ಕಾರವಾರ (ಮೇ 20): ಕಲ್ಪವೃಕ್ಷ ಎಂದೇ ಗುರುತಿಸಲ್ಪಡುವ ತೆಂಗಿನಮರದಲ್ಲಿ (Coconut Tree) ಸಾಮಾನ್ಯವಾಗಿ ನೂರರಿಂದ ಇನ್ನೂರು ಕಾಯಿ ಬಿಡುವುದನ್ನು ನೋಡಿದ್ದೇವೆ. ಆದರೆ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಕುಳಿ ಎನ್ನುವ ಗ್ರಾಮದಲ್ಲಿ ತೆಂಗಿನ ಮರ ಮಾತ್ರ ಬರೋಬ್ಬರಿ ಎರಡರಿಂದ ಮೂರು ಸಾವಿರ ತೆಂಗಿನ ಕಾಯಿಗಳನ್ನು ಬಿಟ್ಟು ನೋಡುಗರನ್ನು ಬೆರಗಾಗಿಸುತ್ತಿದೆ. ಇದೇ ಕಾರಣದಿಂದ ಹಲವು ಕೃಷಿ ಪ್ರೇಮಿಗಳು (Agriculture Lover) ಈ ತೆಂಗಿನ ಮರವನ್ನು ನೋಡಲು ಆಗಮಿಸುತ್ತಾರಲ್ಲದೇ, ಎಲರಿಗೂ ಈ ತೆಂಗಿನ ಮರ ಆಶ್ಚರ್ಯ ತಂದಿರಿಸಿದೆ.
ನಿಜಕ್ಕೂ ಇದು ಕಲ್ಪವೃಕ್ಷವೇ
ಎಲ್ಲಾ ತೆಂಗಿನ ಮರಗಳಿಂದ ಕೊಂಚ ಭಿನ್ನವಾಗಿ ಕಾಣುವ ಈ ಮರದ ಕಾಯಿಗಳಿಂದಾಗುವ ಸಸಿಗಳಿಗೆ ಪ್ರಸ್ತುತ ಎಲ್ಲಿಲ್ಲದ ಬೇಡಿಕೆ. ಈ ಕಲ್ಪವೃಕ್ಷದಲ್ಲಿ ಬೆಳೆಯುವ ಬೆಳೆಯನ್ನು ಎಣಿಸುತ್ತಾ ಹೋದ್ರೆ ಯಾರೂ ಕೂಡಾ ಉಸ್ಸಪ್ಪಾ ಅನ್ನದಿರಲ್ಲ. ಕಾರಣ ಈ ಮರದಲ್ಲಿ ಬೆಳೆಯುವ ತೆಂಗಿನ ಕಾಯಿಗಳ ಸಂಖ್ಯೆ. ಸಾಮಾನ್ಯವಾಗಿ ಯಾವುದೇ ಉತ್ತಮ ತೆಂಗಿನಮರದಲ್ಲಿ 100, 200 ರಿಂದ 500ರಷ್ಟು ತೆಂಗಿನಕಾಯಿಗಳು ಬೆಳೆಯೋದು ನೋಡಿದ್ದೇವೆ. ಆದರೆ, ಈ ತೆಂಗಿನಮರದಲ್ಲಿ ಮಾತ್ರ ಬರೋಬ್ಬರಿ 2000ದಿಂದ 3000 ತೆಂಗಿನಕಾಯಿಗಳು ಬೆಳೆಯುತ್ತವೆ.
12 ವರ್ಷಗಳ ಹಿಂದೆ ಬೆಳೆಸಿದಂತಹ ವಿಶೇಷ ತಳಿ
ಈ ಹೊಸಕುಳಿ ಗ್ರಾಮದ ಹಂಸಾರಾಮಕ್ಕಿ ನಿವಾಸಿ ಸುಬ್ರಾಯ ಪರಮೇಶ್ವರ ಶೆಟ್ಟಿ ಅವರ ಮನೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ಬೆಳೆಸಿದಂತಹ ಈ ವಿಶೇಷ ತಳಿಯ ತೆಂಗಿನ ಮರದಲ್ಲಿ 3 ವರ್ಷದಲ್ಲೇ ಉತ್ತಮ ಫಸಲು ಪ್ರಾರಂಭವಾಗಿತ್ತು. ಇಂದಿನವರೆಗೂ ಈ ಮರದಲ್ಲಿ ಭರ್ಜರಿಯಾಗಿ ಬೆಳೆ ಬೆಳೆಯುತ್ತಿದ್ದು, ಇದರ ಒಂದೊಂದು ಗೊಂಚಲಿನಲ್ಲೇ 300ರಿಂದ 400ರಷ್ಟು ಕಾಯಿಗಳು ಬೆಳೆಯುತ್ತಿವೆ. ಪ್ರತೀ 2 ತಿಂಗಳಿಗೊಮ್ಮೆ ಇದರ ಬೆಳೆ ಕೊಯ್ಯಲು ತಯಾರಾಗುತ್ತಿದ್ದು, ಮನೆ ಮಾಲೀಕರಿಗೆ ಭರ್ಜರಿ ಲಾಭ ತಂದು ಕೊಡುತ್ತಿದೆ.
ಎಲ್ಲಾ ಮರಗಳ ಹಾಗೇ ಪೋಷಿಸಿದ್ರು
ವಿಶೇಷವಾಗಿ ಗುರುತಿದಲ್ಪಟ್ಟಿರುವ ಈ ಮರಕ್ಕೆ ಮಾಲಕರಂತೂ ವಿಶೇಷ ಗೊಬ್ಬರವನ್ನೇನೂ ಹಾಕಿಲ್ಲ. ಈ ಮನೆಯಲ್ಲಿ ದನ ಸಾಕಾಣೆ ಮಾಡುತ್ತಿರುವುದರಿಂದ ಅವುಗಳ ಸಗಣಿ, ಇತರ ಸಾವಯವ ಗೊಬ್ಬರ ಹಾಗೂ ನೀರನ್ನು ಮಾತ್ರ ಈ ಮರಕ್ಕೆ ಹಾಕಲಾಗುತ್ತಿದೆ. ಪ್ರತೀ ವರ್ಷ ಭಾರೀ ಪ್ರಮಾಣದಲ್ಲಿ ಬೆಳೆಗಳನ್ನು ನೀಡುತ್ತಿರುವ ಈ ಮರವನ್ನು ಕಂಡು ಮಾಲಕರು ಕೂಡಾ ಆಶ್ಚರ್ಯಕ್ಕೊಳಗಾಗಿದ್ದರು.
ಅತೀ ರುಚಿಯಾದ ನೀರನ್ನು ಹಾಗೂ ಸಿಹಿ ಕೊಬ್ಬರಿಯನ್ನು ನೀಡುತ್ತಿರುವ ವೃಕ್ಷ
ಆದರೆ, ಪ್ರತೀ ವರ್ಷ ಇದೇ ಪ್ರಮಾಣದಲ್ಲಿ ಈ ತೆಂಗಿನಮರ ಬೆಳೆ ನೀಡುತ್ತಿರುವುದರಿಂದ ತೆಂಗಿನಕಾಯಿ ಮಾರಾಟ ಮಾಡಿ, ತೆಂಗಿನ ಎಣ್ಣೆ ಉತ್ಪಾದಿಸಿ ಈ ಮರದ ಮಾಲಕರು ಲಾಭ ಗಳಿಸುತ್ತಿದ್ದಾರೆ. ಈ ಮರದಲ್ಲಿ ಬಿಡುವ ಕಾಯಿ ಅತೀ ರುಚಿಯಾದ ನೀರನ್ನು ಹಾಗೂ ಸಿಹಿ ಕೊಬ್ಬರಿಯನ್ನು ನೀಡುತ್ತಿರುವುದರಿಂದ ಈ ವೃಕ್ಷ ಕಂಡ್ರೆ ಮನೆಯವರಿಗೆ ಅತೀ ಪ್ರೀತಿ ಮತ್ತು ಭಕ್ತಿ.
ಇದನ್ನೂ ಓದಿ: Python: ಅಂಗಳದಲ್ಲೇ ಇತ್ತು 9 ಅಡಿಯ ಹೆಬ್ಬಾವು! ಮನೆಮಂದಿ ಶಾಕ್
ಈ ವೃಕ್ಷದ ತಳಿ ಯಾವುದೆಂದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಕಾರಣದಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಯಾವ ತಳಿಯೆಂದು ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಈ ಮರದ ವಿಶೇಷತೆಯ ಮಾಹಿತಿ ಹೊರಕ್ಕೆ ಬೀಳುತ್ತಿದ್ದಂತೇ ಈಗಾಗಲೇ ಹಲವು ಜನರು ಇದೇ ಮರದ ತೆಂಗಿನ ಕಾಯಿಗಳಿಂದ ಬೆಳೆದ ಸಸಿಗಳನ್ನು ಉಚಿತವಾಗಿ ಕೊಂಡೊಯ್ದಿದ್ದಾರೆ.
500 ಸಸಿಗಳ ಆರ್ಡರ್
ಅಲ್ಲದೇ, ಸುಮಾರು 500 ಸಸಿಗಳನ್ನು ತಯಾರು ಮಾಡಿ ನೀಡುವಂತೆ ಈ ಮನೆಯವರಿಗೆ ಆರ್ಡರ್ ಕೂಡಾ ಕೆಲವರಿಂದ ದೊರಕಿದೆ. ಇನ್ನು ಈ ಮನೆಯ ಯುವಕ ವಿನಯ್ ಹೇಳುವಂತೆ, ಕೆಲವು ರೈತರು ಯಾವುದ್ಯಾವುದೋ ತಳಿಗಳನ್ನು ಖರೀದಿಸಿ ಉತ್ತಮ ಬೆಳೆ ಪಡೆಯದೇ ನಷ್ಟ ಅನುಭವಿಸುತ್ತಾರೆ. ಅದರ ಬದಲು ಇವರ ಮನೆಯಲ್ಲಿರುವ ಮರದ ತಳಿಯನ್ನು ಕೊಂಡೊಯ್ದಲ್ಲಿ ಉತ್ತಮ ಬೆಳೆಯೊಂದಿಗೆ, ಉತ್ತಮ ಲಾಭ ಪಡೆಯಬಹುದು ಅಂತಾರೆ ಈ ಯುವಕ.
ಇದನ್ನೂ ಓದಿ: Viral Tree: ಒಂದೇ ಮರದ ಮೇಲೆ 20 ದೇವದಾರು ಮರ! ಅದ್ಭುತವಾಗಿರೋ ಈ ಮರ ನೋಡಿ
ಒಟ್ಟಿನಲ್ಲಿ ಅತೀ ವಿಶೇಷವಾಗಿರುವ ಈ ತೆಂಗಿನ ಮರ ಒಂದೆಡೆ ಮನೆಯ ಮಾಲಕರಿಗೆ ಉತ್ತಮ ಆದಾಯ ನೀಡುವುದರೊಂದಿಗೆ ಊರಿನ ಜನರಿಗೆ ಆಶ್ಚರ್ಯವನ್ನೂ ಉಂಟು ಮಾಡಿದೆ. ಈ ಮರದ ತಳಿ ರಾಜ್ಯದ ಇತರ ರೈತರಿಗೂ ದೊರೆತಲ್ಲಿ, ರಾಜ್ಯದ ರೈತರು ಕೂಡಾ ತೆಂಗುಗಳನ್ನು ಬೆಳೆಯುವ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ