ಈ ನಮ್ಮ ವಸುಂಧರೆಯು ಅದೆಷ್ಟೋ ಕೋಟಿ ಕೋಟಿ ವರ್ಷಗಳಿಂದ ಜೀವಕುಲವನ್ನು ಸಲಹುತ್ತಾ ಬಂದಿದೆ. ಶಿಲಾಯುಗದಿಂದ ಹಿಡಿದು ರಾಜರುಗಳ ಕಾಲ ಹಾಗೂ ಪ್ರಸ್ತುತ ಆಧುನಿಕ ಮಾನವನೂ ಸಹ ಈ ಭೂಮಿಯಲ್ಲಿ ಆಶ್ರಯ ಪಡೆದಿದ್ದಾನೆ. ಆದರೆ ನಮ್ಮ ಈ ಭೂಮಿ (Earth) ಕೇವಲ ಮಾನವ (Human), ಹಾಗೂ ಇತರೆ ಜೀವರಾಶಿಗಳಲ್ಲದೆ ಇನ್ನು ಏನೆನೋ ರಹಸ್ಯಮಯ ವಸ್ತುಗಳನ್ನು ತನ್ನ ಗರ್ಭದಲ್ಲಿ ಇಂದಿಗೂ ಹುದುಗಿಸಿಕೊಂಡಿಟ್ಟಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಇಂದಿಗೂ ನಮಗೆ ಜಗತ್ತಿನ ಕೆಲ ಮೂಲೆಗಳಲ್ಲಿ ಏನಾದರೊಂದು ಭೂಮಿಯಿಂದ ಸಿಗುವ ಸುದ್ದಿಗಳು ಕೇಳಿ ಬರುತ್ತಿರುತ್ತವೆ.
ಭಾರತ ದೇಶವೂ ಸಹ ಐತಿಹಾಸಿಕವಾಗಿ ಸಾಕಷ್ಟು ಸಿರಿವಂತವಾದ ದೇಶವಾಗಿದೆ. ಗತ ವೈಭವದ ಅದೆಷ್ಟೋ ನಗ ನಾಣ್ಯಗಳು, ಚಿನ್ನ, ಮುತ್ತು ರತ್ನಗಳಂತಹ ಸಂಪತ್ತು ಈ ಹಿಂದೆ ಹಲವು ಬಾರಿ ಭೂಮಿಯಿಂದ ದೊರಕಿವೆ ಎಂಬುದು ಸತ್ಯವೇ ಆಗಿದೆ.
ಈಗಲೂ ನಮಗೆ ಅಲ್ಲಲ್ಲಿ ಇಂತಹ ಸಂಪತ್ತು ದೊರಕಿದ ಉದಾಹರಣೆಗಳು ಸಿಗುತ್ತಿರುತ್ತವೆ. ಇತ್ತೀಚಿಗಷ್ಟೇ ಮಧ್ಯ ಪ್ರದೇಶದಲ್ಲೂ ಸಹ ಅಂತಹ ಒಂದು ಘಟನೆ ನಡೆದಿದೆ. ಅಷ್ಟಕ್ಕೂ ಈ ಸಂಪತ್ತು ದೊರಕಿರುವುದು ಒಬ್ಬ ದಿನಗೂಲಿ ಕಾರ್ಮಿಕನಿಗೆ ಎಂಬುದು ನಿಮಗೆ ಗೊತ್ತೆ.
ಇದನ್ನೂ ಓದಿ: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!
ಮಧ್ಯಪ್ರದೇಶದಲ್ಲಿ ನಡೆದ ಘಟನೆ
ಹೌದು, ಮಧ್ಯಪ್ರದೇಶದ ದಾಮೋ ಎಂಬ ಗ್ರಾಮದಲ್ಲಿ ವಾಸಿಸುವ ಹಲ್ಲೆ ಅಹಿರ್ವಾರ್ ಎಂಬ ಯುವ ದಿನಗೂಲಿ ಕಾರ್ಮಿಕ ಎಂದಿನಂತೆ ಹಳೆಯ ಮನೆಯೊಂದರ ಕಂಬದ ಬಳಿ ಭೂಮಿ ಅಗೆಯುತ್ತಿದ್ದ. ಈ ಸಂದರ್ಭದಲ್ಲಿ ಅವನಿಗೆ 136 ವರ್ಷಗಳಷ್ಟು ಪುರಾತನವೆನ್ನಲಾದ 240 ಬೆಳ್ಳಿ ನಾಣ್ಯಗಳು ಅಹಿರ್ವಾರನಿಗೆ ದೊರಕಿದೆ.
ಈ ಅನಿರೀಕ್ಷಿತ ಸಂಪತ್ತು ಕಂಡ ಅಹಿರ್ವಾರನಿಗೆ ಆಸೆ ತಡೆಯಲಾರದೆ? ಅವನಿಗೂ ಇದನ್ನು ಪಡೆಯಬೇಕೆಂಬ ಆಸೆ ಉಂಟಾಗಿ ಅವನು ಅದನ್ನು ತನ್ನ ಮನೆಗೆ ಒಯ್ದಿದ್ದಾನೆ. ಹೀಗೆ ಸಂಪತ್ತನ್ನು ಮನೆಗೆ ತಂದ ಅಹಿರ್ವಾರನಿಗೆ ಮಾತ್ರ ನೆಮ್ಮದಿ ಹೊರಟು ಹೋಗಿದೆ.
ಪೊಲೀಸರಿಗೆ ಒಪ್ಪಿಸಿದ ನಿಷ್ಠಾವಂತ ಕಾರ್ಮಿಕ
ಅವನ ಮನದಲ್ಲಿ ಇದು ನನ್ನ ಸ್ವತ್ತಲ್ಲ, ಸರ್ಕಾರಕ್ಕೆ ಸೇರಬೇಕಾದುದು ಎಂಬ ಪ್ರಜ್ಞೆ ಎಷ್ಟು ತೀವ್ರವಾಗಿದೆ ಎಂದರೆ ಅವನನ್ನು ಆ ರಾತ್ರಿ ನಿದ್ರೆ ಮಾಡಲು ಸಾಧ್ಯವೇ ಆಗಿಲ್ಲ. ಕೊನೆಗೆ ಇದು ತನ್ನದಲ್ಲ ಎಂದು ನಿರ್ಧರಿಸಿ ಮರುದಿನ ಬೆಳಗ್ಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಡೆದ ವಿಷಯ ಹೇಳಿ ಸಂಪತ್ತನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಕೋತ್ವಾಲಿ ಪೊಲೀಸ್ ಠಾಣೆಯ ಇಂಚಾರ್ಜ್ ಆಗಿರುವ ವಿಜಯ್ ರಜಪೂತ್ ಮಾತನಾಡುತ್ತ, "ಅಹಿರ್ವಾರ್ ತಮಗೆ ದೊರಕಿರುವ ಬೆಳ್ಳಿ ನಾಣ್ಯಗಳನ್ನು ಪೊಲೀಸ್ ಠಾಣೆಯಲ್ಲಿ ಒಪ್ಪಿಸಿದ್ದು ಮುಂದೆ ಕಾನೂನಿನ ರೀತಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಈ ಬಗ್ಗೆ ಭೂಮಿಯ ಮಾಲೀಕರ ಪ್ರತಿಕ್ರಿಯೆ
ಇನ್ನು ಈ ಸಂಪತ್ತು ದೊರಕಿರುವ ಭೂಮಿಯ ಒಡತಿಯಾದ ಮೀನಾಕ್ಷಿ ಉಪಾಧ್ಯಾಯ ಅವರನ್ನು ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ವಿಚಾರಿಸಿದಾಗ ಅವರು ತಮಗೆ ಈ ಸಂಪತ್ತಿನ ಬಗ್ಗೆ ಏನೂ ಗೊತ್ತಿಲ್ಲವೆಂದು ಹೇಳಿದ್ದು ಅಹಿರ್ವಾರ್ ಸಂಪತ್ತು ಸಿಕ್ಕ ಮರುದಿನ ಕೆಲಸಕ್ಕೆ ಬಂದಿರಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಈ ನಡುವೆ, ಸಂಪತ್ತು ಸಿಕ್ಕ ಭೂಮಿಯಲ್ಲಿ ಅಗೆಯುವ ಕೆಲಸವನ್ನು ಸ್ಥಗಿತಗೊಳಿಸಲಾಗಿದ್ದು ಪೊಲೀಸರು ಪುರಾತತ್ವಶಾಸ್ತ್ರ ಇಲಾಖೆ ಹಾಗೂ ಖನಿಜ ಇಲಾಖೆಗಳನ್ನು ಸಂಪರ್ಕಿಸಿದ್ದು ಈ ಜಾಗದಲ್ಲಿ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಆ ಭೂಮಿಯಲ್ಲಿ ಇನ್ನೂ ಏನಾದ್ರು ಇರಬಹುದೆಂಬ ಅನುಮಾನ
ಸದ್ಯ ದೊರಕಿರುವ ನಾಣ್ಯಗಳ ಮೇಲೆ ಇಸವಿ 1887 ಎಂದು ಕೆತ್ತಲಾಗಿದ್ದು ಪ್ರಸ್ತುತ 240 ಬೆಳ್ಳಿ ನಾಣ್ಯಗಳ ಮಾರುಕಟ್ಟೆ ಮೌಲ್ಯ 1.96 ಲಕ್ಷ ರೂಪಾಯಿಗಳಾಗಿವೆ. ಇನ್ನು ಈ ನಾಣ್ಯಗಳು ದೊರಕಿರುವ ಮನೆಯು ಸಾಕಷ್ಟು ಪುರಾತನವಾಗಿದ್ದು, ಈ ಸ್ಥಳವನ್ನು ಸಂಪೂರ್ಣವಾಗಿ ಅಗೆದರೆ ಇನ್ನಷ್ಟು ಏನಾದರೂ ಸಿಗಬಹುದೆಂಬ ಅನುಮಾನ ಮನೆಯ ಸುತ್ತಮುತ್ತಲಿನ ಜನರಲ್ಲಿ ಮೂಡಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಈ ರೀತಿ ಸಂಪತ್ತು ಸಿಕ್ಕಾಗಲೂ ಅದನ್ನು ಸ್ವಾರ್ಥಕ್ಕಾಗಿ ಬಳಸದೆ ಅದು ಸರ್ಕಾರಕ್ಕೆ ಸಲ್ಲಬೇಕೆಂಬ ಪ್ರಾಮಾಣಿಕ ಮನಸ್ಥಿತಿ ಹೊಂದಿರುವ ಅಹಿರ್ವಾಲನ ಈ ನಡೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು ಪೊಲೀಸರು ಸಹ ಅವನ ಪ್ರಾಮಾಣಿಕತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ