Tea Seller IAS Officer- ಚಹಾ ಮಾರುತ್ತಿದ್ದವ ಐಎಎಸ್ ಪರೀಕ್ಷೆ ಪಾಸ್ ಆದ ಪ್ರೇರಕ ಕಥೆ

IAS Preparation- ಉತ್ತರ ಪ್ರದೇಶದ ಹಳ್ಳಿಗಾಡಿನ ಹುಡುಗ ಹಿಮಾಂಶು ಗುಪ್ತ ಐಎಎಸ್ ಪರೀಕ್ಷೆ ಪಾಸ್ ಆದ ರೀತಿ ಇತರ ವಿದ್ಯಾರ್ಥಿಗಳಿಗೆ ಮಾದರಿ. ಸಂಕಲ್ಪ ಇದ್ದರೆ ಬಡತನ, ಹಳ್ಳಿ ಇವ್ಯಾವುದೂ ಅಡ್ಡಿ ಆಗುವುದಿಲ್ಲ ಎಂಬುದಕ್ಕೆ ಅವರೇ ನಿದರ್ಶನ.

ಹಿಮಾಂಶು ಗುಪ್ತ

ಹಿಮಾಂಶು ಗುಪ್ತ

 • News18
 • Last Updated :
 • Share this:
  ನವದೆಹಲಿ: ಐಎಎಸ್ ಅಧಿಕಾರಿ ಆಗಬೇಕು ಎಂಬುದು ಹಲವು ಜನರ ಗುರಿ. ಅದಕ್ಕಾಗಿ ಕೆಲಸ ಬಿಟ್ಟು ವರ್ಷಗಟ್ಟಲೆ ಅಧ್ಯಯನ ನಡೆಸುತ್ತಾರೆ. ವರ್ಷದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಐಎಎಸ್ ಸ್ಥಾನ ಲಭ್ಯ ಇರುತ್ತದೆ. ಅದಕ್ಕಾಗಿ ವಿಪರೀತ ಸ್ಪರ್ಧೆ ಏರ್ಪಡುತ್ತದೆ. ಪರೀಕ್ಷೆ ಬರೆಯುವ ಲಕ್ಷಾಂತರ ಮಂದಿ ಪೈಕಿ ಕೆಲವೇ ನೂರು ಅಭ್ಯರ್ಥಿಗಳು ಐಎಎಸ್ ಅಧಿಕಾರಿ ಆಗುತ್ತಾರೆ. ಪರೀಕ್ಷೆ ಬರೆಯಲು ಹೆಚ್ಚು ಶುಲ್ಕ ಇಲ್ಲವಾದರೂ ಪರೀಕ್ಷೆಗೆ ಸಿದ್ಧತೆಗೊಳ್ಳಲು ಅಭ್ಯರ್ಥಿಗಳು ಲಕ್ಷಾಂತರ ಹಣ ವ್ಯಯಿಸುತ್ತಾರೆ. ಊರು ಬಿಟ್ಟು ಡಿಲ್ಲಿಗೆ ಹೋಗಿ ಅಲ್ಲಿ ಕೋಚಿಂಗ್ ಪಡೆಯುತ್ತಾರೆ. ಆದರೂ ಐಎಎಸ್ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಆದರೆ, ಉತ್ತರ ಪ್ರದೇಶದ ಬಡವನೊಬ್ಬ ಕೋಚಿಂಗ್ ಸೆಂಟರ್​ಗೆ ಹೋಗದೆಯೇ ಸ್ವಂತವಾಗಿ ಓದಿ ಐಎಎಸ್ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಅವರೇ ಹಿಮಾಂಶು ಗುಪ್ತ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವರಾದ ಹಿಮಾಂಶು ಗುಪ್ತ ಅವರ ಜೀವನ ಬಹುಶಃ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಜೀವನಪಾಠ.

  ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದಿನಗೂಲಿ ನೌಕರಿ ಮಾಡುತ್ತಿದ್ದ ಅಪ್ಪ ಕುಟುಂಬ ನಿರ್ವಹಣೆಗೆ ಒಂದು ಸಣ್ಣ ಚಹಾ ಅಂಗಡಿ ಇಟ್ಟಿದ್ದರು. ಹಿಮಾಂಶು ಗುಪ್ತ ಅವರು ಓದುವ ಜೊತೆಜೊತೆಗೆ ಚಹಾ ಮಾರುತ್ತಾ ಜೀವನ ನಡೆಸುತ್ತಿದ್ದರು. ಆದರೆ, ಅವರಲ್ಲಿನ ಛಲ ಯಾವ ಅಡೆತಡೆಗೂ ಜಗ್ಗಲಿಲ್ಲ. 2019ರ ಕೇಂದ್ರ ಲೋಕಸೇವ ಆಯೋಗದ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 304ನೇ ರ್ಯಾಂಕ್ ಪಡೆದರು.

  ಕೋಚಿಂಗ್ ಪಡೆಯಲಿಲ್ಲ:

  ಬಡತನದ ಹಿನ್ನೆಲೆಯಲ್ಲಿ ಹಿಮಾಂಶು ಗುಪ್ತ ಅವರು ಕೋಚಿಂಗ್ ಸೇರುವ ಸ್ಥಿತಿಯಲ್ಲಿರಲಿಲ್ಲ. ಐಎಎಸ್ ಪರೀಕ್ಷೆಗೆ ತಾವೇ ಸ್ವಯಂ ಆಗಿ ಸಿದ್ಧತೆ ನಡೆಸಿದರು. ಚಹಾದಂಗಡಿಯಲ್ಲಿ ಕೂತಿರುವಾಗ ಅವರು ವೃಥಾ ಕಾಲಕ್ಷೇಪ ಮಾಡುತ್ತಿರಲಿಲ್ಲ. ಸಮಯ ಸಿಕ್ಕಾಗೆಲ್ಲಾ ದಿನಪತ್ರಿಕೆಗಳನ್ನ ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಮೊಬೈಲ್​ನಲ್ಲೇ ಇಂಟರ್ನೆಟ್ ಮೂಲಕ ಪರೀಕ್ಷೆಗೆ ಬೇಕಿದ್ದ ನೋಟ್ಸ್ ಪಡೆಯುತ್ತಿದ್ದರು. ವಿಡಿಯೋಗಳನ್ನ ನೋಡುತ್ತಾ ಅಭ್ಯಾಸ ನಡೆಸುತ್ತಿದ್ದರಂತೆ.

  ಇದನ್ನೂ ಓದಿ: IIM ಸಂದರ್ಶನ ಹೇಗಿರುತ್ತದೆ? ಸಂದರ್ಶನದಲ್ಲಿ ಪಾಲ್ಗೊಂಡ ಐದು ಅಭ್ಯರ್ಥಿಗಳ ಅನಿಸಿಕೆ ಇಲ್ಲಿದೆ ನೋಡಿ

  ಕೆಲಸದ ಆಫರ್ ತಿರಸ್ಕರಿಸಿದ್ದು:

  ಹಿಮಾಂಶು ಗುಪ್ತ ಅವರು ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಪದವಿ ಮಾಡಿದರು. ಆಗಲೇ ಅವರು ಮೆಟ್ರೋ ನಗರವೊಂದನ್ನು ಕಣ್ಣಾರೆ ಕಂಡಿದ್ದು. ಕಾಲೇಜು ಪದವಿ ಬಳಿಕ ಅವರಿಗೆ ಒಳ್ಳೆಯ ಕೆಲಸ ಆಫರ್ ಬಂದಿತ್ತು. ಅದರೆ, ಸಿವಿಲ್ ಸರ್ವಿಸಸ್ ಪರೀಕ್ಷೆಯ ಗುರಿ ಹೊಂದಿದ್ದ ಹಿಮಾಂಶು ಅವರು ಕೆಲಸ ಸೇರಲಿಲ್ಲ. ಐಎಎಸ್​ಗೆ ಸಿದ್ಧತೆ ನಡೆಸತೊಡಗಿದರು. ಜೀವನ ನಿರ್ವಹಣೆಗಾಗಿ ಅವರು ಸರ್ಕಾರಿ ಕಾಲೇಜೊಂದರಲ್ಲಿ ಸಂಶೋಧಕರಾಗಿ ಸೇರಿಕೊಂಡರು. ಇದರಿಂದ ಅವರಿಗೆ ಸ್ಟೈಪೆಂಡ್ ಬರತೊಡಗಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಐಎಎಸ್ ಪರೀಕ್ಷೆಗೆ ಸಿದ್ಧವಾಗಲು ಅಗತ್ಯವಿದ್ದ ಶೈಕ್ಷಣಿಕ ಪರಿಸರ ಕೂಡ ಸಿಕ್ಕಿತು.

  ಐಆರ್​ಎಸ್ ಪಾಸ್ ಆದರೂ ಬಿಡಲಿಲ್ಲ ಛಲ:

  ಹಿಮಾಂಧು ಗುಪ್ತ ಮೊದಲ ಬಾರಿಗೆ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದಾಗ ಒಳ್ಳೆಯ ರ್ಯಾಂಕಿಂಗ್ ಸಿಗಲಿಲ್ಲ. ಐಆರ್​ಎಸ್ (IRS- Indian Railway Service) ಅಧಿಕಾರಿ ಸ್ಥಾನ ಸಿಕ್ಕಿತು. ಐಎಎಸ್ ಅಧಿಕಾರಿ ಆಗಬೇಕೆಂಬ ಛಲದಲ್ಲಿದ್ದ ಹಿಮಾಂಶು ಅವರು 2019ರ ಪರೀಕ್ಷೆಗೆ ಇನ್ನೂ ಉತ್ತಮವಾಗಿ ಸಿದ್ಧತೆ ನಡೆಸಿದರು. ಅವರ ಆ ಛಲಕ್ಕೆ ಫಲ ಸಿಕ್ಕಿತು. 304ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿ ಆದರು. ಈ ಬಗ್ಗೆ ಹೇಳುವ ಅವರು, ಯಾವುದೇ ಪರೀಕ್ಷೆಯಲ್ಲಾದರೂ ಯಶಸ್ಸು ಸಿಗಬೇಕಾದರೆ ಪೂರ್ಣ ಸಂಕಲ್ಪ ಇರುವುದು ಅಗತ್ಯ ಎನ್ನುತ್ತಾರೆ.

  ಇದನ್ನೂ ಓದಿ: CSG Karnataka Recruitment: ಮ್ಯಾನೇಜರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

  ಸಿದ್ಧತೆ ನಡೆಸಲು ನಗರಕ್ಕೆ ಬರಲೇಬೇಕಿಲ್ಲ:

  ನೀವು ಎಲ್ಲಿಂದ ಬೇಕಾದರೂ ಯಾವುದೇ ಪರೀಕ್ಷೆಗೆ ಸಿದ್ಧತೆ ನಡೆಸಬಹುದು. ಯುಪಿಎಸ್​ಸಿಗಾಗಲೀ ಅಥವಾ ಇನ್ನಾವುದೇ ದೊಡ್ಡ ಪರೀಕ್ಷೆಗಾಗಲೀ ಸಿದ್ಧಗೊಳ್ಳಲು ದೊಡ್ಡ ನಗರಕ್ಕೆ ಬರುವ ಅಗತ್ಯ ಇಲ್ಲ ಎನ್ನುತ್ತಾರೆ ಹಿಮಾಂಶು ಗುಪ್ತ. ಅವರ ಮಾತಿಗೆ ಅವರೇ ನಿದರ್ಶನವಾಗಿದ್ದಾರೆ. ಸಂಕಲ್ಪ ಇದ್ದರೆ, ಛಲ ಇದ್ದರೆ, ಪ್ರಾಮಾಣಿಕ ಪ್ರಯತ್ನ ಇದ್ದರೆ ಎಲ್ಲಿಂದ ಬೇಕಾದರೂ ಯಾವುದೇ ಯಶಸ್ಸು ಪಡೆಯಬಹುದು ಎಂಬುದನ್ನು ಹಿಮಾಂಶು ಗುಪ್ತ ಅವರಿಂದ ವಿದ್ಯಾರ್ಥಿಗಳು ನೋಡಿ ಕಲಿಯಬಹುದು.
  Published by:Vijayasarthy SN
  First published: