“ನಿಮಗೆ ನೃತ್ಯ ಮಾಡುವುದು ಇಷ್ಟ ಎಂದಾದಲ್ಲಿ , ಅದರಿಂದ ನಿಮಗೆ ಯಾವತ್ತಾದರೂ ದಣಿವಾಗುತ್ತದೆಯೇ? ವಯಸ್ಸು, ಸ್ಥಳ ಅಥವಾ ಅನಗತ್ಯ ಸಂಗೀತದಂತಹ ಅಂಶಗಳು ಕೂಡ ಅದಕ್ಕೆ ಅಡ್ಡಿಯಾಗಬಲ್ಲವು ಎಂದು ನನಗನಿಸುವುದಿಲ್ಲ. ಅದೇ ರೀತಿ , ಎಣ್ಣೆಯ ಕುರಿತು ಸಂಶೋಧನೆ ಮಾಡುವುದು ಅಥವಾ ಅದನ್ನು ತಯಾರಿಸುವುದು ನನಗೆ ಯಾವತ್ತೂ ತ್ರಾಸೆನಿಸುವುದಿಲ್ಲ” ಎನ್ನುತ್ತಾರೆ ರಾಧಾಕೃಷ್ಣ ಚೌಧರಿ ಅಲಿಯಾಸ್ ನಾನಾಜಿ (ತಾತ). ಯಾರಪ್ಪ ಇವರು ಅಂತೀರಾ..? ನಿವೃತ್ತಿಯ ನಂತರ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿಯಾದ, ಗುಜರಾತಿನ ಸೂರತ್ನ 85 ವರ್ಷದ ವ್ಯಕ್ತಿ. ಅವರಿಗೊಬ್ಬ ಪಾಲುದಾರರು ಕೂಡ ಇದ್ದಾರೆ. ಅದು ಬೇರೆ ಯಾರೂ ಅಲ್ಲ, ಸ್ವತಃ ಅವರ ಪತ್ನಿ ಶಕುಂತಲಾ.
ಜೂನ್ ತಿಂಗಳಲ್ಲಿ ಈ ದಂಪತಿ ‘ಅವಿಮೀ ಹರ್ಬಲ್ಸ್’ ಎಂಬ ಕೇಶ ತೈಲದ ಉದ್ಯಮ ಆರಂಭಿಸಿದರು. ‘ಅವಿಮೀ ಹರ್ಬಲ್ಸ್’ ಆಕಾಲಿಕ ತಲೆ ಬೋಳಾಗುವುದು, ಅತಿಯಾದ ಕೂದಲು ಉದುರುವಿಕೆ, ಬಿಳಿ ಕೂದಲು ಮತ್ತು ಹೊಟ್ಟಿನ ಸಮಸ್ಯೆ ನಿವಾರಿಸುವ ಕೇಶ ತೈಲ. ಭಾರತದ ಎಲ್ಲೆಡೆಯಿಂದ ತಿಂಗಳಿಗೆ ಸುಮಾರು 200 ಆರ್ಡರ್ಗಳನ್ನು ಹೊಂದಿರುವ, ಈ ಚಿಕ್ಕ ಉದ್ಯಮ ಈಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ.
ಹೊಸ ಉದ್ಯಮ ಆರಂಭವಾದದ್ದು ಹೀಗೆ ಸುಮಾರು 50 ವರ್ಷಗಳ ಕಾಲ ತಮ್ಮ ಕುಟುಂಬದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ರಾಧಾಕೃಷ್ಣ ಚೌಧರಿ 2010ರಲ್ಲಿ ನಿವೃತ್ತಿ ಪಡೆದರು. ಆದರೆ ತನ್ನ ಉದ್ಯಮಶೀಲ ಮನಸ್ಸು ಇನ್ನೂ ತೃಪ್ತಿ ಹೊಂದಿಲ್ಲ ಎಂಬುವುದು ಸ್ವತಃ ಅವರಿಗೂ ಗೊತ್ತಿರಲಿಲ್ಲ ಅನಿಸುತ್ತದೆ.
2021ರ ಆರಂಭದಲ್ಲಿ, ಅವರ ಮಗಳಿಗೆ ತಲೆ ಕೂದಲು ಉದುರುವ ಸಮಸ್ಯೆ ಎದುರಾದಾಗ ಚೌಧರಿ ಮಾರುಕಟ್ಟೆಯಲ್ಲಿ ಲಭ್ಯ ಇರುವ ಕೇಶ ತೈಲಗಳನ್ನು ಹುಡುಕುವ ಅಥವಾ ಮನೆಮದ್ದಿನ ಸಲಹೆ ನೀಡುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳೇನೆಂಬುದನ್ನು ಹುಡುಕಲು ಆರಂಭಿಸಿದರು. ಆ ಕುರಿತ ಅನೇಕ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕಗಳ ಅಧ್ಯಯನ ನಡೆಸಿದರು.
ಇದನ್ನೂ ಓದಿ: ಪ್ರಸವದ ಬಳಿಕ ಕೂದಲು ಉದುರುತ್ತಿದೆಯೇ: ಈ ಸಮಸ್ಯೆ ಬಗ್ಗೆ ಹೇಳುವುದು ಹೀಗೆ..!
ಅವರಿಗೆ ಹಲವಾರು ಕೇಶ ಲೇಪಗಳು, ಸಾವಯವ ತೈಲಗಳು, ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಕುರಿತು ಮಾಹಿತಿ ಸಿಕ್ಕಿತು. ಆದರೆ ಅವು ಯಾವುವೂ ಅವರ ಕೂದಲು ಉದುರುವಿಕೆಯ ಕುರಿತ ಅವರ ಸಂಶಯಗಳನ್ನು ಸಂಪೂರ್ಣವಾಗಿ ಬಗೆಹರಿಸುವಲ್ಲಿ ಯಶಸ್ವಿ ಆಗಲಿಲ್ಲ. ಹಾಗಾಗಿ, ಅವರು ತಮ್ಮ ಕೌಶಲ ಬಳಸಿ, ಕೇಶ ತೈಲವೊಂದನ್ನು ತಯಾರಿಸುವ ಮನಸ್ಸು ಮಾಡಿದರು. ಚಿಕ್ಕದವನಿದ್ದಾಗ ಮನೆಯಲ್ಲಿ ಅಂತಹ ಪ್ರಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದ ಅವರು, ಇದನ್ನು ಕೂಡ ಅಂತದ್ದೇ ಪ್ರಯೋಗವೆಂದು ಪರಿಗಣಿಸಿದರು. ಅವರ ಮಡದಿಯು ಕೂಡ ಈ ಪ್ರಯೋಗಕ್ಕೆ ಕೈ ಜೋಡಿಸಿದರು.
ಅವರು ಪ್ರತಿಯೊಂದು ಸಮಸ್ಯೆಯ ಕಾರಣ ಗುರುತಿಸಿದರು ಮತ್ತು ವಿಭಿನ್ನ ಗಿಡಮೂಲಿಕಗಳಲ್ಲಿ ಅದಕ್ಕೆ ಪರಿಹಾರ ಹುಡುಕಿದರು. ಆಳವಾದ ಸಂಶೋಧನೆಯ ಬಳಿಕ, ಕೋಲ್ಡ್ ಪ್ರೆಸ್ಡ್ ತಂತ್ರಜ್ಞಾನದ ಮೂಲಕ ಕೈಶ ತೈಲ ತಯಾರಿಸಿದರು. 50ಕ್ಕೂ ಹೆಚ್ಚು ಗಿಡಮೂಲಿಕೆಗಳ ಮಿಶ್ರಣವುಳ್ಳ, ತೆಂಗಿನ ಎಣ್ಣೆ, ಕರಿ ಎಳ್ಳು, ಆಲಿವ್, ಹರಳು, ಕಲೋಂಜಿ ಸೇರಿದಂತೆ 50 ಹೆಚ್ಚು ಕ್ಯಾರಿಯಲ್ ತೈಲಗಳು ಮತ್ತು ಎಸೆನ್ಶಿಯಲ್ ತೈಲಗಳನ್ನು ಹೊಂದಿರುವ ಕೇಶ ತೈಲವನ್ನು ಅವರು ತಯಾರಿಸಿದ್ದಾರೆ.
ದಂಪತಿ ಮೊದಲ ಮೂರು ತಿಂಗಳು ಅದನ್ನು ತಮ್ಮ ಮೇಲೆ ಪ್ರಯೋಗಿಸಿಕೊಂಡರು. ಚೌಧರಿ ಅವರ ಬೊಕ್ಕ ತಲೆಯಲ್ಲಿ ಕೆಲವು ಹೊಸ ಕೂದಲುಗಳು ಹುಟ್ಟಿರುವುದು ಕಂಡು ಬಂತು. ಬಳಿಕ ಪ್ರಯೋಗಕ್ಕಾಗಿ, ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಆ ಕೇಶ ತೈಲವನ್ನು ಹಂಚಿದರು. ಅವರೆಲ್ಲರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿತು ಹಾಗೂ ತೈಲಕ್ಕಾಗಿ ಬೇಡಿಕೆ ಬಂತು. ಜೂನ್ನಲ್ಲಿ ಆ ತೈಲಕ್ಕೆ ‘ಕೇಶ್ಪಲ್ಲವ್ ಕೇಶ ತೈಲ’ ಎಂದು ಹೆಸರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
‘ಗುಣಮಟ್ಟವೇ ನಾಯಕ’ಚೌಧರಿ ದಂಪತಿ, ತಮ್ಮ ಕೇಶ ತೈಲದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಅಂದರೆ, ತೈಲದ ಪರಿಮಳ ಅಥವಾ ರಚನೆ ಸುಂದರಗೊಳಿಸಲು ಯಾವುದೇ ರಾಸಾಯನಿಕ ಅಥವಾ ಕೃತಕ ಸಾಮಾಗ್ರಿಗಳನ್ನು ಬಳಸುವುದಿಲ್ಲ.
ಇದನ್ನೂ ಓದಿ: ಕೂದಲಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರಗಳು..!
“ಪೂರ್ಣಗೊಳ್ಳಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುವ ತ್ರಾಸದಾಯಕ ಮತ್ತು ದಣಿವಿನ ಪ್ರಕ್ರಿಯೆ ಇದು. ನಮಗೆ ಯಾವುದೇ ರೀತಿಯಲ್ಲೂ ಗ್ರಾಹಕರಿಗೆ ಮೋಸ ಮಾಡಲು ಇಷ್ಟ ಇಲ್ಲ. ನಾವು 50 ಗಿಡಮೂಲಿಕೆಗಳನ್ನು ಹಾಕುತ್ತೇವೆ ಎಂದು ಹೇಳಿದಾಗ, ಅವೆಲ್ಲವನ್ನು ಅಗತ್ಯ ಪ್ರಮಾಣದಲ್ಲಿ ಹಾಕುತ್ತೇವೆ. ಕಳೆದ ತಿಂಗಳು ನಮ್ಮ ಕಥೆ ಸಾರ್ವಜನಿಕವಾಯಿತು, ಆಗಿನಿಂದ ಆರ್ಡರ್ಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ನಮಗೆ ನಿತ್ಯವೂ ನೂರಾರು ಕರೆಗಳು ಬರುತ್ತಿವೆ. ಆದರೆ ಸುಳ್ಳು ಆಶ್ವಾಸನೆಗಳನ್ನು ನೀಡುವ ಬದಲು, ಅವರಿಗೆ ಒಂದು ತಿಂಗಳು ಕಾಯುವಂತೆ ಹೇಳಬೇಕಾಗಿತ್ತು. ನಮ್ಮ ಅಂತಿಮ ಗುರಿ ಲಾಭ ಪಡೆಯುವುದು ಅಥವಾ ಗ್ರಾಹಕರನ್ನು ಉಳಿಸಿಕೊಳ್ಳುವುದು ಅಲ್ಲ. ಗುಣಮಟ್ಟ ನಮ್ಮ ನಾಯಕ” ಎನ್ನುತ್ತಾರೆ ಶಕುಂತಲಾ.
ಅವರು ಸ್ಪ್ರೇ ಮತ್ತು ಆರ್ಥೋ-ಸಿಪಿ ಎಣ್ಣೆಯನ್ನು ಕೂಡ ಮಾಡುತ್ತಾರೆ. ಗ್ರಾಹಕರ ವೈಯಕ್ತಿಕ ಕೇಶ ಅಗತ್ಯಗಳಿಗೆ ತಕ್ಕಂತೆ ಎಣ್ಣೆ ತಯಾರಿಸುವುದು ಮತ್ತು ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಕಾರ್ಖಾನೆ ಸ್ಥಾಪಿಸುವುದು ಅವರ ಮುಂದಿನ ಗುರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ