ಟ್ರಾಫಿಕ್ ಜಂಕ್ಷನ್ ಒಂದರ ಬಳಿ ನಡುರಸ್ತೆಯಲ್ಲೇ ನೂರಾರು ಮಂಗಗಳು ದಿಢೀರನೇ ಪ್ರತ್ಯಕ್ಷವಾಗಿ ‘ಗ್ಯಾಂಗ್ ವಾರ್’ ನಡೆಸಿದವು..! ಹೋ ಇದ್ಯಾವ ಕಾರ್ಟೂನ್ ಸಿನಿಮಾದ ದೃಶ್ಯ ಅಂತೀರಾ? ಹೌದು, ಸಾಮಾನ್ಯವಾಗಿ ಎರಡು ಮಂಗಗಳು ಅಥವಾ ನಾಲ್ಕೈದು ಮಂಗಗಳು ಜಗಳವಾಡುವುದನ್ನು ನಾವು ಅಲ್ಲೋ ಇಲ್ಲೋ ನೋಡಿರುತ್ತೇವೆ. ಆದರೆ ನೂರಾರು ಮಂಗಗಳು ಒಂದು ಕಡೆ ಸೇರಿ ಗುಂಪು ಕದನ ನಡೆಸುವುದನ್ನು ನೋಡಿರಲಿಕ್ಕೆ ಸಾಧ್ಯವಿಲ್ಲ. ಆದರೆ ಇದು ನಿಜಕ್ಕೂ ನಡೆದಿದೆ, ಥೈಲ್ಯಾಂಡ್ನ ಲೋಪ್ಬುರಿ ಎಂಬ ಪ್ರದೇಶದಲ್ಲಿ ನೂರಾರು ಮಂಗಗಳ ಎರಡು ಗುಂಪುಗಳು ಆಹಾರಕ್ಕಾಗಿ ನಡುರಸ್ತೆಯಲ್ಲಿ ಕಿತ್ತಾಟ ನಡೆಸಿದವು. ಇದರಿಂದಾಗಿ ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಪರದಾಡಬೇಕಾಗಿ ಬಂತು. ಅಷ್ಟೊಂದು ಸಂಖ್ಯೆಯ ಮಂಗಗಳು ವಿರೋಧಿ ಗುಂಪನ್ನು ಸೋಲಿಸಲು ಎಷ್ಟು ರೊಚ್ಚಿಗೆದ್ದಿದ್ದವು ಎಂದರೆ, ಅಲ್ಲಿದ್ದ ಮನುಷ್ಯರನ್ನು ಅವು ಕ್ಯಾರೇ ಎನ್ನಲಿಲ್ಲ. ಹಾಗಾಗಿ ಅವುಗಳು ತಮ್ಮ ಕಾದಾಟ ಮುಗಿಸಿ ಆ ಜಾಗವನ್ನು ಬಿಟ್ಟು ಹೋಗುವವರೆಗೆ ಪ್ರಯಾಣಿಕರು ಕಾಯಬೇಕಾಗಿ ಬಂತು. ಮಂಗಗಳ ಕದನದ ಈ ಅಪರೂಪದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು, ವಿಸ್ರುಟ್ ಸುವಾನ್ಪಕ್ ಎಂಬುವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಸ್ರುಟ್ ಪೋಸ್ಟ್ ಮಾಡಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದು, 10 ಸಾವಿರ ಜನರು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರಿಂದ ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ಸ್ಥಳೀಯ ಮಾಧ್ಯಮದ ವರದಿಗಳ ಪ್ರಕಾರ, ಆಹಾರದ ಕೊರತೆಯಿಂದ ಮಂಗಗಳ ಗುಂಪುಗಳ ನಡುವೆ ಜಗಳ ಆರಂಭವಾಯಿತು. ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಸ್ಥಳಿಯ ಬೌದ್ಧ ದೇವಾಲಯದ ಸಮೀಪ ಈ ಘಟನೆ ನಡೆದಿದೆ.
ಕೋವಿಡ್ -19 ಸಾಂಕ್ರಾಮಿಕದ ನಿರ್ಬಂಧಗಳ ಕಾರಣದಿಂದಾಗಿ ಇಲ್ಲಿ ಪ್ರವಾಸಿಗಳ ಸಂಖ್ಯೆ ತೀರಾ ಕಡಿಮೆ ಆಗಿದೆ. ಈ ಮೊದಲು ದೇವಾಲಯಕ್ಕೆ ಬರುತ್ತಿದ್ದ ಪ್ರವಾಸಿಗರು ಮಂಗಗಳಿಗೆ ಆಹಾರ ನೀಡುತ್ತಿದ್ದರು. ಕೋವಿಡ್ ನಿರ್ಬಂಧಗಳ ಕಾರಣದಿಂದ ಸ್ಥಳೀಯ ನಿವಾಸಿಗಳು ಕೂಡ ಮನೆಯ ಒಳಗೆ ಇರುವುದರಿಂದ ಮಂಗಗಳಿಗೆ ಆಹಾರ ನೀಡುವವರು ಯಾರೂ ಇಲ್ಲವಾಗಿದ್ದು, ಆಹಾರದ ಕೊರತೆ ಎದುರಾಗಿದೆ.
ಈ ಪ್ರದೇಶದಲ್ಲಿ ಮಂಗಗಳು ಕಿತ್ತಾಡಿಕೊಳ್ಳುವುದು ಅತ್ಯಂತ ಸಾಮಾನ್ಯ ಸಂಗತಿ. ಆದರೂ ಇಂತಹ ದೃಶ್ಯವನ್ನು ತಾನು ಯಾವತ್ತೂ ನೋಡಿಲ್ಲ ಎಂದು ಈ ವಿಡಿಯೋ ಸೆರೆ ಹಿಡಿದಿರುವ ವಿಸ್ರುಟ್ ಸುವಾನ್ಪಕ್ ಹೇಳಿದ್ದಾರೆ. ಅವರು ಅದನ್ನು ಗ್ಯಾಂಗ್ಸ್ಟರ್ ಸಿನಿಮಾದ ಗ್ಯಾಂಗ್ ವಾರ್ಗೆ ಹೋಲಿಸಿದ್ದಾರೆ. ವಿಸ್ರುಟ್ ಸುವಾನ್ಪಕ್ ಅಲ್ಲೇ ಸಮೀಪದಲ್ಲಿದ್ದ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಸ್ಚಚ್ಚತೆಯ ಕೆಲಸದಲ್ಲಿ ನಿರತವಾಗಿದ್ದಾಗ ಅವರಿಗೆ ಮಂಗಗಳ ಕಿರುಚಾಟ ಕೇಳಿಸಿತಂತೆ. ಕೂಡಲೇ ಆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಸ್ಥಳದಲ್ಲಿದ್ದ ಪ್ರಯಾಣಿಕರು ಅವುಗಳನ್ನು ಅಲ್ಲಿಂದ ಓಡಿಸಲು ಜೋರಾಗಿ ಧ್ವನಿ ಮಾಡಿ ಕೂಗಾಡಿದರೂ, ಅವುಗಳನ್ನು ನಿಯಂತ್ರಿಸುವುದು ಯಾರಿಂದಲೂ ಸಾಧ್ಯವಾಗಲಿಲ್ಲ, ಅದರ ಬದಲಿಗೆ ಪರಿಸ್ಥಿತಿ ಇನ್ನಷ್ಟು ಕೆಟ್ಟು ಹೋಯಿತು. ಮಂಗಗಳ ಕಿತ್ತಾಟ ಯಾವ ಮಟ್ಟಕ್ಕೆ ಇತ್ತೆಂದರೆ, ಘಟನೆಯ ಬಳಿಕ ಹಲವಾರು ಮಂಗಗಳು ಗಾಯಗೊಂಡಿದ್ದು, ರಸ್ತೆಯ ತುಂಬಾ ರಕ್ತದ ಕಲೆಗಳು ಇದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ