ಪಾಕಿಸ್ತಾನೀ ಹೆಸರಿಟ್ಟುಕೊಂಡ ಭಾರತದ ಈ ಮಳಿಗೆಗೆ ಸಿಕ್ಕಿರುವ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

ಪಂಜಾಬ್​ನಲ್ಲಿ ಪಾಕಿಸ್ತಾನೀ ಅಟೈರ್ ಎಂಬ ಮಳಿಗೆ ಇದ್ದು ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಚರ್ಚೆ ಹುಟ್ಟು ಹಾಕಿ ಟ್ರೆಂಡಿಂಗ್​ನಲ್ಲಿ ಇದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಕೂಡ ಸಿಕ್ಕಿದೆ.

ಪಂಜಾಬ್​ನಲ್ಲಿ ಪಾಕಿಸ್ತಾನೀ ಅಟೈರ್

ಪಂಜಾಬ್​ನಲ್ಲಿ ಪಾಕಿಸ್ತಾನೀ ಅಟೈರ್

 • News18
 • Last Updated :
 • Share this:
  ಅಮೃತಸರ: ಭಾರತ ಮತ್ತು ಪಾಕಿಸ್ತಾನ ಅಂತ ಎರಡು ಹೆಸರು ಪ್ರಸ್ತಾಪಿಸಿದರೆ ಅನೇಕರ ಮನಸ್ಸಿಗೆ ಬರುವುದು ದೇಶದ ವಿಭಜನೆ, ಭಯೋತ್ಪಾದನೆ, ಕಾಶ್ಮೀರ ಸಮಸ್ಯೆ, ವೈರತ್ವ, ದ್ವೇಷ ಇತ್ಯಾದಿ ವಿಚಾರಗಳು. ಇವುಗಳ ಮಧ್ಯೆಯೂ ಎರಡೂ ದೇಶಗಳ ಮಧ್ಯೆ ಬಾಂಧವ್ಯಕ್ಕೆ ಕುರುಹುಗಳಾಗಿ ಅನೇಕ ವಿಚಾರಗಳಿವೆ. ಪಾಕಿಸ್ತಾನ ಹಾಗೂ ಅಲ್ಲಿನ ನಗರಗಳ ಹೆಸರಿನ ಅಂಗಡಿ ಮುಂಗಟ್ಟುಗಳು ಭಾರತದಲ್ಲಿವೆ. ಹಾಗೆಯೇ ಪಾಕಿಸ್ತಾನದ ಅನೇಕ ಕಡೆ ಭಾರತೀಯ ಹೆಸರುಗಳುಳ್ಳ ಅಂಗಡಿಗಳು ಇವೆ. ಬೆಂಗಳೂರಿನ ಇಂದಿರಾ ನಗರದಲ್ಲಿ ಕರಾಚಿ ಬೇಕರಿಯನ್ನ ನೀವು ನೋಡಿರಬಹುದು. ಹಾಗೆಯೇ, ಪಾಕಿಸ್ತಾನದ ಬಾಂಬೆ ಚಾಟ್ಸ್ ಇವೆ. ಅಂತೆಯೇ ಇದೀಗ ಪಂಜಾಬ್​ನ ಲೂದಿಯಾನದಲ್ಲಿರುವ ಒಂದು ಮಳಿಗೆ ಸಾಕಷ್ಟು ಟ್ರೆಂಡಿಂಗ್​ನಲ್ಲಿದೆ. ಲೂಧಿಯಾನದ ಭಾಯ್ ರಣಧೀರ್ ಸಿಂಗ್ ನಗರ್ ಎಂಬಲ್ಲಿ ಪಾಕಿಸ್ತಾನೀ ಅಟೈರ್ (ಪಾಕಿಸ್ತಾನೀ ಉಡುಗೆ) ಎಂಬ ಹೆಸರಿನ ಮಹಿಳಾ ಉಡುಗೆ ಮಳಿಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಪಾಕಿಸ್ತಾನೀಯರಲ್ಲೂ ಹೊಸ ಕುತೂಹಲ ಮೂಡಿಸಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ.

  ಪಾಕಿಸ್ತಾನೀ ಹೆಸರಲ್ಲಿರುವ ಮಳಿಗೆಯನ್ನು ಹಾಗೂ ಅದರ ಮಾಲೀಕರನ್ನು ನೋಡಲು ಅನೇಕ ಪಾಕಿಸ್ತಾನಿಗರು ಆಸಕ್ತಿ ತೋರಿದ್ದಾರೆ. ಅಂದಹಾಗೆ 36 ವರ್ಷದ ಪುನೀತ್ ಕೌರ್ ಎಂಬುವವರು ಈ ಮಳಿಗೆಯ ಮಾಲೀಕರು. ಏಳು ವರ್ಷಗಳಿಂದ ಇವರು ಪಾಕಿಸ್ತಾನದಿಂದ ಅಲ್ಲಿನ ಶೈಲಿಯ ಸೂಟು, ದುಪಟ್ಟಾ, ಕುರ್ತಿ ಇತ್ಯಾದಿ ಉಡುಗೆ ತೊಡುಗೆಗಳನ್ನ ಆಮದು ಮಾಡಿಕೊಂಡು ತಮ್ಮ ಮಳಿಗೆಯಲ್ಲಿ ಮಾರುತ್ತಿದ್ದಾರೆ.

  ಪಾಕಿಸ್ತಾನೀ ಫ್ಯಾಷನ್ ಒಂದು ರೀತಿ ವಿಶೇಷವಾಗಿದ್ದು ಅಲ್ಲಿನ ತೊಡುಗೆಗಳು ನಮ್ಮ ಪಂಜಾಬೀ ಮಹಿಳೆಯರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಪುನೀತ್ ಕೌರ್ ಹೇಳುತ್ತಾರೆ. ಇವರ ಮಳಿಗೆಗೆ ಎಲ್ಲಾ ಸಮುದಾಯಗಳ ಗ್ರಾಹಕರಿದ್ಧಾರೆ. ಪಾಕಿಸ್ತಾನದ ಹೆಸರಿಟ್ಟುಕೊಂಡ ಈ ಅಂಗಡಿಗೆ ಯಾರೂ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡಿಲ್ಲವಂತೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಕೆಲ ಮಂದಿ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಅದು ಬಿಟ್ಟರೆ ತಮ್ಮ ವ್ಯವಹಾರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎನ್ನುತ್ತಾರೆ ಅವರು.

  ಇದನ್ನೂ ಓದಿ: ಕೇವಲ ಅರ್ಧ ಕಿಲೋ ತೂಕದ ಮಗುವಿನ ಆಯಸ್ಸು ಗಟ್ಟಿಗೊಳಿಸಿದ ಸರ್ಕಾರಿ ವೈದ್ಯರು

  ಪಾಕಿಸ್ತಾನದ ನೆಟ್ಟಿಗರೂ ಕೂಡ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯನ್ ಕಿಚನ್, ಡೆಲ್ಲಿ ಸ್ವೀಟ್ಸ್, ಬಾಂಬೆ ಬೇಕರಿ ಇತ್ಯಾದಿ ಹೆಸರಿನ ಅಂಗಡಿಗಳು ಪಾಕಿಸ್ತಾನದಲ್ಲಿ ಇರುವುದರ ಬಗ್ಗೆ ಇವರು ಬೆಳಕು ಚೆಲ್ಲಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: