ಈಗಂತೂ ಕೆಲಸದ ಒತ್ತಡದಲ್ಲಿ ಮತ್ತು ಸಂಸಾರದ ಜಂಜಾಟದಲ್ಲಿ ಅನೇಕರಿಗೆ ಬೆಳಿಗ್ಗೆ ಏನು ತಿಂಡಿ ಮಾಡಿದ್ದೇವೆ ಅನ್ನೋದೆ ಎಷ್ಟೋ ಬಾರಿ ಮರೆತು ಹೋಗುತ್ತದೆ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ, ಏಕೆಂದರೆ ಕೆಲವೊಬ್ಬರ ನೆನಪಿನ ಶಕ್ತಿ(Memory Power) ತುಂಬಾನೇ ಚುರುಕಾಗಿರುತ್ತದೆ. ಆದರೂ ಎಷ್ಟೋ ಬಾರಿ ನಾವು ಮನೆಯಿಂದ ಇಂತಹ ಸಾಮಾನುಗಳನ್ನು ತರಬೇಕು ಅಂತ ಮಾರುಕಟ್ಟೆಗೆ ಹೋಗಿ, ಅಲ್ಲಿಂದ ಮತ್ತೆ ಹೆಂಡತಿಗೆ ಕರೆ ಮಾಡಿ ‘ಏನೋ ತರಲು ಹೇಳಿದ್ದೆ ನೀನು ಏನದು?’ ಅಂತ ಕೇಳಿರುವುದು ಇರುತ್ತದೆ. ಇದಷ್ಟೇ ಅಲ್ಲ, ಕೆಲವೊಮ್ಮೆ ಗಾಡಿ ಶುರು ಮಾಡಿಕೊಂಡು ಹಿಂದೆ ಹೆಂಡತಿ ಬೈಕ್ ಹತ್ತಿ ಕುಳಿತುಕೊಂಡಿದ್ದಾರೋ ಇಲ್ಲವೋ ಅಂತ ಸಹ ನೆನಪಿಗೆ ಬಾರದೇ ಬೈಕ್ (Bike) ಶುರು ಮಾಡಿಕೊಂಡು ಹೋಗಲು ರೆಡಿಯಾಗಿರುತ್ತೇವೆ. ಹೀಗೆ ಒಂದೇ, ಎರಡೇ, ದಿನನಿತ್ಯದಲ್ಲಿ ನಾವು ತುಂಬಾ ವಿಷಯಗಳನ್ನು ಕ್ಷಣ ಮಾತ್ರದಲ್ಲಿ ಮರೆತು ಬಿಡುತ್ತೇವೆ. ಹೌದು, ಬಿಡಿ ಎಲ್ಲವನ್ನು ಈ ಪುಟ್ಟ ತಲೆಯಲ್ಲಿ ನೆನಪಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವೇ ಅಂತ ಹೇಳಬಹುದು.
ಥೈಲ್ಯಾಂಡ್ ನಲ್ಲಿ ನಡೆದ ಘಟನೆ ಏನು ಗೊತ್ತಾ?
ಇಂತಹದೇ ಒಂದು ಘಟನೆ ದೂರದ ಥೈಲ್ಯಾಂಡ್ ನಲ್ಲಿ ನಡೆದಿದೆ ನೋಡಿ. ವ್ಯಕ್ತಿಯೊಬ್ಬ ರಸ್ತೆ ಪ್ರವಾಸದ ಸಮಯದಲ್ಲಿ ಆಕಸ್ಮಿಕವಾಗಿ ತನ್ನ ಹೆಂಡತಿಯನ್ನು ಅಲ್ಲಿಯೇ ಬಿಟ್ಟು, ದೂರ ಹೋಗಿದ್ದಾನೆ. ಎಂದರೆ ಅವರು ಸುಮಾರು 12 ಮೈಲಿಗಳಿಗಿಂತ ಹೆಚ್ಚು ಎಂದರೆ 19.31 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾದ ಸಂದರ್ಭ ಪತ್ನಿಗೆ ಬಂದೊದಗಿದೆ ಅಂತ ಹೇಳಬಹುದು.
ಪತಿ-ಪತ್ನಿ ಇಬ್ಬರು ತಮ್ಮ ಸ್ವಗ್ರಾಮಕ್ಕೆ ಹೋಗುವಾಗ ಈ ಘಟನೆ ನಡೆದಿದೆ..
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 55 ವರ್ಷದ ಬೂಂಟಮ್ ಚೈಮೂನ್ ಮತ್ತು ಅವರ 49 ವರ್ಷದ ಅವರ ಪತ್ನಿ ಅಮ್ನುಯ್ ಚೈಮೂನ್ ಅವರು ಭಾನುವಾರ ಮಹಾ ಸರಖಮ್ ಪ್ರಾಂತ್ಯದ ತಮ್ಮ ಸ್ವಗ್ರಾಮದಲ್ಲಿ ರಜಾದಿನಗಳನ್ನು ಕಳೆಯಲು ಬಯಸಿ ರಸ್ತೆ ಪ್ರವಾಸವನ್ನು ಕೈಗೊಂಡರು.
ತ್ವರಿತವಾದ ಶೌಚಾಲಯ ವಿರಾಮ ತೆಗೆದುಕೊಳ್ಳಲು ಪತಿ ಮತ್ತು ಪತ್ನಿ ಇಬ್ಬರು ಬೆಳಿಗ್ಗೆ 3 ಗಂಟೆಗೆ ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದರು. ಏತನ್ಮಧ್ಯೆ, ಸುತ್ತಲೂ ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲದ ಕಾರಣ, ಮಹಿಳೆ ಕಾರಿನಿಂದ ಹೊರ ಬಂದು ಮೂತ್ರವಿಸರ್ಜನೆ ಮಾಡಲು ಹತ್ತಿರದ ಕಾಡಿಗೆ ತೆರಳಿದರು. ಆದಾಗ್ಯೂ, ಅವಳು ವಾಹನದಿಂದ ಇಳಿಯುವುದನ್ನು ಪತಿರಾಯ ಗಮನಿಸಲಿಲ್ಲ. ಅವಳು ಹಿಂದಿರುಗಿದಾಗ ಆಕೆಯ ಕಾರು ಮತ್ತು ಗಂಡ ಇಬ್ಬರು ಆ ಸ್ಥಳದಲ್ಲಿ ಇರಲಿಲ್ಲ. ತನ್ನ ಗಂಡ ತನ್ನನ್ನು ಬಿಟ್ಟು ಹೋಗಿದ್ದಾರೆ ಅಂತ ಅರಿತುಕೊಂಡು ತುಂಬಾನೇ ಕಕ್ಕಾಬಿಕ್ಕಿಯಾದರು.
ಪತಿ ತನ್ನನ್ನು ಮರೆತು ಬಿಟ್ಟು ಹೋದ ಮೇಲೆ ಪತ್ನಿ ಮಾಡಿದ್ದೇನು?
ತನ್ನ ಗಂಡನಿಗೆ ಬೇಗ ಕರೆ ಮಾಡಲು ಸಹ ಆಕೆ ತನ್ನ ಮೊಬೈಲ್ ಫೋನ್ ಅನ್ನು ಕಾರಿನಲ್ಲಿಯೇ ಮರೆತ್ತಿದ್ದಳು. ತುಂಬಾನೇ ಕತ್ತಲಾಗಿದ್ದರಿಂದ, ಮಹಿಳೆ ತುಂಬಾ ಭಯಭೀತಳಾದಳು ಮತ್ತು ಗೊಂದಲಕ್ಕೊಳಗಾದಳು ಅಂತ ಹೇಳಬಹುದು. ಆದರೆ ಕೆಲವು ನಿಮಿಷಗಳ ನಂತರ ನಡೆದುಕೊಂಡು ಹೋಗಲು ಆಕೆ ನಿರ್ಧರಿಸಿದಳು.
ಇದನ್ನೂ ಓದಿ: ಪ್ರೀತಿಸಿ ಮದುವೆ ಆದಮೇಲೆ ಗಂಡನಿಗೆ ಕಾದಿತ್ತು ಹೆಂಡತಿಯಿಂದ ಒಂದು ಶಾಕ್!
ಅವರು ಸುಮಾರು 20 ಕಿಲೋ ಮೀಟರ್ ನಡೆದುಕೊಂಡು ಬೆಳಿಗ್ಗೆ 5 ಗಂಟೆಗೆ ಕಬಿನ್ ಬುರಿ ಜಿಲ್ಲೆಯನ್ನು ತಲುಪಿದರು. ಅದೃಷ್ಟವಶಾತ್, ಅವಳು ಅಲ್ಲಿಗೆ ಹೋಗಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಯಿತು ಮತ್ತು ಅಲ್ಲಿಂದ ಆಕೆ ತನ್ನ ಗಂಡನಿಗೆ ಕರೆ ಮಾಡಲು ಮುಂದಾದಳು. ಆಗ ಅವಳು ತನ್ನ ಗಂಡನ ಮೊಬೈಲ್ ಸಂಖ್ಯೆಯನ್ನು ನೆನಪಿಸಿಕೊಳ್ಳದ ಕಾರಣ, ಅವಳು ತನ್ನ ಸ್ವಂತ ಮೊಬೈಲ್ ಸಂಖ್ಯೆಗೆ ಕನಿಷ್ಠ 20 ಬಾರಿ ಡಯಲ್ ಮಾಡಿದಳು ಆದರೆ ಆ ಕರೆಯನ್ನು ಯಾರೂ ಸ್ವೀಕರಿಸಲಿಲ್ಲ.
ಇಷ್ಟಾದರೂ ಸಹ ಪತಿಯ ಜೊತೆ ವಾದಿಸದ ಪತ್ನಿ
ಬೆಳಿಗ್ಗೆ 8 ಗಂಟೆ ಸುಮಾರಿಗೆ, ಪೊಲೀಸರ ಸಹಾಯದಿಂದ ಅವಳು ತನ್ನ ಗಂಡನನ್ನು ಸಂಪರ್ಕಿಸಲು ಸಾಧ್ಯವಾಯಿತು. ಇಷ್ಟು ಹೊತ್ತು ತನ್ನ ಹೆಂಡತಿ ತನ್ನ ಕಾರಿನಲ್ಲಿಲ್ಲ ಎಂದು ಗಂಡನಿಗೆ ಯಾವುದೇ ಸುಳಿವು ಇರಲಿಲ್ಲ ಮತ್ತು ಅವಳು ಹಿಂದಿನ ಸೀಟಿನಲ್ಲಿ ಚೆನ್ನಾಗಿ ನಿದ್ರಿಸುತ್ತಿದ್ದಾಳೆ ಎಂಬ ತಿಳಿದುಕೊಂಡಿದ್ದರಂತೆ. ಆ ವೇಳೆಗಾಗಲೇ ಅವರು 159.6 ಕಿಲೋ ಮೀಟರ್ ದೂರದಲ್ಲಿರುವ ಕೊರಾಟ್ ಪ್ರಾಂತ್ಯಕ್ಕೆ ಹೋಗಿ ತಲುಪಿದ್ದರು ಎಂದು ಡೈಲಿ ನ್ಯೂಸ್ ವರದಿ ಮಾಡಿದೆ.
ಏನಾಯಿತು ಅಂತ ಗಂಡನಿಗೆ ತಿಳಿದ ನಂತರ ಕೂಡಲೇ ತನ್ನ ಹೆಂಡತಿಯನ್ನು ಕರೆತರಲು ವೇಗವಾಗಿ ಬಂದರು. ನಂತರ ತಾನು ಮಾಡಿದ ಕೆಲಸಕ್ಕೆ ತುಂಬಾನೇ ಬೇಸರ ಪಟ್ಟುಕೊಂಡರು ಮತ್ತು ತನ್ನ ಹೆಂಡತಿಗೆ ಕ್ಷಮೆ ಕೇಳಿದರು. ಅಷ್ಟೊಂದು ಕಷ್ಟವಾದರೂ ಸಹ ಆ ಮಹಿಳೆ ಗಂಡನೊಂದಿಗೆ ವಾದಿಸಲಿಲ್ಲ. ಇಬ್ಬರು ಮದುವೆಯಾಗಿ 27 ವರ್ಷಗಳಾಗಿದ್ದು, ಇವರಿಗೆ 26 ವರ್ಷದ ಮಗ ಇದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ