ಸಾಂಪ್ರಾದಾಯಿಕ ಕೃಷಿ (Traditional Agriculture) ಕಡಿಮೆಯಾಗುತ್ತಾ ಹೋದಂತೆ ಮಣ್ಣಿನ ಫಲವತ್ತತೆ ಕೂಡ ಇಳಿಮುಖವಾಗಿದೆ. ರಾಸಾಯನಿಕ ಗೊಬ್ಬರದಿಂದಾಗಿ (Chemical Fertilizers) ಮಣ್ಣು ತನ್ನ ಸತ್ವವನ್ನೇ ಕಳೆದುಕೊಂಡು ಬಿಟ್ಟಿದೆ. ಸರಿಸುಮಾರು ಐದು ದಶಕಗಳ ಹಿಂದೆ, ಪ್ರತಿ ಹೆಕ್ಟೇರ್‌ಗೆ ಸುಮಾರು 2 ಟನ್ ಇಳುವರಿ ಪಡೆಯಲು ಪ್ರತಿ ಹೆಕ್ಟೇರಿಗೆ 54 ಕೆಜಿ ರಸಗೊಬ್ಬರ ಬೇಕಾಗಿತ್ತು. ಇಂದು, ಅದೇ ಇಳುವರಿಯನ್ನು ಪಡೆಯಲು ಸುಮಾರು 280 ಕೆ.ಜಿ. ಗೊಬ್ಬರ ಬೇಕಾಗುತ್ತದೆ.
ಈ ಉದಾಹರಣೆ ಮಣ್ಣು ತನ್ನ ಸಾರವನ್ನು ಕಳೆದುಕೊಂಡಿದೆ ಎಂಬುವುದನ್ನು ತೋರಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರಗಳ ಎಗ್ಗಿಲ್ಲದ ಬಳಕೆಯನ್ನು ಸಹ ಎತ್ತಿ ತೋರಿಸುತ್ತಿದೆ.
ಮಣ್ಣಿನ ಪರೀಕ್ಷೆ
ಯಾವುದೇ ಕೃಷಿಯಾಗಲಿ ಮಣ್ಣು ತುಂಬಾ ಮುಖ್ಯ, ಮಣ್ಣು ಉತ್ತಮವಾಗಿದ್ದರೆ ಬೆಳೆಯುವ ಬೆಳೆ ಕೂಡ ಉತ್ತಮವಾಗಿರುತ್ತದೆ. ರಾಸಾಯನಿಕ ಗೊಬ್ಬರವು ಬೆಳೆ ಇಳುವರಿ ಹೆಚ್ಚಿಸುತ್ತಾದರೂ ಮಣ್ಣಿನ ಆರೋಗ್ಯವನ್ನು ಕ್ಷೀಣಿಸುವಂತೆ ಮಾಡುತ್ತದೆ. ಹೀಗಾಗಿಯೇ ವಿಜ್ಞಾನಿಗಳು ರೈತರಿಗೆ ಪ್ರತಿ ಬಾರಿಯೂ ಮಣ್ಣಿನ ಪರೀಕ್ಷೆ ಮಾಡಿಸುತ್ತಿರಿ ಎಂದು ಸಲಹೆ ನೀಡುತ್ತಲೇ ಇರುತ್ತಾರೆ.
ಇದನ್ನೂ ಓದಿ: ಬಕೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ನೀರಿನಲ್ಲಿ ಮನೆ ಒರೆಸಿದ ಮಹಿಳೆ! ವಿಡಿಯೋ ವೈರಲ್
ಭಾರತದಲ್ಲಿ ಮಣ್ಣು ಪರೀಕ್ಷೆ ಜಟಿಲ
ಭಾರತದಲ್ಲಿ ಮಣ್ಣು ಪರೀಕ್ಷೆ ಸ್ವಲ್ಪ ಜಟಿಲವಾಗಿದೆ. ಇದೇ ಕಾರಣಕ್ಕೆ ರೈತರು ಮಣ್ಣು ಪರೀಕ್ಷೆಗೆ ಹಿಂದೆ ಬೀಳುವುದು. ರೈತರು ಕೃಷಿ ಪ್ರಯೋಗಾಲಯಕ್ಕೆ ಮಣ್ಣಿನ ಮಾದರಿಯನ್ನು ಕಳುಹಿಸಬೇಕಾಗುತ್ತದೆ, ನಂತರ ಫಲಿತಾಂಶ ಬರಲು ಕನಿಷ್ಠ 15 ದಿನಗಳು ಬೇಕಾಗುತ್ತವೆ. ಹೀಗಾಗಿ ರೈತರು ಇದರ ಗೋಜಿಗೆ ಹೋಗದೇ ಯಾವುದೇ ಪರೀಕ್ಷೆಗೆ ಮುಂದಾಗುವುದಿಲ್ಲ. ಈ ಉಪಕ್ರಮ ಮಣ್ಣಿನ ಆರೋಗ್ಯವನ್ನು ಮತ್ತಷ್ಟು ಕ್ಷೀಣಿಸಲು ಕಾರಣವಾಗಿದೆ.
ಹಾಗಾದರೆ ಸುಲಭವಾಗಿ ಮಣ್ಣನ್ನು ಪರೀಕ್ಷೆ ಮಾಡುವುದು ಹೇಗೆ? ಸುಲಭವಾದ ಕ್ರಮಗಳಿಲ್ಲವೇ? ಈ ಪ್ರಶ್ನೆಗೆ ಉತ್ತರ ಇದೆ, ಖಂಡಿತ ಕ್ರಮಗಳಿವೆ ಎಂದು ನಾವು ಹೇಳುತ್ತೇವೆ. ಮೊದಲು ರಕ್ತ, ಮಧುಮೇಹ, ಆಮ್ಲಜನಕಗಳ ಪರೀಕ್ಷೆಗೆ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಈಗ ಹಾಗೇನಿಲ್ಲ ಮನೆಯಲ್ಲಿಯೇ ಇವುಗಳನ್ನು ಪರೀಕ್ಷೆ ಮಾಡಿಕೊಳ್ಳಬಹುದಾದ ಉಪಕರಣಗಳು ಬಂದಾಗಿದೆ.
ಅಂತೆಯೇ ಮಣ್ಣಿನ ಪರೀಕ್ಷೆಗಳನ್ನು ಮಾಡಲು ಸಹ ಈಗ ಸಾಧನಗಳು ಬಂದಿವೆ. ಈ ಸಾಧನಗಳು ಮಣ್ಣಿನ ಪರೀಕ್ಷೆಯನ್ನು ಸುಲಭಗೊಳಿಸುತ್ತದೆ. ಇಂದು ಅಸ್ಸಾಂ, ಪಂಜಾಬ್, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್ ಮತ್ತು ರಾಜಸ್ಥಾನದ ಕೃಷಿಕರು ಮಣ್ಣು ಪರೀಕ್ಷಾ ಸಾಧನವನ್ನು ಬಳಸುತ್ತಿದ್ದಾರೆ.
ಭಾರತದಲ್ಲಿ ಸುಮಾರು 14 ಕೋಟಿ ರೈತರಿದ್ದಾರೆ. ಆದರೆ ವಿಪರ್ಯಾಸ ಅಂದರೆ ಮಣ್ಣು ಪರೀಕ್ಷೆಗೆ ಕೇವಲ 3,000 ಲ್ಯಾಬ್‌ಗಳಿವೆ. ಈ ಅಂಶವೇ ಪಾಟ್ಕರ್ ಅವರಿಗೆ ಮಣ್ಣಿನ ಪರೀಕ್ಷೆಯ ಕಿಟ್ ಅನ್ನು ಕಂಡುಹಿಡಿಯಲು ಪ್ರೇರೇಪಿಸಿತು.
ಮಣ್ಣು ಪರೀಕ್ಷೆಗೆ ಬಂದಿದೆ ʻನ್ಯೂಟ್ರಿಸೆನ್ಸ್ʼ ಕಿಟ್
ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರತಿ ಸುತ್ತಿನ ಬಿತ್ತನೆಯ ಮೊದಲು ಮಣ್ಣಿನ ಪರೀಕ್ಷೆಗಾಗಿ ರೈತರಲ್ಲಿ ಜಾಗೃತಿ ಮೂಡಿಸಲು, ವಿಜ್ಞಾನಿ ಡಾ. ರಾಜುಲ್ ಪಾಟ್ಕರ್ ನ್ಯೂಟ್ರಿಸೆನ್ಸ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.
ಇದು ವಿಶ್ವದ ಅತ್ಯಂತ ಚಿಕ್ಕ ಮಣ್ಣು ಪರೀಕ್ಷಾ ವ್ಯವಸ್ಥೆಯಾಗಿದೆ, ಇದು ಪೋರ್ಟಬಲ್, ಕೈಗೆಟುಕುವ ಮತ್ತು ಬಳಸಲು ಸುಲಭವಾಗಿದೆ ಎಂದು ಅವರು ಹೇಳುತ್ತಾರೆ.
ಡಾ.ಪಾಟ್ಕರ್ ಅವರ ಆವಿಷ್ಕಾರ
ಡಾ. ಪಾಟ್ಕರ್ (55) ಅವರು ಮೊದಲು 2011 ರಲ್ಲಿ ಐಐಟಿ ಬಾಂಬೆಯಲ್ಲಿ ಪಿಎಚ್‌ಡಿ ಮಾಡುವಾಗ ತಂತ್ರಜ್ಞಾನದ ಸಂಶೋಧನೆಯನ್ನು ಪ್ರಾರಂಭಿಸಿದರು.
“ನಾನು ಕೃಷಿ ಹಿನ್ನೆಲೆಯಿಂದ ಬಂದಿಲ್ಲವಾದರೂ, ಇತರ ವಿದ್ಯಾರ್ಥಿಗಳು ವಿಷಯವನ್ನು ಆಯ್ಕೆ ಮಾಡದ ಕಾರಣ ನಾನು ಈ ಕ್ಷೇತ್ರದಲ್ಲಿ ನನ್ನ ಸಂಶೋಧನೆಯನ್ನು ಮಾಡಲು ನಿರ್ಧರಿಸಿದೆ. ನನಗೆ, ಡಾಕ್ಟರೇಟ್ ಪದವಿಗಿಂತ ನನ್ನ ಕೆಲಸದ ಮೂಲಕ ಪ್ರಭಾವವನ್ನು ತರುವುದು ಹೆಚ್ಚು ಮುಖ್ಯವಾಗಿತ್ತು” ಎಂದು ಪಾಟ್ಕರ್ ಹೇಳುತ್ತಾರೆ.
“NutriSens" ಒಂದು ಸಣ್ಣ ಹಾರ್ಡ್‌ವೇರ್ ಸಾಧನವಾಗಿದ್ದು, ಇದು PH, ವಿದ್ಯುತ್ ವಾಹಕತೆ, ನೈಟ್ರೇಟ್, ಫಾಸ್ಫೇಟ್ ಮತ್ತು ಪೊಟ್ಯಾಸಿಯಮ್‌ನಂತಹ ಆರು ನಿಯತಾಂಕಗಳನ್ನು ಪರಿಶೀಲಿಸಲು ಕಾಗದ ಆಧಾರಿತ ಸಂವೇದಕ ಪಟ್ಟಿಗಳೊಂದಿಗೆ ಬರುತ್ತದೆ ಎಂದು ಪಾಟ್ಕರ್ ಹೇಳುತ್ತಾರೆ.
ಹೇಗೆ ಕೆಲಸ ಮಾಡುತ್ತದೆ?
ಒಂದು ಗ್ರಾಂ ಮಣ್ಣನ್ನು ತೆಗೆದುಕೊಂಡು, ಸಣ್ಣ ಬಾಟಲಿಯಲ್ಲಿ 3 ಮಿಲಿ ದ್ರಾವಣವನ್ನು ಹಾಕಿ, ಅದನ್ನು ಅಲ್ಲಾಡಿಸಿ ಮತ್ತು ಸ್ಪಷ್ಟವಾದ ದ್ರಾವಣವು ಕಾಣಿಸಿಕೊಳ್ಳುವವರೆಗೆ ಮಣ್ಣು ನೆಲೆಗೊಳ್ಳಲು ಸುಮಾರು ಅರ್ಧ ಘಂಟೆಯವರೆಗೆ ಬಿಡಿ. ನಂತರ ನಿಮಗೆ ಉತ್ತರ ಸಿಗುತ್ತದೆ ಎನ್ನುತ್ತಾರೆ ಪಾಟ್ಕರ್. ಐದು ನಿಮಿಷಕ್ಕಿಂತ ಮೊದಲೇ ಫಲಿತಾಂಶವನ್ನು ಪಡೆಯಬಹುದು. ಪ್ರತಿ ಪ್ಯಾರಾಮೀಟರ್ ಅನ್ನು ಅಳೆಯಲು ಇದು 25-30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ಅದರ ನಂತರ, ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ರಚಿಸಲಾಗುತ್ತದೆ, ಅದನ್ನು ಮೊಬೈಲ್ ಫೋನ್‌ಗಳಲ್ಲಿ ತಕ್ಷಣವೇ ಡೌನ್‌ಲೋಡ್ ಮಾಡಬಹುದು. "ಒಂದು ದಿನದಲ್ಲಿ, ಒಬ್ಬರು ವಿವಿಧ ನಿಯತಾಂಕಗಳಿಗಾಗಿ 25 ಮಣ್ಣಿನ ಪರೀಕ್ಷೆಗಳನ್ನು ಸುಲಭವಾಗಿ ಮಾಡಬಹುದು" ಎಂದು ಡಾ ಪಾಟ್ಕರ್ ಹೇಳುತ್ತಾರೆ.
ಹಲವು ರಾಜ್ಯಗಳಲ್ಲಿ ಬಳಕೆ
ಅಸ್ಸಾಂ, ಪಂಜಾಬ್, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕೃಷಿಕರಿಗೆ ಪಾಟ್ಕರ್ ಈ ಸಾಧನವನ್ನು ನೀಡಿದ್ದಾರೆ. ಇಲ್ಲಿಯವರೆಗೆ, ಡಾ ಪಾಟ್ಕರ್ ಸುಮಾರು 2,000 ಸಾಧನವನ್ನು ಮಾರಾಟ ಮಾಡಿದ್ದಾರೆ. ಐಐಟಿ (ಐಎಸ್‌ಎಂ) ಧನ್‌ಬಾದ್‌ನಲ್ಲಿ ಕೆಲಸ ಮಾಡುತ್ತಿರುವ ಸಲಹೆಗಾರ ವಿಜ್ಞಾನಿ ಡಾ ಕೆ ಅನಂತ್ ಕೃಷ್ಣನ್ ಅವರು ಜಾರ್ಖಂಡ್‌ನ ಸುಮಾರು 70 ರೈತರಿಗೆ ಸಾಧನವನ್ನು ಬಳಸಲು ಸಹಾಯ ಮಾಡುತ್ತಿದ್ದಾರೆ.
“ಪೋರ್ಟಬಲ್ ಉಪಕರಣಗಳು ರೈತರಿಗೆ ತುಂಬಾ ಉಪಯುಕ್ತವಾಗಿದೆ. ಗುಣಮಟ್ಟದ ಮಾನದಂಡಗಳ ಪ್ರಕಾರ, ಸಾಧನವು ಉತ್ತಮವಾಗಿದೆ. ಈ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಳಿರುವುದರಿಂದ ಇಲ್ಲಿನ ಮಣ್ಣಿನಲ್ಲಿ ಸಾರಜನಕದ ಕೊರತೆಯಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಅದರಂತೆ, ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ವರ್ಮಿಕಾಂಪೋಸ್ಟ್ ಹಾಕಲು ನಾವು ರೈತರಿಗೆ ಮಾರ್ಗದರ್ಶನ ನೀಡುತ್ತೇವೆ, ”ಎಂದು ಅವರು ದಿ ಬೆಟರ್ ಇಂಡಿಯಾಗೆ ಹೇಳುತ್ತಾರೆ.
ರೈತರಿಗೆ ಹಲವು ರೀತಿಯಲ್ಲಿ ಪ್ರಯೋಜನ
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಡೊಂಗಾವ್ ನಿವಾಸಿ ಮಂಗಲ್ ಧುಮಾಲ್ ಮಾತನಾಡಿ, ಕಳೆದ ವರ್ಷಗಳಿಂದ ಈ ಸಾಧನವನ್ನು ಬಳಸುತ್ತಿದ್ದೇವೆ ಮತ್ತು ಅನೇಕ ರೈತರಿಗೆ ಈ ಬಗ್ಗೆ ಹೇಳಿದ್ದೇವೆ. ರೈತರು 8-15 ದಿನಗಳಲ್ಲಿ ಮಣ್ಣಿನ ಪರೀಕ್ಷೆಯ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಮಣ್ಣಿನ ಆರೋಗ್ಯದ ಬಗ್ಗೆ ತಿಳಿದ ನಂತರ ಮುಂದಿನ ಕ್ರಮಗಳನ್ನು ಸಹ ರೈತರು ತೆಗೆದುಕೊಳ್ಳುತ್ತಿದ್ದಾರೆ ಎಂದು ಧುಮಾಲ್ ಹೇಳಿದರು.
ಯಾವ ರಸಗೊಬ್ಬರಗಳನ್ನು ಬಳಸಬೇಕು ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧನವು ಸಹಾಯ ಮಾಡುತ್ತದೆ ಎಂದು ಹೇಳಿದರು.
ಎಷ್ಟಿದೆ ಬೆಲೆ?
ಈ ಚಿಕ್ಕದಾದ ಮಣ್ಣು ಪರೀಕ್ಷಾ ಸಾಧನಕ್ಕೆ 35,000 ರೂ.ಇದೆ. ಲ್ಯಾಬ್‌ನಲ್ಲಿ ಒಮ್ಮೆ ಪರೀಕ್ಷೆ ಮಾಡಲು ಹೋದರೆ ಒಂದು ಪರೀಕ್ಷೆಗೆ ಸುಮಾರು 500 ರೂ. ಆಗುತ್ತದೆ. ಅದರ ಬದಲು ಈ ಸಾಧನ ಉತ್ತಮ, ಈ ಸಾಧನದ ಮೂಲಕ ಒಂದು ವರ್ಷದಲ್ಲಿ ಕನಿಷ್ಠ 3,000 ಮಣ್ಣು ಪರೀಕ್ಷೆಗಳನ್ನು ಮಾಡಬಹುದು ಎಂದು ಡಾ ಪಾಟ್ಕರ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ