ಟೈಪ್ -2 ಮಧುಮೇಹ (Type-2 Diabetes)ಎಂದರೆ, ಮೆದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದ ಸ್ಥಿತಿ ಅಥವಾ ದೇಹವು ಹಾರ್ಮೋನ್ಗೆ ನಿರೋಧಕವಾಗುವ ಸ್ಥಿತಿಯಾಗಿದೆ. ಟೈಪ್ -2 ಮಧುಮೇಹವನ್ನು ಸಕಾಲಿಕವಾಗಿ ನಿರ್ವಹಿಸದಿದ್ದಲ್ಲಿ, ಆರೋಗ್ಯಕ್ಕೆ ಹಾನಿಯಾಗುವುದು ಖಚಿತ. ಅದಕ್ಕಾಗಿ(Health Experts) ಆರೋಗ್ಯ ತಜ್ಞರು, ಪ್ರೋಟೀನ್(Protein), ಆರೋಗ್ಯಕರ ಕೊಬ್ಬು, ಅಗತ್ಯ ಖನಿಜಗಳು, ವಿಟಮಿನ್ಗಳು ಮತ್ತು ಸಂಕೀರ್ಣ ಕಾರ್ಬ್ಗಳು ಅಧಿಕವಾಗಿರುವ ಸಕ್ಕರೆಯಿಲ್ಲದ (Sugar)ಮತ್ತು ಕಡಿಮೆ ಕಾರ್ಬೋಹೈಡ್ರೇಟ್ವುಳ್ಳ(Carbohydrates) ಆಹಾರ ಸೇವಿಸಲು ಶಿಫಾರಸು ಮಾಡುತ್ತಾರೆ.
ಕಡಿಮೆ ಅಥವಾ ಸಕ್ಕರೆ ರಹಿತ ಆಹಾರ ಕ್ರಮ ಅನುಸರಿಸುವುದು ಎಂದಾಗ, ಹಣ್ಣುಗಳು ಆ ವಿಷಯದಲ್ಲಿ ಕೊಂಚ ವಿವಾದಾತ್ಮಕ ಎನ್ನಬಹುದು. ಏಕೆಂದರೆ, ಹಣ್ಣುಗಳಲ್ಲಿ ಹೇರಳ ಪೌಷ್ಟಿಕಾಂಶ ಅಡಗಿದ್ದರೂ, ಫ್ರುಕ್ಟೋಸ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇವೆ- ಈ ನೈಸರ್ಗಿಕ ಸಕ್ಕರೆಯಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವ ಸಾಧ್ಯತೆ ಇದೆ.
ಹಾಗಾಗಿ, ಮಧುಮೇಹ ರೋಗಿಗಳಿಗೆ ಹಣ್ಣಿನ ರಸ ಕುಡಿಯುವಂತೆ ಶಿಫಾರಸು ಮಾಡುವುದಿಲ್ಲ. ಏಕೆಂದರೆ ಹೆಚ್ಚಿನ ಸಕ್ಕರೆ ಮತ್ತು ಕಡಿಮೆ ಫೈಬರ್ ಯಾವುದೇ ಸಮಯದಲ್ಲಿ ರಕ್ತದಲ್ಲಿನ ಗ್ಲುಕೋಸನ್ನು ಹೆಚ್ಚಿಸಬಹುದು. ಆದರೂ, ಹೊಸ ಅಧ್ಯಯನವೊಂದರ ಪ್ರಕಾರ, ಒಂದು ನಿರ್ದಿಷ್ಟ ಹಣ್ಣಿನ ರಸವು ರಕ್ತದಲ್ಲಿನ ಸಕ್ಕರೆಯನ್ನು ನಿಮಿಷದೊಳಗೆ ತಗ್ಗಿಸುತ್ತದೆ. ಅದ್ಯಾವ ಹಣ್ಣು ಬಲ್ಲಿರಾ..? ದಾಳಿಂಬೆ ಹಣ್ಣು.
ರಕ್ತದಲ್ಲಿನ ಸಕ್ಕರೆಯನ್ನು ಹಣ್ಣಿನ ರಸದಿಂದ ಕಡಿಮೆ ಮಾಡಬಹುದೇ..?
ಎಲ್ಸೆವಿಯರ್ ಎಂಬ ಜರ್ನಲ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ದಾಳಿಂಬೆ ಹಣ್ಣಿನ ಅಲ್ಪಕಾಲಿಕ ಪರಿಣಾಮಗಳನ್ನು ಅನ್ವೇಷಿಸಲಾಗಿದೆ. ಸಂಶೋಧನೆಯಲ್ಲಿ ತಜ್ಞರು, ಟೈಪ್ - 2 ಮಧುಮೇಹಿಗಳು ದಾಳಿಂಬೆ ಹಣ್ಣಿನ ರಸ ಸೇವಿಸಿದ 3 ಗಂಟೆಗಳ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. ತಾಜಾ ದಾಳಿಂಬೆ ರಸದ ನೇರ ಪರಿಣಾಮ ಅಧ್ಯಯನದಲ್ಲಿ ಪ್ರದರ್ಶಿಸಲಾಯಿತು.
ಅಧ್ಯಯನದಲ್ಲಿ ಭಾಗವಹಿಸಿದ್ದ 85 ಮಂದಿಯ ರಕ್ತದ ಮಾದರಿಯನ್ನು 12 ಗಂಟೆಯ ಉಪವಾಸದ ನಂತರ ಮತ್ತು ಆ ಬಳಿಕ ದಾಳಿಂಬೆ ರಸ ಕುಡಿದ 3 ಗಂಟೆಯ ನಂತರ ತೆಗೆದುಕೊಳ್ಳಲಾಗಿದೆ. ಅದರ ಫಲಿತಾಂಶಗಳಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟದ ಕುಸಿತವನ್ನು ಹಾಗೂ ಟೈಪ್ -2 ಮಧುಮೇಹಿಗಳಲ್ಲಿ ದಾಳಿಂಬೆ ರಸ ಸೇವಿಸಿದ 3 ಗಂಟೆಗಳ ನಂತರ ಇನ್ಸುಲಿನ್ ಪ್ರತಿರೋಧವನ್ನು ಪ್ರದರ್ಶಿಸಿದವು.
ಆರಂಭದಲ್ಲಿ ಕಡಿಮೆ ರಕ್ತದ ಸಕ್ಕರೆ ಮಟ್ಟ ಹೊಂದಿದ್ದ ರೋಗಿಗಳಲ್ಲಿ ಈ ಪರಿಣಾಮವು ಹೆಚ್ಚು ಪ್ರಬಲವಾಗಿ ಕಂಡು ಬಂದಿದೆ. ಅಧ್ಯಯನದ ಫಲಿತಾಂಶ ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ಆಗಿದ್ದರೂ, ವಯಸ್ಸಾದ ರೋಗಿಗಳಲ್ಲಿ ಮಾತ್ರ ಕಡಿಮೆ ಪರಿಣಾಮಕಾರಿಯಾಗಿ ಕಂಡು ಬಂದಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಬೇರೆ ದಾರಿಗಳಿವೆಯೇ?
ರಕ್ತದಲ್ಲಿನ ಸಕ್ಕರೆ ಮಟ್ಟದ ಉತ್ತಮ ನಿರ್ವಹಣೆಗಾಗಿ , ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಆಹಾರ ಸೇವಿಸಲು ಶಿಫಾರಸು ಮಾಡಲಾಗಿದೆ. ಉದಾಹರಣೆಗೆ ಧಾನ್ಯಗಳು, ಓಟ್ಸ್ ,ತರಕಾರಿಗಳು ಮತ್ತು ಸಂಕೀರ್ಣ ಕಾರ್ಬ್ಗಳು. ಜೊತೆಗೆ ಸೂಕ್ತ ಪ್ರಮಾಣದ ವ್ಯಾಯಾಮ ಚಟುಚಟಿಕೆಗಳಲ್ಲಿ ತೊಡಗಿಕೊಳ್ಳುವುದು ಕೂಡ ಮಧುಮೇಹಿಗಳ ಆರೋಗ್ಯ ನಿರ್ವಹಣೆಗೆ ಪ್ರಯೋಜನಕಾರಿ.
ಟೈಪ್ -2 ಮಧುಮೇಹದ ಲಕ್ಷಣಗಳು
1. ಪದೇ ಪದೇ ಮೂತ್ರ ವಿಸರ್ಜನೆ
2. ಅನಿರೀಕ್ಷಿತ ತೂಕ ಇಳಿಕೆ
3. ಬೇಗ ವಾಸಿಯಾಗದ ಗಾಯಗಳು
4. ಗುಪ್ತಾಂಗಗಳಲ್ಲಿ ತುರಿಕೆ
5. ವಿಪರೀತ ಬಾಯಾರಿಕೆ
6. ಬಳಲಿಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ