ಅದೆಷ್ಟೋ ಕಂಪೆನಿಗಳಲ್ಲಿ ಎಷ್ಟೋ ವರ್ಷಗಳಿಂದ ತುಂಬಾ ನಿಷ್ಠೆಯಿಂದ ದುಡಿದರೂ ಸರಿಯಾಗಿ ಬೋನಸ್, ಇಂಕ್ರಿಮೆಂಟ್ ಕೊಡದೆ ಇರೋ ಈ ಕಾಲದಲ್ಲಿ ಇಲ್ಲೊಂದು ಅಪರೂಪದ ಸುದ್ದಿ ಇದೆ. ಅದೇನು ಅಂತೀರಾ? ಇಲ್ಲಿ ಒಂದು ಕಂಪೆನಿ ಇದೆ. ಅದು ತನ್ನ ಟೆಕ್ ಟೀಮ್ ನಲ್ಲಿರುವಂತಹ ಸದಸ್ಯರ ಸಂಖ್ಯೆಯನ್ನು ಮೂರರಷ್ಟು ಹೆಚ್ಚು ಮಾಡಲು ಈ ರೀತಿಯಾದ ಒಂದು ವಿಶಿಷ್ಟವಾದ ಆಫರ್ ನೀಡುತ್ತಿದೆ. ಯಾರು ಹೊಸದಾಗಿ ಕಂಪೆನಿಗೆ ಕೆಲಸಕ್ಕೆ ಸೇರುತ್ತಾರೋ ಅಂತವರಿಗೆ BMW ಬೈಕ್ ಅಥವಾ ದುಬಾರಿ ಗ್ಯಾಜೆಟ್ ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
2022 ರ ವೇಳೆಗೆ ತನ್ನ ಟೆಕ್ ಟೀಮ್ ನಲ್ಲಿರುವಂತಹ ಸದಸ್ಯರ ಸಂಖ್ಯೆಯನ್ನು ಮೂರರಷ್ಟು ಹೆಚ್ಚಿಗೆ ಮಾಡಲು ನಿರ್ಧರಿಸಿದ ಭಾರತ್ ಪೇ ಕಂಪೆನಿಯು ಹೊಸದಾಗಿ ಸೇರುವಂತಹ ಟೆಕ್ ಟೀಮ್ ನ ಸದಸ್ಯರಿಗೆ ಈ ರೀತಿಯಾದಂತಹ ದುಬಾರಿ ಬೈಕ್ ಅಥವಾ ಗ್ಯಾಜೆಟ್ ನೀಡಲು ತೀರ್ಮಾನಿಸಿದ್ದಾರೆ. ಕಂಪೆನಿಯು ಇನ್ನಷ್ಟು ಉತ್ಪನ್ನಗಳನ್ನು ಪರಿಚಯಿಸಲು ನಿರ್ಧರಿಸಿದ್ದು, ಅದಕ್ಕಾಗಿ ತನ್ನ ಟೆಕ್ ಟೀಮ್ ಅನ್ನು ಮೂರರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.
ಸುಮಾರು 100 ಜನರನ್ನು ಹೊಸದಾಗಿ ತಮ್ಮ ಟೆಕ್ ಟೀಮ್ ಗೆ ಸೇರಿಸಿಕೊಳ್ಳುತೇವೆ ಎಂದು ಕಂಪೆನಿಯವರು ಹೇಳಿದ್ದಾರೆ. ಹೊಸದಾಗಿ ಟೆಕ್ ಟೀಮ್ ಗೆ ಸೇರ್ಪಡೆಯಾಗುವ ಸದಸ್ಯರು ಬೈಕ್ ಅಥವಾ ಗ್ಯಾಜೆಟ್ ಯಾವುದಾದರೂ ಆಯ್ಕೆ ಮಾಡಬಹುದಾಗಿದೆ. ಬೈಕ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅವರಿಗೆ ಸುಮಾರು ಐದು ಬೈಕ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಬೈಕ್ ಆಯ್ಕೆಯಲ್ಲಿ ಬಿಎಂಡಬ್ಲ್ಯೂ ಜಿ310ಆರ್, ಜಾವ ಪರಾಕ್, ಕೆಟಿಎಂ ಡ್ಯೂಕ್ 390, ಕೆಟಿಎಂ ಆರ್ ಸಿ 390 ಮತ್ತು ರಾಯಲ್ ಎನ್ಫೀಲ್ಡ್ ಹಿಮಾಲಯನ್ ಲಭ್ಯವಿವೆ. ಗ್ಯಾಜೆಟ್ ಪ್ಯಾಕೇಜ್ ನಲ್ಲಿ ಹೊಸದಾಗಿ ಸೇರುವ ಕೆಲಸಗಾರರು ಆಪಲ್ ಐಪ್ಯಾಡ್ ಪ್ರೋ, ಬೋಸ್ ಹೆಡ್ಫೋನ್, ಹರ್ಮನ್ ಕಾರ್ಡೋನ್ ಸ್ಪೀಕರ್, ಸ್ಯಾಮ್ಸಂಗ್ ಗ್ಯಾಲಕ್ಸಿ ಗಡಿಯಾರ, ವರ್ಕ್ ಫ್ರಮ್ ಹೋಮ್ ಡೆಸ್ಕ್ ಮತ್ತು ಚೇರ್ ಮತ್ತು ಫೈರ್ಫಾಕ್ಸ್ ಟೈಫೂನ್ 27.5 ಡಿ ಬೈಸಿಕಲ್ ಅನ್ನು ಒಳಗೊಂಡಿದೆ.
ಭಾರತ್ ಪೇ ಕಂಪೆನಿಯು ಅಕ್ಟೊಬರ್ 17 ರಿಂದ ನವೆಂಬರ್ 14 ರ ವರೆಗೆ ದುಬೈ ನಲ್ಲಿ ನಡೆಯಲಿರುವಂತಹ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ನಡೆಯಲಿದ್ದು ಕಂಪೆನಿಯು ತನ್ನ ಟೆಕ್ ಟೀಮ್ ಅನ್ನು ದುಬೈಗೆ ಕೆಲಸ ಮಾಡಲು ಕಳುಹಿಸಲಿದ್ದು ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ ಎಂದು ಕಂಪೆನಿಯವರು ಹೇಳಿದ್ದಾರೆ.
ಬೈಕ್ ಪ್ಯಾಕೇಜ್ ಮತ್ತು ಗ್ಯಾಜೆಟ್ ಪ್ಯಾಕೇಜ್ ಅನ್ನು ಯಾವುದೇ ಟೆಕ್ ಟೀಮ್ ನ ಸದಸ್ಯರು ಹೊರಗಿನ ವ್ಯಕ್ತಿಯನ್ನು ರೆಫರ್ ಮಾಡಿದರೂಸಹ ಈ ಪ್ಯಾಕೇಜ್ ಆಯ್ಕೆ ಮಾಡಲು ಅವಕಾಶ ಇರುತ್ತದೆ. ಇದರ ಬಗ್ಗೆ ಮಾತನಾಡಿದಭಾರತ್ ಪೇ ಕಂಪೆನಿಯ ಸಿಇಓ ಅಶ್ನಿರ್ ಗ್ರೋವರ್ ಅವರು "ನಾವು ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ನಮ್ಮ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದ್ದು, ನಮ್ಮ ಜೊತೆಗೆ ಕೆಲಸ ಮಾಡಲು ಉತ್ತಮ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ನಮ್ಮ ಕಂಪೆನಿಯು ಉತ್ತಮ ವೇದಿಕೆಯಾಗಲಿದೆ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ