ಕಾರವಾರ(ಮೇ.29): ಕೋಳಿ ಕಾಳಗದಲ್ಲಿ (Cock Fight) ಪೋಲಿಸರಿಂದ (Police) ಸೆರೆಯಾಗಿದ್ದ ಫೈಟರ್ ಕೋಳಿಗಳನ್ನ ಪೋಲಿಸ್ ಠಾಣೆಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ (Auction) ಕೊಳ್ಳಲು ಜನರು ಮುಗಿಬಿದ್ದರು. ಜಪ್ತಿ ಮಾಡಿದ ವಾಹನ ಅಷ್ಟೆ ಅಲ್ಲದೆ ಈಗ ಕೋಳಿಗಳು ಕೂಡಾ ಬಹಿರಂಗ ಹರಾಜು ಆದವು. ಕೋಳಿ ಅಂಕದಲ್ಲಿ ಬಂಧಿಯಾಗಿದ್ದ ಕಾಳಗದ ಕೋಳಿಗಳ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಕೊಳ್ಳಲು ಪೋಲೀಸ್ ಠಾಣೆಯೆದರು ಜಮಾಯಿಸಿದ್ದರೆ ಇನ್ನು ಕೆಲವರು ಹರಾಜು ಪ್ರಕ್ರಿಯೆ ಹೇಗಿರೊತ್ತೆ ಎಂದು ನೋಡಲು ಆಗಮಿಸಿದ್ದರು. ನಡೆದ ಹರಾಜು ಪೈಪೋಟಿಯ ಸವಾಲಿನಲ್ಲಿ 8ಅಂಕದ ಕೋಳಿಗಳನ್ನು 8300ರುಪಾಯಿಗಳಿಗೆ ಅಂಕೋಲಾ (Ankola) ತಾಲೂಕಿನ ಹಿಲ್ಲೂರಿನವರೋರ್ವರು ಕೋಳಿಗಳನ್ನು ತಮ್ಮದಾಗಿಸಿಕೊಂಡರು.
ಕಾಳಗದ ಕೋಳಿಗಳ ಕಥೆ ಏನು..?
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿಯ ಅರಣ್ಯ ಪ್ರದೇಶದಲ್ಲಿ (Forest Area) ಫೆಬ್ರುವರಿ 24 ರಂದು ದಾಳಿ ನಡೆಸಿದ ಪೋಲಿಸರು (Police) 8ಫೈಟರ್ ಕೋಳಿಗಳೊಂದಿಗೆ, ಮೂವರು ಆರೋಪಿಗಳು, ನಾಲ್ಕು ಬೈಕ್ (Bike) ಹಾಗೂ ನಾಲ್ಕು ಸಾವಿರ ರೂಪಾಯಿ ನಗದನ್ನು ಬರಾಮತ್ತು ಮಾಡಿಕೊಂಡಿದ್ದರು.
ಕಾಳಗದ ಕೋಳಿಗಳು ಅರೆಸ್ಟ್ನಲ್ಲಿಯೇ ಇದ್ದವು
ಬಂಧಿತ ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಮನೆ ಸೇರಿಕೊಂಡಿದ್ದರು. ಆದರೆ ಕಾಳಗದ ಕೋಳಿಗಳು ಮಾತ್ರ ಪೋಲಿಸರ ಬಂಧನದಲ್ಲೇ ಉಳಿದುಕೊಂಡಿದ್ದವು.ಫೆ. 24 ರ ಮಂಗಳವಾರ ದಂದು ಸೆರೆಸಿಕ್ಕ ಕಾಳಗದ ಕೋಳಿಗಳನ್ನು ಪೋಲೀಸ ಠಾಣೆಯ ಸೆರೆಮನೆಯಲ್ಲಿಡಲಾಗಿತ್ತು.
ದಿನ ಕಳೆದಂತೆ ಕೋಳಿಗಳ ರಗಳೆ
ಪೋಲಿಸರ ಕಾಳಜಿಯಲ್ಲಿ ಆಹಾರ ತಿಂದುಂಡು ಮೂರು ದಿನ ಕಳೆದ ಕೋಳಿಗಳು ರಗಳೆಯನ್ನು ಆರಂಭಿಸಿತ್ತು. ಕಾಲಿಗೆ ಕಟ್ಟಿಟ್ಟ ಬಳ್ಳಿಯನ್ನು ಏಳೆದುಕೊಂಡು ಮುನ್ನುಗ್ಗಿ ಬರುತ್ತಿದ್ದ ಕೋಳಿಗಳು ಪೋಲೀಸ ಠಾಣೆಯ ಸೆಲ್‌ನಲ್ಲಿ ಆಗಾಗ ಹೊಡೆದಾಡಿಕೊಳ್ಳುತ್ತಿದ್ದವು.
ಬೆಳಗಾಗ್ತಿದ್ದಂತೆ ಕೊಕ್ಕರೆ ಕೋ
ಬೆಳಗಾಯಿತೆಂದರೆ ಕೋಳಿಗಳ ಕೂಗಿನ ಶಬ್ಧ ಪೋಲಿಸ ಠಾಣೆಯ ಸುತ್ತ ಮುತ್ತ ಅಲಾರಾಂ ಬಾರಿಸಿದಂತಾಗಿತ್ತು. ಈ ಹಿನ್ನಲೆಯಲ್ಲಿ ಕೋಳಿಯನ್ನ ಬಹಿರಂಗ ಹರಾಜು ಮಾಡಲಾಯಿತು.
ಇದನ್ನೂ ಓದಿ: MISSING: ಸೋಲೋ ಟ್ರಿಪ್ ಹೋದ ಯುವಕ ನಾಪತ್ತೆ, ಸಹಾಯಕ್ಕಾಗಿ ಸಹೋದರನ ಭಾವನಾತ್ಮಕ ಮನವಿ
ಪೋಲೀಸ ಠಾಣೆಯಲ್ಲಿ ಮೂರು ದಿನ ಕಳೆದ ಕಾಳಗದ ಕೋಳಿಗಳ ಹರಾಜು ಕಾರ್ಯವನ್ನು ಸಿಪಿಐ ಸಂತೋಷ ಶೆಟ್ಟಿಯವರ ನೇತೃತ್ವದಲ್ಲಿ ಕೈಗೊಂಡಿದ್ದರು. ಹರಾಜಿನ ಸುದ್ದಿ ತಿಳಿದ ಕೋಳಿಪ್ರಿಯರು ಪೋಲಿಸ್ ಠಾಣೆಯ ಎದುರು ನೆರೆದಿದ್ದರು.
ಬಂಧನದಲ್ಲಿದ್ದ ಕೋಳಿಗಳು
ಮೂರು ದಿನದವರೆಗೆ ಸೂರ್ಯನ ಬೆಳಕು ಕಾಣದೇ ಬಂಧನದಲ್ಲಿದ್ದ ಕೋಳಿಗಳು ಗುರುವಾರ ಠಾಣೆಯ ಹೊರಾಂಗಣದಲ್ಲಿ ಮೈಕೊಡವಿಕೊಳ್ಳುತ್ತ ವಾರಸುದಾರರತ್ತ ಕಣ್ಣಾಡಿಸುತ್ತಿದ್ದವು. ಕೋಳಿ ಅಂಕದಲ್ಲಿ ಸೆರೆಯಾದ ಕೋಳಿಗಳ ವಾರಸುದಾರರು ಹರಾಜಿನಲ್ಲಿ ನೇರವಾಗಿ ಪಾಲ್ಗೊಳ್ಳದೇ ತೆರೆಮರೆಯಲ್ಲಿ ನಿಂತು ಆಪ್ತರ ಮೂಲಕ ಸವಾಲು ಕೂಗಿದರು.
500 ರೂಪಾಯಿಯಿಂದ ಶುರುವಾದ ಸವಾಲ್
ಕಾದಾಟದ ಕೋಳಿಗಳ ಹರಾಜು ಕೂಗುವ ಹೊಣೆಗಾರಿಕೆಯನ್ನು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಯಶವಂತ ನಾಯ್ಕ ವಹಿಸಿಕೊಡಲಾಗಿತ್ತು. ಆರಂಭದಲ್ಲಿ 500 ರೂಪಾಯಿಯಿಂದ ಶುರುವಾದ ಸವಾಲ್ ಏಕಾಏಕಿ ಏರಿಕೆಯಾಗತೊಡಗಿತ್ತು. ಸುಮಾರು ಹದಿನೈದಕ್ಕೂ ಹೆಚ್ಚಿನ ಜನರು ಸವಾಲು ಕೂಗಿದರೆ ಇನ್ನುಳಿದವರು ನೋಡಿ ಆನಂದಿಸಿದರು.
ಇದನ್ನೂ ಓದಿ: ಅದೇನು ಧೈರ್ಯ ಗುರು! ಈ ಗ್ರಾಮದಲ್ಲಿ ಒಬ್ಬಂಟಿ ಮಹಿಳೆ ಮಾತ್ರ ವಾಸಿಸುತ್ತಿದ್ದಾಳೆ
ಹಿಲ್ಲೂರು ತಿಂಗಳಬೈಲಿನ ಸದಾನಂದ ರಾಮಾ ಬಾಂದೇಕರ ಎಂಬುವವರು 8300 ರೂಪಾಯಿಗೆ ಕೊನೆಯ ಸವಾಲು ಕೂಗಿ ಎಂಟು ಕೋಳಿಗಳನ್ನು ತಮ್ಮದಾಗಿಸಿಕೊಂಡರು. ಕೇವಲ ವಾಹನಗಳು ಮಾತ್ರ ಹರಾಜು ಅಲ್ಲ ಈಗ ಕೋಳಿಯನ್ನು ಕೂಡಾ ಹರಾಜು ಮಾಡಾಲಗುತ್ತದೆ ಎನ್ನೋದಕ್ಕೆ ಮೊದಲ ಸಾಕ್ಷಿಯಾಯಿತು ಅಂಕೋಲಾ ಪೋಲಿಸ್ ಠಾಣೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ