Unprecedented Rain: ಹೀಗೆ ಹೊತ್ತಲ್ಲದ ಹೊತ್ತಲ್ಲಿ ಗೊತ್ತು ಗುರಿ ಇಲ್ಲದಂತೆ ಮಳೆ ನಿರಂತರವಾಗಿ ಬರುತ್ತಲೇ ಇದೆ. ಮಳೆಗಾಲ (Rainy Season) ಅನ್ನೋದು ವರ್ಷ ಪೂರ್ತಿ ಬಂದರೆ ಅಲ್ಲಿಗೆ ವರ್ಷಕ್ಕೆ ಮೂರು ಬಗೆಯ ಋತು ಇರುತ್ತದೆ ಎಂದು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಕಲಿತದ್ದೆಲ್ಲಾ ಸುಳ್ಳೇ ಸುಳ್ಳು ಎಂದು ಹೇಳುವಂತಾಗಿಬಿಡುತ್ತಿದೆ. ಇನ್ನು ಕೊರೊನಾ, ಲಾಕ್ ಡೌನ್ (Covid Lockdown) ಎಂದು ಮನೆಯೊಳಗೇ ಲಾಕ್ ಆದವರೆಲ್ಲಾ ಈಗೊಂಚೂರು ಉಸಿರು ಬಿಟ್ಟು ಹೊರಗೆ ಸುತ್ತಾಡೋಕೆ ಹೋಗುವ ಪ್ಲಾನ್ ನಲ್ಲಿ ಇದ್ದಾರೆ. ಇಂಥವರ ಪಾಲಿಗೂ ಮಳೆ (Rains) ಖಳನಟನೇ ಆಗಿಬಿಟ್ಟಿದೆ. ಈಗಂತೂ ಎಲ್ಲೂ ಚಂಡಮಾರುತ (Cyclone) ಕೂಡಾ ಇಲ್ಲ. ಆಗಾಗ ಕೇಳಿಬರುತ್ತಿದ್ದ ವಾಯು ಭಾರ ಕುಸಿತಗಳೂ (Low Pressure) ಹೀಗೆಲ್ಲಾ ತಿಂಗಳುಗಟ್ಟಲೆ ಮಳೆ ಸುರಿಸುತ್ತಿರಲಿಲ್ಲ. ಅಷ್ಟಕ್ಕೂ ಈಗ ಏನಾಗ್ತಿದೆ ಪ್ರಪಂಚದಲ್ಲಿ? ಹೀಗೆ ಎಗ್ಗುಸಿಗ್ಗಿಲ್ಲದೇ ಮಳೆ ಸುರಿಯುತ್ತಲೇ ಇರೋಕೆ ಕಾರಣವೇನು? ತಜ್ಞರು (Experts) ಏನಂತಾರೆ?
ಮಳೆ ಇಳೆಗೆ ಬೇಕೇ ಬೇಕು. ಬಿತ್ತಿದ ಬೀಜ ಭೂಮಿಯ ಬಸಿರು ಸೇರಿ ಮೊಳಕೆಯೊಡೆದು ಗಿಡವಾಗಿ ಬೆಳೆದು ತುತ್ತಿನ ಚೀಲಕ್ಕೆ ಒಂದು ಹಿಡಿ ಕಾಳು-ಕಡಿ ಬೇಕೆಂದರೆ ಮಳೆಯ ಸಿಂಚನ ಬೇಕು..ಅದು ಜೀವಜಲ. ಆದ್ರೆ ಅದೇ ಮಳೆ ಹೀಗೆಲ್ಲಾ ಸರ್ಪ್ರೈಸ್ ಕೊಟ್ಟು ಬೇಕಾದಾಗ ಬರದೆ, ಬೇಡವಾದಾಗ ಹೋಗದ ನೆಂಟರಂತಾಗಿಬಿಟ್ಟಾಗಲೇ ಫಜೀತಿ. ಈಗ ಆಗಿರುವುದು ಅದೇ.
ಮುಂಗಾರು ಮುಗಿದರೂ ಮಳೆ ನಿಂತಿಲ್ಲವೇಕೆ?
ಇನ್ನೇನು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮಳೆಗಾಲ ಮುಗಿದು ಮುಂಗಾರಿಗೆ ಟಾಟಾ ಬೈ ಬೈ ಹೇಳೋಕೆ ಎಲ್ಲರೂ ಸಜ್ಜಾಗಿದ್ರು. ತುಳಸಿ ಹಬ್ಬದ ತನಕವೂ ಅಲ್ಲಲ್ಲಿ ಒಂದೊಂದು ಎನ್ನುವಂತೆ ತುಂತುರು ಸುರಿಯುತ್ತಿದ್ದಿದ್ದು ಹೌದಾದ್ರೂ ಅದೇನೂ ಅಂಥಾ ಸಮಸ್ಯೆ ತರುತ್ತಿರಲಿಲ್ಲ. ಬೆಳೆದು ಭಾರವಾದ ಪೈರುಗಳನ್ನು ರೈತ ನೆಮ್ಮದಿಯಾಗಿ ಕಟಾವು ಮಾಡಿ ಹೊಲದಲ್ಲಿ ಹಾಡುತ್ತಲೇ ಒಕ್ಕಲಾಟ ಮಾಡುತ್ತಿದ್ದ. ಕಡ್ಡಿಯಿಂದ ಕಾಳು ಬಿಡಿಸುವ ಪರಿಯೇ ಅಮೋಘ.
ಇದನ್ನೂ ಓದಿ: Tirupathi : ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ಕೊಚ್ಚಿ ಹೋಯ್ತು ವಾಹನಗಳು, ನದಿಯಂತಾದ ರಸ್ತೆ !
ಮೊದಲಿಗೆ ಒಂದು ಸಲ ತೆನೆಗಳನ್ನು ಬಡಿದು ಮುಖ್ಯವಾದ ಕಾಳನ್ನೆಲ್ಲಾ ಬೇರ್ಪಡಿಸಿ ಉಳಿದ ಕಡ್ಡಿಗಳನ್ನು ಒಂದೆಡೆ ರಾಶಿ ಹಾಕಿಬಿಡುವುದು. ಆ ಉಳಿದ ಕಡ್ಡಿಗಳಲ್ಲೂ ಇನ್ನೂ ಅಲ್ಲೊಂದು ಇಲ್ಲೊಂದು ಕಾಳುಗಳು ತಾಯಿಯನ್ನು ಬಿಟ್ಟು ಹೋಗಲು ಹಠ ಮಾಡುವ ಮಕ್ಕಳಂತೆ ಕಚ್ಚಿಕೊಂಡೇ ಇರುತ್ತಿದ್ದವು. ಅವನ್ನೆಲ್ಲಾ ಮತ್ತೊಮ್ಮೆ ಎತ್ತುಗಳನ್ನು ಹೊಡೆದು ತುಳಿಸಿ, ಒಕ್ಕಲಾಟದ ಕಲ್ಲುಗಳನ್ನು ಉರುಳಾಡಿಸಿ ಬೇರೆ ಮಾಡಿಯೇ ತೀರುವುದು.
ಇಷ್ಟೆಲ್ಲಾ ಆಗುವಾಗ ಕಾಳುಗಳ ಜೊತೆಜೊತೆಗೆ ಗಡ್ಡಿಯಿಂದ ಪೈರಿನ ಕಡ್ಡಿಗಳೆಲ್ಲಾ ಮೃದುವಾಗಿಬಿಟ್ಟಿರುತ್ತಿದ್ದವು. ಅವು ಇನ್ನು ಹಟ್ಟಿಯ ಹಸು ಕರುಗಳಿಗೆ ವರ್ಷಪೂರ್ತಿ ಆಗುವ ಬೈಹುಲ್ಲು. ಹುಲ್ಲಿನ ಇಷ್ಟೆತ್ತರದ ರಾಶಿ ಮಕ್ಕಳ ಪಾಲಿನ ನೆಚ್ಚಿನ ಆಟದ ತಾಣವೂ ಆಗಿರುತ್ತಿತ್ತು. ಇದೆಲ್ಲಾ ಆಗುತ್ತಿದ್ದುದು ಮಳೆ ಮುಗಿದ ನಂತರ ಬರುತ್ತಿದ್ದ ಬಿಸಿಲು-ಚಳಿಯ ದಿನಗಳಲ್ಲಿ. ಆದ್ರೆ ಈಗೆಲ್ಲಿದೆ ಚಳಿ-ಬಿಸಿಲು? ಸೂರ್ಯನ ಮುಖ ನೋಡಿ ಬಹಳ ದಿನಗಳೇ ಕಳೆದಿವೆ.
ಎಲ್ಲಾ ಮೋಡಗಳ ಆಟ ಎನ್ನುತ್ತಿದ್ದಾರೆ ತಜ್ಞರು
ದೂರದ ಬಂಗಾಳ ಕೊಲ್ಲಿಯ ಉಪ್ಪುಪ್ಪು ನೀರಿನ ಮೇಲೆ ಜೊಂಪೆ ಜೊಂಪೆ ಮೋಡಗಳು ಹುಟ್ಟುತ್ತಲೇ ಇವೆ. ತಮ್ಮೊಳಗೆ ರಾಶಿ ತೇವಾಂಶ ತುಂಬಿಕೊಂಡು ಮೇರುತ್ತಲೇ ಇರುವ ಇವುಗಳು ಅಲ್ಲಿಂದ ಸೀದಾ ಚಲಿಸುತ್ತಿರುವುದು ಕಡಿಮೆ ಒತ್ತಡ ಇರುವ ಅರಬ್ಬೀ ಸಮುದ್ರದ ಕಡೆಗೆ. ಮೊದಲೇ ಭಾರವಾಗಿರುವ ಈ ಮೋಡಗಳು ನಡುವಿನಲ್ಲೇ ಭಾರ ಇಳಿಸಿಕೊಳ್ಳಲು ಮಳೆಯಾಗಿ ಸುರಿದು, ಮೈಕೊಡವಿ ಮುಂದೆ ಹೋಗುತ್ತಿವೆ.
ಇದನ್ನೂ ಓದಿ: Heavy Rain: ಮಲೆನಾಡಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ; ಬೀದಿಗೆ ಬಿದ್ದ ಕಾಫಿ, ಅಡಿಕೆ ಬೆಳೆಗಾರರು!
ಒಂದಿಷ್ಟು ರಾಶಿ ಮೋಡಗಳು ಮೇಲೆದ್ದು ಹೋದಾಗ, `ಅಬ್ಬಾ… ಇನ್ನು ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮೂರ್ನಾಲ್ಕು ಗಂಟೆ ವಿರಾಮ ಕೊಟ್ಟು ಮತ್ತೊಂದು ರಾಶಿ ಮೇಲೇರಿ ಬರುತ್ತಿದೆ. ಇದು ನಿರಂತರವಾಗಿ ಬರುತ್ತಲೇ ಇದೆ. ಯಾವಾಗ ಈ ಸರಣಿ ಮುಗಿಯುತ್ತದೆ ಅಂತ ಅಂದಾಜಿಸಲು ಸಾಧ್ಯವೇ ಆಗುತ್ತಿಲ್ಲ’ ಎನ್ನುತ್ತಾರೆ ಹಿರಿಯ ವಿಜ್ಞಾನಿ ಡಾ ಎಂ ಬಿ ರಾಜೇಗೌಡ.
ಬೆಂಗಳೂರಿಗೆ ನಾಳೆ ಮಳೆಯ ಅಲರ್ಟ್ ಎಂದಿರುತ್ತದೆ ಹವಾಮಾನ ಇಲಾಖೆ. ಆದ್ರೆ ಇವತ್ತೇ ಬಿಟ್ಟೂಬಿಡದಂತೆ ಮಳೆ ಸುರಿಯುತ್ತಿರುತ್ತದೆ. ಅಲರ್ಟ್ ಇಲ್ಲದೆಯೇ ಇಷ್ಟೊಂದು ಮಳೆ ಎಂದರೆ ಇನ್ನು ಅಲರ್ಟ್ ಹೇಳಿದಾಗ ಹೇಗಪ್ಪಾ ಎನ್ನುವ ತಲೆಬಿಸಿ ಇಲ್ಲಿಯ ಜನರದ್ದು. ಈಗಷ್ಟೇ ಶಾಲೆಗೆ ಹೋಗೋಕೆ ಶುರು ಮಾಡಿರೋ ಮಕ್ಕಳು, ಜ್ವರ ಭಯದಿಂದ ಈಗೀಗ ಚೇತರಿಸಿಕೊಳ್ತಿರೋ ಹಿರಿಯರು ಎಲ್ಲರ ಪಾಲಿಗೂ ಮಳೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಬಿಟ್ಟಿದೆ.
ಇದನ್ನೂ ಓದಿ: Sabarimala: ದೇವರ ನಾಡಲ್ಲಿ ರಣಮಳೆ ಆರ್ಭಟ, ಇಂದು ಭಕ್ತರಿಗಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ !
ಒಟ್ನಲ್ಲಿ ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರಕ್ಕೆ ಮೋಡಗಳು ಸಾಗುವ ಮಾರ್ಗದಲ್ಲಿ ಇರುವ ಎಲ್ಲಾ ಪ್ರದೇಶಗಳಿಗೆ ಸದ್ಯಕ್ಕಂತೂ ಮಳೆಯಿಂದ ಮುಕ್ತಿ ಇಲ್ಲವೇ ಇಲ್ಲ. ಹಾಗಾಗಿ ಮಳೆಗೆ ಹಿಡಿಶಾಪ ಹಾಕುವುದನ್ನು ಬಿಟ್ಟು ಅದರೊಂದಿಗೇ ಬದುಕಲು ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಸಜ್ಜಾಗಲೇಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ