ಸಾರಿಗೆ ವ್ಯವಸ್ಥೆಗಳಲ್ಲಿ (Transportation System) ನಮ್ಮ ಸಾಕು ಪ್ರಾಣಿಗಳನ್ನು ಜೊತೆಗೆ ಕರೆದುಕೊಂಡು ಹೋಗುವುದು ಎಂದರೆ ಅದು ತುಂಬಾನೇ ಕಷ್ಟದ ಕೆಲಸ ಅಂತ ಹೇಳಬಹುದು. ಸ್ವಂತ ಕಾರಿನಲ್ಲಿ ಬೇಕಾದರೆ ಆರಾಮವಾಗಿ ಅದಕ್ಕೆ ಒಂದು ಸೀಟನ್ನು ತೆರವು ಮಾಡಿ ಸಾಕುಪ್ರಾಣಿಯನ್ನು (Pet) ಕೊಂಡೊಯ್ಯಬಹುದು. ಅದೇ ಸಾರಿಗೆ ಅಂತ ಬಂದಾಗ ಬಸ್, ರೈಲು ಮತ್ತು ವಿಮಾನಗಳಲ್ಲಿ (Airplane) ಈ ಸಾಕು ಪ್ರಾಣಿಗಳನ್ನು ಹತ್ತಿಸಿಕೊಳ್ಳಲು ಅವರದ್ದೇ ಆದ ಕೆಲವು ನಿಯಮಗಳು ಇರುತ್ತವೆ ಎಂಬುದು ಪ್ರಯಾಣಿಕರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಆದರೂ ಕೆಲವರು ತಮ್ಮ ಸಾಕು ಪ್ರಾಣಿಗಳನ್ನ ಎಷ್ಟು ಕಷ್ಟವಾದ್ರೂ ಕೆಲವೊಮ್ಮೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ನಡೀತು ನೋಡಿ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಇತ್ತೀಚೆಗೆ ಶ್ರೀನಗರದಲ್ಲಿರುವ ತನ್ನ ತಾಯಿಯನ್ನು ಭೇಟಿಯಾಗಲು ಸ್ವಲ್ಪ ತುರ್ತಾಗಿ ಹೋಗಬೇಕಾಗಿದ್ದರಿಂದ ಪ್ರಯಾಣಿಕನೊಬ್ಬ ತನ್ನ ಸಾಕು ಮೀನನ್ನು ತನ್ನೊಂದಿಗೆ ಹಾಗೆಯೇ ಹಿಡಿದುಕೊಂಡು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ, ಆದರೆ ಮೀನನ್ನು ತಮ್ಮೊಂದಿಗೆ ವಿಮಾನದಲ್ಲಿ ಕೊಂಡೊಯ್ಯಲು ವಿಮಾನಯಾನ ಸಂಸ್ಥೆ ಒಪ್ಪಿಗೆ ನೀಡದೆ ಇದ್ದುದ್ದರಿಂದ ಮೀನನ್ನು ಏರ್‌ಪೋರ್ಟ್ ನಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಮೀನನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಲು ಒಪ್ಪಿಗೆ ನೀಡಲಿಲ್ವಂತೆ ಏರ್‌ಲೈನ್ಸ್
ಕೋರಮಂಗಲದ ನಿವಾಸಿ ಅಕಿಬ್ ಹುಸೇನ್ ತನ್ನ ಸಾಕು ಮೀನನ್ನು ವಿಮಾನ ನಿಲ್ದಾಣದ ಅಧಿಕಾರಿಗಳ ಬಳಿ ಬಿಟ್ಟು ದೆಹಲಿ ಮೂಲಕ ಶ್ರೀನಗರಕ್ಕೆ ಹೋಗಬೇಕಾಯಿತು. ಏರ್ ಇಂಡಿಯಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಹುಸೇನ್, ಪ್ರಯಾಣ ದರ ಹೆಚ್ಚಾಗಿದ್ದರೂ ಸಹ ಜೀವಂತ ಮೀನನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದರಿಂದ ಈ ವಿಮಾನಯಾನ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದು ಹೇಳಿದರು.
ವಿಮಾನದಲ್ಲಿ ಹೀಗೆ ಮೀನನ್ನು ತೆಗೆದುಕೊಂಡು ಹೋಗಲು ನಿಯಮದ ಪ್ರಕಾರ 100 ಮಿಲಿ ಲೀಟರ್ ಗಿಂತ ಹೆಚ್ಚಿನ ನೀರನ್ನು ಅನುಮತಿಸುವುದಿಲ್ಲವಂತೆ. ಅಂದರೆ ನೀರಿನ ಮಟ್ಟ ಅಲ್ಲಿ ಹೆಚ್ಚಾಗಿದೆ ಎಂಬುದು ವಿಮಾನಯಾನ ಸಂಸ್ಥೆ ಕೊಟ್ಟ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
31 ವರ್ಷದ ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮಾರ್ಚ್ 19 ರ ರಾತ್ರಿ ತನ್ನ ತಾಯಿಯ ಅನಾರೋಗ್ಯದ ಬಗ್ಗೆ ತಿಳಿದ ನಂತರ ಮಾರ್ಚ್ 20 ರ ಮುಂಜಾನೆ ಟಿಕೆಟ್ ಕಾಯ್ದಿರಿಸಿದ್ದರು. ಹುಸೇನ್ ತನ್ನ ಸಾಕು ಮೀನು ಜಾಯ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಲು ಬಯಸಲಿಲ್ಲ. ಪ್ರಯಾಣಿಸುವ ಮೊದಲು ಸಾಮಾನ್ಯವಾಗಿ ರಾತ್ರಿ ಹೋಗಿ ತನ್ನ ಮೀನನ್ನು ಸ್ನೇಹಿತನಿಗೆ ಒಪ್ಪಿಸಿ ಬರುತ್ತಿದ್ದರು, ಆದರೆ ಈಗ ಅದಕ್ಕೆ ಸಮಯ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.
ಗ್ರೌಂಡ್ ಸ್ಟಾಪ್ ಓಕೆ ಅಂದ್ರು, ಆದರೆ ಸೆಕ್ಯುರಿಟಿಯವರು ಬಿಡಲಿಲ್ವಂತೆ
20 ಗ್ರಾಂ ತೂಕದ ಕಿತ್ತಳೆ ಬಣ್ಣದ ಮೀನನ್ನು ಆರಂಭದಲ್ಲಿ ಗ್ರೌಂಡ್ ಸ್ಟಾಪ್ ಹೇಳಿದ ನಂತರ ಅವರು ಎಐ 0804 ಬೆಂಗಳೂರಿನಿಂದ ದೆಹಲಿಗೆ ಹೊರಡುವ ವಿಮಾನವನ್ನು ಹತ್ತಲು ಚೆಕ್ ಇನ್ ಮಾಡಿದರು. ನಿಯಮಗಳ ಪ್ರಕಾರ, ಫ್ಲೈಟ್ ಕ್ಯಾಪ್ಟನ್ನಿಂದ ಅಂತಿಮ ಅನುಮತಿಯೊಂದಿಗೆ ಮೀನನ್ನು ವಿಮಾನದಲ್ಲಿ ಅನುಮತಿಸಲಾಗುತ್ತದೆ. "ನಾನು ನಿರ್ಗಮನ ಪೂರ್ವ ಭದ್ರತಾ ತಪಾಸಣೆಗೆ ತೆರಳುತ್ತಿದ್ದಾಗ ಏರ್ ಇಂಡಿಯಾ ಸಿಬ್ಬಂದಿಯಿಂದ ನನ್ನ ಮೊಬೈಲ್ ಫೋನ್ ಗೆ ಕರೆ ಬಂತು, ಅವರು ಮತ್ತೊಮ್ಮೆ ಮೀನನ್ನು ಪರೀಕ್ಷಿಸಲು ಬಯಸಿದ್ದರಿಂದ ಹಿಂತಿರುಗುವಂತೆ ಕೇಳಿಕೊಂಡರು. ಅವರು ಪಾರದರ್ಶಕ ಕಂಟೇನರ್ ಅನ್ನು ತೂಕ ಮಾಡಿದರು. ಅಷ್ಟರಲ್ಲಿಯೇ ಮುಂಜಾನೆ 4.45 ರ ಬೋರ್ಡಿಂಗ್ ಸಮಯ ಸಮೀಪಿಸುತ್ತಿದ್ದಂತೆ ನನ್ನನ್ನು ತಡೆದರು" ಎಂದು ಹುಸೇನ್ ತಿಳಿಸಿದ್ದಾರೆ.
ಹುಸೇನ್ ಅವರು ತಮ್ಮ ಪುಟ್ಟ ಸಾಕುಪ್ರಾಣಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ತಗಲುವ ವೆಚ್ಚವನ್ನು ಸಹ ಅವರು ಭರಿಸಲು ಸಿದ್ದರಿದ್ದರಂತೆ, ಆದರೆ ಅವರ ಬೋರ್ಡಿಂಗ್ ಸಮಯ ಹತ್ತಿರವಾಗುತ್ತಿರುವುದರಿಂದ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಒತ್ತಾಯಿಸಿದಾಗ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರು ಎಂದು ಅವರು ಆರೋಪಿಸಿದ್ದಾರೆ.
"ನಾನು ಹೆಚ್ಚು ಮಾತನಾಡುತ್ತಿರುವುದರಿಂದ ನನಗೆ ಅನುಮತಿ ನೀಡಬಾರದು ಎಂದು ಕಾರ್ಯನಿರ್ವಾಹಕರೊಬ್ಬರು ಹೇಳಿದರು. ಜಾಯ್ ನನ್ನ ಕೈಯಲ್ಲಿ ಹಿಡಿದುಕೊಂಡು ನಾನು ಅಸಹಾಯಕನಾಗಿ ಕಾಯುತ್ತಿದ್ದಾಗ, ಅವರು ಅದನ್ನು ಕ್ಯಾಪ್ಟನ್ ತೆರವುಗೊಳಿಸಬೇಕು ಮತ್ತು ದೆಹಲಿಯಲ್ಲಿ ನನ್ನ ವಿಮಾನ ಬದಲಾಗುವ ಮೊದಲು ಮೀನನ್ನು ಮತ್ತೊಂದು ಸುತ್ತಿನ ತಪಾಸಣೆಗೆ ಒಳಪಡಿಸಬೇಕು ಎಂದು ನಿಯಮಗಳನ್ನು ಹೇಳಲು ಶುರು ಮಾಡಿದರು” ಎಂದು ಹೇಳಿದರು.
ಸಹಾಯ ಮಾಡುವ ಬದಲು, ಅವರು ನನ್ನನ್ನು ಜಾಯ್ ಅವರನ್ನು ಬಿಡುವಂತೆ ಒತ್ತಾಯಿಸುವ ಮೂಲಕ ನನ್ನ ಪ್ರಯಾಣವನ್ನು ನರಕವನ್ನಾಗಿ ಮಾಡಿದರು, ಇದು ನನ್ನ ಹೃದಯವನ್ನು ಮುರಿದಿತು" ಎಂದು ಹುಸೇನ್ ಶುಕ್ರವಾರ ಅಳಲು ತೋಡಿಕೊಂಡರು.
ಘಟನೆಯ ಬಗ್ಗೆ ಏರ್ ಇಂಡಿಯಾದವರು ಹೇಳಿದ್ದೇನು?
ಈ ಪ್ರಯಾಣಿಕ ನೀರಿನ ಪ್ರಮಾಣಕ್ಕೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ. "ಕ್ಯಾಪ್ಟನ್ ಅವರ ಕ್ಲಿಯರೆನ್ಸ್ ಅಂತಿಮವಾಗಿದೆ ಮತ್ತು ಪೆಟ್ಟಿಗೆಯಲ್ಲಿನ ನೀರಿನ ಮಟ್ಟವನ್ನು ಹಾರಾಟಕ್ಕಾಗಿ ತೆರವುಗೊಳಿಸಲಾಗುವುದಿಲ್ಲ ಎಂದು ನಾವು ಅವರಿಗೆ ವಿವರಿಸಲು ಪ್ರಯತ್ನಿಸಿದ್ದೇವೆ. ಅದನ್ನು ತೆರವುಗೊಳಿಸಿದರೂ, ಅವರು ದೆಹಲಿಯಲ್ಲಿ ಮತ್ತೊಂದು ಸುತ್ತಿನ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಆದರೆ ಅವರು ನಮ್ಮ ಮಾತನ್ನು ಕೇಳಲು ಸಿದ್ಧರಿರಲಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಭಾನುವಾರ ಸಂಜೆ ನಗರದಲ್ಲಿರುವ ಪ್ರಯಾಣಿಕರ ಸಂಬಂಧಿಕರಿಗೆ ಮೀನನ್ನು ನೀಡಿದ್ದಾರಂತೆ. ಮೀನು ಸುರಕ್ಷಿತವಾಗಿದೆ ಮತ್ತು ಆರೋಗ್ಯಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ