• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಬಾಳ್ ವೈನಾಗೈತಂತ್ರಿ.. ಬಾಹ್ಯಾಕಾಶದಲ್ಲಿ ಮಾಗಿದ ವೈನ್ ರುಚಿ-ಬೆಲೆ ಕೇಳಿದ್ರೆ ತಲೆ ಗಿರಗಿರ..!

ಬಾಳ್ ವೈನಾಗೈತಂತ್ರಿ.. ಬಾಹ್ಯಾಕಾಶದಲ್ಲಿ ಮಾಗಿದ ವೈನ್ ರುಚಿ-ಬೆಲೆ ಕೇಳಿದ್ರೆ ತಲೆ ಗಿರಗಿರ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಸಾಮರ್ಥ್ಯ ಇರುವವರು ಈ ವೈನ್​​ನ ರುಚಿ ನೋಡಬಹುದು. ಸಾಮಾನ್ಯ ಜನ ಇದರ ಬೆಲೆ ಕೇಳಿಯೇ ಕಿಕ್​ ಏರಿಸಿಕೊಳ್ಳಬೇಕಷ್ಟೆ.

  • Share this:

ವೈನ್​​ ಮಾಗಿದಷ್ಟು ರುಚಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ವೈನ್​​ ಹಳೆಯದಾದಷ್ಟು ಅದರ ಬೆಲೆಯೂ ಹೆಚ್ಚು. ದ್ರಾಕ್ಷರಸ ಹದವಾಗಿ ಮಾಗಲು ಭೂಮಿಯಲ್ಲಿ ಹುದುಗಿಸೋದನ್ನು ಕೇಳಿದ್ದೇವೆ. ಆದರೆ ವೈನ್​ ಚನ್ನಾಗಿ ಮಾಗಲು ಬಾಹ್ಯಾಕಾಶಕ್ಕೆ ಕಳುಹಿಸಿದ್ದನ್ನು ಕೇಳಿದ್ದೀರಾ? ಹೌದು ಫ್ರೆಂಚ್​ ವೈನ್​ ಕಂಪನಿಯೊಂದು ತನ್ನ ವೈನ್​ ಬಾಟಲ್​ಗಳನ್ನು ರಾಕೆಟ್​ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ವೈನ್​​ನ್ನು ಮಾಗಿಸಿ ಮತ್ತೆ ಭೂಮಿ ತರಿಸಿಕೊಂಡಿದ್ದಾರೆ. ಬಾಹ್ಯಾಕಾಶಕ್ಕೆ ವೈನ್​​ ಬಾಟಲ್​ ಹೊಯ್ಯುವುದು ಅಂದರೆ ತಮಾಷೆಯ ಮಾತೇ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತೆ. ಅದರಲ್ಲೂ ವೈನ್​​ ಬಾಟಲಿಗಳನ್ನು ವರ್ಷಗಟ್ಟಲೇ ನಭೋಮಂಡಲದಲ್ಲಿರಿಸಿ ಪುನಃ ಭೂಮಿಗೆ ತರಿಸಿಕೊಳ್ಳೋದು ಅಂದರೆ ಸಾಮಾನ್ಯದ ಕೆಲಸವಂತೂ ಅಲ್ಲ.


ಇಂಥಹ ಸಾಹಸಕ್ಕೆ ಕೈ ಹಾಕಿದವರು ಫ್ರೆಂಚ್​ ವೈನ್​ ಕಂಪನಿಯಾದ ಕ್ರಿಸ್ಟಿಸ್​​. 2019ರಲ್ಲಿ ತನ್ನ ಕಂಪನಿಯ 12 ಬಾಟಲಿಗಳನ್ನು ರಾಕೆಟ್​ ಮೂಲಕ ನಭೋಮಂಡಲಕ್ಕೆ ಕಳುಹಿಸಲಾಯಿತು. ಆರ್ಬಿಟರ್​ನಲ್ಲಿ 400 ದಿನಗಳ ಕಾಲ 300 ಮಿಲಿಯನ್​ ಕಿಲೋ ಮೀಟರ್ಸ್​ ಸಂಚರಿಸಲು ಬಿಡಲಾಗಿತ್ತು. ಬರೋಬ್ಬರಿ ಇಷ್ಟೆಲ್ಲಾ ಸಮಯ, ದೂರವನ್ನು ಕ್ರಮಿಸಿದ ವೈನ್​ ಬಾಟಲ್​ಗಳು ಈ ವರ್ಷ ಜನವರಿಯಲ್ಲಿ ಭೂಮಿಗೆ ವಾಪಸ್​ ಆಗಿದ್ದವು. ಈ ರೀತಿ ವಿಶೇಷವಾಗಿ ಬಾಹ್ಯಾಕಾಶದಲ್ಲಿ ಮಾಗಿಸಿದ ವೈನನ್ನು ಈಗ ಹರಾಜಿಗೆ ಇಡಲಾಗಿದೆ.


ವಿಭಿನ್ನವಾಗಿ ಇರುವುದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಶ್ರೀಮಂತರ ಕಣ್ಣು ಸದ್ಯ ಈ ವೈನ್ ಬಾಟಲಿ​ಗಳ ಮೇಲಿದೆಯಂತೆ. ಹರಾಜಿನಲ್ಲಿ ಬರೋಬ್ಬರಿ 1 ಮಿಲಿಯನ್​ ಡಾಲರ್​ಗೆ ಒಂದು ಬಾಟಲ್​ ವೈನ್​ ಬಿಕರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕ್ರಿಸ್ಟಿಸ್​ ಕಂಪನಿಯ ಮಾಮೂಲಿ ವೈನ್​ ಹಾಗೂ ಬಾಹ್ಯಾಕಾಶದಲ್ಲಿ ಮಾಗಿದ ಈ ವೈನ್​​ ರುಚಿ ಎಷ್ಟು ಭಿನ್ನವಾಗಿರಲಿದೆ ಎಂದು ಕೊಂಡುಕೊಂಡವರು ಹೇಳಬೇಕು.


ಹಾರಾಜಿಗೂ ಮುನ್ನ ವೈನ್​ ಹಾಗೂ ಆಹಾರ ತಜ್ಞರು ಈ ಬಾಹ್ಯಾಕಾಶದಲ್ಲಿ ಮಾಗಿದ ವೈನ್​ನ ರುಚಿ ನೋಡುವ ಅವಕಾಶ ಕಲ್ಪಿಸಲಾಗಿತ್ತು. ರುಚಿ ನೋಡಿದ ಪತ್ರಕರ್ತೆ, ಲೇಖಕರಾಗಿರುವ ಜೇನ್​ ಆನ್ಸರ್​ ಅವರು ವೈನ್​​ ಚನ್ನಾಗಿತ್ತು, ಚನ್ನಾಗಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ವಿಭಿನ್ನವಾಗಿತ್ತು ಅಂತ ಮಾತ್ರ ಹೇಳಬಲ್ಲೆ ಎಂದಿದ್ದಾರೆ. ಇನ್ನು ವೈನ್​ ಪ್ರಿಯರಂತು ಈ ವಿಶೇಷ ವೈನ್​ನ ರುಚಿ ನೋಡಲು ಕಾತುರರಾಗಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಸಾಮರ್ಥ್ಯ ಇರುವವರು ಈ ವೈನ್​​ನ ರುಚಿ ನೋಡಬಹುದು. ಸಾಮಾನ್ಯ ಜನ ಇದರ ಬೆಲೆ ಕೇಳಿಯೇ ಕಿಕ್​ ಏರಿಸಿಕೊಳ್ಳಬೇಕಷ್ಟೆ.

top videos
    First published: