ಭ್ರೂಣ ಹತ್ಯೆ ಮಹಾಪಾಪ ಎಂಬ ಉಲ್ಲೇಖಗಳನ್ನು ನಾವು ಅದೆಷ್ಟೋ ಆಸ್ಪತ್ರೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ (Government Offices) ನೋಡಿರುತ್ತೇವೆ. ಜನಿಸುವ ಮಗು ಹೆಣ್ಣೆ ಆಗಿರಲಿ, ಗಂಡೇ ಆಗಿರಲಿ ಮಗುವಿನ ಲಾಲನೆ ಪಾಲನೆ ಪೋಷಕರ ಕರ್ತವ್ಯವಾಗಿದೆ. ಅಂತೆಯೇ ಮಗುವನ್ನು ಸಂರಕ್ಷಿಸುವುದು ಸ್ವತಃ ಭಗವಂತನ ಸ್ವರೂಪವಾಗಿರುವ ವೈದ್ಯರ (Physician) ಕರ್ತವ್ಯವಾಗಿದೆ. ಆದರೆ ದುಡ್ಡಿನ ಆಮಿಷಕ್ಕೆ ಬಲಿಯಾಗಿ ಅದೆಷ್ಟೋ ವೈದ್ಯರು ಹಾಗೂ ದಾದಿಯರು ಗರ್ಭಪಾತದಂತಹ ಕಾನೂನು ಬಾಹಿರ (Illegal Activities) ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರಕಾರ ಕೂಡ ಗರ್ಭಪಾತದಂತಹ (Abortion) ಚಟುವಟಿಕೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಪ್ರಸ್ತುತ ಇದು ದಂಧೆಯಾಗಿ ಮಾರ್ಪಟ್ಟಿದೆ.
ಭ್ರೂಣಗಳ ತಲೆಬುರುಡೆ ಹಾಗೂ ಮೂಳೆಗಳ ಪತ್ತೆ:
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಭ್ರೂಣಗಳ 11 ಕನಿಷ್ಠ ತಲೆಬುರುಡೆಗಳು ಹಾಗೂ 54 ಮೂಳೆಗಳು ಪತ್ತೆಯಾಗಿದ್ದು ಅಕ್ರಮ ಗರ್ಭಪಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಅಧಿಕಾರಿಯೊಬ್ಬರು ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು ತನಿಖೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯೆ ಹಾಗೂ ದಾದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದು ಹೇಗೆ?
ಸುಳಿವು ದೊರೆತ ಒಡನೆಯೇ ಕಾರ್ಯತತ್ಪರರಾದ ಪೊಲೀಸರು, ಅರ್ವಿ ತಹಸಿಲ್ನ ಕದಮ್ ಆಸ್ಪತ್ರೆಯ ಆವರಣದಲ್ಲಿರುವ ಜೈವಿಕ ಅನಿಲ ಸ್ಥಾವರವನ್ನು ಪರಿಶೀಲಿಸಿದರು ಹಾಗೂ ಭ್ರೂಣಗಳ 11 ತಲೆಬುರುಡೆಗಳು ಮತ್ತು 54 ಮೂಳೆಗಳನ್ನು ಪತ್ತೆಹಚ್ಚಿದ್ದಾರೆ. ದೊರೆತ ಸಾಕ್ಷ್ಯಗಳನ್ನು ಹೆಚ್ಚಿನ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಎಲ್ಲರೂ ಏಲಿಯನ್ ಎಂದುಕೊಂಡಿದ್ದ ಅಸ್ಥಿಪಂಜರದ ರಹಸ್ಯ ಬಯಲಾಗಿದೆ, ಏನದು?
ಬಾಲಕಿಯ ಪೋಷಕರಿಗೆ ಬೆದರಿಕೆ
13ರ ಹರೆಯದ ಬಾಲಕಿಗೆ ಗರ್ಭಪಾತ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಯ ವೈದ್ಯೆ ರೇಖಾ ನೀರಜ್ ಕದಮ್ ಹಾಗೂ ದಾದಿ ಸಂಗೀತ್ ಕಾಳೆಯನ್ನು ಬಂಧಿಸಿದ್ದಾರೆ ಎಂಬುದಾಗಿ ಆರ್ವಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭಾನುದಾಸ್ ಪಿದುರಕರ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹುಡುಗಿಯ ಸಂಪರ್ಕದಲ್ಲಿದ್ದ ಹಾಗೂ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಅಪ್ರಾಪ್ತ ಹುಡುಗನ ಪೋಷಕರಾದ ಕೃಷ್ಣ ಸಹಾರೆ ಹಾಗೂ ನಲ್ಲುರನ್ನು ಬಂಧಿಸಿದ್ದಾರೆ ಎಂಬುದಾಗಿ ಮಾಹಿತಿ ದೊರೆತಿದೆ. ಬಾಲಕಿ ಗರ್ಭಪಾತಕ್ಕೆ ಒಳಗಾಗದಿದ್ದರೆ ಮಾನಹಾನಿ ಮಾಡುವುದಾಗಿ ಹುಡುಗನ ಪೋಷಕರು ಬಾಲಕಿಯ ಪೋಷಕರಿಗೆ ಬೆದರಿಕೆ ಒಡ್ಡಿದ್ದರು ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ಗರ್ಭಪಾತಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ಹುಡುಗನ ಪೋಷಕರು ಪಾವತಿಸಿದ್ದರು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನಕ್ಕೊಳಗಾದ ವೈದ್ಯೆ ಹಾಗೂ ದಾದಿ:
ಹುಡುಗಿಯು 18 ವರ್ಷದೊಳಗಿನವಳಾಗಿದ್ದು ಬಾಲಕಿಗೆ ಗರ್ಭಪಾತ ಮಾಡುವ ಮುನ್ನ ವೈದ್ಯೆ ಹಾಗೂ ನರ್ಸ್ ಪೊಲೀಸರಿಗೆ ತಿಳಿಸದೇ ಇದ್ದುದು ಅವರು ಎಸಗಿರುವ ತಪ್ಪಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಗರ್ಭಪಾತದ ದೂರಿನ ಮೇರೆಗೆ ಆರೋಪಿಗಳನ್ನು ಐಪಿಸಿಯ ಸಂಬಂಧಿತ ಸೆಕ್ಷನ್ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧನಕ್ಕೊಳಗಾಗಿರುವ ವೈದ್ಯೆಯ ಅತ್ತೆ ಮಾವ ಕೂಡ ಸ್ವತಃ ವೃತ್ತಿಯಲ್ಲಿ ವೈದ್ಯರಾಗಿದ್ದು ಗರ್ಭಪಾತ ಮಾಡಿಸಲು ಪರವಾನಗಿ ಹೊಂದಿದ್ದಾರೆ ಎಂದು ವಾರ್ಧಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಳ್ಕರ್ ಪಿಟಿಐಗೆ ತಿಳಿಸಿದ್ದಾರೆ. ಜೈವಿಕ ಅನಿಲ ಸ್ಥಾವರದಲ್ಲಿ ಪತ್ತೆಯಾಗಿರುವ ತಲೆಬುರುಡೆಗಳು ಹಾಗೂ ಮೂಳೆಗಳನ್ನು ಕಾನೂನು ಬದ್ಧವಾಗಿ ಇಲ್ಲವೇ ಕಾನೂನು ಬಾಹಿರವಾಗಿ ವಿಲೇವಾರಿ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಪ್ರಶಾಂತ್ ಸುದ್ದಿವಾಹಿನಿಗೆ ತಿಳಿಸಿದ್ದು, ಡಾ. ಕದಮ್ ಈ ಕುರಿತು ಯಾವುದೇ ಮಾಹಿತಿಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಶೋಗೆ ಇಡೋಕೆ ಸಿಗುತ್ತೆ ತಲೆ ಬುರುಡೆ!; ಬೆಲೆ ನೋಡಿ ದಂಗಾದ ಗ್ರಾಹಕ!
ಆಸ್ಪತ್ರೆಯಲ್ಲಿ ಅವ್ಯಾಹವಾಗಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು:
2012ರಲ್ಲಿ ‘ಬೇಟಿ ಬಚಾವೋ’ ಅಭಿಯಾನದ ಪ್ರವರ್ತಕರಾದ ಪುಣೆಯ ಖ್ಯಾತ ಸ್ತ್ರೀರೋಗ ತಜ್ಞ ಡಾ. ಗಣೇಶ್ ರಾಖ್ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಇದು ಕದಮ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆ ದಂಧೆಯಾಗಿರಬಹುದು ಈ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಈ ಹಿಂದೆ ಕೂಡ ಗರ್ಭಪಾತ, ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣದ ಹತ್ಯೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಯಾರೂ ಈ ಕುರಿತು ಮುಕ್ತವಾಗಿ ದೂರು ನೀಡುತ್ತಿರಲಿಲ್ಲ ಹಾಗೂ ಆ ಕುರಿತು ಮಾತನಾಡುವ ಧೈರ್ಯ ಹೊಂದಿರಲಿಲ್ಲ ಎಂಬುದಾಗಿ ಆಸ್ಪತ್ರೆಯ ವೈದ್ಯರೊಬ್ಬರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ