• Home
  • »
  • News
  • »
  • trend
  • »
  • Fake Flight: ಈ ವಿಮಾನ ಹತ್ತಲು ಚೆಕ್-ಇನ್​ ಮಾಡ್ಬೇಕು, ಆದ್ರೆ ಟೇಕ್​ ಆಫ್ ಮಾತ್ರ ಆಗಲ್ಲ

Fake Flight: ಈ ವಿಮಾನ ಹತ್ತಲು ಚೆಕ್-ಇನ್​ ಮಾಡ್ಬೇಕು, ಆದ್ರೆ ಟೇಕ್​ ಆಫ್ ಮಾತ್ರ ಆಗಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Fake Flight Experience: ಈ ನಿಲ್ದಾಣವು ಈಗ ನಕಲಿ ಹಾರಾಟದ ಅನುಭವ ನೀಡಲೆಂದು "ಐ ವಾನ್ನಾ ಫ್ಲೈ" ಎಂಬ ಪ್ಯಾಕೇಜ್ ಅನ್ನು ಒದಗಿಸುತ್ತಿರುವ ಬಗ್ಗೆ ರಷ್ಯಾದ ಸ್ವತಂತ್ರ ನಿಯತಕಾಲಿಕೆಯಾದ ಇನ್ಸೈಡರ್ ವರದಿ ಮಾಡಿದೆ.

  • Share this:

ವಿಮಾನದಲ್ಲಿ (Flight) ಹಾರಾಡಬೇಕೆಂಬ ಕನಸು (Dream) ಹಲವರಿಗಿರುತ್ತದೆ. ಆದರೆ, ಧೊತ್ತನೆ ಟಿಕೆಟ್ (Ticket) ಬುಕ್ ಮಾಡಿ ಬಸ್ಸೇರಿದಂತೆ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನವನ್ನು ಏರಲು ಸಾಧ್ಯವಿಲ್ಲ. ದೇಶೀಯವೇ ಆಗಲಿ ಅಥವಾ ಅಂತಾರಾಷ್ಟ್ರೀಯವೇ (International) ಆಗಲಿ ವಿಮಾನದಲ್ಲಿ ಸಂಚರಿಸಬೇಕೆಂದರೆ ಹಲವು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ. ಚೆಕ್-ಇನ್ ಆಗುವುದು, ಪರಿಶೀಲನೆ, ಹೀಗೆ ಕೆಲವು ಪ್ರಕ್ರಿಯೆಗಳಿಗೆ ಒಳಪಡಬೇಕಾಗುತ್ತದೆ. ಸಾಮಾನ್ಯವಾಗಿ ವಿಮಾನದಲ್ಲಿ ಸಂಚರಿಸುವವರಿಗೆ ಈ ಬಗ್ಗೆ ತಿಳಿದೇ ಇರುತ್ತದೆ. ಇದೂ ಸಹ ಒಂದು ವಿಶಿಷ್ಟ ರೀತಿಯ ಅನುಭವವೇ ಆಗಿದೆ.


ಈ ವಿಮಾನ ಟೇಕಾಫ್ ಮಾತ್ರ ಆಗಲ್ಲ


ಸದ್ಯ, ರಷ್ಯಾದ ವಿಮಾನ ನಿಲ್ದಾಣವೊಂದರಲ್ಲಿ ಇದೇ ರೀತಿಯ ಅನುಭವವನ್ನು ನೀಡಲಾಗುತ್ತಿದೆ. ಆದರೆ, ಇದರಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ, ಅದೇನೆಂದರೆ ನೀವು ವಿಮಾನ ನಿಲ್ದಾಣದ ಚೆಕ್-ಇನ್, ಭದ್ರತೆ, ಅಂತಿಮವಾಗಿ ವಿಮಾನದಲ್ಲೂ ಸಹ ಹೋಗಿ ಕೂರುತ್ತೀರಿ. ಈ ಎಲ್ಲಾ ಅನುಭವ ಪಡೆಯುತ್ತೀರಿ ಆದರೆ ವಿಮಾನ ಮಾತ್ರ ಟೇಕ್ ಆಫ್ ಆಗಲ್ಲ. ಹೌದು, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದಾಗಿನಿಂದ ರಷ್ಯಾದ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟಗಳನ್ನು ಅಮಾನತ್ತು ಮಾಡಲಾಗಿದೆ. ಅವುಗಳಲ್ಲಿ ಒಂದಾಗಿದೆ ಅನಾಪಾ ವಿಮಾನ ನಿಲ್ದಾಣ.


ಈ ನಿಲ್ದಾಣವು ಈಗ ನಕಲಿ ಹಾರಾಟದ ಅನುಭವ ನೀಡಲೆಂದು "ಐ ವಾನ್ನಾ ಫ್ಲೈ" ಎಂಬ ಪ್ಯಾಕೇಜ್ ಅನ್ನು ಒದಗಿಸುತ್ತಿರುವ ಬಗ್ಗೆ ರಷ್ಯಾದ ಸ್ವತಂತ್ರ ನಿಯತಕಾಲಿಕೆಯಾದ ಇನ್ಸೈಡರ್ ವರದಿ ಮಾಡಿದೆ. ಈಗಾಗಲೇ ರಷ್ಯಾದ ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜನ್ಸಿಯು ಉಕ್ರೇನ್ ಮೇಲೆ ಯುದ್ಧ ಪ್ರಾರಂಭವಾದಾಗಿನಿಂದಲೇ ಈ ನಿಲ್ದಾಣದಿಂದ ಎಲ್ಲ ವಿಮಾನ ಹಾರಾಟಗಳನ್ನು ಸಸ್ಪೆಂಡ್ ಮಾಡಿದೆ ಅದು ಕೂಡ ಫೆಬ್ರುವರಿಯಿಂದಲೇ ಎಂಬುದನ್ನು ಇಲ್ಲಿ ಗಮನಿಸಬಹುದು.


ಪ್ರಸ್ತುತ ಅನಾಪಾ ಪ್ರದೇಶವು ರಷ್ಯಾ ಹಾಗೂ ಉಕ್ರೇನ್ ದೇಶದ ಪೆನಿನ್ಸುಲಾ ಪ್ರದೇಶವಾದ ಕ್ರಿಮಿಯಾದ ಗಡಿಗಳ ಬಳಿ ಸ್ಥಿತವಿದ್ದು ರಷ್ಯಾ ಇದನ್ನು 2014 ರಿಂದಲೇ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಆದರೆ, ಈಗ ಇಲ್ಲಿನ ಜನರಿಗೆ ಯಾವುದೇ ರೀತಿಯ ವಿಮಾನ ಪ್ರಯಾಣದ ಅನುಭವ ಅಥವಾ ಸೇವೆ ಸಿಗದೆ ಪರದಾಡುವಂತಾಗಿದೆ. ಅಲ್ಲದೆ, ನೆರೆಹೊರೆಯ ದೇಶಗಳೂ ಸಹ ಯುದ್ಧ ಕಾರಣದಿಂದಾಗಿ ರಷ್ಯಾ ವಿಮಾನಗಳಿಗೆ ನಿರ್ಬಂಧ ಹೇರಿವೆ.


ಇಂತಹ ಸಂದರ್ಭದಲ್ಲಿ ಈಗ ವಿಮಾನ ಪ್ರಯಾಣದ ನಕಲಿ ಅನುಭವ ನೀಡುವಂತಹ ಪ್ಯಾಕೆಜ್ ಕಾರ್ಯನಿರ್ವಹಿಸುತ್ತಿದ್ದು ಇದನ್ನು ಪಡೆಯಲು 1500 ರಷ್ಯನ್ ರೂಬಲ್ಸ್ ಇಲ್ಲವೆ 24 ಯುಎಸ್ ಡಾಲರ್ ಗಳಷ್ಟು ಶುಲ್ಕ ಪಾವತಿಸಬೇಕು. ಈ ಮೊತ್ತದಲ್ಲಿ, ವಿಮಾನ ನಿಲ್ದಾಣದಲ್ಲಿ ಚೆಕ್-ಇನ್, ಪರಿಶೀಲನೆ, ಭದ್ರತಾ ತಪಾಸಣೆ, ಕಾಯುವಿಕೆ ಹಾಗೂ ವಿಮಾನದಲ್ಲಿ ಏರುವ ಸೇವೆಗಳನ್ನು ಒದಗಿಸಲಾಗುತ್ತದೆ. ಆದರೆ, ವಿಮಾನ ಮಾತ್ರ ಟೇಕ್ ಆಫ್ ಆಗೋದಿಲ್ಲ.


ಇದನ್ನೂ ಓದಿ: ರೈಲು ಬೋಗಿಗಳಲ್ಲಿ ಬರೆದಿರುವ ನಂಬರ್​ಗಳ ಅರ್ಥ ಇದಂತೆ


ಹೊಸ ಅನುಭವ ನೀಡುತ್ತದೆ ಈ ವಿಮಾನ


ಇಷ್ಟೇ ಅಲ್ಲದೆ, ಗ್ರಾಹಕರಿಗೆ ಕಾಕ್ ಪಿಟ್ ಪ್ರವೇಶಿಸಲೂ ಸಹ ಅನುಮತಿಸಲಾಗುತ್ತಿದ್ದು ಅವರಿಗೆ ಊಟ, ಉಪಹಾರಗಳನ್ನೂ ಸಹ ನೀಡಲಾಗುತ್ತದೆ. ಹಾಗೂ ವಿಶೇಷ ಸಂದರ್ಭಗಳಲ್ಲಿ ಫೈರ್ ಫೈಟರ್ ವಾಹನಗಳ ಮೂಲಕ ವಿಮಾನಗಳಿಗೆ ಸಿಂಪಡಿಸಲಾಗುವ ನೀರಿನಿಂದ ಅಭಿಷೇಕ ಎಂಬಂತಹ ಪ್ರಕ್ರಿಯೆಯನ್ನೂ ಸಹ ಮಾಡಲಾಗುತ್ತಿರುವುದಾಗಿ ಇನ್ಸೈಡರ್ ವರದಿ ಮಾಡಿದೆ.


ಒಟ್ಟಾರೆಯಾಗಿ "ಐ ವಾನ್ನಾ ಫ್ಲೈ" ಸೇವೆಯನ್ನು ಒಂದು ರೀತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಕೆಲವು ಕಡೆ ಏರ್ ಲೈನ್ ಸಂಸ್ಥೆಗಳು ಆಚರಣೆಗೆ ತಂದಿದ್ದ "ಫ್ಲೈಟ್ಸ್ ಟು ನೋವ್ಹೇರ್" ಅಭಿಯಾನದೊಂದಿಗೆ ಹೋಲಿಸಬಹುದಾಗಿದೆ. ಆದರೆ, "ಫ್ಲೈಟ್ಸ್ ಟು ನೋವ್ಹೇರ್" ಅಭಿಯಾನದಲ್ಲಿ ವಿಮಾಗಳು ಟೇಕ್ ಆಫ್ ಆಗುತ್ತಿದ್ದವು ಎಂಬುದನ್ನು ಗಮನಿಸಬಹುದು.


ಇದನ್ನೂ ಓದಿ: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ


ಅಂತಿಮವಾಗಿ, ಯುದ್ಧದಿಂದಾಗುವ ಹಲವು ಅನಿರೀಕ್ಷಿತ ಪರಿಣಾಮಗಳಲ್ಲಿ ಇದನ್ನೂ ಸಹ ಒಂದು ಎನ್ನಬಹುದು. ವಿಮಾನ ಹಾರಾಟ ಬಯಸುವ ಅಥವಾ ವಿಮಾನದ ಅನುಭವ ಬೇಕೇ ಬೇಕೆಂಬ ಹಲಬುವ ಹಲವು ಜನರಿಗೆ ಕಡಿಮೆ ಶುಲ್ಕದಲ್ಲಿ ಕನಿಷ್ಠ ಪಕ್ಷ ವಿಮಾನವನ್ನಾದರೂ ಏರಿದೆವು ಎಂಬ ಅನುಭವ ಅನಾಪಾ ವಿಮಾನ ನಿಲ್ದಾಣ ನೀಡುತ್ತಿದೆ ಎಂದಷ್ಟೇ ಹೇಳಬಹುದು. ಇದು ವಿಚಿತ್ರ ಎಂದೆನಿಸಿದರೂ ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ ಏರ್ ಲೈನ್ ಸಂಸ್ಥೆ ತನ್ನ ಸಿಬ್ಬಂದಿಗಳ ಬದುಕಿಗಾದರೂ ಇದನ್ನು ಮಾಡುತ್ತಿರಬಹುದೇ ಎಂಬ ಒಂದು ಸಂದೇಹ ಮನದಲ್ಲಿ ಬರದೆ ಇರದು.

Published by:Sandhya M
First published: