ಸಾಮಾನ್ಯವಾಗಿ ನಾವು ನಮ್ಮ ಕುಟುಂಬದವರೊಡನೆ (Family) ಯಾವುದಾದರೂ ರಸ್ತೆ ಪ್ರವಾಸಕ್ಕೆಂದು (Trip) ಹೋದರೆ, ಅದರಲ್ಲೂ ನಮ್ಮ ಜೊತೆ ಕಾರಿನಲ್ಲಿ ಅಪ್ಪ-ಅಮ್ಮ ಅಥವಾ ಅತ್ತೆ-ಮಾವ ಹೀಗೆ ಯಾರಾದರೂ ಹಿರಿಯರು ಇದ್ದರಂತೂ ಮುಗಿದೇ ಹೋಯಿತು. ಪ್ರವಾಸದುದ್ದಕ್ಕೂ ಅವರ ಜೀವನದಲ್ಲಿ ನಡೆದ ಹಳೆಯ ಘಟನೆಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಸುಂದರವಾದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಮಾತಾಡಿ ಮಾತಾಡಿ ಸುಸ್ತಾದಾಗ ಸೀಟಿನ ಮೇಲೆ ಸ್ವಲ್ಪ ತಲೆಯನ್ನು ಪಕ್ಕದಲ್ಲಿ ಕುಳಿತಿರುವವರ ಭುಜದ ಮೇಲೆ ಇಟ್ಟುಕೊಂಡು ಮಗುವಿನಂತೆ ಮಲಗಿ (Sleep) ಬಿಡುತ್ತಾರೆ.
ನಂತರ ಮತ್ತೆ ನಿದ್ದೆಯಿಂದ ಎದ್ದೇಳುವುದು, ಚಹಾ, ಕಾಫಿ ಅಂತ ಕಾರು ನಿಲ್ಲಿಸಿ ಹೋಟೆಲ್ ನಲ್ಲಿ ಕುಡಿದು ಮತ್ತೆ ಮುಂದಕ್ಕೆ ಸಾಗುವುದು. ಒಟ್ಟಿನಲ್ಲಿ ಕುಟುಂಬದಲ್ಲಿನ ಹಿರಿಯರ ಜೊತೆಗೆ ಹೋಗುವ ರಸ್ತೆ ಪ್ರವಾಸಗಳು ತುಂಬಾನೇ ಮಜವಾಗಿರುತ್ತವೆ ಮತ್ತು ಅಷ್ಟೇ ಅನೇಕ ಸ್ವಾರಸ್ಯಕರ ಜೀವನದ ಅನುಭವಗಳನ್ನು ತಿಳಿದುಕೊಳ್ಳಲು ಸಮಯ ಸಿಗುತ್ತದೆ. ಅರೇ ಈಗೇಕೆ ಇದನ್ನೆಲ್ಲಾ ನೆನಪಿಸಿ ನಮಗೆ ಹೊಟ್ಟೆ ಉರಿಸ್ತಾ ಇದ್ದೀರಾ ಅಂತ ನೀವು ಅಂದುಕೊಳ್ಳಬಹುದು.
ವಿಷಯ ಏನೆಂದರೆ ಇಲ್ಲೊಬ್ಬ ವ್ಯಕ್ತಿ ಹೀಗೆ ರಸ್ತೆ ಪ್ರವಾಸಕ್ಕೆ ಹೋದಾಗ ತಮ್ಮ ಕಾರಿನಲ್ಲಿ ಅವರ ತಂದೆ ಮತ್ತು ಮಾವ ಇಬ್ಬರು ಹೇಗೆ ಚಿಕ್ಕ ಮಕ್ಕಳಂತೆ ಮುದ್ದಾಗಿ ಮಲಗಿದ್ದಾರೆ ಅನ್ನೋದರ ಫೋಟೋವನ್ನು ಅವರಿಗೆ ತಿಳಿಯದಂತೆ ಕ್ಲಿಕ್ಕಿಸಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೇಶದ 10 ಸುಂದರ ರಾಷ್ಟ್ರೀಯ ಉದ್ಯಾನವನಗಳಿವು
ಕಾರಿನ ಹಿಂದಿನ ಸೀಟಿನಲ್ಲಿ ಒಳ್ಳೆ ಮಕ್ಕಳಂತೆ ಮಲಗಿರುವ ಅಪ್ಪ ಮತ್ತು ಮಾವ
ವ್ಯಕ್ತಿಯೊಬ್ಬರು ಹೀಗೆ ರಸ್ತೆ ಪ್ರವಾಸಕ್ಕೆ ಅಂತ ಹೋದಾಗ ತಮ್ಮ ತಂದೆ ಮತ್ತು ಮಾವ ಅವರ ಕಾರಿನ ಹಿಂದಿನ ಸೀಟಿನಲ್ಲಿ ಪ್ರಪಂಚದ ಅರಿವೇ ಇಲ್ಲದಂತೆ ಮುದ್ದಾಗಿ ಮಲಗಿರುವ ಹೃದಯಸ್ಪರ್ಶಿ ಫೋಟೋವನ್ನು ಕ್ಲಿಕ್ಕಿಸಿ ಅದನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ ಬಳಕೆದಾರರಾದ ಮಂದಾರ್ ನಾಟೇಕರ್ ಅವರು ತಮ್ಮ ತಂದೆ ಮತ್ತು ಮಾವ ಇಬ್ಬರು ಕಾರಿನಲ್ಲಿ ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿ "ಇಬ್ಬರೂ ಅಪ್ಪಂದಿರನ್ನು ರಸ್ತೆ ಪ್ರವಾಸಕ್ಕೆ ಕರೆದೊಯ್ಯುವುದು ಇಬ್ಬರು ಚಿಕ್ಕ ಮಕ್ಕಳನ್ನು ಕರೆದೊಯ್ಯುವುದಕ್ಕಿಂತ ಏನೂ ಕಡಿಮೆಯಿಲ್ಲ. ಸುಸ್ತಾದಾಗ ಪ್ರಯಾಣದಲ್ಲಿ ನಿದ್ದೆ, ನಿದ್ದೆಯಿಂದ ಎಚ್ಚರವಾದಾಗ ಅವರಿಗೆ ಆಹಾರ, ಚಹಾ, ಕಾಫಿ ಮತ್ತು ಲೂ ವಿರಾಮವನ್ನು ಬಯಸುತ್ತಾರೆ, ನಂತರ ಮತ್ತೆ ನಿದ್ದೆ. ಹೀಗೆ ಆ ಚಕ್ರವು ಪುನರಾವರ್ತನೆಯಾಗುತ್ತದೆ. ಈ ಮಧ್ಯೆ ಅವರ ಹಿಂದಿನ ಕಥೆಗಳು ಮತ್ತು ಹಳೆಯ ನೆನಪುಗಳು... ಒಳ್ಳೆ ಮಜಾ!" ಅಂತ ಸುಂದರವಾಗಿ ಶೀರ್ಷಿಕೆ ಸಹ ಬರೆದಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಹೃದಯಸ್ಪರ್ಶಿ ಫೋಟೋ
ಈ ಹೃದಯಸ್ಪರ್ಶಿ ಫೋಟೋವನ್ನು 83,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಇದಕ್ಕೆ 1,200ಕ್ಕೂ ಹೆಚ್ಚು ಲೈಕ್ ಗಳು ಸಹ ಬಂದಿವೆ. ನೆಟ್ಟಿಗರು ಈ ಫೋಟೋವನ್ನು ತುಂಬಾನೇ ಇಷ್ಟಪಟ್ಟಿದ್ದಾರೆ, ಅನೇಕರು ಇದೇ ರೀತಿಯ ತಮ್ಮ ಹಳೆಯ ನೆನಪುಗಳನ್ನು ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಓಹ್! ಅವರಿಬ್ಬರನ್ನೂ ಮತ್ತು ನಿಮ್ಮನ್ನು ಆ ದೇವರು ಆಶೀರ್ವದಿಸಲಿ ಮತ್ತು ನೀವೂ ಸಹ ಈ ಫೋಟೋವನ್ನು ತುಂಬಾನೇ ಪ್ರೀತಿಯಿಂದ ಮತ್ತು ಗೌರವದಿಂದ ಕ್ಲಿಕ್ಕಿಸಿದ್ದೀರಿ. ಇನ್ನೂ ಅನೇಕ ಅದ್ಭುತ ಕ್ಷಣಗಳನ್ನು ನೀವು ಹೀಗೆ ಕ್ಯಾಮೆರಾದಲ್ಲಿ ಸೆರೆ ಹಿಡಿಯಿರಿ" ಎಂದು ಹೇಳಿದರು.
ಇನ್ನೊಬ್ಬರು ಈ ಫೋಟೋ ನೋಡಿ "ಇದು ತುಂಬಾನೇ ಮುದ್ದಾದ ಫೋಟೋ! ನನ್ನ ನೆಚ್ಚಿನ ಪ್ರಯಾಣದ ಸ್ನೇಹಿತರು ನನ್ನ ತಂದೆ ಮತ್ತು ಮಾವ ಮತ್ತು ಅವರಿಬ್ಬರು ಬಹುತೇಕ ಒಂದೇ ರೀತಿ ವರ್ತಿಸುತ್ತಾರೆ” ಅಂತ ಕಾಮೆಂಟ್ ಮಾಡಿದ್ದಾರೆ. ಮೂರನೆಯ ಬಳಕೆದಾರರು ಫೋಟೋ ನೋಡಿ "ನಾನು ಇಂದು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಅತ್ಯುತ್ತಮ ಫೋಟೋ ಇದು" ಅಂತ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ