ಕಿಸ್ ಕೊಟ್ಟಿದ್ದೇನೆ, ನಾನು ಪ್ರೆಗ್ನೆಂಟಾ? ಹುಡುಗಿಯರ ಪ್ರಶ್ನೆಗಳಿಗೆ ದಂಗಾಗುತ್ತಿದ್ದಾರೆ ದೇಶದ ವ್ಯದ್ಯರು

ಸಂತಾನೋತ್ಪತ್ತಿ ಹೇಗೆ ಆಗುತ್ತದೆ, ಸಂಭೋಗ ಕ್ರಿಯೆ ಹೇಗೆ ಸಾಗುತ್ತದೆ ಎಂಬ ಕೆಲ ಕನಿಷ್ಠ ಜ್ಞಾನವು ಅನೇಕರಲ್ಲಿ ಇರುವುದಿಲ್ಲ. ಮದುವೆಯಾಗಿ ಜೊತೆಯಲ್ಲಿದ್ದರೆ ಮಗು ಆಗುತ್ತೆ ಎಂದು ಭ್ರಮಿಸುವವರು ಇದ್ದಾರಂತೆ. ಹೀಗಾಗಿ ಸೆಕ್ಸ್ ಎಜುಕೇಶನ್ ಬೇಕು ಎಂತಾರೆ ವೈದ್ಯರು.

Vijayasarthy SN
Updated:November 2, 2018, 8:03 PM IST
ಕಿಸ್ ಕೊಟ್ಟಿದ್ದೇನೆ, ನಾನು ಪ್ರೆಗ್ನೆಂಟಾ? ಹುಡುಗಿಯರ ಪ್ರಶ್ನೆಗಳಿಗೆ ದಂಗಾಗುತ್ತಿದ್ದಾರೆ ದೇಶದ ವ್ಯದ್ಯರು
ಲೈಂಗಿಕ ಶಿಕ್ಷಣ
Vijayasarthy SN
Updated: November 2, 2018, 8:03 PM IST
- ರಾಖಿ ಬೋಸ್, ನ್ಯೂಸ್18

ಆಕೆ ಇನ್ನೂ 17 ವರ್ಷದ ಹುಡುಗಿ. ಬಾಯ್​ಫ್ರೆಂಡ್ ಜೊತೆ ಚೆಲ್ಲುಚೆಲ್ಲಾಗಿ ಆಡುವ ವಯಸ್ಸು. ಈ ಚೆಲ್ಲಾಟದಲ್ಲಿ ಆಕೆ ತನ್ನ ಬಾಯ್​ಫ್ರೆಂಡ್​ಗೆ ಕಿಸ್ ಕೊಡುತ್ತಾಳೆ. ಆಮೇಲೆ ಆಕೆಗೆ ಅದೇನೋ ದುಗುಡ, ಸಂಕಟ, ಭಯ. ಸಿನಿಮಾಗಳಲ್ಲಿ ಕಿಸ್ ಸೀನ್, ಬಿಸಿ ಅಪ್ಪುಗೆಯ ಸೀನ್ ನಂತರ ಮಹಿಳೆ ಗರ್ಭವತಿಯಾಗಿರುವುದನ್ನು ತೋರಿಸುತ್ತಾರೆ. ಇಂಥವೇ ದೃಶ್ಯಗಳನ್ನ ಆ ಹುಡುಗಿ ನೋಡಿದ್ದಿರಬೇಕು. ತಾನು ಗರ್ಭವತಿಯಾಗಿಬಿಡುತ್ತೇನೆಂಬ ಭಯದಲ್ಲಿ ಆಕೆ ಗರ್ಭನಿರೋಧಕ ಐ-ಪಿಲ್ ಮಾತ್ರೆ ನುಂಗುತ್ತಾಳೆ. ನಂತರ, ಆಕೆಗೆ ಆ ತಿಂಗಳು ಋತುಸ್ರಾವ ಆಗುವುದಿಲ್ಲ. ಭಯಗೊಂಡ ಆಕೆ ವೈದ್ಯರ ಬಳಿ ದೌಡಾಯಿಸುತ್ತಾಳೆ. ಆಗ ವೈದ್ಯರಿಗೆ ವಾಸ್ತವದಲ್ಲಿ ಆಗಿದ್ದೇನು ಎಂಬುದು ಗೊತ್ತಾಗುತ್ತದೆ. ಬಾಯ್​ಫ್ರೆಂಡ್ ಜೊತೆ ಆಕೆಯ ಸಂಭೋಗ ಮಾಡಿರುವುದೇ ಇಲ್ಲ. ಕೇವಲ ಕಿಸ್ ಮಾತ್ರ ಆಗಿರುತ್ತದೆ.

ದಿಲ್ಲಿ ಮೂಲದ ವೈದ್ಯೆ ಡಾ. ಎಸ್​.ವಿ. ಕುಟ್ಟಿ ಎಂಬುವವರು ಈ ಪ್ರಸಂಗವನ್ನು ನೆನಪಿಸಿಕೊಂಡು ತನ್ನ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಗರ್ಭಪರೀಕ್ಷೆಗೆಂದು ಬಂದ ಆ 17 ವರ್ಷದ ಹುಡುಗಿಗೆ ತನ್ನ ಬಾಯ್​ಫ್ರೆಂಡ್​ನ ಶಿಶ್ನ ಹೇಗಿರುತ್ತೆ ಎಂಬುದೂ ಗೊತ್ತಿರಲಿಲ್ಲ. ಅವರಿಬ್ಬರ ನಡುವೆ ಕಿಸ್ಸಿಂಗ್ ಬಿಟ್ಟರೆ ಬೇರೆ ಏನೂ ನಡೆದೇ ಇರಲಿಲ್ಲ ಎಂದು ಡಾ. ಕುಟ್ಟಿ ಹೇಳುತ್ತಾರೆ. ಸೆಕ್ಸ್ ವಿಚಾರದ ಬಗ್ಗೆ ನಮ್ಮ ಸಮಾಜಕ್ಕಿರುವ ಅಸಡ್ಡೆ, ಕೀಳರಿಮೆ, ಪಾಪಪ್ರಜ್ಞೆಯಿಂದಾಗಿ ಈ ಮಕ್ಕಳಲ್ಲಿ ಮಾಹಿತಿ ಕೊರತೆ ಎದುರಾಗಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಮದುವೆಯಾಗಿ ಹತ್ತಿಪ್ಪತ್ತು ಮಕ್ಕಳನ್ನು ಹೆರುವ, ಜನಸಂಖ್ಯೆ ವಿಪರೀತವಾಗಿ ಏರಿರುವ, ಹಾಗೂ ಕಾಮಸೂತ್ರದಂಥ ರತಿ ವಿಜ್ಞಾನದ ಗ್ರಂಥ ಇತ್ತ ಭಾರತದಲ್ಲಿ ಇಂಥ ಸೆಕ್ಸ್ ಅಜ್ಞಾನ ಇದೆ ಎಂದರೆ ತುಸು ಅಚ್ಚರಿಯಾದೀತು. ಆದರೆ, ವಾಸ್ತವದಲ್ಲಿ ಇದು ಕಟು ಸತ್ಯ.

ಕೆಲ ಅಧ್ಯಯನಗಳ ಪ್ರಕಾರ, ಮೇಲೆ ತಿಳಿಸಿದ 17 ವರ್ಷದ ಹುಡುಗಿಯ ಕಿಸ್ ಮತ್ತು ಪ್ರೆಗ್ನೆನ್ಸಿಯಂತಹ ಪ್ರಸಂಗಗಳು ದೇಶಾದ್ಯಂತ ವ್ಯಾಪಕವಾಗಿವೆ. ಮದುವೆಯಾಗುವ ನವಜೋಡಿಯ ಮನಸ್ಸಿನಲ್ಲಿ ಸೆಕ್ಸ್ ಬಗ್ಗೆ ಅವರದ್ದೇ ಕಲ್ಪನೆಗಳಿವೆ. ಮದುವೆಯಾಗಿ ಜೊತೆಯಲ್ಲಿದ್ದರೆ ಗರ್ಭಧಾರಣೆ ತನ್ನಂತಾನೆ ಆಗಿಬಿಡುತ್ತದೆ ಎಂದು ಭಾವಿಸಿಕೊಳ್ಳುವವರ ಸಂಖ್ಯೆ ಬಹಳಷ್ಟಿದೆಯಂತೆ.

ಮದುವೆಯಾಗಿ ಹಲವು ವರ್ಷಗಳ ನಂತರ ತನಗೆ ಮಕ್ಕಳಾಗಿಲ್ಲವೆಂದು ದಿಗಿಲುಗೊಂಡು ವೈದ್ಯರ ಬಳಿ ಬರುವವರಿರುತ್ತಾರೆ. ಆದರೆ, ಅವರು ಯಾವತ್ತೂ ವಾಸ್ತವದಲ್ಲಿ ಸಂಭೋಗಿಸಿರುವುದೇ ಇಲ್ಲ. ಫರ್ಟಿಲಿಟಿ ತಜ್ಞ ಡಾ. ಕೆ.ಡಿ. ನಾಯರ್ ಎಂಬುವವರು ಇಂಥದ್ದೊಂದು ಪ್ರಸಂಗವನ್ನು ಸ್ಮರಿಸಿಕೊಳ್ಳುತ್ತಾರೆ.

“ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವ ದಂಪತಿಯೊಂದು ನಮ್ಮ ಬಳಿ ಬರುತ್ತದೆ. ಇವರ ವರ್ಕ್ ಟೈಮಿಂಗ್ಸ್ ತೀರಾ ವಿಭಿನ್ನವಾಗಿತ್ತು. ಒಬ್ಬರಿಗೆ ಡೇ ಶಿಫ್ಟ್ ಇದ್ದರೆ ಮತ್ತೊಬ್ಬರಿಗೆ ನೈಟ್ ಶಿಫ್ಟ್ ಇರುತ್ತಿತ್ತು. ಅವರಿಬ್ಬರು ಸೇರಲು ಅವಕಾಶವೇ ಇರಲಿಲ್ಲ. ಆದರೂ ಅವರು ತಮಗಿನ್ನೂ ಮಗುವಾಗುತ್ತಿಲ್ಲವೆಂದು ಅಲವತ್ತುಕೊಂಡು ಬಂದಿದ್ದರು,” ಎಂದು ಡಾ. ನಾಯರ್ ಹೇಳುತ್ತಾರೆ. ಒಂದಷ್ಟು ದಿನಗಳ ಕಾಲ ಇಬ್ಬರೂ ಒಟ್ಟಿಗೆ ಇದ್ದರಂತೆ.
Loading...

ಮಕ್ಕಳಾಗಲು ಅಷ್ಟು ಸಾಕು ಎಂದು ಅವರಿಬ್ಬರು ಭಾವಿಸಿಬಿಟ್ಟಿದ್ದರು ಎಂದು ಹೇಳುವ ನಾಯರ್, ಮತ್ತೊಂದು ಪ್ರಸಂಗವನ್ನೂ ವಿವರಿಸುತ್ತಾರೆ. ಮತ್ತೊಂದು ದಂಪತಿ ಸರಿಯಾಗಿಯೇ ಸಂಭೋಗ ಮಾಡುತ್ತಿದ್ದರಾದರೂ ಮಕ್ಕಳಾಗುತ್ತಿರಲಿಲ್ಲ. ಆದರೆ, ಮಕ್ಕಳಾಗಲು ಆಗಬೇಕಾದ್ದೇ ಆಗಿರಲಿಲ್ಲ.

“ನಾನು ವಿಚಾರಿಸಿದಾಗ ಇಬ್ಬರೂ ಸರಿಯಾಗಿಯೇ ಸೆಕ್ಸ್ ಮಾಡುತ್ತಿದ್ದುದು ಗೊತ್ತಾಯಿತು. ಆದರೆ ಪ್ರತ್ಯೇಕವಾಗಿ ಮಾತನಾಡಿಸಿದಾಗ ಬೇರೊಂದು ಸಂಗತಿ ತಿಳಿಯಿತು. ಗಂಡ ಸಲಿಂಗಕಾಮಿಯಾಗಿದ್ದರಿಂದ ಸಂಭೋಗದ ವೇಳೆ ವೀರ್ಯ ಚೆಲ್ಲುವ ಅಭ್ಯಾಸವಿರಲಿಲ್ಲ. ಹೆಂಡತಿಯೊಂದಿಗೆ ಸಂಭೋಗ ಮಾಡಿದರೂ ವೀರ್ಯಸ್ಖಲನವಾಗುತ್ತಿಲಿಲ್ಲ,” ಎಂದು ಡಾ. ಕೆ.ಡಿ. ನಾಯರ್ ತಿಳಿಸುತ್ತಾರೆ.

ಹಾಗೆಯೇ, ಮಕ್ಕಳಾಗುವುದು ಪ್ರಕೃತಿಯ ಕೊಡುಗೆ, ದೇವರ ಕೊಡುಗೆ ಎಂಬ ಭಾವನೆ ಸಾಕಷ್ಟು ಜನರಲ್ಲಿ ಈಗಲೂ ಪ್ರಚಲಿತವಾಗಿದೆ. ಮಹಿಳೆಗೆ ದೇವರೇ ಮುಡಿ ತುಂಬಿಸುತ್ತಾನೆ ಎಂದು ತಿಳಿದಿರುತ್ತಾರೆ. ಹೀಗಾಗಿ, ಮಕ್ಕಳಾಗಲಿಲ್ಲವೆಂದರೆ ಮಹಿಳೆಯ ಮೇಲೆಯೇ ದೂಷಣೆ ಹೋಗುತ್ತದೆ, ಆಕೆಗೆ ಬಂಜೆ ಎಂಬ ಪಟ್ಟ ಕಟ್ಟುತ್ತಾರೆ. ಆದರೆ, ವೈದ್ಯಕೀಯದ ಪ್ರಕಾರ, ಮಕ್ಕಳಾಗದಿರಲು ಹೆಣ್ಣಿನಷ್ಟೇ ಗಂಡಿನಲ್ಲಿರುವ ಕೊರತೆಯೂ ಕಾರಣವಾಗಿರಬಹುದು. ಗಂಡಿನಲ್ಲಿ ಸರಿಯಾದ ಪ್ರಮಾಣದಲ್ಲಿ ವೀರ್ಯ ಇಲ್ಲದಿದ್ದರೆ, ಅಥವಾ ಸರಿಯಾದ ಗುಣಮಟ್ಟದ ವೀರ್ಯವಿಲ್ಲದಿದ್ದರೆ ಮಕ್ಕಳಾಗುವುದು ಕಷ್ಟ. ಆದರೆ, ಈ ಅರಿವು ನಮ್ಮ ಸಮಾಜದಲ್ಲಿಲ್ಲ.

ಇದೆಲ್ಲಾ ನೋಡಿದಾಗ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ಬಹಳಷ್ಟು ವೈದ್ಯರು ಹೇಳುತ್ತಾರೆ. ಸೆಕ್ಸ್ ಎಂದರೆ ಯಾವುದೇ ಮುಜುಗರವಿಲ್ಲದೆ ಚರ್ಚೆಯಾಗುವಂತಾಗಬೇಕು. ಗಂಡು ಮತ್ತು ಹೆಣ್ಣಿನ ದೇಹದ ಪ್ರತಿಯೊಂದು ಅಂಗ ಹಾಗೂ ಅದರ ಕಾರ್ಯಗಳ ಬಗ್ಗೆ ತಿಳಿವಳಿಕೆ ಇರಬೇಕು. ಗರ್ಭಧಾರಣೆ ಮಾಡಲು ಏನೇನು ಅಗತ್ಯ? ಗರ್ಭಧಾರಣೆ ಆಗದಿರಲು ಏನೇನು ಮಾಡಬೇಕು? ಇತ್ಯಾದಿ ಇನ್ನೂ ಅನೇಕ ವಿಚಾರಗಳನ್ನ ಮಕ್ಕಳಿಗೆ ತಿಳಿಸಿಕೊಡುವಂಥ ಸೆಕ್ಸ್ ಎಜುಕೇಶನ್ ಬೇಕು ಎಂಬುದು ಡಾ. ನಾಯರ್, ಡಾ. ಕುಟ್ಟಿಯಂಥ ಸಾವಿರಾರು ವೈದ್ಯರ ಅಭಿಮತವಾಗಿದೆ.
First published:November 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ