Startup Stories: ಸಾಲ ಕೊಟ್ಟವರ ಲೆಕ್ಕ ಇಟ್ಟು ಕೆ ಆರ್ ಪುರಂ ಅಂಗಡಿ ಮಾಲೀಕ ರಮೇಶ್ಗೆ ಸುಸ್ತಾಗಿ ಹೋಗಿತ್ತು. ಒಂದು ಕಡೆ ಆಗುತ್ತಿದ್ದುದೇ ಅಲ್ಪ ಸ್ವಲ್ಪ ವ್ಯಾಪಾರ. ಅದ್ರಲ್ಲೂ ಸಾಲ ಕೇಳೋರು ಹಲವಾರು ಜನ, ಸಾಲ ಕೊಟ್ಟವರ ಲೆಕ್ಕ, ಅವರಿಂದ ಹಳೆ ಸಾಲ ವಸೂಲಿ ಮಾಡುವುದರೊಳಗೇ ಹೊಸಾ ಸಾಲದ ಲೆಕ್ಕ ಸೇರಿಸೋದು. ಹಾಗಂತ ಸಾಲ ಕೊಡದೇ ಇದ್ರೆ ಸಣ್ಣ ಪುಟ್ಟ ವ್ಯಾಪಾರಗಳು ನಡೆಯೋದು ಕಷ್ಟ… ಜೊತೆಜೊತೆಗೆ ತನ್ನ ಅಂಗಡಿ ನಡೆಸಲು ತಾನೆಷ್ಟು ಖರ್ಚು ಮಾಡ್ತಿದ್ದೀನಿ, ಎಷ್ಟು ಲಾಭ ಬಂದಿದೆ ಈ ಎಲ್ಲಾ ಲೆಕ್ಕಗಳು… ಒಟ್ಟಾರೆಯಾಗಿ ನೂರೆಂಟು ಲೆಕ್ಕಪುಸ್ತಕಗಳ ನಡುವೆ ರಮೇಶ್ ಕಳೆದು ಹೋದಂತಾಗಿದ್ರು. ಇದಕ್ಕೇನಾದ್ರೂ ಪರಿಹಾರ ಇದ್ಯಾ ಅಂತ ಯೋಚಿಸಿ Play Store ನಲ್ಲಿ ಹುಡುಕುತ್ತಾ ಇದ್ದಾಗ ಅವರ ಕಣ್ಣಿಗೆ ಬಿದ್ದಿದ್ದು Khatabook ಎನ್ನುವ ಒಂದು App. ಒಂದು ತಿಂಗಳವರಗೆ ತಾವೇ ಖುದ್ದು ಬಳಸಿ ನೋಡಿದ ನಂತರ ರಮೇಶ್ ತಮ್ಮ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಇಡೋದನ್ನೇ ಬಿಟ್ಟುಬಿಟ್ಟಿದ್ದಾರೆ.
ಕೇವಲ 2 ವರ್ಷದ ಹಿಂದೆ ಆರಂಭವಾದ ಖಾತಾಬುಕ್ ಸಣ್ಣ ಮತ್ತು ಮಧ್ಯಮ ವಹಿವಾಟುಗಳನ್ನು ಡಿಜಿಟಲ್ ಮಾರ್ಗದತ್ತ ಸರಾಗವಾಗಿ ಕೊಂಡೊಯ್ಯುತ್ತಿದೆ. 2020-21 ನಲ್ಲಿ ಇಡೀ ಪ್ರಪಂಚವೇ ಲಾಕ್ಡೌನ್ನಿಂದ ಕಂಗೆಟ್ಟು ಕುಳಿತಿದ್ದಾಗ ಈ ಸಂಸ್ಥೆ ಶೇಕಡಾ 200ರಷ್ಟು ಬೆಳವಣಿಗೆ ಕಂಡಿದೆ ಎಂದರೆ ಇದು ಅಚ್ಚರಿಯ ವಿಚಾರವೇ.
2016ರಲ್ಲಿ ನೋಟುಗಳ ಅಮಾನ್ಯೀಕರಣವಾದಾಗ ಎಲ್ಲಡೆ UPI, ಡಿಜಿಟಲ್ ಹಣದ ಬಳಕೆ ಹೆಚ್ಚಾಯಿತು. Reliance Jio ತನ್ನ ಅತ್ಯಂತ ಕಡಿಮೆ ಬೆಲೆಯ 4ಜಿ ನೆಟ್ವರ್ಕ್ನಿಂದ kಓಟ್ಯಂತರ ಜನರಿಗೆ ಆನ್ಲೈನ್ ಜಗತ್ತನ್ನು ಪರಿಚಯಿಸಿತ್ತು. ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ಸಣ್ಣ ವ್ಯಾಪಾರಿ ಕೂಡಾ ಸ್ಮಾರ್ಟ್ಫೋನ್ ಬಳಸುತ್ತಾರೆ ಎಂದರೆ ಡಿಜಿಟಲ್ ಮಾಧ್ಯಮದಲ್ಲಿ ಅದೆಷ್ಟು ಅವಕಾಶಗಳಿವೆ ಎನ್ನುವುದನ್ನು ಆಲೋಚಿಸಿ ತಮ್ಮ ಗೆಳೆಯರ ಜೊತೆ ರವೀಶ್ ನರೇಶ್ ಆರಂಭಿಸಿದ ಸಂಸ್ಥೆ ಖಾತಾಬುಕ್.
ಖಾತಾಬುಕ್ ಹೇಗೆ ಕೆಲಸ ಮಾಡುತ್ತದೆ?
ಮನೆ ಬಳಿಯ ಪುಟ್ಟ ಕಿರಾಣಿ ಅಂಗಡಿಯವರ ಡಿಜಿಟಲ್ ರೂಪದ ಲೆಕ್ಕದ ಪುಸ್ತಕವೇ ಖಾತಾಬುಕ್. ಈ App ಬಳಸುವ ಅಂಗಡಿ ಮಾಲೀಕ ತಾನು ಮಾಡುವ ಪ್ರತೀ ವ್ಯಾಪಾರದ ವಿವರಗಳನ್ನು ಬಹಳ ಸರಳವಾಗಿ ತನ್ನದೇ ಭಾಷೆಯಲ್ಲಿ ಬರೆದಿಡಬಹುದು. ಗ್ರಾಹಕರಿಗೆ ಕೂಡಲೇ ಅದರ ರಸೀದಿ ಎಸ್ಎಂಎಸ್ ಮೂಲಕ ಬಂದಿರುತ್ತದೆ. ಒಂದು ವೇಳೆ ಯಾರಾದರೂ ಅಂಗಡಿಯವರ ಬಳಿ ಸಾಲ ಬರೆಸಿದ್ದರೆ ಅದರ ವಿವರವೂ ಮೆಸೇಜ್ ರೂಪದಲ್ಲಿ ವ್ಯಾಪಾರಿ ಮತ್ತು ಗ್ರಾಹಕ ಇಬ್ಬರಿಗೂ ಬರುತ್ತದೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಆ ಸಾಲವನ್ನು ನೆನಪಿಸುವ ಮೆಸೇಜ್ ಮತ್ತು ಅದರೊಂದಿಗೆ ಗ್ರಾಹಕ ಮನೆಯಲ್ಲೇ ಕುಳಿತು ಗೂಗಲ್ ಪೇ, ಫೋನ್ ಪೇ ಮುಂತಾದ ನಾನಾ ವಿಧಾನಗಳ ಮೂಲಕ ಸಾಲದ ಹಣವನ್ನು ಪಾವತಿ ಕೂಡಾ ಮಾಡಬಹುದು.
ಇದು ಪದೇ ಪದೇ ಹಣ ಕೇಳುವ ರಗಳೆಯಿಂದ ವ್ಯಾಪಾರಿಯನ್ನು ಕಾಪಾಡುತ್ತದೆ. ಅಷ್ಟೇ ಅಲ್ಲ, aಂಗಡಿಗೆ ಕೊಂಡ ಪ್ರತೀ ವಸ್ತು, ಅಲ್ಲಿ ವ್ಯಾಪಾರ ಮಾಡಿದ ವಸ್ತುಗಳ ವಿವರ, ಆದಾಯ, ಖರ್ಚು, ಲಾಭಾಂಶ, ಜಿಎಸ್ಟಿ ಲೆಕ್ಕಾಚಾರ ಎಲ್ಲವನ್ನೂ ಖಾತಾಬುಕ್ App ಮಾಡಿ ಮುಗಿಸುತ್ತದೆ. ಹಾಗಾಗಿ ಅಂಗಡಿಯಾತ ಲೆಕ್ಕದ ಬಗ್ಗೆ ಒಂದು ಸ್ವಲ್ಪವೂ ಆಲೋಚಿಸಬೇಕಾಗಿಲ್ಲ.
ಭಾರತದ 13 ಭಾಷೆಗಳಲ್ಲಿ ಖಾತಾಬುಕ್ ಲಭ್ಯವಿದ್ದು 80 ಲಕ್ಷ ವ್ಯಾಪಾರಿಗಳು ಇದನ್ನು ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 15 ಲಕ್ಷ ಜನ ಖಾತಾಬುಕ್ ಬಳಕೆದಾರರಿದ್ದು ಅದರಲ್ಲಿ 5 ಲಕ್ಷ ಜನ ಇದನ್ನು ಕನ್ನಡದಲ್ಲೇ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಅತೀ ಹೆಚ್ಚು ಸಣ್ಣ ವ್ಯಾಪಾರಿಗಳು ಖಾತಾಬುಕ್ ಬಳಸುತ್ತಿದ್ದಾರೆ. ಜನ ತಮ್ಮ ಭಾಷೆಯಲ್ಲೇ ಎಲ್ಲಾ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ಮಾಡುವ ಅವಕಾಶ ಇರುವುದೇ ಈ Appನ ಅತಿ ದೊಡ್ಡ ಯಶಸ್ಸಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ