Sunday Special Recipe: ಭಾನುವಾರ ಬಂತು ಅಂದ್ರೆ ಸಾಕು ಹೆಚ್ಚಿನ ಜನರಿಗೆ ಬಾಡೂಟದ್ದೇ ನೆನಪು. ರಜೆ ಕೂಡ ಇರುವುದರಿಂದ ಹೊಸ ರುಚಿ ತಯಾರು ಮಾಡೋದು ಒಂಥರ ಖುಷಿ ವಿಚಾರ. ಅದರಲ್ಲೂ, ಈಗ ಮಳೆಯ ವಾತಾವರಣ. ಇಂಥಹ ಸಮಯದಲ್ಲಿ ಚಿಲ್ಲಿ ಚಿಕನ್ ಮಧ್ಯಾಹ್ನದ ಊಟಕ್ಕೆ ಇದ್ರೆ ಅಬ್ಬಾ ಹೇಗಿರತ್ತೆ ಅಲ್ವ. ಇನ್ನು ಚಿಲ್ಲಿ ಚಿಕನ್ ಅಂತ ಹೇಳಿದ ತಕ್ಷಣ ನೆನಪಾಗೋದು ಆಂಧ್ರ ಸ್ಟೈಲ್. ಅದರ ಸ್ಪೈಸಿ ರುಚಿ ಎಲ್ಲರನ್ನು ಸೆಳೆಯತ್ತೆ. ಚಿಕನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಖಾದ್ಯ. ಹಾಗಾದ್ರೆ ಆಂಧ್ರ ಸ್ಟೈಲ್ ಚಿಲ್ಲಿ ಚಿಕನ್ (Andhra Style Spicy Chilli Chicken) ಮಾಡೋದು ಹೇಗೆ. ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಚಿಕನ್ – 500 ಗ್ರಾಂ
ಮೊಟ್ಟೆ- 1
ಕಾರ್ನ್ ಫ್ಲೋರ್ – ಅರ್ಧ ಕಪ್
ಈರುಳ್ಳಿ - 2 ಕಪ್
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸು – 2 ಟೇಬಲ್ ಸ್ಪೂನ್
ಸೋಯಾ ಸಾಸ್ – 1 ಟೇಬಲ್ ಸ್ಪೂನ್
ವಿನೆಗರ್ – 2 ಟೇಬಲ್ ಸ್ಪೂನ್
ಎಣ್ಣೆ – ಅರ್ಧ ಕಪ್
ಕ್ಯಾಪ್ಸಿಕಮ್ – ಅರ್ಧ ಕಪ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಚಿಲ್ಲಿ ಚಿಕನ್ ಮಾಡುವ ವಿಧಾನ
ಯಾವುದೇ ಚಿಕನ್ ಖಾದ್ಯಗಳನ್ನು ತಯಾರಿಸುವಾಗ , ಚಿಕನ್ ತೊಳೆಯುವುದೇ ಒಂದು ದೊಡ್ಡ ಕೆಲಸ. ತೊಳೆಯುವ ವಿಧಾನ ಕೂಡ ಆಹಾರದ ರುಚಿಯಲ್ಲಿ ವ್ಯತ್ಯಾಸವನ್ನ ಉಂಟು ಮಾಡುತ್ತದೆ. ಹಾಗಾಗಿ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಚಿಕನ್ ತೊಳೆದುಕೊಳ್ಳಬೇಕು, ನಂತರ ಮತ್ತೊಮ್ಮೆ ತಣ್ಣನೆಯ ನೀರಿನಲ್ಲಿ ತೊಳೆಯಬೇಕು.
ನಂತರ ಒಂದು ಪಾತ್ರೆಯಲ್ಲಿ ಚಿಕನ್ ಹಾಕಿ ಅದಕ್ಕೆ ಮೊಟ್ಟೆ , ಸ್ವಲ್ಪ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಗೂ ಕಾರ್ನ್ ಫ್ಲೋರ್ ಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ಸರಿಯಾಗಿ ಮಿಶ್ರಣ ಮಾಡಿದ ನಂತರ ಸುಮಾರು 1 ರಿಂದ 2 ಗಂಟೆಗಳ ಕಾಲ ರೆಪ್ರಿಜರೇಟರ್ನಲ್ಲಿ ಇಡಬೇಕು. ಅಲ್ಲದೇ ಚಿಕನ್ ಜೊತೆ ಮಸಾಲೆಗಳು ಸರಿಯಾಗಿ ಮಿಶ್ರಣವಾಗಲು ಸ್ವಲ್ಪ ನೀರನ್ನು ಸಹ ಹಾಕಬಹುದು.
2 ಗಂಟೆಯ ನಂತರ ಚಿಕನ್ ಅನ್ನು ಹೊರಗೆ ತೆಗೆದು ಇಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ , ಹೆಚ್ಚಿನ ಉರಿಯಲ್ಲಿ ಕಾಯಿಸಬೇಕು. ಹಾಗೆಯೇ ಎಣ್ಣೆ ಕಾಯುವ ಸಮಯದಲ್ಲಿ ಜಾಗರೂಕತೆಯಿಂದ ಚಿಕನ್ ನನ್ನು ಬಾಣಲೆಗೆ ಹಾಕಿ ಎಣ್ಣೆಯಲ್ಲಿ ಸರಿಯಾಗಿ ಪ್ರೈ ಮಾಡಬೇಕು. ಅದು ಫ್ರೈ ಆದ ನಂತರ ಹೆಚ್ಚಿನ ಎಣ್ಣೆ ಇದ್ದಲ್ಲಿ ಅದನ್ನು ತೆಗೆಯಬೇಕು. ಯಾಕೆಂದರೆ ಚಿಕನ್ ನಲ್ಲಿ ಹೆಚ್ಚಿನ ಎಣ್ಣೆ ಇದ್ದರೆ ಅದು ಆಹಾರದ ರುಚಿಯನ್ನು ಕೆಡಿಸುತ್ತದೆ.
ಚಿಕನ್ ಸರಿಯಾಗಿ ಪ್ರೈ ಆದ ನಂತರ ಮತ್ತೊಂದು ಬಾಣಲೆಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ , ಎಣ್ಣೆ ಸರಿಯಾಗಿ ಕಾದ ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವ ತನಕ ಹುರಿಯಬೇಕು. ಈರುಳ್ಳಿ ಸರಿಯಾಗಿ ಫ್ರೈ ಆದ ನಂತರ ಅದಕ್ಕೆ ಕ್ಯಾಪ್ಸಿಕಮ್, ಹಸಿಮೆಣಸು ಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ಅಲ್ಲದೇ ನಿಮಗೆ ಚಿಲ್ಲಿ ಚಿಕನ್ ಹೆಚ್ಚು ಸ್ಪೈಸಿ ಬೇಕು ಅಂತ ಇದ್ದಲ್ಲಿ, ಹಸಿ ಮೆಣಸನ್ನು ಸ್ವಲ್ಪ ಹೊತ್ತು ವಿನೆಗರ್ನಲ್ಲಿ ನೆನೆಸಿ ನಂತರ ಬಳಸಬಹುದು.
ಇಷ್ಟೆಲ್ಲ ಆದ ನಂತರ ಈ ಮಿಶ್ರಣಕ್ಕೆ, ತಯಾರಿಸಿಕೊಂಡಿರುವ ಚಿಕನ್, ಸೋಯಾ ಸಾಸ್ , ವಿನೆಗರ್ ಮತ್ತು ಉಪ್ಪನ್ನ ಹಾಕಿ ಮಿಕ್ಸ್ ಮಾಡಬೇಕು. ಅಲ್ಲದೇ ಮಿಕ್ಸ್ ಮಾಡುವಾಗ ಚಿಕನ್, ಸೋಯಾ ಸಾಸ್ ಜೊತೆ ಸರಿಯಾಗಿ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಅಲ್ಲದೇ ತಳ ಹಿಡಿಯುವುದನ್ನು ತಪ್ಪಿಸಲು ಕೈ ಆಡಿಸುತ್ತಲೇ ಇರಬೇಕು. ಹೀಗೆ ಸರಿಯಾಗಿ ಪದಾರ್ಥಗಳು ಬೆಂದರೆ ನಿಮ್ಮ ಸ್ಪೈಸಿ ಆಂಧ್ರ ಸ್ಟೈಲ್ ಚಿಲ್ಲಿ ಚಿಕನ್ ರೆಡಿ.
(ಲೇಖನ: ಸಂಧ್ಯಾ ಎಂ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ