ನಾವು ಸಾಮಾನ್ಯವಾಗಿ ಈ ಬಸ್ ಮತ್ತು ರೈಲುಗಳಲ್ಲಿ (Bus and Train) ಪ್ರಯಾಣಿಸುವಾಗ ಪ್ರಯಾಣಿಕರ ಮಧ್ಯೆ ಅಲ್ಲಿರುವ ಸೀಟ್ ಗಳ ವಿಚಾರವಾಗಿ ಮತ್ತು ಇನ್ನೂ ಕೆಲವು ಚಿಕ್ಕಪುಟ್ಟ ವಿಚಾರಗಳಿಗೆ ಜಗಳ ಆಗುವುದನ್ನು ಅನೇಕ ಬಾರಿ ನೋಡಿರುತ್ತೇವೆ. ಕೆಲವು ಸಾರಿಯಂತೂ ಆ ಮಾತಿನಲ್ಲಿ ಶುರುವಾದ ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟಕ್ಕೆ (Assaults) ಹೋಗಿರುವುದನ್ನು ಸಹ ನಾವು ನೋಡಿರುತ್ತೇವೆ ಅಂತ ಹೇಳಬಹುದು. ಕೆಲವೊಮ್ಮೆ ಬಸ್ ನಲ್ಲಿರುವ ಡ್ರೈವರ್ ಮತ್ತು ಕಂಡೆಕ್ಟರ್ ಜೊತೆಯಲ್ಲೂ ಪ್ರಯಾಣಿಕರು ಬಸ್ ಅನ್ನು ಅವರ ಸ್ಟಾಪ್ ಬಂದಾಗ ಸರಿಯಾದ ಸ್ಥಳದಲ್ಲಿ ನಿಲ್ಲಿಸದೆ ಹೋದರೆ ಮತ್ತು ಸರಿಯಾಗಿ ಚಿಲ್ಲರೆ ದುಡ್ಡು ಕೊಡದೆ ಇದ್ದಾಗ ಸಹ ಮಾತಿನ ಚಕಮಕಿ ನಡೆದು ಜಗಳಗಳು ಆಗುವುದನ್ನು ಸಹ ನೋಡಿರುತ್ತೇವೆ.
ಆದರೆ ವಿಮಾನದಲ್ಲಿ ಜಗಳ ಆಗಿರುವುದು ಹೆಚ್ಚಾಗಿ ಬೆಳಕಿಗೆ ಬಂದಿರುವುದಿಲ್ಲ ಮತ್ತು ಹಾಗೆ ಒಂದು ವೇಳೆ ಜಗಳ ಹೊರಗೆ ತಿಳಿದರೆ, ಅದು ದೊಡ್ಡ ಸುದ್ದಿಯೇ ಆಗಿರುತ್ತದೆ ಅಂತ ಹೇಳಬಹುದು. ಇಲ್ಲಿ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ.
ಮಹಿಳೆ ಮತ್ತು ಫ್ಲೈಟ್ ಅಟೆಂಡೆಂಟ್ ನಡುವೆ ಆದ ಜಗಳವೇನು?
ಸ್ಯಾನ್ ಫ್ರಾನ್ಸಿಸ್ಕೋದಿಂದ ಚಿಕಾಗೋಗೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕ ಮತ್ತು ವಿಮಾನದ ಸಿಬ್ಬಂದಿಯ ಎಂದರೆ ಸ್ಪಷ್ಟವಾಗಿ ಹೇಳುವುದಾದರೆ ಫ್ಲೈಟ್ ಅಟೆಂಡೆಂಟ್ ನಡುವೆ ಮಾತಿನ ಚಕಮಕಿ ನಡೆದು ಅದು ವಾಗ್ವಾದಕ್ಕೆ ತಿರುಗಿ ಕೊನೆಗೆ ಆ ಮಹಿಳೆ ಫ್ಲೈಟ್ ಅಟೆಂಡೆಂಟ್ ಗೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ ನೋಡಿ. ಜಗಳದ ನಂತರ ಯುನೈಟೆಡ್ ಏರ್ಲೈನ್ಸ್ ನ ಫ್ಲೈಟ್ ಅಟೆಂಡೆಂಟ್ ಒಬ್ಬರನ್ನು ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಸುದ್ದಿ ಮಾಧ್ಯಮದ ಪ್ರಕಾರ, ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ತುಂಬಾ ಕೋಪಗೊಂಡು ಮಹಿಳೆಯೊಬ್ಬಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಫ್ಲೈಟ್ ಅಟೆಂಡೆಂಟ್ ನೊಂದಿಗೆ ಜಗಳ ಮಾಡುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ಈ ವೀಡಿಯೋ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: Viral News: ಈ ಚೀನಿ ಹುಡುಗಿ ಹೊಟ್ಟೆಯಲ್ಲಿತ್ತು 3 ಕೆಜಿ ಕೂದಲು! ಆಹಾರಕ್ಕಾಗಿ ಹೊಟ್ಟೆಯಲ್ಲಿ ಜಾಗವೇ ಇರಲಿಲ್ವಂತೆ
ಮಗುವನ್ನು ಎತ್ತಿಕೊಂಡಿರುವಂತಹ ಮಹಿಳೆಯೊಬ್ಬಳು ಜೋರಾಗಿ ಕಿರುಚುವುದನ್ನು ಮತ್ತು ವಿಮಾನದಲ್ಲಿ "ಹಿಂದಕ್ಕೆ ಹೋಗು" ಎಂದು ಜೋರಾಗಿ ಪದೇ ಪದೇ ಹೇಳುವುದನ್ನು ಇಲ್ಲಿ ಕೇಳಬಹುದಾಗಿದೆ. ವೀಡಿಯೋದೊಂದಿಗೆ ಟ್ವೀಟ್ ಮಾಡಿರುವ ಪ್ರಕಾರ, ವಿಮಾನವು ಚಿಕಾಗೋದ ಒ'ಹೇರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಈ ಘಟನೆ ನಡೆದಿದೆ.
ವೀಡಿಯೋದಲ್ಲಿ ಏನಿದೆ ನೋಡಿ..
14 ಸೆಕೆಂಡುಗಳ ಈ ವೀಡಿಯೋ ಪ್ರಾರಂಭವಾಗುತ್ತಿದ್ದಂತೆ, ಮಹಿಳೆ ಪ್ರಯಾಣಿಕ ವಿಮಾನದ ಹಜಾರದಲ್ಲಿ ಜೋರಾಗಿ ಕಿರುಚುವುದನ್ನು ಕೇಳಬಹುದು. "ಅದು ಎಲ್ಲಿದೆ" ಎಂದು ಅವಳು ಕೇಳುವುದು ನಮಗೆ ಕೇಳಿಸುತ್ತದೆ. ಅದಕ್ಕೆ ಫ್ಲೈಟ್ ಅಟೆಂಡೆಂಟ್ "ಮೇಡಂ, ನಾವು ಇದೀಗ ಲ್ಯಾಂಡ್ ಆಗುತ್ತಿದ್ದೇವೆ” ಎಂದು ಅವರಿಗೆ ಪದೇ ಪದೇ ಹೇಳುವುದನ್ನು ನಾವು ಕೇಳಬಹುದು. ಆಗ ಪರಿಸ್ಥಿತಿ ಇನ್ನೂ ಉದ್ರಿಕ್ತವಾಗುತ್ತದೆ. "ಸಾರಾ, ಹಿಂದಕ್ಕೆ ನಡೆ" ಎಂದು ಫ್ಲೈಟ್ ಅಟೆಂಡೆಂಟಿಗೆ ಹೇಳುವುದನ್ನು ಸಹ ಇಲ್ಲಿ ಕೇಳಬಹುದು.
ಆದರೆ ಮಹಿಳೆ ಫ್ಲೈಟ್ ಅಟೆಂಡೆಂಟ್ ಕಡೆಗೆ ನಡೆಯುವುದನ್ನು ಕಾಣಬಹುದು, ಅವಳು ಜೋರಾಗಿ ಕೂಗುತ್ತಾಳೆ. ಇದನ್ನು ಕೇಳಿಸಿಕೊಂಡ ವಿಮಾನದಲ್ಲಿದ್ದ ಇತರ ಸಿಬ್ಬಂದಿ ಸದಸ್ಯರು ಸಹ ತಮ್ಮ ಸಹೋದ್ಯೋಗಿಗೆ ಸಹಾಯ ಮಾಡಲು ಧಾವಿಸಿದರು, ಅಷ್ಟಕ್ಕೆ ಈ ವೀಡಿಯೋ ಕೊನೆಗೊಳ್ಳುತ್ತದೆ.
ಸ್ಥಳಕ್ಕೆ ಕೂಡಲೇ ಧಾವಿಸಿದ ಚಿಕಾಗೋ ಪೊಲೀಸರು
ಚಿಕಾಗೋ ಪೊಲೀಸರು ಫ್ಲೈಟ್ 476 ರಲ್ಲಿ ಜಗಳವಾಗಿದೆ ಅಂತ ಗೊತ್ತಾದ ಕೂಡಲೇ ಕೆಳಗೆ ಗೇಟ್ ಹತ್ತಿರ ಬಂದು ಕಾಯುತ್ತಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
"ಸ್ಯಾನ್ ಫ್ರಾನ್ಸಿಸ್ಕೋದಿಂದ ಚಿಕಾಗೋಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಈ ಮಹಿಳೆಯನ್ನು ಪೊಲೀಸರು ಹೊರಕ್ಕೆ ಕರೆದುಕೊಂಡು ಹೋದರು ಮತ್ತು ಫ್ಲೈಟ್ ಅಟೆಂಡೆಂಟ್ ಸಿಬ್ಬಂದಿಯನ್ನು ತಪಾಸಣೆಗೆ ಅಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ಯುನೈಟೆಡ್ ಏರ್ಲೈನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಂಭೀರ ಗಾಯಗಳು ವರದಿಯಾಗಿಲ್ಲ ಎಂದು ಯುನೈಟೆಡ್ ಏರ್ಲೈನ್ಸ್ ತಿಳಿಸಿದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕೂಡ ಈ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ