಇವತ್ತು ಟೆಡ್ಡಿಬೇರ್‍ರ್‌ಗಳು ಪಿಕ್ನಿಕ್ ಮಾಡುತ್ತಿವೆ” ಎಂದು ಖುಷಿಯ ಪ್ರತಿಕ್ರಿಯೆ ನೀಡಿದ್ದರೆ, ಇನ್ನೊಬ್ಬ ನೆಟ್ಟಿಗ “ಕೊನೆಗೂ ಗಾಲ್ಫ್ ಮೈದಾನದ ಸರಿಯಾದ ಬಳಕೆಯಾಗಿದೆ” ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿ “ನಮ್ಮೆಲ್ಲರ ಒಳಗೂ ಒಂದು ಮಗುವಿರುತ್ತದೆ” ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದರೆ, “ಅವರ ಆನಂದ ನೋಡಿ” ಎಂದಿದ್ದಾರೆ ಮತ್ತೊಬ್ಬರು.

    First published: