Real Hero: ಬೆಂಕಿಗೆ ಆಹುತಿಯಾದ ಗ್ರಂಥಾಲಯಕ್ಕೆ ಮರುಜೀವ ಕೊಟ್ಟ ಸಯ್ಯದ್ ಭಾಯ್!

ಈ ಬಗ್ಗೆ ಮಾತನಾಡಿದ ಸೈಯ್ಯದ್, ಸರ್ಕಾರವು ಗ್ರಂಥಾಲಯ ನಿರ್ಮಿಸಲು ಒಂದೇ ಒಂದು ರೂಪಾಯಿ ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ. ನಾನು ಕೇವಲ ದಾನಿಗಳಿಂದ ಹಣ ಸಂಗ್ರಹಿಸಿ ಈ ಲೈಬ್ರರಿ ಮರು ನಿರ್ಮಿಸಿದ್ದೇನೆ ಎಂದು ಹೇಳಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸಾಂಸ್ಕೃತಿಕ ನಗರಿ ಮೈಸೂರಿನ ಓದುಗರಿಗೆ ಸಿಹಿ ಸುದ್ದಿ. ಕನ್ನಡ, ಪುಸ್ತಕ ಪ್ರೇಮಿ ಸೈಯ್ಯದ್‌ (Book Lover Syed Ishak) ಇಶಾಕ್ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯ ಮರು (Established) ಸ್ಥಾಪನೆಯಾಗಿದೆ. ಮೈಸೂರಿನ ರಾಜೀವ್‌ ನಗರದ ಪಾಲಿಕೆ ಜಾಗದಲ್ಲಿ ಸೈಯ್ಯದ್‌ ವೈಯಕ್ತಿವಾಗಿ ನಡೆಸುತ್ತಿದ್ದ ಗ್ರಂಥಾಲಯಕ್ಕೆ(Library) ಕಳೆದ ವರ್ಷ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರು. ಈ ಅವಘಡದಲ್ಲಿ ಸುಮಾರು 11 ಸಾವಿರ ಪುಸ್ತಕಗಳು ಸುಟ್ಟು (Burnt) ಭಸ್ಮವಾಗಿದ್ದವು. ಸದ್ಯ ಗ್ರಂಥಾಲಯ ಮತ್ತೆ ಮರು ಜೀವ ಪಡೆದುಕೊಂಡಿದೆ. ಬೆಂಕಿಯಲ್ಲಿ ಶೇ. 90 ರಷ್ಟು ಸುಟ್ಟು ಕರಕಲಾಗಿದ್ದ ಗ್ರಂಥಾಲಯ ಮತ್ತೆ ಓದುಗರಿಗೆ ನೆಮ್ಮದಿಯ ತಾಣವಾಗಲಿದೆ.

ಗಣರಾಜ್ಯೋತ್ಸವಕ್ಕೆ ಆರಂಭ
ಬೆಂಕಿ ಅವಘಡದಲ್ಲಿ ಸುಟ್ಟುಹೋದ ಲೈಬ್ರರಿಯನ್ನು ಸೈಯದ್ ಇಶಾಕ್ ದಾನಿಗಳಿಂದ ಹಣ ಸಂಗ್ರಹಿಸಿ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಿದ್ದಾರೆ. ಜನವರಿ 26 ಗಣರಾಜ್ಯೋತ್ಸವದ ದಿನದಂದು ಗ್ರಂಥಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು. ಸೈಯದ್ ಇಶಾಕ್ ಅವರು 4 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಿದ್ದು, ಸ್ಥಳೀಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ಮಕ್ಕಳಿಂದ ಕಟ್ಟಡ ಉದ್ಘಾಟನೆಯಾಗಲಿದೆ.

ಪ್ರಸ್ತುತ, ಇಶಾಕ್ ಗ್ರಂಥಾಲಯದಲ್ಲಿ ಪ್ರಸ್ತುತ 1,800 ಪುಸ್ತಕಗಳನ್ನು ಇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 6,500 ಪುಸ್ತಕಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಏಪ್ರಿಲ್ 9, 2021ರಂದು ನಡೆದಿದ್ದ ಬೆಂಕಿ ಅವಘಡದಲ್ಲಿ ಭಗವದ್ಗೀತೆಯ ಕನ್ನಡ ಪ್ರತಿಗಳು ಸೇರಿದಂತೆ ಕುರಾನ್ ಹಾಗೂ ಸಾವಿರಾರು ಪುಸ್ತಕಗಳು ಬೆಂಕಿಗೆ ಆಹುತಿಯಾಗಿದ್ದವು.

ಇದನ್ನೂ ಓದಿ: Mysore Palace: ಮೈಸೂರು ಅರಮನೆ ನೋಡ್ಬೇಕು ಅಂದ್ರೆ ಎರಡೂ ಲಸಿಕೆ ತೆಗೆದುಕೊಂಡಿರ್ಲೇಬೇಕು

ಘಟನೆಯ ನಂತರ ಮೈಸೂರು ಮಹಾನಗರ ಪಾಲಿಕೆ, ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ಸಹಯೋಗದಲ್ಲಿ ರಾಜೀವ್ ನಗರದಲ್ಲಿ ಗ್ರಂಥಾಲಯವನ್ನು ಪುನರ್ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದರು. ಹೀಗಾಗಿ ಸೈಯದ್ ದಾನಿಗಳ ಬೆಂಬಲದೊಂದಿಗೆ ಗ್ರಂಥಾಲಯವನ್ನು ಮರುನಿರ್ಮಾಣ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ಅಭಿಯಾನ
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಫತೀನ್ ಮಿಸ್ಬಾ ಹಣ ಸಂಗ್ರಹಿಸಲು ಆನ್‌ಲೈನ್‌ನಲ್ಲಿ ಅಭಿಯಾನವನ್ನು ಕೈಗೊಂಡು ಈ ಮೂಲಕ ಅವರು ಸುಮಾರು 1,260 ಜನರಿಂದ 20 ಲಕ್ಷ ರೂಪಾಯಿ ದೇಣಿಗೆ ಹಣವನ್ನು ಸಂಗ್ರಹಿಸಿ ಯಶಸ್ವಿಯಾಗಿದ್ದರು. ಆದರೆ ಸರ್ಕಾರ ತಾವೇ ಖುದ್ದಾಗಿ ಕಟ್ಟಡ ನಿರ್ಮಿಸುವುದಾಗಿ ಹೇಳಿತ್ತು, ಹೀಗಾಗಿ ದಾನಿಗಳಿಗೆ ಸಂಗ್ರಹಿಸಿದ ಹಣವನ್ನು ಹಿಂದಿರುಗಿಸಲಾಗಿತ್ತು. ಆದರೆ ಸರ್ಕಾರ ಮಾತು ಕೊಟ್ಟು ಮರೆತು ಹೋಗಿತ್ತು.

ಈ ಬಗ್ಗೆ ಮಾತನಾಡಿದ ಸೈಯ್ಯದ್, ಸರ್ಕಾರವು ಗ್ರಂಥಾಲಯ ನಿರ್ಮಿಸಲು ಒಂದೇ ಒಂದು ರೂಪಾಯಿ ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ. ನಾನು ಕೇವಲ ದಾನಿಗಳಿಂದ ಹಣ ಸಂಗ್ರಹಿಸಿ ಈ ಲೈಬ್ರರಿ ಮರು ನಿರ್ಮಿಸಿದ್ದೇನೆ ಎಂದು ಹೇಳಿದ್ದಾರೆ.

ಗ್ರಂಥಾಲಯವನ್ನು ಪುನರ್ ನಿರ್ಮಾಣ ಮಾಡಲು ಕಾಂಗ್ರೆಸ್ ನಾಯಕ ಜಮೀರ್ ಅಹಮದ್‌ ಖಾನ್‌ 2 ಲಕ್ಷ ರೂ., ಸಂಸದ ಪ್ರತಾಪ್ ಸಿಂಹ 50,000 ರೂ., ಸಚಿವ ಎಸ್ ಟಿ ಸೋಮಶೇಖರ್ 25,000 ರೂ. ಮತ್ತು ಕೆಲವು ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಹೀಗೆ ಒಟ್ಟಾರೆಯಾಗಿ 3.45 ಲಕ್ಷ ರೂ. ಹಣವನ್ನು ದಾನಿಗಳಿಂದ ಮತ್ತು ಇತರೆ ಸಂಘ-ಸಂಸ್ಥೆಗಳಿಂದ ಸಂಗ್ರಹಿಸಿ ಕಟ್ಟಿರುವುದಾಗಿ ಹೇಳಿದ್ದಾರೆ.

ಪೀಠೋಪಕರಣಗಳ ವ್ಯವಸ್ಥೆಗೆ ಕಷ್ಟ
ಗ್ರಂಥಾಲಯದಕ್ಕೆ 2 ಫ್ಯಾನ್‌ಗಳನ್ನು ಜೋಡಿಸಲಾಗಿದ್ದು, ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಸೈಯದ್ 54 ಸಾವಿರ ರೂ. ಗಳನ್ನು ವ್ಯಯಿಸಿದ್ದಾರೆ. ಗ್ರಂಥಾಲಯಕ್ಕೆ ಪೀಠೋಪಕರಣಗಳು ಮತ್ತು ಪುಸ್ತಕಗಳನ್ನು ಇಡಲು ರ‍್ಯಾಕ್ ಅಗತ್ಯವಿದ್ದು, ಇದನ್ನು ಪೂರೈಸಲು ಹಣ ಲಭ್ಯವಿಲ್ಲ. ಕೋವಿಡ್ ಕಾರಣದಿಂದ ದೇಣಿಗೆ ಸಂಗ್ರಹ ಕಷ್ಟವಾಗಿದೆ.

ಇದನ್ನೂ ಓದಿ: Mysore Zoo: ಮುಂದಿನ ವರ್ಷದಿಂದ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ದುಬಾರಿ

ಇದೆಲ್ಲಾ ಮುಗಿದ ಬಳಿಕ ಹಣ ಸಂಗ್ರಹಿಸಿ ಪೀಠೋಪಕರಣಗಳ ವ್ಯವಸ್ಥೆ ಮಾಡುವುದಾಗಿ ಎಂದು ಸೈಯ್ಯದ್ ಇಶಾಕ್ ತಿಳಿಸಿದ್ದಾರೆ. ಪ್ರಸ್ತುತ ಸೈಯ್ಯದ್ ಇಶಾಕ್ ಕನಸಿನ ಕೂಸು ಮರುಜೀವ ಪಡೆದೊಕೊಂಡಿದ್ದು ಇದೇ 26ಕ್ಕೆ ಉದ್ಘಾಟನೆಯಾಗಲಿದೆ. ಓದುಗರು ಉಚಿತವಾಗಿ ಪುಸ್ತಕಗಳನ್ನು ಓದಲು ಮತ್ತೆ ನೆರವಾಗಲಿದೆ. ಸೈಯ್ಯದ್ ಈ ಕಾರ್ಯಕ್ಕೆ ಸರ್ಕಾರ ಕೈ ಜೋಡಿಸಿದರೆ ಇನ್ನಷ್ಟು ಸಹಾಯವಾಗುತ್ತದೆ.
Published by:vanithasanjevani vanithasanjevani
First published: