ನೀವು ಬಾಡಿಗೆ ಮನೆಗೆ ಹೋಗುತ್ತಿದ್ದೀರಾ? ಈ ಮೊದಲು ನೀವು ಬಹಳಷ್ಟು ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಮನೆಯ ಪರಿಸ್ಥಿತಿ, ಸಂಬಂಧಿಸಿದ ವೆಚ್ಚಗಳು, ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕಾಗುತ್ತದೆ. ಪ್ರಾರಂಭದಲ್ಲಿ ಮನೆ ಬಾಡಿಗೆಗೆ ಹೋಗುವುದು ಹಾಗೂ ಕೊಡುವುದು ಎರಡೂ ಅಂಶಗಳು ಬಹಳ ಸುಲಭ ಎಂದೆನಿಸಬಹುದು. ಆದರೆ ಒಮ್ಮೆ ಹೋದರೆ ಅಲ್ಲಿಂದ ಮಾಡಿಕೊಂಡ ಒಪ್ಪಂದದ ಪ್ರಕಾರ ಇರಲೇಬೇಕಾಗುತ್ತದೆ. ಹಾಗಾಗಿ ಮನೆಗೆ ಹೋಗುವ ಮೊದಲು ಕೆಲವು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಲೇಬೇಕು.
ಬಾಡಿಗೆ ವೇಳೆ ದಾಖಲೆಗಳು ಅಷ್ಟೊಂದು ಮುಖ್ಯವಲ್ಲ ಎಂದು ಭಾವಿಸಿದರೂ, ಕೆಲವು ನಿರ್ಣಾಯಕ ಅಂಶಗಳು ತಪ್ಪಿಹೋದರೆ ಬಾಡಿಗೆದಾರರಿಗೆ ಇದರ ಪರಿಣಾಮಗಳು ಹೆಚ್ಚು ತೀವ್ರವಾಗಿರುತ್ತದೆ. ಮನೆಯ ಹೊರಭಾಗ ಮತ್ತು ಒಳಭಾಗಗಳನ್ನು ಪರಿಶೀಲಿಸುವುದರ ಹೊರತಾಗಿ, ನೀವು ಅಪಾರ್ಟ್ಮೆಂಟ್ಗೆ ಬಾಡಿಗೆಗೆ ಹೋಗುವ ಮೊದಲು ಮಾಲೀಕತ್ವದ ಕುರಿತು ಕಾನೂನು ಪರಿಶೀಲನೆ ನಡೆಸಲೇಬೇಕು.
"ಆಸ್ತಿಯ ಬಾಹ್ಯ ಮತ್ತು ಆಂತರಿಕ ಸ್ಥಿತಿ ಎರಡನ್ನೂ ಪರಿಶೀಲಿಸಿ, ಕಾನೂನು ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಿ’ ಎಂದು ಕಾನೂನು ಸಲಹೆಗಾರ ಸಿದ್ಧಾರ್ಥ ಶಾ ಹೇಳುತ್ತಾರೆ.
ಫ್ಲ್ಯಾಟ್ನ ಭೌತಿಕ ತಪಾಸಣೆ
ಫ್ಲ್ಯಾಟ್ ಬಾಡಿಗೆಗೆ ನೀಡುವ ಮೊದಲು, ಫ್ಲ್ಯಾಟ್ ಅನ್ನು ತಪಾಸಣೆ ನಡೆಸುವುದು ಕಡ್ಡಾಯ. ಕೊಳಾಯಿ, ವಿದ್ಯುತ್ ಮತ್ತು ನೈರ್ಮಲ್ಯ ಫಿಟ್ಟಿಂಗ್ ಸೇರಿದಂತೆ ಪೀಠೋಪಕರಣಗಳನ್ನು ಕ್ರಾಸ್ ಚೆಕ್ ಮಾಡಿ. ಬಾಡಿಗೆದಾರರಾಗಿ, ನೀವು ಸ್ಥಳಾಂತರಗೊಳ್ಳುವ ಮೊದಲು ಮಾಲೀಕರಿಂದ ಫ್ಲ್ಯಾಟ್ಗೆ ಮಾಡಬಹುದಾದ ಯಾವುದೇ ಬದಲಾವಣೆಗಳಿಗೆ ನಿಖರವಾದ ಸ್ಥಳ ಮತ್ತು ಬೇಡಿಕೆ ಬಗ್ಗೆ ಮಾಲೀಕರನ್ನು ಭೇಟಿ ಮಾಡಿ ಖುದ್ದಾಗಿ ಮಾತನಾಡಬೇಕು. ಇದರಿಂದ ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಅನುಮಾನ ಹಾಗೂ ಗೊಂದಲ ಬಗೆಹರಿದಂತಾಗುತ್ತದೆ.
ಮನೆ ಬಾಡಿಗೆಗೆ ನೀಡುವ ಮೊದಲು ಈ ಅಂಶಗಳು ನೆನಪಿನಲ್ಲಿಡಿ
1. ನಿರ್ವಹಣಾ ವೆಚ್ಚ
ಹೌದು ಸಾಮಾನ್ಯವಾಗಿ ಎಲ್ಲ ಬಾಡಿಗೆ ಮನೆಗಳಲ್ಲಿ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ನಿರ್ವಹಣಾ ವೆಚ್ಚಕ್ಕಾಗಿಯೇ ಮನಸ್ತಾಪಗಳು, ಗಲಾಟೆಗಳು ಸಂಭವಿಸುತ್ತದೆ. ಹಾಗಾಗಿ ಬಾಡಿಗೆದಾರರಿಗೆ ಮನೆ ನೀಡುವ ಮೊದಲು ಎಷ್ಟು ನಿರ್ವಹಣಾ ವೆಚ್ಚ, ಯಾವಾಗ ಕೊಡಬೇಕು ಎಂಬೆಲ್ಲಾ ವಿಚಾರವನ್ನು ಮೊದಲೇ ತಿಳಿಸುವುದು ಉತ್ತಮ. ನೀರಿನ ನಲ್ಲಿಗಳು, ವಿದ್ಯುತ್, ವೈರಿಂಗ್ ಇವುಗಳ ನಿರ್ವಹಣೆಯ ಬಗ್ಗೆಯೂ ಮೊದಲೇ ತಿಳಿಸಿರಬೇಕು. ಕೆಲವೊಮ್ಮೆ ಮನೆಯ ಹೊರಗಿನ ಮತ್ತು ಒಳಗಿನ ವಸ್ತುಗಳ ದುರಸ್ತಿ, ಮನೆಗೆ ಬಣ್ಣ ಒಡೆಸುವುದು ಇವು ಕೆಲವೊಮ್ಮೆ ಚರ್ಚೆಗೆ ಬರುತ್ತದೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಮೊದಲೇ ತಿಳಿಸಬೇಕು.
2. ಬ್ರೋಕರ್ಗೆ ಹಣ ನೀಡುವುದು
ಮನೆಯನ್ನು ಬ್ರೋಕರ್ ಮೂಲಕ ಪಡೆದಿದ್ದರೆ, ಅವರಿಗೆ ಎಷ್ಟು ಹಣ ನೀಡಬೇಕು ಎಂದು ಈ ಮೊದಲೇ ಚರ್ಚೆ ನಡೆಸಿರಬೇಕು. ಬ್ರೋಕರ್ ವೆಚ್ಚವು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತದೆ. ಕೆಲವರು ಅರ್ಧ ತಿಂಗಳ ಬಾಡಿಗೆ ಕೇಳಿದರೆ, ಇನ್ನು ಕೆಲವರು ಪೂರ್ಣ ತಿಂಗಳ ಬಾಡಿಗೆ ಕೇಳುತ್ತಾರೆ. ಹಲವು ಬ್ರೋಕರ್ಗಳು ಕೆಲವೊಮ್ಮೆ ದಾರಿ ತಪ್ಪಿಸುವುದು ಉಂಟು. ಹಾಗಾಗಿ ಸಂಘಟಿತ ಸಂಸ್ಥೆಗಳ ಬ್ರೋಕರ್ ಮೂಲಕ ವ್ಯವಹಾರ ನಡೆಸಿದರೆ ಉತ್ತಮ
3. ಸಮಾಜದಲ್ಲಿನ ಸೌಲಭ್ಯಗಳು:
ಬಿಲ್ಡರ್ ಫ್ಲೋರ್ನಲ್ಲಿ ಮನೆಯನ್ನು ಆಯ್ಕೆ ಮಾಡುವುದಕ್ಕಿಂತ ಯಾವುದಾದರೂ ಒಂದು ಸಮುದಾಯದಲ್ಲಿ ಮನೆ ಬಾಡಿಗೆ ಪಡೆಯುವುದು ಹೆಚ್ಚು ಸವಾಲಾಗಿದೆ. ಬಾಡಿಗೆದಾರರಿಗೆ ಎಲ್ಲಾ ರೀತಿಯ ಪಾವತಿಸಿದ ಮತ್ತು ಪಾವತಿಸದ ಸೇವೆಗಳ ಬಗ್ಗೆ ಮಾಲೀಕರು ತಿಳಿಸುವ ಅಗತ್ಯವಿದೆ. ಹೆಚ್ಚುವರಿ ಪಾರ್ಕಿಂಗ್ ಸ್ಥಳ, ಷರತ್ತುಬದ್ಧ ಕ್ಲಬ್ ಬಳಕೆ, ಈಜುಕೊಳ, ಮನೆ-ಬಾಗಿಲಿನ ಸೇವಾ ಶುಲ್ಕಗಳು, ಆರ್ಡಬ್ಲ್ಯೂಎ ಇತ್ಯಾದಿಗಳು ಆರಂಭದಲ್ಲಿ ಇವುಗಳನ್ನು ಪ್ರಸ್ತಾಪಿಸುವುದನ್ನು ಬಿಲ್ಡರ್ ತಪ್ಪಿಸಿಕೊಂಡರೆ ವೆಚ್ಚದ ಹೆಚ್ಚಿನ ಹೊರೆ ಬೀಳುವುದು.
4. ಬಾಡಿಗೆ ಹೆಚ್ಚಳ:
ಮಾಲೀಕರು ಒಪ್ಪಂದದ ಕರಾರು ಪತ್ರದಲ್ಲಿ ಬಾಡಿಗೆದಾರರು ವಾಸ ಮಾಡುವ ಅವಧಿಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಜೊತೆಗೆ ಆ ಅವಧಿ ಮುಗಿದ ಬಳಿಕ ಎಷ್ಟು ಶೇಕಡಾ ಬಾಡಿಗೆಯನ್ನು ಹೆಚ್ಚಿಸಲಾಗುತ್ತದೆ ಎಂಬ ಅಂಶವನ್ನು ನಮೂದಿಸಲೇಬೇಕು. ಅಲ್ಲದೆ, ಫ್ಲ್ಯಾಟ್ ಖಾಲಿ ಮಾಡುವ ಸಮಯದಲ್ಲಿ, ನೋಟಿಸ್ ಅವಧಿ ಮತ್ತು ವಿದ್ಯುತ್ ಬಿಲ್ ಪಾವತಿ ಕುರಿತು ಚರ್ಚಿಸಬೇಕು. ಬಾಡಿಗೆಗೆ ಅನುಮತಿಸಲಾದ ಹೆಚ್ಚಳ ಮತ್ತು ಹೆಚ್ಚಳವನ್ನು ಸಮರ್ಥಿಸಿದ ಅವಧಿಯನ್ನು ದೆಹಲಿ ಬಾಡಿಗೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಮತ್ತು 8 ಎ ನಿಯಂತ್ರಿಸುತ್ತದೆ.
5. ಫ್ಲ್ಯಾಟ್ ದಾಖಲೆಗಳು:
ಬ್ರೋಕರ್ ಮೂಲಕ ಅಥವಾ ನೇರವಾಗಿ ಮಾಲೀಕರಿಂದ ಅಪಾರ್ಟ್ಮೆಂಟ್ ಅಥವಾ ಫ್ಲಾಟ್ ತೆಗೆದುಕೊಳ್ಳುವ ಮೊದಲು, ಆಸ್ತಿ ಯಾವುದೇ ವಂಚನೆ ಅಥವಾ ಶೀರ್ಷಿಕೆ ಸಮಸ್ಯೆಯಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಕೊನೆಯದಾಗಿ ಪಾವತಿಸಿದ ವಿದ್ಯುತ್ ಮತ್ತು ನೀರಿನ ಬಿಲ್ಗಳು, ಬ್ರೋಕರ್ನೊಂದಿಗಿನ ಮಾಲೀಕರ ಸಂಬಂಧಗಳು ಮತ್ತು ಕೊನೆಯ ಬಾಡಿಗೆದಾರ ಯಾವ ರೀತಿಯಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕಬೇಕು.
ಇದೆಲ್ಲದರ ಜೊತೆಗೆ ಆಸ್ತಿಯ ಪತ್ರಗಳು ಸಮರ್ಪಕವಾಗಿವೆಯಾ, ಬೋಗ್ಯದ ಒಪ್ಪಂದದ ನೋಂದಣಿ ಆಗಿದೆಯಾ ಎಂದು ಪರಿಶೀಲಿಸಿಕೊಳ್ಳಬೇಕು.
ಬಾಡಿಗೆ ಒಪ್ಪಂದದ ಪತ್ರದಲ್ಲಿ ಏನೇನು ಅಂಶಗಳಿರಬೇಕು?
1. ಬಾಡಿಗೆದಾರರ ಮನೆಗೆ ಬರುವ ಹಾಗೂ ನಿರ್ಗಮಿಸುವ ದಿನಾಂಕ ನಮೂದಿಸಬೇಕು
2. ನೀಡುವ ಬಾಡಿಗೆಯ ಮೊತ್ತ ಮತ್ತು
3. ಭದ್ರತಾ ಹಣ
4. ಸೇವೆ/ನಿರ್ವಹಣಾ ವೆಚ್ಚ
5. ನಿರ್ವಹಣ ಮತ್ತು ರಿಪೇರಿಯ ಹಣ ಪಾವತಿಸುವ ಬಗ್ಗೆ
6. ಒಪ್ಪಂದದ ಮುಕ್ತಾಯದ ಷರತ್ತುಗಳು
7. ಮನೆ ಖಾಲಿ ಮಾಡುವ ಮೊದಲು ಎಷ್ಟು ತಿಂಗಳ ಮೊದಲು ಹೇಳಬೇಕು
8. ವಿದ್ಯುತ್, ನೀರು ಬಳಕೆಯ ಬಗ್ಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ