NEET Exam: ನೀಟ್​ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಚಹಾ ಮಾರಾಟಗಾರ ಪಾಸ್, ದೆಹಲಿಯ ಏಮ್ಸ್​ನಲ್ಲಿ ಸಿಗ್ತು ಎಂಟ್ರಿ

ಅಸ್ಸಾಂನ ಬಜಾಲಿ ಜಿಲ್ಲೆಯ ಚಹಾ ಮಾರಾಟಗಾರ ರಾಹುಲ್ ದಾಸ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈಗ ದೇಶದ ಪ್ರತಿಷ್ಠಿತ ದೆಹಲಿಯ ಏಮ್ಸ್ ನಲ್ಲಿ ಸೀಟು ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
​ಅಸ್ಸಾಂ (ಫೆ.7): ಮನಸ್ಸಿದ್ದರೆ ಮಾರ್ಗ  ಅನ್ನೋ ಮಾತು ಎಷ್ಟು ಸತ್ಯ ಅಲ್ವಾ? ಬಡವನೇ ಇರಲಿ ಅಥವಾ ಶ್ರೀಮಂತನೇ ಆಗಿರಲಿ, ಮನಸ್ಸಿದ್ದರೆ ಎಲ್ಲವನ್ನೂ ಸಾಧಿಸಬಹುದು. ಅಸ್ಸಾಂನ ಈ ಚಹಾ ಮಾರಾಟಗಾರ (Tea vendor) ನೇ ಇದಕ್ಕೊಂದು ಸ್ಪೂರ್ತಿದಾಯಕ ಉದಾಹರಣೆ. ಡಾಕ್ಟರ್ (Doctor)​ ಆಗೋ ಆಸೆ ಹೊತ್ತು ಕಷ್ಟಪಟ್ಟು ಓದಿ ನೀಟ್​ ಪರೀಕ್ಷೆ (NEET Exam) ಪಾಸ್​ ಮಾಡಿದ್ದಾನೆ ಈ ಯುವಕ. ಬಜಾಲಿ ಜಿಲ್ಲೆಯಲ್ಲಿ ತನ್ನ ತಾಯಿ ನಡೆಸುತ್ತಿದ್ದ ಚಹಾ ಅಂಗಡಿಯಲ್ಲಿ ಗ್ರಾಹಕರಿಗೆ ಟೀ ಕೊಡುವ ಕೆಲಸ ಮಾಡ್ತಿದ್ದ ರಾಹುಲ್​ ದಾಸ್​. ತಾಯಿ ಕಷ್ಟಕ್ಕೂ ಜೊತೆಯಾಗಿದ್ದ  24 ವರ್ಷದ ರಾಹುಲ್​ ದಾಸ್ ಡಾಕ್ಟರ್​ ಹಾಗೋ ಕನಸು ಕಾಣ್ತಿದ್ದ​. ಕಷ್ಟಪಟ್ಟು ಓದುತ್ತಿದ್ದ ಅಸ್ಸಾಂನ (Assam) ರಾಹುಲ್ ದಾಸ್ (Rahul das) ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡುವ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

ಡಾಕ್ಟರ್​ ಆಗೋ ಕನಸಿನ ಬೆನ್ನೇರಿದ ರಾಹುಲ್​

ಅಸ್ಸಾಂನ ಬಜಾಲಿ ಜಿಲ್ಲೆಯ ಚಹಾ ಮಾರಾಟಗಾರ ರಾಹುಲ್ ದಾಸ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈಗ ದೇಶದ ಪ್ರತಿಷ್ಠಿತ ದೆಹಲಿಯ ಏಮ್ಸ್ ನಲ್ಲಿ ಸೀಟು ಪಡೆದಿದ್ದು, ಅವರ ಶ್ರಮ ಅಂತಿಮವಾಗಿ ಫಲ ನೀಡಿದೆ. ರಾಹುಲ್ ದಾಸ್ ಅವರ ಓದಿನ ಪ್ರಯಾಣ ಅತ್ಯಂತ ಕಠಿಣವಾಗಿದ್ದು, ದಾಸ್ ಮತ್ತು ಅವರ ಸಹೋದರ ಇಬ್ಬರೂ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. 11 ವರ್ಷಗಳ ಹಿಂದೆ ಪತಿಯಿಂದ ದೂರವಾದ ರಾಹುಲ್ ದಾಸ್ ಅವರ ತಾಯಿ ತನ್ನ ಇಬ್ಬರು ಗಂಡು ಮಕ್ಕಳನ್ನು ಸಾಕಲು ಚಹಾದ ಅಂಗಡಿ ನಡೆಸುತ್ತಿದ್ದಾರೆ.

ಚಹಾ ಮಾರುತ್ತಲೇ ಓದುತ್ತಿದ್ದ ದಾಸ್​

ಬಡತನದಿಂದಾಗಿ ದಾಸ್ 12ನೇ ತರಗತಿಯ ನಂತರ ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ. ಆದರೆ ವೈದ್ಯನಾಗುವ ಕನಸನ್ನು ಬಿಡಲಿಲ್ಲ. ಜಿಲ್ಲೆಯ ಪಟಾಚಾರ್ಕುಚಿ ಚೌಕ್ ಪ್ರದೇಶದಲ್ಲಿನ ತನ್ನ ತಾಯಿಯ ಅಂಗಡಿಯಲ್ಲಿ ಬರೋ ಗ್ರಾಹಕರಿಗೆ ತಾಯಿ ಮಾಡೋ ಚಹಾ ತಂದು ಕೊಡ್ತಿದ್ದ. ಜೊತೆಗೆ ಅಂಗಡಿಯಲ್ಲೇ ಇದ್ದುಕೊಂಡು ರಾಹುಲ್​ ತನ್ನ ಓದನ್ನು ಮುಂದುವರೆಸುತ್ತಿದ್ದ.

ಇದನ್ನೂ ಓದಿ: NEET Exam: ಇನ್ನಷ್ಟು 'ನೀಟ್' ಆಗಿ ಓದ್ಕೊಳ್ಳಿ, ಮುಂದಕ್ಕೆ ಹೋಯ್ತು ಮಾರ್ಚ್ 12ರ ಪರೀಕ್ಷೆ

ತಾಯಿ ನಮಗಾಗಿ ಕಷ್ಟಪಡುವುದನ್ನು ನಾನು ನೋಡಿದ್ದೇನೆ. ನಮಗೆ ಅಂಗಡಿಯಲ್ಲಿ ಸಹಾಯಕರನ್ನು ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಬಂದ ನಂತರ ನಾನು ಅವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದೆ. ನಾನು ಚಹಾ ಮಾಡಿ ಅದನ್ನು ಮಾರಿದೆ. ಸಮಯ ಸಿಕ್ಕಾಗ ನಾನು ಅಂಗಡಿಯಲ್ಲೇ ಓದಲು ಕುಳಿತುಕೊಳ್ಳುತ್ತೇನೆ ಎಂದು ದಾಸ್ ವಿವರಿಸಿದ್ದಾರೆ.

‘ಹಣವಿಲ್ಲದೆ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದೆ’

2015ರಲ್ಲಿ, ಅವರು ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು ಮತ್ತು ಹಣದ ಕೊರತೆಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದರು. ಆದರೆ ಉನ್ನತ ಶಿಕ್ಷಣಕ್ಕಾಗಿ ಅವರ ಉತ್ಸಾಹ ಎರಡು ವರ್ಷಗಳ ನಂತರ ಪ್ಲಾಸ್ಟಿಕ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಲು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET)ಗೆ ಸೇರಲು ಪ್ರೇರೇಪಿಸಿತು.

ಇದನ್ನೂ ಓದಿ: NEET Exam Result: ರಾಜ್ಯಕ್ಕೆ ಕೀರ್ತಿ ತಂದ ಬಾಗಲಕೋಟೆ ವೈದ್ಯ ಡಾ. ಚಿದಾನಂದ.. ನೀಟ್ ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನ!

ದಾಸ್ ಮೂರು ವರ್ಷಗಳ ನಂತರ ಡಿಪ್ಲೊಮಾದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದರು ಮತ್ತು ಕೋವಿಡ್-19 ಸಾಂಕ್ರಾಮಿಕದ ಮಧ್ಯೆ 2020ರ ಅಕ್ಟೋಬರ್‌ನಲ್ಲಿ 'ಕ್ವಾಲಿಟಿ ಇಂಜಿನಿಯರ್' ಆಗಿ ಗುವಾಹಟಿಯ ಬಹು-ರಾಷ್ಟ್ರೀಯ ಕಂಪನಿಯಲ್ಲಿ ಕೆಲಸವನ್ನು ಪ್ರಾರಂಭಿಸಿದರು.

‘ಇಂಜಿನಿಯರ್ ಕೆಲಸ ತೃಪ್ತಿ ಕೊಡಲಿಲ್ಲ’

ಕ್ವಾಲಿಟಿ ಇಂಜಿನಿಯರ್' ಆಗಿದ್ದರೂ ಕೆಲಸದ ತೃಪ್ತಿಯೇ ಇರಲಿಲ್ಲ. ನಾನು ಯಾವಾಗಲೂ ವೈದ್ಯನಾಗಬೇಕೆಂದು ಬಯಸಿದ್ದೆ. ನನ್ನ ಸೋದರ ಸಂಬಂಧಿಯೊಬ್ಬರು ದಂತ ಶಸ್ತ್ರಚಿಕಿತ್ಸಕರಾಗಿದ್ದಾರೆ ಮತ್ತು ಅವರು ನನಗೆ ಸ್ಫೂರ್ತಿಯಾಗಿದ್ದರು. ಪುಸ್ತಕಗಳನ್ನು ಖರೀದಿಸಲು ನನ್ನ ಬಳಿ ಹಣವಿಲ್ಲದ ಕಾರಣ ನಾನು ನನ್ನ ಕೆಲಸವನ್ನು ಬಿಟ್ಟು ಆನ್‌ಲೈನ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ನೀಟ್ ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ದಾಸ್ ಪಿಟಿಐಗೆ ತಿಳಿಸಿದ್ದಾರೆ. ರಾಹುಲ್​ ದಾಸ್​ ಅವರು ನೀಟ್ ಪರೀಕ್ಷೆಯಲ್ಲಿ 12,068ನೇ ರ್ಯಾಂಕ್ ಪಡೆದಿದ್ದಾರೆ.
Published by:Pavana HS
First published: