Puneeth Rajkumar: ಇವತ್ತು ನಾಳೆಯೊಳಗೆ ಇಬ್ಬರ ಬದುಕಿನಲ್ಲಿ ಅಪ್ಪು ಇಂದ ಬೆಳಕು ಬರಲಿದೆ, ಥೇಟ್ ಅವರ ತಂದೆಯಂತೆಯೇ…!

Puneeth Rajkumar lives on: “ಇಂಥಾ ಕಷ್ಟದ ಸಂದರ್ಭದಲ್ಲೂ ಆ ಕುಟುಂಬ ಇದನ್ನು ನೆನೆದಿದ್ದಾರಲ್ಲಾ, ಇದು ನಿಜಕ್ಕೂ ದೊಡ್ಡ ವಿಷ್ಯ. ಕುಟುಂಬದ ಸದಸ್ಯರೇ ನನಗೆ ಕರೆ ಮಾಡಿದ್ದರು. ಪುನೀತ್ ಇನ್ನಿಲ್ಲ, ಅವರ ಕಣ್ಣುಗಳನ್ನು ದಾನ ಮಾಡಬೇಕು ಎಂದರು. ಸೂಕ್ತ ಸಮಯದಲ್ಲಿ ಅವರ ನೇತ್ರಗಳನ್ನು ಪಡೆಯಲಾಗಿದೆ" ಎಂದು ಮುಂದಿನ ಹಂತಗಳನ್ನು ವಿವರಿಸಿದರು ನೇತ್ರತಜ್ಞ ಡಾ ಭುಜಂಗ ಶೆಟ್ಟಿ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್

  • Share this:
RIP Puneeth Rajkumar: ಕನ್ನಡಿಗರ ಪಾಲಿನ ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎನ್ನುವುದನ್ನು ಇನ್ನೂ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗ್ತಿಲ್ಲ. ಉಸಿರು ಚೆಲ್ಲಿದ ಮೇಲೂ ಅಪ್ಪು ಮತ್ತಷ್ಟು ಬದುಕಿಗೆ ಬೆಳಕು (Lighting Lives) ತುಂಬುತ್ತಲೇ ಇದ್ದಾರೆ. ಅವರ ತಂದೆ ಮೇರುನಟ ಡಾ ರಾಜ್ಕುಮಾರ್ (Dr Rajkumar) ನಡೆದುಬಂದ ದಾರಿಯಲ್ಲೇ ಸಾಗಿರುವ ಪುನೀತ್ ಅಷ್ಟೊಂದು ಆರೋಗ್ಯವಾಗಿದ್ದವರು ಅದ್ಹೇಗೆ ಧಿಡೀರನೆ ಎದ್ದು ಹೊರಟುಬಿಟ್ಟರು ಎನ್ನುವುದು ಇನ್ನೂ ತಿಳಿಯುತ್ತಲೇ ಇಲ್ಲ. ತಮ್ಮ ಬದುಕಿನ ಮೂಲಕ ಪಾಠವಾಗಿದ್ದ ಪುನೀತ್ ಸಾವಿನಲ್ಲೂ ಅದ್ಭುತ ಸಂದೇಶ (A Noble Message) ನೀಡಿಯೇ ಹೋಗಿದ್ದಾರೆ..ಥೇಟ್ ಅವರ ತಂದೆ ಮೇರುನಟ ಡಾ ರಾಜ್ಕುಮಾರ್​ ರಂತೆ.

ನೇತ್ರದಾನದ ಕುರಿತು ಅರಿತ ಡಾ ರಾಜ್

ಅದು 1994.. ಅಂಗಾಂಗ ದಾನಗಳ ಬಗ್ಗೆ ಜನರಿಗೆ ಇನ್ನೂ ಅಷ್ಟೊಂದು ತಿಳುವಳಿಕೆ ಇರಲಿಲ್ಲ. ಆದ್ರೆ ಬೇರೆಲ್ಲಾ ಅಂಗಗಳಿಗಿಂತ ನೇತ್ರದಾನ ಮತ್ತು ಕಣ್ಣಿನ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿತ್ತು. ಡಾ ರಾಜ್ಕುಮಾರ್ ಗೆ ಸಾವಿನ ನಂತರ ನೇತ್ರದಾನ ಮಾಡಬಹುದು, ಅದರಿಂದ ಇಬ್ಬರು ದೃಷ್ಟಿ ಚೇತನರಿಗೆ ದೃಷ್ಟಿ ಸಿಗುವಂತೆ ಮಾಡಲು ಸಾಧ್ಯವಿದೆ ಎಂದು ತಿಳಿಯಿತು. ತಿಳಿದದ್ದೇ ತಡ, ತಾವೂ ಮುಂದೆ ಹೋಗಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಪತ್ರಗಳಿಗೆ ಸಹಿ ಹಾಕಿಬಿಟ್ಟರು. ಅಷ್ಟೇ ಅಲ್ಲ, ನಾನು ಮಾತ್ರ ಅಲ್ಲ, ನನ್ನ ಕುಟುಂಬದ ಎಲ್ಲರೂ ಸಾವಿನ ನಂತರ ತಂತಮ್ಮ ಕಣ್ಣುಗಳನ್ನು ದಾನ ಮಾಡುತ್ತೇವೆ ಎಂದು ಹೇಳಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ ಭುಜಂಗ ಶೆಟ್ಟಿ.

ಇದನ್ನೂ ಓದಿ: Puneeth Rajkumar: ಎರಡು ವಾರದ ಹಿಂದಷ್ಟೇ ಸಣ್ಣದೊಂದು ಚಿಕಿತ್ಸೆ ಪಡೆದಿದ್ದ ಅಪ್ಪು, ಅದೊಂದು ತಪ್ಪು ಮಾಡಬಾರದಿತ್ತು ಎನ್ನುತ್ತಾರೆ ವೈದ್ಯರು

ಇಷ್ಟೇ ಅಲ್ಲ, ನೇತ್ರದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಡಾ ರಾಜ್ಕುಮಾರ್ ಅನೇಕ ಸಮಾರಂಭಗಳಲ್ಲಿ ಮಾತನಾಡಿದ್ದು, ಕಾರ್ಯಕ್ರಮಗಳನ್ನು ಮಾಡಿದ್ದು ಎಲ್ಲವೂ ಸಾಕಷ್ಟು ಪ್ರಭಾವ ಬೀರಿತು. ಅಣ್ಣಾವ್ರೇ ಕಣ್ಣು ದಾನ ಮಾಡಿದ್ದಾರೆ ಎಂದು ಅನೇಕ ಅಭಿಮಾನಿಗಳು ಸ್ವಯಂ ಸ್ಫೂರ್ತಿಯಿಂದ ತಾವೂ ನೇತ್ರದಾನಕ್ಕೆ ಮುಂದಾಗಿದ್ದರು. ಬೇರೆಲ್ಲಾ ಅಂಗಾಂಗ ದಾನಗಳಿಗಿಂತ ಕರ್ನಾಟಕದ ಜನರಿಗೆ ನೇತ್ರದಾನದ ಬಗ್ಗೆ ಹೆಚ್ಚು ತಿಳುವಳಿಕೆ ಇರಲು ಕಾರಣ ಡಾ ರಾಜ್ಕುಮಾರ್.

ಅಣ್ಣಾವ್ರು ಹೊತ್ತಿಸಿದ ನೇತ್ರದಾನದ ಕಿಡಿ

2006ರಲ್ಲಿ ಡಾ ರಾಜ್ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆಗ ಅವರ ಇಚ್ಛೆಯಂತೆಯೇ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರಿಂದ ಕಣ್ಣುಗಳನ್ನು ಪಡೆದು ಅದನ್ನು ಇನ್ನಿಬ್ಬರಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಈಗ ಪುನೀತ್ ವಿಚಾರದಲ್ಲೂ ಕುಟುಂಬ ಅದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ. “ಇಂಥಾ ಕಷ್ಟದ ಸಂದರ್ಭದಲ್ಲೂ ಆ ಕುಟುಂಬ ಇದನ್ನು ನೆನೆದಿದ್ದಾರಲ್ಲಾ, ಇದು ನಿಜಕ್ಕೂ ದೊಡ್ಡ ವಿಷ್ಯ. ಕುಟುಂಬದ ಸದಸ್ಯರೇ ನನಗೆ ಕರೆ ಮಾಡಿದ್ದರು. ಪುನೀತ್ ಇನ್ನಿಲ್ಲ, ಅವರ ಕಣ್ಣುಗಳನ್ನು ದಾನ ಮಾಡಬೇಕು ಎಂದರು. ಸೂಕ್ತ ಸಮಯದಲ್ಲಿ ಅವರ ನೇತ್ರಗಳನ್ನು ಪಡೆಯಲಾಗಿದೆ. ಇನ್ನೆರಡು ದಿನಗಳೊಳಗೆ ಅಗತ್ಯವಿರುವ, ದೃಷ್ಟಿ ಸಮಸ್ಯೆ ಇರುವವರಿಗೆ ಇವುಗಳನ್ನು ಕಸಿ ಮಾಡಲಾಗುತ್ತದೆ. ಅವರ ತಂದೆಯಂತೆಯೇ ಅವರು ಇಬ್ಬರ ಬಾಳಿಗೆ ಬೆಳಕಾಗುತ್ತಿದ್ದಾರೆ” ಎಂದು ನ್ಯೂಸ್ 18 ಕನ್ನಡ ಜೊತೆ ಮಾತನಾಡಿದರು ಡಾ ಭುಜಂಗ್ ಶೆಟ್ಟಿ.

ಇದನ್ನೂ ಓದಿ: Puneeth Rajkumar: ಸ್ಯಾಂಡಲ್​ವುಡ್​ನಲ್ಲಿ `ಶೋ’ ಮುಗಿಸಿದ ‘ದಿ ರಾಜ್​’: ದೊಡ್ಮನೆ ಮಗನ ದೊಡ್ಡತನಕ್ಕೆ ಸಮಾನರು ಇಲ್ಲ!

ಆರೋಗ್ಯವಾಗಿದ್ದ ವ್ಯಕ್ತಿ ಹೀಗಾದದ್ದು ಅವರಿಗೂ ಆಘಾತವಾಗಿತ್ತು. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆಯೋದು ಎನ್ನುತ್ತಾರಲ್ಲಾ? ಅದು ಇದೇ… ಪುನೀತ್ ಅಭಿಮಾನಿಗಳಿಗೇ ಅವರ ಅಕಾಲಿಕ ಅಗಲಿಕೆಯ ನೋವು ಭರಿಸಲು ಸಾಧ್ಯವಾಗ್ತಿಲ್ಲ. ಅಂಥಾದ್ರಲ್ಲಿ ಅವರ ಕುಟುಂಬಸ್ಥರ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಈ ಎಲ್ಲಾ ನೋವಿನ ನಡುವೆ ನೇತ್ರದಾನದ ಬಗ್ಗೆ ನೆನಪಿಸಿಕೊಂಡು ನಿರ್ಧಾರ ತೆಗೆದುಕೊಂಡ ಅವರ ನಡೆ ನಿಜಕ್ಕೂ ಶ್ಲಾಘನೀಯ.
Published by:Soumya KN
First published: