ಆಸ್ಪತ್ರೆಗೆ ಬೆಂಕಿ ಬಿದ್ದರೂ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ರಷ್ಯಾ ವೈದ್ಯರು

ಎಂಟು ವೈದ್ಯರು ಮತ್ತು ದಾದಿಯರ ಗುಂಪು ಎರಡು ಗಂಟೆಗಳಲ್ಲಿ ಆಪರೇಷನ್‌ ಅನ್ನು ಪೂರ್ಣಗೊಳಿಸಿ ನಂತರ ರೋಗಿಯನ್ನು ಬೇರೊಂದು ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ ಎಂದು ತುರ್ತು ಸಚಿವಾಲಯ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವೈದ್ಯೋ ನಾರಾಯಣೋ ಹರಿ ಎನ್ನುವ ಮಾತು ಹಲವು ವೈದ್ಯರಿಗೆ ನಿಜವಾಗಲೂ ಅನ್ವಯಿಸುತ್ತೆ. ದುಡ್ಡೇ ತೆಗೆದುಕೊಳ್ಳದೆ ಅಥವಾ ಕಡಿಮೆ ದುಡ್ಡು ತೆಗೆದುಕೊಂಡು ಚಿಕಿತ್ಸೆ ನೀಡುವ ವೈದ್ಯರು ಒಂದೆಡೆಯಾದರೆ, ತಮಗೆ ಸೋಂಕು ತಗುಲುವುದೆಂಬ ಭೀತಿ ಇದ್ದರೂ ಚಿಕಿತ್ಸೆ ನೀಡುವ ವೈದ್ಯರು ಇನ್ನೊಂದು ಕಡೆ. ಆದರೆ, ರಷ್ಯಾದಲ್ಲಿ ಇದೆಲ್ಲಕ್ಕಿಂತ ಮಿಗಿಲಾದ ಆಶ್ಚರ್ಯಕರ ಘಟನೆ ನಡೆದಿದೆ. ಆಸ್ಪತ್ರೆಗೆ ಬೆಂಕಿ ಹೊತ್ತಿಕೊಂಡಿದ್ದರೂ ತಮ್ಮ ಪ್ರಾಣ ಭಯ ಲೆಕ್ಕಿಸದೆ ರೋಗಿಗೆ ಆಪರೇಷನ್‌ ನಡೆಸಿದ್ದಾರೆ ವೈದ್ಯರು ಹಾಗೂ ದಾದಿಯರ ಗುಂಪು. ತಮಗೂ ಬೆಂಕಿ ತಗುಲಬಹುದು, ಪ್ರಾಣ ಕಳೆದುಕೊಳ್ಳಬಹುದೆಂಬ ಬಗ್ಗೆ ಚಿಂತೆ ಮಾಡದೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಬಳಿಕ, ರೋಗಿಯನ್ನು ಬೇರೆಡೆ ಶಿಫ್ಟ್‌ ಮಾಡಿ ತಾವೂ ಕೂಡ ಬಚಾವಾಗಿದ್ದಾರೆ.

ಆಸ್ಪತ್ರೆಗೆ ಬೆಂಕಿ ಬಿದ್ದು ಅವರ ಸುತ್ತಲೂ ಸುಟ್ಟು ಹೋಗುತ್ತಿದ್ದರೂ ಆ ವೈದ್ಯರು ಮಾತ್ರ ರೋಗಿಗೆ ಶುಕ್ರವಾರ ತೆರೆದ ಹೃದಯ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ರಷ್ಯಾದ ಪೂರ್ವ ಭಾಗದ ಸಾರಿಸ್ಟ್‌ ಯುಗದ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ಜರುಗಿದೆ. ಇನ್ನು, ಈ ಆಸ್ಪತ್ರೆಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆ ಸಮಯ ತೆಗೆದುಕೊಂಡರೂ, ಆ ಆಪರೇಷನ್‌ ಕೋಣೆಗೆ ಮಾತ್ರ ತೊಂದರೆಯಾಗದಂತೆ, ಹೊಗೆ ಹೋಗದಂತೆ ಫ್ಯಾನ್‌ಗಳನ್ನು ಬಳಸಿದ್ದಾರೆ. ಅಲ್ಲದೆ, ಪವರ್‌ ಕೇಬಲ್‌ಗಳ ಮುಖಾಂತರ ಅಲ್ಲಿಗೆ ವಿದ್ಯುತ್‌ ಸರಬರಾಜು ಸರಿಯಾಗಿ ಹೋಗುವಂತೆ ನೋಡಿಕೊಳ್ಳಲಾಗಿದೆ. ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕವೇ ರೋಗಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Easter 2021: ಈಸ್ಟರ್ ಆಚರಣೆಯ ಇತಿಹಾಸ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ...!

ಎಂಟು ವೈದ್ಯರು ಮತ್ತು ದಾದಿಯರ ಗುಂಪು ಎರಡು ಗಂಟೆಗಳಲ್ಲಿ ಆಪರೇಷನ್‌ ಅನ್ನು ಪೂರ್ಣಗೊಳಿಸಿ ನಂತರ ರೋಗಿಯನ್ನು ಬೇರೊಂದು ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ ಎಂದು ತುರ್ತು ಸಚಿವಾಲಯ ತಿಳಿಸಿದೆ.

“ನಾವು ವ್ಯಕ್ತಿಯನ್ನು ಉಳಿಸಬೇಕಿತ್ತೇ ಹೊರತು, ಅದನ್ನು ಬಿಟ್ಟು ನಮಗೆ ಮಾಡಲು ಬೇರೆ ಏನೂ ಇರಲಿಲ್ಲ. ನಾವು ಎಲ್ಲವನ್ನೂ ಉನ್ನತ ಮಟ್ಟದಲ್ಲಿ ಮಾಡಿದ್ದೇವೆ” ಎಂದು ಶಸ್ತ್ರಚಿಕಿತ್ಸಕ ವ್ಯಾಲೆಂಟಿನ್ ಫಿಲಾಟೊವ್ ಹೇಳಿಕೆ ನೀಡಿರುವ ಬಗ್ಗೆ ರೆನ್‌ ಟಿವಿ ವರದಿ ಮಾಡಿದೆ. ಇದು ಹಾರ್ಟ್ ಬೈ-ಪಾಸ್ ಕಾರ್ಯಾಚರಣೆಯಾಗಿದೆ ಎಂದೂ ಅವರು ಹೇಳಿದರು.

ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ 128 ಜನರನ್ನು ತಕ್ಷಣ ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. "ಕ್ಲಿನಿಕ್ ಅನ್ನು ಒಂದು ಶತಮಾನಕ್ಕಿಂತಲೂ ಹಿಂದೆ, 1907 ರಲ್ಲಿ ನಿರ್ಮಿಸಲಾಗಿತ್ತು. ಮತ್ತು ಬೆಂಕಿಯು ಮಿಂಚಿನಂತೆ ಮೇಲ್ಛಾವಣಿಯ ಮರದ ಛಾವಣಿಗಳ ಮೂಲಕ ಹರಡಿತು" ಎಂದು ಸಚಿವಾಲಯ ತಿಳಿಸಿದೆ.

ಅಲ್ಲದೆ, ಈ ಅಗ್ನಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದೂ ವರದಿಯಾಗಿದೆ. ಇನ್ನು, ''ವೈದ್ಯರಿಗೆ ಮತ್ತು ಅಗ್ನಿ ಶಾಮಕ ದಳದವರಿಗೆ ನಮನ'' ಎಂದು ಸ್ಥಳೀಯ ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಈ ಘಟನೆ ಹಾಗೂ ಆಪರೇಷನ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Published by:Latha CG
First published: