ಪ್ರತಿನಿತ್ಯ ಉಚಿತ ಪಿಜ್ಜಾಗಳನ್ನು ನೀಡಿ ಬಡವರ ಹಸಿವು ನೀಗಿಸುತ್ತಿದ್ದಾರೆ ಈ ಮಹಿಳೆ

zahir | news18
Updated:October 10, 2018, 5:43 PM IST
ಪ್ರತಿನಿತ್ಯ ಉಚಿತ ಪಿಜ್ಜಾಗಳನ್ನು ನೀಡಿ ಬಡವರ ಹಸಿವು ನೀಗಿಸುತ್ತಿದ್ದಾರೆ ಈ ಮಹಿಳೆ
zahir | news18
Updated: October 10, 2018, 5:43 PM IST
-ನ್ಯೂಸ್ 18 ಕನ್ನಡ

'ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎಂದಿರುವ ದಾಸರ ಮಾತಿನಲ್ಲಿದೆ ಹಸಿವಿನ ಮಹತ್ವ! ಇದು ಎಷ್ಟು ಜನರಿಗೆ ಅರ್ಥವಾಗಿದೆಯೋ ಗೊತ್ತಿಲ್ಲ. ಆದರೆ ಅಮೆರಿಕದ ಉತ್ತರ ಡಕೋಟಾದಲ್ಲಿರುವ ಮಿಶೆಲ್ ಲುಸಿಯರ್​​ಗೆ ಮಾತ್ರ ಚೆನ್ನಾಗಿ ತಿಳಿದಿದೆ.

ಮಿಶೆಲ್ ಡಕೋಟಾ ನಗರದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇವರ ಈ ರೆಸ್ಟೋರೆಂಟ್​ಗೆ ಪ್ರತಿದಿನ ಹಲವಾರು ಮಂದಿ ಪಿಜ್ಜಾ ತಿನ್ನಲು ಬರುತ್ತಿದ್ದರು. ಇಲ್ಲಿ ಅಳಿದು ಉಳಿದ ಪಿಜ್ಜಾ ತುಂಡುಗಳನ್ನು ಕಸದ ಬುಟ್ಟಿಗೆ ಎಸೆಯಲಾಗುತಿತ್ತು. ಆದರೆ ಇದೇ ದಾರಿಯಲ್ಲಿ ಹೋಗುವ ನಿರಾಶ್ರಿತರು ಮತ್ತು ಭಿಕ್ಷುಕರು ಆ ಪಿಜ್ಜಾಗಳನ್ನು ಕಸ ತೊಟ್ಟಿಯಿಂದ ಎತ್ತಿ ತಿನ್ನುತ್ತಿದ್ದರು. ಇದನ್ನು ಗಮನಿಸಿದ ಮಿಶೆಲ್ ಲುಸಿಯರ್ ಕರಳು ಚುರಕ್​ ಎಂದಿದೆ.

ಇದರಿಂದ ಬೇಸರಗೊಂಡಿದ್ದ ಮಿಶೆಲ್ ಕೊನೆಗೂ ಒಂದು ಉತ್ತಮ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಪಿಜ್ಜಾರಿಯಾ ಮೂಲಕ ಹಾದು ಹೋಗುವ ಭಿಕ್ಷುಕರಿಗೆ ಮತ್ತು ಹಸಿದ ಬಡವರಿಗೆ ಉಚಿತವಾಗಿ ಪಿಜ್ಜಾಗಳನ್ನು ನೀಡಲು ಮುಂದಾಗಿದ್ದಾರೆ. ಅದರಂತೆ ರೆಸ್ಟೋರೆಂಟ್​ನ ಬಾಗಿಲ ಮೇಲೆ ಒಂದು ಟಿಪ್ಪಣಿಯನ್ನು ಅಂಟಿಸಿದ್ದಾರೆ. ಇದರಲ್ಲಿ 'ಹಸಿದು ಆಹಾರಕ್ಕಾಗಿ ಈ ಮೂಲಕ ಹಾದು ಹೋಗುವ ವ್ಯಕ್ತಿಗಳೇ, ನೀವು ಕಸದ ತೊಟ್ಟಿಯಿಂದ ಆಹಾರವನ್ನು ಹೆಕ್ಕಿ ತಿನ್ನುವ ಅವಶ್ಯಕತೆ ಇಲ್ಲ. ಏಕೆಂದರೆ ನೀವೂ ಕೂಡ ನಮ್ಮಂತೆ ಮನುಷ್ಯರು. ನಮ್ಮ ರೆಸ್ಟೋರೆಂಟ್​ಗೆ ಬಂದು ಉಚಿತವಾಗಿ ಪಿಜ್ಜಾ ಸ್ಲೈಸ್​ ಮತ್ತು ನೀರನ್ನು ಪಡೆದುಕೊಳ್ಳಬಹುದು' ಎಂದು ತಿಳಿಸಿದ್ದಾರೆ.

2017ರಲ್ಲಿ ಮಿಶೆಲ್ ಮಾಡಿದ ಈ ಉತ್ತಮ ನಿರ್ಧಾರದ ಫೋಟೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಸ್ಥಳೀಯ ನ್ಯೂಸ್ ಚಾನೆಲ್​ವೊಂದು ಲುಸಿಯರ್ ಅವರ ಇಂಟರ್​ವ್ಯೂ ಮಾಡಿದ್ದಾರೆ. ಇದರಿಂದಾಗಿ ಮಿಶೆಲ್ ಅವರ ಈ ಮಹತ್ವದ ಕಾರ್ಯ ವಿಶ್ವ ವ್ಯಾಪಿ ಗೊತ್ತಾಗಿದೆ.  ಆಹಾರಕ್ಕೆ ಹಣವಿಲ್ಲದೆ ಇರುವ ಜನರಿಗೆ ನಮ್ಮ ರೆಸ್ಟೋರೆಂಟ್ ಸದಾ ಕಾಲ ಬಾಗಿಲು ತೆರೆದಿರುತ್ತದೆ. ಇದೀಗ  ಫೇಸ್​ಬುಕ್ ಮೂಲಕ ಪೋಸ್ಟ್​ಗಳು ವೈರಲ್​ ಆಗುತ್ತಿರುವುದನ್ನು ಗಮನಿಸಿದರೆ ಈಗಲೂ ಕೂಡ ಮನುಷತ್ವ ಉಳಿದಿದೆ ಎಂದು ಮಿಶೆಲ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಮಿಶೆಲ್ ಅವರ ಈ ಸಮಾಜಿಕ ಕಾರ್ಯಕ್ಕೆ ಗ್ರಾಹಕರು ಕೂಡ ಕೈ ಜೋಡಿಸುತ್ತಿದ್ದಾರೆ. ತಮ್ಮ ರೆಸ್ಟೋರೆಂಟ್​ಗೆ ಬರುತ್ತಿರುವ ಶೇ.15 ರಷ್ಟು ಗ್ರಾಹಕರು ನಿರಾಶ್ರಿತರ ನೆರವಿಗಾಗಿ ಹಣದ ಬಾಕಿಗಳನ್ನು ಕಲೆಕ್ಷನ್ ಬಾಕ್ಸ್​ನಲ್ಲಿ ಹಾಕುತ್ತಿದ್ದಾರೆ. ಇವರೆಲ್ಲರ ಸಹಾಯದಿಂದಲೇ ಮಿಶೆಲ್ ಅವರ ಈ ರೆಸ್ಟೋರೆಂಟ್​ ಈಗಾಗಲೇ 90000ಕ್ಕಿಂತಲೂ ಹೆಚ್ಚಿನ ಪಿಜ್ಜಾ ಸ್ಲೈಸ್​ಗಳನ್ನು ದಾನ ಮಾಡಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
First published:October 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...