Viral Video: ಮುಚ್ಚಳ ಗಂಟಲಲ್ಲಿ ಸಿಕ್ಕಿ ನರಳಾಡಿದ ವಿದ್ಯಾರ್ಥಿಯ ಪ್ರಾಣ ಉಳಿಸಿದ ಶಿಕ್ಷಕಿ!

ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ತಮ್ಮ ಸಮಯೋಚಿತವಾದ ಪ್ರಜ್ಞೆಯ ಮೂಲಕ ತಮ್ಮ ತರಗತಿಯಲ್ಲಿ ಓದುತ್ತಿದ್ದ ಮೂರನೇ ವರ್ಗದ ವಿದ್ಯಾರ್ಥಿಯೋರ್ವನ ಪ್ರಾಣ ಉಳಿಸಿದ್ದನ್ನು ನೋಡಬಹುದು.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಸಾಮಾನ್ಯವಾಗಿ ಶಿಕ್ಷಕರು (Teachers) ದೇವರಿಗೆ ಸಮಾನ ಎಂದು ನಂಬಲಾಗುತ್ತದೆ. ನಿಜವಾದ ಶಿಕ್ಷಕರಾದವರು ತಮ್ಮ ತರಗತಿಯ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಅವರು ಮುಂದೆ ಉನ್ನತ ವಿದ್ಯೆಗಳಿಸಿ ಜೀವನದಲ್ಲಿ ಯಶಸ್ವಿಯಾಗಲೆಂದು ತಮ್ಮ ಗರಿಷ್ಠ ಪ್ರಯತ್ನ ಪಟ್ಟು ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ ಅನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ, ಶಿಕ್ಷಕರು ಕೇವಲ ಕಲಿಸುವುದಷ್ಟಕ್ಕೆ ಸೀಮಿತರೇ..? ಖಂಡಿತ ಇಲ್ಲ ಎನ್ನುತ್ತದೆ ಈ ವಿಡಿಯೋ (Video). ಹೌದು, ಸದ್ಯ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ತಮ್ಮ ಸಮಯೋಚಿತವಾದ ಪ್ರಜ್ಞೆಯ ಮೂಲಕ ತಮ್ಮ ತರಗತಿಯಲ್ಲಿ ಓದುತ್ತಿದ್ದ ಮೂರನೇ ವರ್ಗದ ವಿದ್ಯಾರ್ಥಿಯೋರ್ವನ ಪ್ರಾಣ ಉಳಿಸಿದ್ದನ್ನು ನೋಡಬಹುದು. ಗುಡ್ ನ್ಯೂಸ್ ಮೂವ್ಮೆಂಟ್ಸ್ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಅದು ಈಗ ಸಖತ್ ವೈರಲ್ (Viral) ಆಗಿದೆ. ಆ ವಿಡಿಯೋಗೆ ಮೂರು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ದೊರೆತಿರುವುದಾಗಿ ತಿಳಿದುಬಂದಿದೆ.

ವಾಸ್ತವದಲ್ಲಿ, ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಅಮೆರಿಕದ ನ್ಯೂಜೆರ್ಸಿಯ ಈಸ್ಟ್ ಆರೆಂಜ್ ಕಮ್ಯೂನಿಟಿ ಚಾರ್ಟರ್ ಶಾಲೆಯ ರಾಬರ್ಟ್ ಎಂಬ ಮೂರನೇ ತರಗತಿ ಓದುತ್ತಿದ್ದ ಬಾಲಕನೇ ಪ್ರಾಣ ಉಳಿಸಿಕೊಂಡ ಅದೃಷ್ಟವಂತನಾಗಿದ್ದರೆ, ಆ ಬಾಲಕನ ಪ್ರಾಣ ಉಳಿಸಿರುವ ಶಿಕ್ಷಕಿಯ ಹೆಸರು ಜಾನೀಸ್ ಜೆಂಕಿನ್ಸ್.

ಗಂಟಲಲ್ಲಿ ಸಿಲುಕಿದ ಮುಚ್ಚಳ

ಅಸಲಿಗೆ ನಡೆದ ಘಟನೆ ಏನಂದರೆ ರಾಬರ್ಟ್ ತರಗತಿಯೊಳಗೆ ಕುಳಿತಾಗ ನೀರು ಕುಡಿಯಬೇಕೆಂದು ತನ್ನ ನೀರಿನ ಬಾಟಲ್ ಎತ್ತಿಕೊಂಡಿದ್ದಾನೆ. ಆದರೆ, ಕೈಗಳಿಂದ ಮುಚ್ಚಳ ತೆಗೆಯುವ ಬದಲು ಬಾಯಿಯಿಂದ ಮುಚ್ಚಳ ಕಚ್ಚಿ ತೆಗೆಯಲು ಪ್ರಯತ್ನಿಸಿದ್ದಾನೆ. ಆಗ ಆಕಸ್ಮಿಕವಾಗಿ, ಮುಚ್ಚಳ ತೆರೆದುಕೊಂಡು ಆ ಬಾಲಕನ ಗಂಟಲಿನಲ್ಲಿ ಸಿಲುಕಿ ಹಾಕಿಕೊಂಡಿದೆ.

ಭಯಭೀತನಾದ ಬಾಲಕ

ಈ ಘಟನೆಯಿಂದ ಹುಡುಗ ಭಯಭೀತನಾಗಿದ್ದು ನರಳಾಡಿದ್ದಾನೆ. ತದನಂತರ ನೇರವಾಗಿ ತನ್ನ ಶಿಕ್ಷಕಿಯ ಬಳಿ ಬಂದು ಕೈಗಳನ್ನು ಗಂಟಲಿನೆಡೆ ತೋರುತ್ತ ತನ್ನ ಅವಸ್ಥೆಯ ಬಗ್ಗೆ ಅಲವತ್ತುಕೊಂಡಿದ್ದಾನೆ. ಆ ಕೂಡಲೇ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಹಿಸಿದ ಶಿಕ್ಷಕಿ ಜೆಂಕಿನ್ಸ್, ರಾಬರ್ಟ್‌ನನ್ನು ಕೂರಿಸಿ ಅವನ ಮೇಲೆ ಹೈಮ್ಲಿಚ್ ಪ್ರಥಮ ಚಿಕಿತ್ಸಾ ವಿಧಾನವನ್ನು ಪ್ರಯೋಗಿಸಿ ಬಲು ಸುರಕ್ಷಿತವಾಗಿ ಹುಡುಗನ ಗಂಟಲಿನಿಂದ ಮುಚ್ಚಳ ಹೊರಬರುವಂತೆ ಮಾಡಿ ಅವನ ಪ್ರಾಣ ಉಳಿಸಿದ್ದಾರೆ.

ನೀರಿನ ಬಾಟಲಿ ಮುಚ್ಚಳ ತೆಗೆಯುವಾಗ ಅವಾಂತರ

ಈ ಘಟನೆ ಬಗ್ಗೆ ಪ್ರತಿಕ್ರಯಿಸಿರುವ ರಾಬರ್ಟ್ "ನಾನು ನೀರಿನ ಬಾಟಲಿಯ ಮುಚ್ಚಳ ತೆಗೆಯಲು ಹಲ್ಲಿನಿಂದ ಕಚ್ಚುತ್ತಿದ್ದೆ, ನಾನು ಬಾಟಲ್ ಅನ್ನು ಸ್ವಲ್ಪ ಒತ್ತಿದ್ದೆ, ಆಗ ಮುಚ್ಚಳವು ಹಾರಿ ನನ್ನ ಗಂಟಲಿನಲ್ಲಿ ಸಿಲುಕಿ ಹಾಕಿಕೊಂಡಿತು" ಎಂದು ಡೈಲಿ ಮೇಲ್ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

ಒಟ್ಟಿನಲ್ಲಿ ಆ ಶಿಕ್ಷಕಿಯು ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ಆತಂಕ ಪಡದೆ ಬಲು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ತಾನು ಈ ಹಿಂದೆ ಪಡೆದಿದ್ದ ತರಬೇತಿಯ ಆಧಾರದ ಮೇಲೆ ಹೈಮ್ಲಿಚ್ ವಿಧಾನ ಬಳಸಿ ಮುಚ್ಚಳ ಹೊರತೆಗೆಯಲು ಯಶಸ್ವಿಯಾಗಿದ್ದು ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್

ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ಶಿಕ್ಷಕಿಯ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸಾಕಷ್ಟು ಜನರು ಶಿಕ್ಷಕಿ ತೋರಿದ ಸಮಯ ಪ್ರಜ್ಞೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಜೆಂಕಿನ್ಸ್ ಐದು ವರ್ಷಗಳ ಕಲಿಸುವಿಕೆಯ ಅನುಭವ ಹೊಂದಿದ್ದು ತಮ್ಮ ಈ ಅವಧಿಯಲ್ಲಿ ಅವರು ಈಗಾಗಲೇ ಪ್ರಥಮ ಚಿಕಿತ್ಸಾ ವಿಧಾನ ಹಾಗೂ ಸಿಪಿಆರ್‌ನಲ್ಲಿ ತರಬೇತಿ ಪಡೆದಿದ್ದಾರೆ. ಇತ್ತೀಚಿಗಷ್ಟೆ ಅವರು ಮತ್ತೊಮ್ಮೆ ಈ ಕೋರ್ಸುಗಳನ್ನು ಪುನರಾವರ್ತಿಸಿಕೊಂಡಿದ್ದರು.


ಹೈಮ್ಲಿಚ್ ವಿಧಾನ ಎಂದರೇನು?

ಇದೊಂದು ವಿಶಿಷ್ಟ ಬಗೆಯ ವಿಧಾನವಾಗಿದ್ದು ಇದರ ಮೂಲಕ ಯಾವುದೇ ವ್ಯಕ್ತಿಯ ಗಂಟಲಿನ ಭಾಗದಲ್ಲಿ ಯಾವುದಾದರೂ ವಸ್ತು ಸಿಲುಕಿಕೊಂಡಿದ್ದರೆ, ಅದನ್ನು ಆ ವ್ಯಕ್ತಿಯ ಮೇಲೆ ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ವಸ್ತುವನ್ನು ಹೊರಬರುವಂತೆ ಮಾಡುವುದಾಗಿದೆ.

ಇದನ್ನೂ ಓದಿ: Viral Video: ಬೆಕ್ಕಿನ ಜೊತೆ ಫ್ರೆಂಡ್​ಶಿಪ್ ಮಾಡೋಕೆ ನಾಯಿಯ ಕಸರತ್ತು..! ಏನೇನು ಮಾಡುತ್ತೆ ನೋಡಿ

ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಮಾಡಿದಾಗ ಕಿಬ್ಬೊಟ್ಟೆಯಲ್ಲಿರುವ ಒತ್ತಡಗಳು ವ್ಯಕ್ತಿಯ ಡಯಾಫ್ರಾಮ್ ಅನ್ನು ಎತ್ತುತ್ತವೆ ಮತ್ತು ಅದರಿಂದ ಆ ವ್ಯಕ್ತಿಯ ಶ್ವಾಸಕೋಶದಿಂದ ಗಾಳಿಯು ರಭಸದಿಂದ ಹೊರಹಾಕಲ್ಪಡುತ್ತದೆ. ಹೀಗೆ ಹೊರಬರುವ ಗಾಳಿಯು ಗಂಟಲಿನಲ್ಲಿ ಸಿಲುಕಿ ಹಾಕಿಕೊಂಡಿರಬಹುದಾದ ವಸ್ತುವನ್ನು ಹೊರಗೆಳೆದು ತರಲು ಕಾರಣವಾಗುತ್ತದೆ. ಇದನ್ನು ನುರಿತ ಅಥವಾ ಇದರಲ್ಲಿ ಸರಿಯಾಗಿ ತರಬೇತಿ ಪಡೆದವರು ಕ್ರಮಬದ್ಧವಾಗಿ ಮಾತ್ರ ಮಾಡಲು ಸಾಧ್ಯವಿರುತ್ತದೆ. ಆಪತ್ ಕಾಲದಲ್ಲಿ ಜೀವ ಉಳಿಸುವ ಕೆಲವು ಅದ್ಭುತ ವಿದ್ಯೆಗಳ ಪೈಕಿ ಇದೂ ಒಂದು ಹೇಳಬಹುದು.
Published by:Divya D
First published: