ಸಾಮಾಜಿಕ ಮಾಧ್ಯಮ (Social Media) ಬಳಕೆದಾರರ ಕೆಂಗಣ್ಣಿಗೆ ಗುರಿಯಾದ ಟಿಕ್ ಟಾಕ್ ವಿಡಿಯೋ (TikTok Video) ಜನಪ್ರಿಯತೆಯ ಹುಚ್ಚಿಗೆ ಟಿಕ್ ಟಾಕರ್ ಗಳು (TikToker) ಮಾಡುವ ಅವಾಂತರಗಳು ಒಂದಲ್ಲ ಎರಡಲ್ಲ. ನಮ್ಮ ಪಕ್ಕದ ಪಾಕಿಸ್ತಾನದಲ್ಲಂತೂ (Pakistan) ಟಿಕ್ಟಾಕ್ ಗೀಳು ವಿಪರೀತವಂತೆ. ಅಲ್ಲಿನ ಟಿಕ್ ಟಾಕರ್ ಗಳು ಹಿಂಬಾಲಕರನ್ನು ಹೆಚ್ಚಿಸಿಕೊಳ್ಳುವ ಆಸೆಯಿಂದ ವಿಡಿಯೋಗಳಲ್ಲಿ (Video) ಏನಾದರೂ ಸರ್ಕಸ್ ಮಾಡಿ, ಪೇಚಿಗೆ ಸಿಲುಕಿಕೊಳ್ಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಪಾಕಿಸ್ತಾನಿ ನಟಿ (Acterss) ಮತ್ತು ಟಿಕ್ಟಾಕರ್ ಹುಮೈರಾ ಅಸ್ಗರ್ (Humaira Asghar) ಅವರ ಅಂತದ್ದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ.
ಅಂತಹ ತಪ್ಪು ಆ ವಿಡಿಯೋದಲ್ಲಿ ಏನಿದೇ ಅಂತೀರಾ? ಆ ವಿಡಿಯೋದಲ್ಲಿನ ದೃಶ್ಯದಲ್ಲಿ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ಹತ್ತಿ ಉರಿಯುತ್ತಿದ್ದರೆ, ಅದರ ಮುಂದೆ ಬೆಳ್ಳಿಯ ವರ್ಣ ಸುಂದರ ಬಾಲ್ ಗೌನ್ ಧರಿಸಿ ಹುಮೈರ್ ಅಸ್ಗರ್ ನಡೆದು ಹೋಗುತ್ತಿರುವುದನ್ನು ಕಾಣಬಹುದು. ಕಾಡ್ಗಿಚ್ಚಿನ ಮುಂದೆ ನಿಂತು ತೊಂದರೆ ಕೊಡುವ ಮತ್ತು ವಿನಾಶಕಾರಿ ಪೋಸ್ ಕೊಡುವ ಸಾಮಾಜಿಕ ಮಾಧ್ಯಮದ ಪ್ರವೃತ್ತಿಯನ್ನು ಉಲ್ಲೇಖಿಸಿರುವ ಇಸ್ಲಾಮಾಬಾದ್ ವನ್ಯಜೀವಿ ಮಂಡಳಿಯ ಅಧ್ಯಕ್ಷರು, ಆ ನಟಿ ಬೆಂಕಿಯನ್ನು ಗ್ಲಾಮರ್ನಂತೆ ತೋರಿಸುವ ಬದಲು, ಅದನ್ನು ನಂದಿಸಲು ಬಕೆಟ್ ನೀರು ಹಿಡಿದಿರಬೇಕಿತ್ತು ಎಂದು ಹೇಳಿದ್ದಾರೆ.
ಹವಾಮಾನದ ವೈಪರಿತ್ಯಕ್ಕೆ ಒಳಗಾಗಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನ 8 ನೇ ಸ್ಥಾನ
“ಇದು ಟಿಕ್ಟಾಕ್ನಲ್ಲಿ ತೊಂದರೆ ಕೊಡುವ ಮತ್ತು ವಿನಾಶಕಾರಿ ಪ್ರವೃತ್ತಿಯಾಗಿದೆ. ಹಿಂಬಾಲಕರನ್ನು ಹೊಂದುವ ಉತ್ಕಟ ಬಯಕೆಯುಳ್ಳ ಯುವಜನರು, ಈ ಬಿಸಿ ಮತ್ತು ಒಣ ಋತುವಿನಲ್ಲಿ ನಮ್ಮ ಕಾಡುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ! ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚನ್ನು ಆರಂಭಿಸುವವರಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ನಾವು ವೈಲ್ಡ್ಲೈಫ್ ಬೋರ್ಡ್ನಲ್ಲಿ ಇದೆ ರೀತಿಯ ಕಾನೂನನ್ನು ಪರಿಚಯಿಸಬೇಕಾಗಿದೆ” ಎಂದು ರೀನಾ ಎಸ್ ಖಾನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Health Care: ವರ್ಷಪೂರ್ತಿ ಕೇವಲ ಐದೇ ಪದಾರ್ಥಗಳನ್ನು ತಿಂದು ಬದುಕುತ್ತಿದ್ದಾಳಂತೆ ಈ ಮಹಿಳೆ!
ಪಾಕಿಸ್ತಾನದಲ್ಲಿ ಇದೊಂದು ಟ್ರೆಂಡ್ ಆಗಿದೆಯಂತೆ. ಈ ತಿಂಗಳ ಆರಂಭದಲ್ಲಿ, ಆಬೋಟ್ಟಾಬಾದ್ನಲ್ಲಿ, ವಿಡಿಯೋ ಒಂದರ ಹಿನ್ನೆಲೆಗಾಗಿ, ಬೇಕೆಂದೇ ಕಾಡ್ಗಿಚ್ಚನ್ನು ಆರಂಭಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಆದರೆ ಹುಮೈರ್ ಅಸ್ಗರ್ ಮಾತ್ರ, ತಾನು ಈ ಬೆಂಕಿಯನ್ನು ಹಚ್ಚಿಲ್ಲ ಮತ್ತು ತನ್ನ ವಿಡಿಯೋದಿಂದ ಅಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹವಾಗುಣದ ಬದಲಾವಣೆಯಿಂದ ಉಂಟಾಗುವ ತೀವ್ರ ಹವಾಮಾನದ ವೈಪರಿತ್ಯಕ್ಕೆ ಒಳಗಾಗಿರುವ ರಾಷ್ಟ್ರಗಳ ಪೈಕಿ ಪಾಕಿಸ್ತಾನ 8 ನೇ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಆ ದೇಶದ ಕೆಲವು ಭಾಗಗಳಲ್ಲಿ ತಾಪಮಾನ 51 ಡಿಗ್ರಿ ಸೆಲ್ಸಿಯಸ್ಗೆ ಏರಿದೆ. ತಾಪಮಾನದ ಏರಿಕೆಯ ಕಾರಣದಿಂದಾಗಿ, ಏಪ್ರಿಲ್ ಮಧ್ಯ ಭಾಗದಿಂದ ಜುಲೈ ಅಂತ್ಯದ ವರೆಗೆ ಕಾಡ್ಗಿಚ್ಚುಗಳು ಸಾಮಾನ್ಯವಾಗಿವೆ.
ಈ ಬಗ್ಗೆ ಟಿಕ್ ಟಾಕ್ ಅಧಿಕೃತ ಹೇಳಿಕೆಯಲ್ಲಿ ಹೇಳಿದ್ದೇನು?
ಟಿಕ್ಟಾಕ್ ವಿಡಿಯೋಗಾಗಿ ಇಬ್ಬರು ವ್ಯಕ್ತಿಗಳು, ಕಾಡಿಗೆ ಲೈಟರ್ನಿಂದ ಬೆಂಕಿ ಹಚ್ಚುವ ವಿಡಿಯೋವನ್ನು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮತ್ತು ಅಪಾಯಕಾರಿ ಹಾಗೂ ಕಾನೂನುಬಾಹಿರ ವರ್ತನೆಯನ್ನು ಉತ್ತೇಜಿಸುವ ಯಾವುದೇ ವಿಷಯಕ್ಕೆ ಅನುಮತಿ ನೀಡಲಾಗುವುದಿಲ್ಲ. ಅಪಾಯಕಾರಿ ಮತ್ತು ಕಾನೂನುಬಾಹಿರ ವರ್ತನೆಯನ್ನು ಉತ್ತೇಜಿಸುವ ಯಾವುದೇ ವಿಷಯಗಳು, ನಮ್ಮ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದರೆ ನಮ್ಮ ವೇದಿಕೆಯಲ್ಲಿ ಅವುಗಳಿಗೆ ಅನುಮತಿ ನೀಡಲಾಗುವುದಿಲ್ಲ “ ಎಂದು ಟಿಕ್ಟಾಕ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
“ಅಪಾಯಕಾರಿ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಬಿಂಬಿಸುವ ವಿಷಯಗಳನ್ನು, ನಾವು ತೆಗೆದು ಹಾಕುತ್ತೇವೆ, ಮಿತಿಗೊಳಿಸುತ್ತೇವೆ ಅಥವಾ ಲೇಬಲ್ ಮಾಡುತ್ತೇವೆ. ಬಳಕೆದಾರರ ಸುರಕ್ಷತೆಯ ಬಗ್ಗೆ ನಾವು ಜಾಗರೂಕರಾಗಿರುತ್ತೇವೆ ಮತ್ತು ಆನ್ಲೈನ್ ಆಗಿರಲಿ ಅಥವಾ ಆಫ್ಲೈನ್ ಆಗಿರಲಿ ಪ್ರತಿಯೊಬ್ಬರಿಗೂ ಅವರ ನಡವಳಿಕೆಯಲ್ಲಿ ಎಚ್ಚರಿಕೆ ಮತ್ತು ಜವಾಬ್ಧಾರಿಯನ್ನು ಇಟ್ಟುಕೊಳ್ಳಲು ಪ್ರೋತ್ಸಾಹಿಸುತ್ತೇವೆ” ಎಂದು ಆ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Short Term Memory Loss: ಈ ಮನುಷ್ಯನಿಗೆ ಇರೋದು ಗಜನಿ ಖಾಯಿಲೆ! 30 ನಿಮಿಷದಲ್ಲಿ ಹೆಂಡತಿಯನ್ನೇ ಮರೆತು ಬಿಡುತ್ತಾನೆ ಈತ
ಈ ಕುರಿತು ಹುಮೈರಾ ಅಸ್ಗರ್ ಏನೇ ಪ್ರತಿಕ್ರಿಯೆ ನೀಡಿದ್ದರೂ ಕೂಡ, ನೆಟ್ಟಿಗರು ಆಕೆಯ ವಿಡಿಯೋಗೆ ಖಾರವಾದ ಪ್ರತಿಕ್ರಿಯೆಗಳನ್ನು ನೀಡಿ, ಆಕೆಯ ಕೃತ್ಯಕ್ಕೆ ಛೀಮಾರಿ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ