ಕೋವಿಡ್-19(COVID-19) ನಂತರ ಸಣ್ಣ ಉದ್ದಿಮೆಗಳು, ಸಣ್ಣ ವ್ಯಾಪಾರಗಳ ಅಭಿವೃದ್ಧಿ ಸಾಧಿಸುತ್ತಿವೆ. ಬಹುತೇಕರು ಸಣ್ಣ ವ್ಯಾಪಾರಗಳತ್ತ ಒಲವು ತೋರುತ್ತಿದ್ದಾರೆ. ಅದರಲ್ಲೂ ಗೋಧಿ ಹಿಟ್ಟು(Atta Chakki) ಸೇರಿದಂತೆ ವಿವಿಧ ಹಿಟ್ಟಿನ ವ್ಯಾಪಾರಸ್ಥರು ಅದ್ಭುತ ಲಾಭ ಗಳಿಸುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ನಮ್ಮ ಭಾರತದ ಅಡುಗೆ ಮನೆಗಳಲ್ಲಿ ಗೋಧಿ ಹಿಟ್ಟಿನದ್ದೇ ದರ್ಬಾರ್. ಚಪಾತಿ(Chapati), ರೋಟಿ(Roti), ರೊಟ್ಟಿ, ವಿವಿಧ ಪರೋಟ(Paranthas) ಜೊತೆಗೆ ಬೇಕರಿ ತಿನಿಸುಗಳಿಗೆ ಗೋಧಿ, ಮೈದಾಹಿಟ್ಟು ಮತ್ತು ಇನ್ನಿತರ ಹಿಟ್ಟು ಇರಲೇಬೇಕು.
ಈ ನಿಟ್ಟಿನಲ್ಲಿ ಹಿಟ್ಟಿನ ಗಿರಣಿ/ ಫ್ಲೋರ್ಮಿಲ್(Flour Mills )ಗಳಿಗೆ ಈಗ ಭಾರೀ ಡಿಮ್ಯಾಂಡ್ ಇದೆ. ಮನೆಯ ಬಳಕೆಯ ಹಿಟ್ಟಿನ ಗಿರಣಿ, ವ್ಯಾಪಾರದ ಉದ್ದೇಶದ ಹಿಟ್ಟಿನ ಗಿರಣಿ, ಬೇಕರಿ ಅಥವಾ ಚಿಕ್ಕದಾದ ಹಿಟ್ಟಿನ ಗಿರಣಿ, ರೋಲರ್ ಫ್ಲೋರ್ ಮಿಲ್ ಸೇರಿದಂತೆ ಹಲವಾರು ಹಿಟ್ಟಿನ ಗಿರಣಿಗಳನ್ನು ದೊಡ್ಡ ಮತ್ತು ಸಣ್ಣ ಮಟ್ಟದಲ್ಲಿ ನಿರ್ಮಿಸಬಹುದಾಗಿದೆ. ಹಳ್ಳಿ ಅಥವಾ ನಗರ ಪ್ರದೇಶ ಯಾವುದೇ ಇದ್ದರೂ ಗಿರಣಿ ನಿರ್ಮಿಸಬಹುದು.
ಹಿಂದಿನ ಮೂರು ವರ್ಷಗಳಲ್ಲಿ, ಭಾರತದಲ್ಲಿ ಪ್ಯಾಕೇಜ್ ಗೋಧಿ ಹಿಟ್ಟಿನ ಮಾರುಕಟ್ಟೆಯು 19 ಪ್ರತಿಶತಕ್ಕಿಂತಲೂ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಲಬೆರಕೆಯ ಕಾರಣ ಜನರು ಗೋಧಿ ಮತ್ತು ಇನ್ನಿತರ ಧಾನ್ಯಗಳನ್ನು ಸಂಗ್ರಹಿಸಿ ಆ ನಂತರ ಹಿಟ್ಟಿನ ಗಿರಣಿಯ ಮೊರೆ ಹೋಗುತ್ತಿದ್ದಾರೆ. ಹೀಗೆ ಗಿರಣಿಯಲ್ಲಿ ಬಿಡಿಸಿಟ್ಟ ಹಿಟ್ಟು ಹೆಚ್ಚು ಪರಿಶುದ್ಧವಾಗಿದ್ದು, ರುಚಿಕರವಾಗಿರುತ್ತದೆ. ಮುಖ್ಯವಾಗಿ ಆರೋಗ್ಯದ ದೃಷ್ಟಿಕೋನದಿಂದ ಬಹುತೇಕರು ಇದೇ ವಿಧಾನ ಅಳವಡಿಸಿಕೊಂಡಿದ್ದಾರೆ.
ಉತ್ಪಾದಿಸುವ ಪ್ರಕ್ರಿಯೆ
ಸಾಂಪ್ರದಾಯಿಕ ಪದ್ಧತಿ ಅನುಸರಿಸಿ ಕೈಯಿಂದ ಹಿಟ್ಟನ್ನು ಸಿದ್ಧ ಮಾಡುವುದು ಹೆಚ್ಚಿನ ಸಮಯ ಬೇಡುವುದಲ್ಲದೇ ಹಳೆಯ ವಿಧಾನವಾಗಿದೆ. ಇಂದು ಕಡಿಮೆ ಬೆಲೆಗೆ, ಬೇಗನೇ ಹಿಟ್ಟನ್ನು ಸಿದ್ಧ ಮಾಡುವ ಗಿರಣಿಗಳು ಸಾಕಷ್ಟು ಇವೆ. ಇಲ್ಲಿ ಉತ್ತಮ ದರ್ಜೆಯ ಗೋಧಿ ಅಥವಾ ಧಾನ್ಯಗಳನ್ನು ಮಾರುಕಟ್ಟೆಯಿಂದ ತರಲಾಗುತ್ತದೆ. ಆ ನಂತರ ಗೋಧಿಯ ಸ್ವಚ್ಚತೆಯ ಕಾರ್ಯ ಆರಂಭವಾಗುತ್ತದೆ. ಆ ಬಳಿಕ ಧಾನ್ಯ ಪುಡಿ ಮಾಡಿ ಹಿಟ್ಟು ತಯಾರಿಸಲಾಗುತ್ತದೆ. ಬಳಿಕ ಇದನ್ನು ವಿವಿಧ ಅಳತೆಯಲ್ಲಿ ಪ್ಯಾಕೇಟ್ ಮಾಡಿ ಮಾರಾಟ ಮಾಡಲಾಗುತ್ತದೆ.
ಹಿಟ್ಟಿನ ಗಿರಣಿ/ ಫ್ಲೋರ್ ಮಿಲ್ ವ್ಯಾಪಾರಕ್ಕೆ ಎಷ್ಟು ಬಂಡವಾಳ ಮತ್ತು ಜಾಗ ಬೇಕಾಗುತ್ತದೆ ?
ನೀವೇನಾದರೂ ಸಣ್ಣ ಮಟ್ಟದಲ್ಲಿ ಹಿಟ್ಟಿನ ಗಿರಣಿ ಆರಂಭಿಸುವ ಯೋಜನೆ ಇದ್ದರೆ 2-3 ಲಕ್ಷ ಬಂಡವಾಳದ ಅಗತ್ಯ ಬೀಳಬಹುದು. ಇದಕ್ಕೆ 200 ರಿಂದ 300 ಚದರ ಅಡಿ ವಿಸ್ತೀರ್ಣದ ಜಾಗವಿದ್ದರೆ ಸಾಕು.
ದೊಡ್ಡ ಮಟ್ಟದಲ್ಲಿ ಗಿರಣಿ ಮಾಡಲು ನಿಮ್ಮ ಬಂಡವಾಳದ ದೊಡ್ಡ ಮೊತ್ತವನ್ನು ಜಾಗಕ್ಕೆ ನೀಡಬೇಕು. 2000 - 3000 ಚದರಡಿ ವಿಸ್ತೀರ್ಣದ ಸ್ಥಳವಕಾಶ ಅಗತ್ಯ ಬೀಳುತ್ತದೆ.
ಯಂತ್ರಗಳ ಖರ್ಚು
ಯಂತ್ರಗಳ ಆಯ್ಕೆಯಲ್ಲಿ ನಿಮ್ಮ ಕೆಲಸದ ಪ್ರಕ್ರಿಯೆಯನ್ನು ಅವಲಂಭಿಸಿರುತ್ತದೆ. ಕೈಗಳಿಂದ ಚಲಿಸುವ ಯಂತ್ರಗಳು, ಅರೆ ಸ್ವಯಂಚಾಲಿತ ಅಥವಾ ಸಂಪೂರ್ಣ ಸ್ವಯಂ ಚಾಲಿತ ಯಂತ್ರ ನೋಡಿಕೊಂಡು ನೀವು ಖರೀದಿ ಮಾಡಬಹುದು.
ಇದನ್ನೂ ಓದಿ:ಭವಿಷ್ಯದ ಪೀಳಿಗೆಗೆ ಸಂಪತ್ತನ್ನು ಸೃಷ್ಟಿಸುವುದೇ ಸ್ಟಾರ್ಟ್ಅಪ್ನ ಯಶಸ್ಸಿನ ಸೂತ್ರ !
ನಿಮ್ಮ ವ್ಯಾಪಾರದ ಪ್ರಮಾಣ ಮತ್ತು ವ್ಯಾಪಾರದ ಗಾತ್ರಕ್ಕೆ ಅನುಗುಣವಾಗಿ ನೀವು ಕನಿಷ್ಠ 4-6 ಲಕ್ಷ ರೂಪಾಯಿಗಳನ್ನು ಯಂತ್ರಗಳಿಗೆ ನೀಡಬೇಕಾಗುತ್ತದೆ. ಆದರೆ ಇದು ಒಂದು ಬಾರಿ ಮಾಡುವ ಹೂಡಿಕೆಯಾದ್ದರಿಂದ ಒಳ್ಳೆಯ ಆಲೋಚನೆ.
ಪರವಾನಗಿ
ಇನ್ನು ನಿಮ್ಮ ಅಂಗಡಿಯ ನೋಂದಣಿ ಮತ್ತು ಪರವಾನಗಿಗಾಗಿ 10,000 ರಿಂದ 50,000 ವರೆಗೆ ಖರ್ಚು ಬೀಳಬಹುದು.
ಒಟ್ಟಾರೆ 15,90,000 ರಿಂದ 26,75,000 ರೂ. ನಷ್ಟು ಹೂಡಿಕೆ ಬೇಕಾಗಬಹುದು. ಈ ವ್ಯಾಪಾರಕ್ಕೆ ನಿಮಗೆ ಬ್ಯಾಂಕ್ನಿಂದ ಲೋನ್ ಸಿಗುತ್ತದೆ. ಇದಕ್ಕಾಗಿ ನೀವು ಯೋಜನಾ ವರದಿ ಸಿದ್ಧಪಡಿಸಿ ಬ್ಯಾಂಕಿಗೆ ಪ್ರಸ್ತುತ ಪಡಿಸಬೇಕು.
ಹಿಟ್ಟಿನ ಗಿರಣಿ ಆರಂಭಿಸಲು ಪರವಾನಗಿ ಅಗತ್ಯವಿದೆ
ಸಾಮಾನ್ಯವಾಗಿ ಸಣ್ಣ ಮಟ್ಟದ ಹಿಟ್ಟಿನ ಗಿರಣಿ ಆರಂಭಿಸಲು ಪರವಾನಗಿಯ ಅಗತ್ಯವಿಲ್ಲ. ಆದರೆ ದೊಡ್ಡ ಮಟ್ಟದ ಹಿಟ್ಟಿನ ಗಿರಣಿಗಳಿಗಾಗಿ ಪರವಾನಗಿ ಅಗತ್ಯವಿದೆ. ಕಾರ್ಪೊರೇಟ್/ ವ್ಯಾಪಾರದ ಸಂಸ್ಥೆಗೆ ಮೊದಲ ಪರವಾನಗಿ ಅಗತ್ಯವಿದೆ, ಇದಕ್ಕೆ ಬ್ರ್ಯಾಂಡ್ ನೋಂದಣಿ ಅಗತ್ಯವಿರುತ್ತದೆ.
ಇದು ಆಹಾರದ ವ್ಯವಹಾರವಾಗಿರುವುದರಿಂದ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿ ಅಗತ್ಯವಿದೆ (FSSAI). ನಂತರ ವ್ಯಾಪಾರಕ್ಕಾಗಿ ವ್ಯಾಪಾರ ಪರವಾನಗಿ/ ಟ್ರೇಡ್ ಲೈಸನ್ಸ್ ಪಡೆಯುವುದು ಅಗತ್ಯವಾಗಿರುತ್ತದೆ.
ಉದ್ಯೋಗ ಆಧಾರ್ ನೋಂದಣಿ ಮತ್ತು ಜಿಎಸ್‌ಟಿ ನೋಂದಣಿ ಸಂಖ್ಯೆ ಪಡೆಯಬೇಕಾಗುತ್ತದೆ. ಪರವಾನಗಿ ಪಡೆಯಲು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ