Viral News: ಬಡ ಹುಡುಗನಿಗೆ ಈ ಟ್ರಾಫಿಕ್ ಪೊಲೀಸೇ ಟೀಚರ್; ಬಿಡುವಿನ ವೇಳೆ ಪಾಠ ಮಾಡೋ ಮಾಸ್ಟರ್

ಹೋಮ್‍ವರ್ಕ್ ಚೆಕ್ ಮಾಡುವುದರಿಂದ ಹಿಡಿದು, ಸ್ಪೆಲ್ಲಿಂಗ್ ,ಉಚ್ಚಾರಣೆ ಮತ್ತು ಕೈ ಬರಹವನ್ನು ಸರಿ ಮಾಡುವವರೆಗೆ ಎಲ್ಲವನ್ನೂ ಟ್ರಾಫಿಕ್​ ಪೊಲೀಸ್ ಪ್ರಕಾಶ್ ಘೋಷ್​ ಕಲಿಸುತ್ತಿದ್ದಾರೆ

ಟ್ರಾಫಿಕ್ ಪೊಲೀಸ್​ ಪಾಠ

ಟ್ರಾಫಿಕ್ ಪೊಲೀಸ್​ ಪಾಠ

  • Share this:
ಪೊಲೀಸರು (Police) ಜನರ ಸೇವೆಗೆಂದೇ ಇರುವವರು ನಿಜ. ಆದರೆ, ಜನರಿಗೆ ತಾವು ಅಪರಾಧ ಮಾಡಿರಲಿ, ಮಾಡದೇ ಇರಲಿ ಪೊಲೀಸರನ್ನು ಕಂಡರೆ ಭಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದಕ್ಕೆ ಕಾರಣಗಳು ಹಲವಿರಬಹುದು ಮತ್ತು ಆ ಬಗ್ಗೆ ಇಲ್ಲಿ ಚರ್ಚೆ ಅನಗತ್ಯ. ಅದೇನೇ ಇದ್ದರೂ, ಗಡಸು ಮಾತಿನ, ದರ್ಪದ ವರ್ತನೆಯ ಹಲವಾರು ಪೊಲೀಸರ ಹಿಂದೆ, ಒಂದು ಸ್ನೇಹಪರ, ಹೃದಯವಂತ ಮುಖವೂ ಇರುತ್ತದೆ ಎಂಬ ಸತ್ಯವನ್ನು ಒಪ್ಪಲೇಬೇಕು ಅಲ್ಲವೇ? ಅತಂಹದ್ದೇ ಒಂದು ಸ್ನೇಹ ಜೀವಿ (Friendly) ಟ್ರಾಫಿಕ್ ಪೊಲೀಸ್ (Traffic Police) ಒಬ್ಬರ ಕಥೆ ಇಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Social Media Post) ಮಾಡಲಾಗುವ ಹಲವಾರು ಹೃದಯಸ್ಪರ್ಶಿ ಕಥೆಗಳಲ್ಲಿ ಇದು ಕೂಡ ಒಂದು.

ಹೃದಯವಂತ ಟ್ರಾಫಿಕ್ ಪೊಲೀಸ್​

ಕೊಲ್ಕತ್ತಾದ ಪೊಲೀಸರು ಫೇಸ್‍ಬುಕ್‍ನಲ್ಲಿ ತಮ್ಮ ಇಲಾಖೆಯ ಟ್ರಾಫಿಕ್ ಪೊಲೀಸ್ ಒಬ್ಬರ ಈ ಕಥೆಯನ್ನು ಪೋಸ್ಟ್ ಮಾಡಿದ್ದಾರೆ. ಆ ಪೊಲೀಸ್ ತಮ್ಮ ಕೆಲಸದ ನಡುವೆ ಅರೆ ಕ್ಷಣ ಬಿಡುವು ಸಿಕ್ಕರೆ ಏನು ಮಾಡುತ್ತಾರೆ ಗೊತ್ತೇ? ಬೀದಿ ಬದಿಯಲ್ಲಿ ವಾಸಿಸುವ 8 ವರ್ಷದ ಬಡ ಹುಡುಗನೊಬ್ಬನಿಗೆ ಓದಿಸುತ್ತಾರೆ !

ಬೀದಿ ಬದಿಯಲ್ಲಿ ಬಡ ಹುಡುಗನಿಗೆ ಪಾಠ

ಆಗ್ನೇಯ ಟ್ರಾಫಿಕ್ ಗಾರ್ಡ್‍ನ ಸಾರ್ಜೆಂಟ್ ಪ್ರಕಾಶ್ ಘೋಷ್ ಅವರೇ ಶಿಕ್ಷಕ ಪೊಲೀಸ್, ಬ್ಯಾಲಿಗುಂಜ್ ಐಟಿಐ ಸಮೀಪ ಕರ್ತವ್ಯದಲ್ಲಿ ಇದ್ದಾಗಲೆಲ್ಲಾ, ಅಲ್ಲೆ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಸುಮಾರು 8 ವರ್ಷದ ಹುಡುಗನನ್ನು ಆಗಾಗ ಗಮನಿಸುತ್ತಿದ್ದರು. ಹುಡುಗನ ತಾಯಿ ರಸ್ತೆ ಬದಿಯ ಫುಡ್‍ಸ್ಟಾಲ್‍ನಲ್ಲಿ ಕೆಲಸ ಮಾಡುತ್ತಾಳೆ. ತನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಲು ತುಂಬಾ ಕಷ್ಟಪಟ್ಟಿರುವ ಆಕೆ, ಅವನಿಗೆ ಉತ್ತಮ ಜೀವನ ಸಿಗಬೇಕೆಂಬ ನಿರೀಕ್ಷೆಯನ್ನು ಹೊಂದಿದ್ದಾಳೆ. ವಾಸಕ್ಕೆ ಮನೆಯಿಲ್ಲದ ಈ ತಾಯಿ-ಮಗ, ಅಲ್ಲೇ ಪಾದಾಚಾರಿ ಮಾರ್ಗದಲ್ಲಿ ವಾಸಿಸುತ್ತಿದ್ದಾರೆ. ಆದರೆ, ತನ್ನ ಮಗ ಬಡತನದ ಸಂಕೋಲೆಗಳನ್ನು ಕಿತ್ತು ಹಾಕಿ ಮತ್ತು ಪ್ರಪಂಚದ ಮೇಲೆ ತನ್ನ ಛಾಪು ಮೂಡಿಸುತ್ತಾನೆ ಎಂಬ ಬಹಳ ದೊಡ್ಡ ಭರವಸೆಯನ್ನು ಆಕೆ ಇಟ್ಟುಕೊಂಡಿದ್ದಾಳೆ.

ಇದನ್ನೂ ಓದಿ: Viral News: ಮಗಳಿಗಾಗಿ ಫುಡ್​​ ಆರ್ಡರ್​ ಮಾಡಿದ ತಂದೆ.. ಫ್ರೆಂಚ್​ ಪ್ರೈ ತೆರೆದಾಗ ಕಾದಿತ್ತು ಶಾಕ್​!

ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಆದರೆ, ಮೂರನೇ ತರಗತಿಯಲ್ಲಿ ಇದ್ದ ಆ ಹುಡುಗ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದ ಮತ್ತು ಅದು ಆತನ ತಾಯಿಗೆ ಇರುವ ಅತ್ಯಂತ ದೊಡ್ಡ ಚಿಂತೆಗಳಲ್ಲಿ ಒಂದಾಗತೊಡಗಿತ್ತು. ಕ್ರಮೇಣ ಸಾರ್ಜೆಂಟ್ ಘೋಷ್ ಅವರ ಪರಿಚಯವಾದ ನಂತರ, ಆಕೆ ತಮ್ಮ ಚಿಂತೆಯನ್ನು ಅವರ ಬಳಿ ಹೇಳಿಕೊಂಡರು” ಎಂದು ಕೊಲ್ಕತ್ತಾ ಪೊಲೀಸ್ ಇಲಾಖೆ ತನ್ನ ಪೋಸ್ಟಿನಲ್ಲಿ ಬರೆದುಕೊಂಡಿದೆ.

ಹೋಮ್‍ವರ್ಕ್ ಚೆಕ್ ಮಾಡ್ತಾರೆ ಈ ಪೊಲೀಸ್​

ಆಕೆಯ ಕಥೆಯನ್ನು ಕೇಳಿ, ತನ್ನ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುವುದಾಗಿ ಅವರು ಮಾತು ಕೊಟ್ಟರು. ಆದರೆ, ಆ ಸಹಾಯದ ವ್ಯಾಪ್ತಿಯನ್ನು ಅವಳು ಕೂಡ ಊಹಿಸಿರಲಿಲ್ಲ. ಆ ಪ್ರದೇಶಕ್ಕೆ ನಿಯೋಜಿಸಲ್ಪಟ್ಟ ದಿನಗಳಲ್ಲಿ, ಸಾರ್ಜೆಂಟ್ ಘೋಷ್ ಹುಡುಗನಿಗೆ ಕಲಿಸುವ ಕೆಲಸವನ್ನು ಕೂಡ ಮಾಡುತ್ತಾರೆ. ಅವರು ಸ್ವತಃ ಟ್ರಾಫಿಕ್ ಉಸ್ತುವಾರಿ ವಹಿಸುತ್ತಿದ್ದರೂ, ಅಥವಾ ತನ್ನ ಕರ್ತವ್ಯದ ಅವಧಿ ಮುಗಿದ ಬಳಿಕವಾದರೂ ಅವನಿಗೆ ಓದಿಸಲು ಸಮಯ ಹೊಂದಿಸುತ್ತಾರೆ. ಅದರಿಂದಾಗಿ, ಆ ಹುಡುಗ ಪುಸ್ತಕ ಹಿಡಿದು ಓದಲು ಕುಳಿತುಕೊಳ್ಳುವಂತಾಗಿದೆ.

ಹೋಮ್‍ವರ್ಕ್ ಚೆಕ್ ಮಾಡುವುದರಿಂದ ಹಿಡಿದು, ಸ್ಪೆಲ್ಲಿಂಗ್ ,ಉಚ್ಚಾರಣೆ ಮತ್ತು ಕೈಬರಹವನ್ನು ಸರಿ ಮಾಡುವವರೆಗೆ ತಮ್ಮ ವಿದ್ಯಾರ್ಥಿಗೆ ಕಲಿಸುತ್ತಾರೆ ಅವರು. ತನ್ನ ಸಮವಸ್ತ್ರ ಮತ್ತು ಗೇಟರ್ಸ್‍ಗಳಿಂದ ಅವರಿಗೆ ಕುಳಿತು ಕೊಳ್ಳುವುದು ಕಷ್ಟವಾಗುತ್ತದೆಯಾದ್ದರಿಂದ, ನಿಂತುಕೊಂಡೇ ಕೈಯಲ್ಲಿ ಕೋಲೊಂದನ್ನು ಹಿಡಿದು ಪಾಠ ಮಾಡುತ್ತಾರೆ. ಹುಡುಗನಲ್ಲಿ ಕಂಡು ಬರುತ್ತಿರುವ ಸುಧಾರಣೆಯು, ಅವನ ತಾಯಿಗೆ ‘ಶಿಕ್ಷಕ’ನಲ್ಲಿ ನಂಬಿಕೆ ಹುಟ್ಟಿಸಿದೆ.

ಇದನ್ನೂ ಓದಿ: Viral News: ಎಲಿಯನ್​ಗೆ ಕಬಾಬ್ ಕಳಿಸಿದ ಟರ್ಕಿಯ ಶೆಫ್, ಆಮೇಲೇನಾಯ್ತು?

ಪೊಲೀಸಪ್ಪನ ಕೆಲಸಕ್ಕೆ ಮೆಚ್ಚುಗೆ

"ಸರ್ಜೆಂಟ್ ಘೋಷ್, ಎರಡೂ ಕರ್ತವ್ಯಗಳನ್ನು ಸಮಾನವಾಗಿ ಸಮರ್ಥವಾಗಿ ನಿರ್ವಹಿಸುತ್ತಾರೆ” ಎಂದು ಪೋಸ್ಟಿನಲ್ಲಿ ಬರೆಯಲಾಗಿದೆ. ಪೋಸ್ಟಿನ ಕೊನೆಯಲ್ಲಿ, ಪತ್ರಕರ್ತರೊಬ್ಬರು ಈ ಮೊದಲು ಪೋಸ್ಟ್ ಮಾಡಿದ್ದ ಫೋಟೋ ಒಂದನ್ನು ಕೂಡ ಪೊಲೀಸ್ ಇಲಾಖೆ ಹಂಚಿಕೊಂಡಿದ್ದು, “ಪತ್ರಕರ್ತ ಅರ್ನಾಬಾಂಗ್ಶು ಈ ವಿಶೇಷ ತರಗತಿಯ ಫೋಟೋವನ್ನು ಟ್ವೀಟ್ ಮಾಡಿದ್ದರು, ಅದನ್ನು ಈ ಪೋಸ್ಟ್‍ಗೆ ನಾವು ಲಗತ್ತಿಸುತ್ತಿದ್ದೇವೆ” ಎಂದು ಬರೆಯಲಾಗಿದೆ.

ಈ ಪೋಸ್ಟನ್ನು ಹಂಚಿಕೊಂಡ ಕೆಲವೇ ಘಂಟೆಗಳಲ್ಲಿ, ಅದು 29,000 ಮೆಚ್ಚುಗೆಗಳನ್ನು ಗಳಿಸಿದೆ ಮತ್ತು ಮೆಚ್ಚುಗೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅಷ್ಟೇ ಅಲ್ಲ, ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಹರಿದು ಬರುತ್ತಿವೆ.
Published by:Pavana HS
First published: