Ranjith Ramachandran: ವಾಚ್​ಮ್ಯಾನ್​ ಆಗಿದ್ದ ಬಡ ಯುವಕ ರಂಜಿತ್ ರಾಮಚಂದ್ರನ್ ಈಗ ಐಐಎಂ ಪ್ರೊಫೆಸರ್​!

Ranjith Ramachandran Story: ಕೇರಳದ ಕಡು ಬಡ ಕುಟುಂಬದಲ್ಲಿ ಹುಟ್ಟಿದ ರಂಜಿತ್ ರಾಮಚಂದ್ರನ್​ ತಿಂಗಳಿಗೆ 4000 ರೂ. ಸಂಬಳಕ್ಕಾಗಿ ವಾಚ್​ಮ್ಯಾನ್ ಕೆಲಸಕ್ಕೆ ಸೇರಿದರು. ಹೀಗೆ ಪದವಿ, ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡರು. ನಂತರ ಪಿಎಚ್​ಡಿಗಾಗಿ ಐಐಟಿ ಮದ್ರಾಸ್​ಗೆ ಸೇರಿದರು. ಅವರೀಗ ಐಐಎಂನಲ್ಲಿ ಪ್ರೊಫೆಸರ್ ಆಗಿದ್ದಾರೆ!

ರಂಜಿತ್ ರಾಮಚಂದ್ರನ್

ರಂಜಿತ್ ರಾಮಚಂದ್ರನ್

  • Share this:
ಪುಟ್ಟ ಗುಡಿಸಲು, ಕಪ್ಪು ಟಾರ್ಪಲಿನ್ ಹೊದ್ದ ಮನೆ, ಮಳೆ ಬಂದರೆ ಸುತ್ತಲೂ ಸೋರುವ ಮನೆ. ನೀರು ಬೀಳುವ ಜಾಗಕ್ಕೆ ಪಾತ್ರೆಗಳನ್ನು ಹಿಡಿದು ಸೋತು ಹೋಗುವ ಕೈಗಳು. ಅಲ್ಲೇ ಊಟ, ಅಲ್ಲೇ ನಿದ್ದೆ. ಮನರಂಜನೆಯಂತೂ ಕನಸಿನ ಮಾತು. ಹಾಗೆಂದು ಸುಮ್ಮನೇ ಕೂತರೆ ಜೀವನ ಪೂರ್ತಿ ಅದೇ ಸ್ಥಿತಿ. ಆದರೆ ಸ್ವಲ್ಪ ಶ್ರಮ ಪಟ್ಟರೆ ಸ್ವರ್ಗದಂತ ಬದುಕಿಗೆ ಮೂರೇ ಗೇಣು...! ಇದೇ ಕನಸನ್ನು ಹೊತ್ತು ಈ ಮನೆಯಲ್ಲೇ ಐಐಎಂ​ನ ಸಹಾಯಕ ಪ್ರಾಧ್ಯಾಪಕರು ಕನಸು ಹೆಣೆಯುತ್ತಿದ್ದರು. ಒಂದು ದಿನ ಆ ಕನಸು ನನಸಾಗುವ ಸಮಯವೂ ಬಂದಿತು. ಬಡತನದಲ್ಲಿ ಹುಟ್ಟಿ ರಾತ್ರಿಯ ಹೊತ್ತು ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಾ ಬೆಳಗ್ಗೆ ಕಾಲೇಜಿನಲ್ಲಿ ಓದುತ್ತಾ ಒಂದು ದಿನ ಐಐಎಂನಲ್ಲಿ ಸಹಾಯಕ ಪ್ರಾಧ್ಯಾಪಕರಾದರು ರಂಜಿತ್.

28 ವರ್ಷದ ರಂಜಿತ್ ಆರ್ ಅವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ತಮ್ಮ ಜೀವನದ ಜರ್ನಿಯ ಬಗ್ಗೆ ಒಂದು ದಿನದ ಹಿಂದೆ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. ಆ ಪೋಸ್ಟ್​ ಜೊತೆಗೆ ತಾವು ವಾಸವಾಗಿದ್ದ ಮನೆಯ ಒಂದು ಫೋಟೋವನ್ನು ಸಹ ಪೋಸ್ಟ್ ಮಾಡಿದ್ದರು. ಇದು ಇಂಟರ್ನೆಟ್​ನಲ್ಲಿ, ಮುಖ್ಯವಾಗಿ ಕೇರಳ ಭಾಗದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ರಂಜಿತ್ ಅವರ ತಂದೆ ರಾಮಚಂದ್ರನ್ ನಾಯ್ಕ್, ವೃತ್ತಿಯಲ್ಲಿ ಟೈಲರ್ ಆಗಿದ್ದಾರೆ. ತಾಯಿ ಬೇಬಿ ಆರ್ ಅವರು ಪಣತ್ತೂರಿನ ಕೇಲಪಂಕಯಂನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ರಂಜಿತ್ ಅವರು ಪಿಲಿಕೋಡ್ ಪಂಚಾಯತ್‌ನ ವೆಲ್ಲಾಚಲ್‌ನಲ್ಲಿ ಬುಡಕಟ್ಟು ಸಮುದಾಯದ ಬಾಲಕರಿಗಾಗಿ ಸರ್ಕಾರ ನಡೆಸುವ ಮಾದರಿ ವಸತಿ ಶಾಲೆಗೆ ಸೇರಿ ಹತ್ತನೆ ತರಗತಿ ಪೂರೈಸಿದರು. ನಂತರ ಕಾಲೇಜಿಗೆ ಸೇರಿಕೊಂಡರು. ಈ ಸಮಯದಲ್ಲಿ ಮನೆಯ ಆರ್ಥಿಕ ಸಂಕಷ್ಟವನ್ನು ಅರಿತುಕೊಂಡಿದ್ದ ರಂಜಿತ್​ ತಿಂಗಳಿಗೆ 4000 ರೂಪಾಯಿ ಸಂಬಳಕ್ಕಾಗಿ ವಾಚ್​ಮ್ಯಾನ್ ಕೆಲಸಕ್ಕೆ ಸೇರಿದರು. ಬಿಎಸ್​ಎನ್​ಎಲ್​ನಲ್ಲಿ ರಾತ್ರಿ ಪಾಳಿಯ ಕೆಲಸ, ಹಗಲು ಕಾಲೇಜು. ಹೀಗೆ ಪದವಿ, ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡರು.ನಂತರ ಕಾಸರಗೋಡಿನ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ನಂತರ ಪಿಎಚ್​ಡಿಗಾಗಿ ಐಐಟಿ ಮದ್ರಾಸ್​ಗೆ ಸೇರಿದರು. ಮಲಯಾಳಂ ಭಾಷೆಯ ಮೇಲಷ್ಟೇ ಹಿಡಿತವಿದ್ದ ರಂಜಿತ್ ಆರಂಭದಲ್ಲಿ ಒಂಟಿಯಾಗಿದ್ದರು. ಆನಂತರ ಪಿಎಚ್​ಡಿ ಪದವಿ ತೊರೆಯಲು ನಿರ್ಧರಿಸಿದ್ದರು. ಆದರೆ ಅವರ ಗೈಡ್ ಡಾ. ಸುಭಾಷ್ ಶಶಿಧರನ್ ಅವರ ಮಾತು ಪ್ರೇರೇಪಣೆ ನೀಡಿತು. ಸೋಲನ್ನು ಸ್ವೀಕರಿಸುವ ಮುನ್ನ ಹೋರಾಡುವುದನ್ನು ಕಲಿಯಬೇಕೆಂದು ತಿಳಿಸಿಕೊಟ್ಟ ಗುರುಗಳ ಮಾತಿನಿಂದ ಪಿಎಚ್​ಡಿ ಮುಗಿಸಿದರು.

ರಾಂಚಿಯ ಐಐಎಂನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಸಿಗುವ 2 ತಿಂಗಳು ಮೂದಲು ಬೆಂಗಳೂರಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈಗ ರಂಜಿತ್ ಅವರ ತಂದೆ, ತಾಯಿ ಮತ್ತು ಇಬ್ಬರು ಒಡ ಹುಟ್ಟಿದವರಿಗಾಗಿ ಮನೆ ಕಟ್ಟಲು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ಶಿಕ್ಷಣದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆ ಸಾಧಿಸಿದ್ದಾರೆ.

ಸದ್ಯ ರಂಜಿತ್ ಅವರ ಫೇಸ್​ಬುಕ್ ಪೋಸ್ಟ್ ವೈರಲ್ ಆಗಿದ್ದು, ಸಂತೋಷ್ ಕುಮಾರ್​ ಎನ್ನುವ ಸಮಾಜ ಸೇವಕರು ಸರ್ಕಾರದ ಪಕ್ಷಪಾತದ ನಿಲುವಿನ ಬಗ್ಗೆ ಧ್ವನಿ ಎತ್ತಿದ್ದಾರೆ. ಕ್ಯಾಲಿಕಟ್ ಯೂನಿವರ್ಸಿಟಿಯಲ್ಲಿ ಕಡಿಮೆ ಅರ್ಹತೆ ಇರುವವರು ಕೆಲಸ ಮಾಡುತ್ತಿರುವಾಗ ರಂಜಿತ್ ಅವರನ್ನು ಅಲ್ಲಿಗೆ ಏಕೆ ನೇಮಿಸಲಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ರಂಜಿತ್ ಕನಸು ಕಟ್ಟುವ ಪ್ರತಿಯೊಬ್ಬರಿಗೂ ಸಕಾರಾತ್ಮಕತೆಗೆ ಸಾಕ್ಷಿ ಪ್ರಜ್ಞೆಯಂತಿದ್ದಾರೆ.

ಕಪ್ಪು ಟಾರ್ಪಲಿನ್​ನ ಚಾದರ ಹೊದ್ದ ಗುಡಿಸಲೇ ಅವರ ಪಾಲಿಗೆ ಸ್ವರ್ಗವಾಗಿತ್ತು. ಗುಡಿಸಿಲಿನಿಂದ ಐಐಎಂನಂತಹ ಸರಸ್ವತಿಯ ಮಡಿಲಿಗೆ ಸೇರಿದ ರಂಜಿತ್ ಹೆತ್ತವರ ಸಹಿಷ್ಣುತೆಗೆ ಸಿಹಿಯ ಫಲವಾದರು. ಇಂದಿಗೂ ಗುಡಿಸಿಲಿನ ಕಿಂಡಿಯಲ್ಲಿ ರಾತ್ರಿಯ ನಕ್ಷತ್ರ ನೋಡುವ ಅನೇಕ ಕಣ್ಣುಗಳಿಗೆ ಬೆಳಕನ್ನು ತಂದಿದ್ದಾರೆ ರಂಜಿತ್. ನಾಲ್ಕು ಗೋಡೆಗಳ ನಡುವೆ ನಲುಗುವ ಬದಲು ಆಕಾಶವನ್ನೇ ನಿಮ್ಮ ಗುರಿಯಾಗಿಸಿಕೊಳ್ಳಿ. ಒಂದಲ್ಲ ಒಂದು ದಿನ ನಿಮ್ಮ ಕನಸ್ಸಿನ ಕಥೆಗಳು ನನಸಾಗುತ್ತವೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ರಂಜಿತ್.
Published by:Sushma Chakre
First published: